logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹಗಳು ಪತ್ತೆ; ಕೊಲೆ-ಆತ್ಮಹತ್ಯೆ ಶಂಕೆ

ಬೆಂಗಳೂರಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹಗಳು ಪತ್ತೆ; ಕೊಲೆ-ಆತ್ಮಹತ್ಯೆ ಶಂಕೆ

Umesh Kumar S HT Kannada

Oct 15, 2024 07:50 AM IST

google News

ಬೆಂಗಳೂರಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. (ಆತ್ಮಹತ್ಯೆ ತಡೆಗೆ ಸಂಬಂಧಿಸಿದ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

  • ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಕೊಲೆ- ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಾಜಾನುಕುಂಟೆ ಪೊಲೀಸರು ತನಿಖೆ ನಡೆಸಿದ್ದಾರೆ. 

ಬೆಂಗಳೂರಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. (ಆತ್ಮಹತ್ಯೆ ತಡೆಗೆ ಸಂಬಂಧಿಸಿದ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಬೆಂಗಳೂರಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. (ಆತ್ಮಹತ್ಯೆ ತಡೆಗೆ ಸಂಬಂಧಿಸಿದ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ) (Pexels)

ಬೆಂಗಳೂರು: ಕಲಬುರಗಿ ಮೂಲದ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಆತ್ಮಹತ್ಯೆ- ಕೊಲೆ ಮಾಡಿಕೊಂಡಿರುವ ರೀತಿಯಲ್ಲಿ ಬೆಂಗಳೂರಿನ ರಾಜಾನುಕುಂಟೆ ಸಮೀಪ ಪತ್ತೆಯಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ನಿನ್ನೆ (ಅಕ್ಟೋಬರ್ 14) ಬೆಳಕಿಗೆ ಬಂದಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿ ಮೂಲದ ಅವಿನಾಶ್ (38), ಪತ್ನಿ ಮಮತಾ (30), ಮಕ್ಕಳಾದ ಅಧೀಯ (5), ಅನಯಾ (3) ಮೃತರು. "ಕಲಬುರಗಿ ಮೂಲದ ಮೃತ ಕುಟುಂಬ ರಾಜಾನುಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಿತ್ತು. ಮೃತ ಅವಿನಾಶ್‌ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನ ಸಹೋದರ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಯಜಮಾನನ ಶವ ಮಾತ್ರ ನೇಣು ಹಾಕಿದ ರೀತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಸಿಕೆ ಬಾಬಾ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ನಾಲ್ವರು ಮೃತದೇಹ ಪತ್ತೆ; ಆತ್ಮಹತ್ಯೆ - ಕೊಲೆ ಶಂಕೆ

ಪೊಲೀಸ್ ಮೂಲಗಳ ಪ್ರಕಾರ, ಮಮತಾ ಮೊದಲು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಸಾಯಿಸಿ ನಂತರ ತಾನು ನೇಣು ಹಾಕಿಕೊಂಡಿದ್ದಾರೆ. ಅವಿನಾಶ್ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಮತಾ ಈ ಕೃತ್ಯವೆಸಗಿರುವ ಶಂಕೆ ಇದೆ. ಈ ನಡುವೆ, ಕೆಲಸಕ್ಕೆ ಹೋಗಿದ್ದ ಅವಿನಾಶ್, ಪತ್ನಿ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದರೂ ಸಹ ಆಕೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆತ ಪಕ್ಕದ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಕೋರಿದ್ದ. ಪಕ್ಕದ ಮನೆಯವರು ಫೋನ್ ಕೊಡಲು ಹೋಗಿದ್ದ ವೇಳೆ ಮನೆ ಬಾಗಿಲು ಹಾಕಿತ್ತು. ಬಾಗಿಲು ಎಷ್ಟು ಬಡಿದರೂ ತೆಗೆಯದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಎಲ್ಲೋ ಹೊರಗಡೆ ಹೋಗಿರಬೇಕು ಎಂದು ಅವಿನಾಶ್‌ಗೆ ಹೇಳಿದ್ದರು.

ಕೆಲಸ ಮುಗಿಸಿ ಅವಿನಾಶ್ ರಾತ್ರಿ 9 ಗಂಟೆಗೆ ಮನೆಗೆ ಬ೦ದಿದ್ದ. ಮನೆ ಬಾಗಿಲು ಬಡಿದರೂ, ಬಾಗಿಲು ತೆರೆಯದ ಕಾರಣ ತನ್ನ ಬಳಿ ಇದ್ದ ಇನ್ನೊಂದು ಕೀ ಬಳಸಿ ಬಾಗಿಲು ತೆರೆದು ನೋಡಿದಾಗ, ಇಬ್ಬರು ಮಕ್ಕಳು ನೆಲದಲ್ಲಿ ಸತ್ತು ಮಲಗಿದ್ದರೆ, ಪತ್ನಿ ಮಮತಾ ನೇಣು ಹಾಕಿಕೊಂಡದ್ದು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಬಳಿಕ ಪತ್ನಿಯ ಮೃತದೇಹವನ್ನು ಅಲ್ಲಿಂದ ಕೆಳಗಿಳಿಸಿ, ಮಕ್ಕಳ ಪಕ್ಕ ಇರಿಸಿದ್ದ. ಅದಾಗಿ ತಾನೂ ಅದೇ ಹಗ್ಗದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕಲಬುರಗಿ ಮೂಲದ ಕುಟುಂಬದ ದಾರುಣ ಅಂತ್ಯ

ಅವಿನಾಶ್ ಮತ್ತು ಮಮತಾ ವಿವಾಹದ ಬಳಿಕ ಬೆಂಗಳೂರಿಗೆ ಬಂದು ಯಲಹಂಕ ತಾಲೂಕು ಸಿಂಗನಾಯಕನಹಳ್ಳುಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಅವಿನಾಶ್‌ ಟ್ಯಾಕ್ಸಿ ಚಾಲಕನಾಗಿದ್ದು, ಕಾರು ಖರೀದಿಸಿ ಚಾಲಕ ವೃತ್ತಿ ಮಾಡಿಕೊಂಡಿದ್ದ. ಪತ್ನಿ ಮಮತಾ ತನ್ನಿಬ್ಬರು ಮಕ್ಕಳೊಂದಿಗೆ ಮನೆಯಲ್ಲೇ ಇರುತ್ತಿದ್ದರು. ಈ ಬಾರಿ ದಸರಾಗೆ ಈ ಕುಟುಂಬ ಊರಿಗೆ ಹೋಗಿರಲಿಲ್ಲ. ಮನೆಯಲ್ಲೇ ಹೊಸ ಬಟ್ಟೆ ತೊಟ್ಟು ಹಬ್ಬ ಆಚರಿಸಿದ್ದರು ಎಂದು ನೆರೆಮನೆಯವರು ತಿಳಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ ಬೆಳಗ್ಗೆ ಮನೆ ಬಾಗಿಲು ತೆರೆಯದೇ ಇರುವುದು ಕಂಡು ಅನುಮಾನ ಬಂದು ನೆರೆಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರೆ. ರಾಜಾನುಕುಂಟೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ, ಮನೆ ಯಜಮಾನ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಪತ್ನಿ-ಮಕ್ಕಳು ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿರುವುದು ಕಂಡುಬಂದಿದೆ. ಸಾಲಬಾಧೆಗೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ್‌, ರಾಜಾನಕುಂಟೆ ಠಾಣೆ ಇನ್ಸ್‌ಪೆಕ್ಟರ್ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ