Papikondalu Tour: ಪಾಪಿಕೊಂಡಲು ಬೋಟಿಂಗ್ ಮತ್ತೆ ಆರಂಭ; ಬೆಂಗಳೂರು-ಪಾಪಿಕೊಂಡಲು ಪ್ರವಾಸ ಮಾಡಿ, ಹೊಸ ಅನುಭವ ಪಡೆಯಿರಿ
Oct 14, 2024 02:01 PM IST
ಬೆಂಗಳೂರಿನಿಂದ ಪಾಪಿಕೊಂಡಲುಗೆ ಹೋಗುವುದು ಹೇಗೆ, ಬೋಟಿಂಗ್ ಸೇರಿದಂತೆ ಮಾಹಿತಿ ಇಲ್ಲಿದೆ
- ಪಾಪಿಕೊಂಡಲು ಟೂರ್: ಆಂಧ್ರಪ್ರದೇಶದಲ್ಲಿನ ಪಾಪಿಕೊಂಡಲು ಬೋಟಿಂಗ್ ಮತ್ತೆ ಶುರುವಾಗಿದೆ. ಅಕ್ಟೋಬರ್ 12ರ ಶನಿವಾರದಿಂದ ಪ್ರವಾಸಿಗರಿಗೆ ದೋಣಿಗಳಲ್ಲಿ ಪಾಪಿಕೊಂಡಲು ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು ನಾಲ್ಕು ತಿಂಗಳ ನಂತರ ಬೋಟಿಂಗ್ ಆರಂಭಿಸಲಾಗಿದೆ. ಎಪಿ ಟೂರಿಸಂ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು.
ಪಾಪಿಕೊಂಡಲು ಟೂರ್: ಆಂಧ್ರ ಪ್ರದೇಶದಲ್ಲಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಪಾಪಿಕೊಂಡಲು ದೋಣಿ ವಿಹಾರ ಮತ್ತೆ ಆರಂಭವಾಗಿದೆ. ಆಂಧ್ರ ಸರ್ಕಾರ ಅಕ್ಟೋಬರ್ 12ರ ಶನಿವಾರದಿಂದ ಪಾಪಿಕೊಂಡಲು ಪ್ರವಾಸವನ್ನು ಪುನರಾರಂಭಿಸಿದೆ. ಇನ್ನು ಮುಂದೆ ಪ್ರತಿದಿನ ಪ್ರವಾಸ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ದೋಣಿ ನಿರ್ವಾಹಕರ ಮನವಿ ಮೇರೆಗೆ ಎಪಿ ಸರ್ಕಾರ ಪ್ರವಾಸವನ್ನು ಪುನರಾರಂಭಿಸಿದೆ. ಒಂದು ಅಥವಾ ಎರಡು ದಿನ ಪಾಪಿಕೊಂಡದಲ್ಲಿ ತಂಗಲು ವಿಶೇಷ ವ್ಯವಸ್ಥೆ ಇದೆ ಎನ್ನುತ್ತಾರೆ ಪ್ರವಾಸ ಸಂಘಟಕರು. ಆಂಧ್ರ ಪ್ರದೇಶದ ಮತ್ತು ತೆಲಂಗಾಣ ಗಡಿಯಲ್ಲಿರುವ ಪಾಪಿಕೊಂಡಲು ಪ್ರವಾಸ ಅದ್ಭುತವಾಗಿದೆ. ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಿಂದ ದೇವಿಪಟ್ಟಣ ಮಾರ್ಗವಾಗಿ ಪಾಪಿಕೊಂಡಗಳ ನಡುವೆ ಗೋದಾವರಿಯಲ್ಲಿ ನಡೆಯುವ ಈ ಪ್ರವಾಸ ನಿಸರ್ಗ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ದೋಣಿ ವಿಹಾರ ಆರಂಭ
ವಿಜಯದಶಮಿಯಿಂದ ಪಾಪಿಕೊಂಡಲು ದೋಣಿ ವಿಹಾರ ಪುನರಾರಂಭಿಸಲಾಗಿದೆ ಎಂದು ಪ್ರವಾಸೋದ್ಯಮ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ. ಚಿಂತೂರು ಐಟಿಡಿಎ ಪಿಒ ಪಾಪಿಕೊಂಡಲು ಬೋಟಿಂಗ್ ಪ್ರಾರಂಭಿಸಲಿದ್ದಾರೆ ಎಂದು ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ. ಸದ್ಯ ಇಲ್ಲಿ 21 ಬೋಟ್ ಗಳಿವೆ. ಈ ಪೈಕಿ 9 ಬೋಟ್‌ಗಳು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿವೆ. ಇನ್ನು ಕೆಲವೇ ದಿನಗಳಲ್ಲಿ ಅನುಮತಿ ನೀಡಲಾಗುವುದು ಎನ್ನುತ್ತಾರೆ ಸಂಘಟಕರು.
ಅಕ್ಟೋಬರ್ 12ರ ಶನಿವಾರದಿಂದ ಪ್ರವಾಸಿಗರು ಆನ್‌ಲೈನ್ ಅಥವಾ ಏಜೆಂಟರ್‌ಗಳ ಮೂಲಕ ಪ್ರವಾಸದ ಟಿಕೆಟ್ ಕಾಯ್ದಿರಿಸಿ ಪಾಪಿಕೊಂಡಕ್ಕೆ ಭೇಟಿ ನೀಡಬಹುದು. ಪ್ರವಾಸಿಗರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಶನಿವಾರದಿಂದಲೇ ಮಯೂರಿ ಮತ್ತು ರಮಾ ಎಂಬ ಎರಡು ದೋಣಿಗಳ ಮೂಲಕ ಪ್ರವಾಸಿಗರ ಪಾಪಿಕೊಂಡಲು ವೀಕ್ಷಣೆ ಮಾಡುತ್ತಿದ್ದಾರೆ.
ಈ ಪ್ರವಾಸದ ಪ್ಯಾಕೇಜ್ ಅನ್ನು ಆಂಧ್ರ ಪ್ರದೇಶದ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ರಾಜಮಂಡ್ರಿಯಿಂದ ಖಾಸಗಿ ದೋಣಿ ಪ್ರಯಾಣವೂ ಲಭ್ಯವಿದೆ. ರಾಜಮಂಡ್ರಿಯಿಂದ ಗಂಡಿಪೋಚಮ್ಮ ದೇವಸ್ಥಾನಕ್ಕೆ ವಾಹನಗಳಲ್ಲಿ ಕರೆದೊಯ್ಯುತ್ತಾರೆ. ಅಲ್ಲಿಂದ ಗೋದಾವರಿಯಲ್ಲಿ 75 ಕಿ.ಮೀ ದೋಣಿ ವಿಹಾರವಿದೆ. ಮಧ್ಯಾಹ್ನ 2.00 ಗಂಟೆಗೆ ಪಾಪಿಕೊಂಡಲು ತಲುಪುತ್ತದೆ. ಅಲ್ಲಿ ಸ್ವಲ್ಪ ಸಮಯ ಕಳೆದು ದೋಣಿಯಲ್ಲಿ ಹಿಂತಿರುಗಿ ಸಂಜೆ ಗಂಡಿಪೋಚಮ್ಮ ದೇವಸ್ಥಾನವನ್ನು ತಲುಪಬಹುದು. ಬಳಿಕ ರಾಜಾಜಿನಗರಕ್ಕೆ ತರುತ್ತಾರೆ.
ಪ್ರವಾಸದಲ್ಲಿ ಒಳಗೊಂಡಿರುವ ಸ್ಥಳಗಳು
ಪಾಪಿಕೊಂಡಲು ಪ್ರವಾಸದ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 1000 ರೂ. ಗಂಡಿಪೋಚಮ್ಮನ ದರ್ಶನದ ನಂತರ ಪ್ರವಾಸ ಪ್ರಾರಂಭವಾಗುತ್ತದೆ. ಗೋದಾವರಿ ನಡುವಿನ ಪ್ರವಾಸವು ಅದ್ಭುತವಾಗಿರುತ್ತದೆ. ನದಿಯ ಎರಡೂ ಬದಿಯ ಪಾಪಿಕೊಂಡಗಳ ನಡುವೆ ದೋಣಿ ವಿಹಾರ ಹೊಸ ಅನುಭವವನ್ನು ನೀಡುತ್ತದೆ. ಪಾಪಿಕೊಂಡಲು, ಪೆರಂತಲಪಲ್ಲಿ ಆಶ್ರಮ, ದೇವಸ್ಥಾನ, ಪೋಲಾವರಂ ಪ್ರಾಜೆಕ್ಟ್, ದೇವಿಪಟ್ಟಣ, ಕೊರುಟುರು ಕಾಟೇಜ್‌ಗಳು, ಕೊಲ್ಲೂರು ಬಿದಿರು ಗುಡಿಸಲುಗಳನ್ನು ಈ ಪ್ರವಾಸದಲ್ಲಿ ಕಾಣಬಹುದು. ಪ್ರಯಾಣ ಮಾಡುವಾಗ ಲೈಫ್ ಜಾಕೆಟ್ ಧರಿಸುವುದು ಬಹಳ ಮುಖ್ಯ. ಅನಾನುಕೂಲ ಎನ್ನುವ ಕಾರಣಕ್ಕೆ ಧರಿಸದಿದ್ದರೆ ಆಪತ್ಕಾಲದಲ್ಲಿ ದುರಂತ ಅನಿವಾರ್ಯ ಎಂದು ಸಂಘಟಕರು ಎಚ್ಚರಿಸುತ್ತಾರೆ.
ಪ್ರವಾಸಿಗರು ಪಾಪಿಕೊಂಡಲು ಪ್ರವಾಸ ಪ್ಯಾಕೇಜ್ ಅನ್ನು https://tourism.ap.gov.in/tours, www.aptourismrajahmundri.com ವೆಬ್‌ಸೈಟ್‌ಗಳಲ್ಲಿ ಬುಕ್ ಮಾಡಬಹುದು. ರಾಜಮಂಡ್ರಿಯ ಬಜೆಟ್ ಹೋಟೆಲ್‌ಗಳನ್ನೂ ಈ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.
ಬೆಂಗಳೂರಿನಿಂದ ಪಾಪಿಕೊಂಡಲು ಟೂರ್ ಪ್ಯಾಕೇಜ್
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ದೇಶದ ಯಾವುದೇ ಭಾಗಗಕ್ಕೆ ಬೇಕಾದರೂ ಸುಲಭವಾಗಿ ಟೂರ್ ಪ್ಯಾಕೇಜ್ ಮಾಡಬಹುದು. ಅದರಂತೆ ಇತ್ತೀಚೆಗೆ ಪುನಾರಂಭ ಮಾಡಿರುವ ಆಂಧ್ರ ಪ್ರದೇಶದ ಪಾಪಿಕೊಂಡಕ್ಕೂ ಪ್ರವಾಸ ಕೈಗೊಳ್ಳಬಹುದು. ಬೆಂಗಳೂರಿನಿಂದ ಆಂಧ್ರದ ರಾಜಮಂಡ್ರಿಗೆ ಕೆಎಸ್‌ಆರ್‌ಟಿಸಿ ಅಥವಾ ಎಪಿಎಸ್‌ಆರ್‌ಟಿಸಿ ಬಸ್ ಮೂಲಕ ಹೊರಟು ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಪಾಪಿಕೊಂಡಲು ಸ್ಥಳಕ್ಕೆ ತಲುಪಬಹುದು. ಸ್ವಂತ ವಾಹನದಲ್ಲೂ ಹೋಗಬಹುದು. ಬೆಂಗಳೂರಿನಿಂದ ರಾಜಮಂಡ್ರಿಗೆ ರೈಲು ವ್ಯವಸ್ಥೆಯೂ ಇದ್ದು, ಬೆಂಗಳೂರು-ಭುನೇಶ್ವರ್ ಮಾರ್ಗದ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು ರಾಜಮಂಡ್ರಿಯಲ್ಲಿ ನಿಲುಗಡೆ ನೀಡುತ್ತದೆ. ಹತಿಯಾ ವೀಕ್ಲಿ ಎಕ್ಸ್‌ಪ್ರೆಸ್ ಪ್ರತಿ ಮಂಗಳವಾರ ಬೆಂಗಳೂರಿನಿಂದ ರಾಜಮಂಡ್ರಿಗೆ ಸಂಚರಿಸುತ್ತದೆ.