logo
ಕನ್ನಡ ಸುದ್ದಿ  /  ಕರ್ನಾಟಕ  /  ಟೊಮೆಟೋ, ಈರುಳ್ಳಿ ಇಲ್ದೇ ರಸಂ, ಸಾಂಬಾರು ಮಾಡೋಕಾಗುತ್ತಾ; ಬೆಂಗಳೂರಲ್ಲಿ ಈಗ ತರಕಾರಿಯೂ ದುಬಾರಿ, ದರ ವಿವರ ಹೀಗಿದೆ

ಟೊಮೆಟೋ, ಈರುಳ್ಳಿ ಇಲ್ದೇ ರಸಂ, ಸಾಂಬಾರು ಮಾಡೋಕಾಗುತ್ತಾ; ಬೆಂಗಳೂರಲ್ಲಿ ಈಗ ತರಕಾರಿಯೂ ದುಬಾರಿ, ದರ ವಿವರ ಹೀಗಿದೆ

Umesh Kumar S HT Kannada

Oct 10, 2024 12:23 PM IST

google News

ಸಾಂಬಾರು ಮಾಡೋಕಾಗುತ್ತಾ; ಬೆಂಗಳೂರಲ್ಲಿ ಈಗ ತರಕಾರಿಯೂ ದುಬಾರಿಯಾಗಿದ್ದು, ದರ ವಿವರ ಹೀಗಿದೆ.

  • ಬೆಂಗಳೂರಲ್ಲೀಗ ಹಬ್ಬದ ಸಂಭ್ರಮ, ಸಡಗರ. ಆದಾಗ್ಯೂ ಹೂವು, ಹಣ್ಣು, ತರಕಾರಿ ದರ ಏರಿಕೆ ಬೆಂಗಳೂರಿಗರ ಸಡಗರಕ್ಕೆ ಸ್ವಲ್ಪ ಬ್ರೇಕ್ ಹಾಕಿದೆ. ಟೊಮೆಟೋ ದರ 100 ರೂಪಾಯಿ ಆಸುಪಾಸಲ್ಲಿದ್ದರೆ ಈರುಳ್ಳಿ, ಬೆಳ್ಳುಳ್ಳಿ ದರವೂ ಹೆಚ್ಚಳವಾಗಿದೆ. ಮಳೆ ಏರುಪೇರಾಗಿರುವ ಕಾರಣ ಇಳುವರಿಗೆ ಪೆಟ್ಟುಬಿದ್ದಿದೆ. ಹಬ್ಬಕ್ಕೆ ಮೊದಲು ತರಕಾರಿ ದರ ಹೇಗಿದೆ ಎಂದು ತಿಳಿಯಲು ಅತ್ತ ನೋಟ ಬೀರೋಣ. 

ಸಾಂಬಾರು ಮಾಡೋಕಾಗುತ್ತಾ; ಬೆಂಗಳೂರಲ್ಲಿ ಈಗ ತರಕಾರಿಯೂ ದುಬಾರಿಯಾಗಿದ್ದು, ದರ ವಿವರ ಹೀಗಿದೆ.
ಸಾಂಬಾರು ಮಾಡೋಕಾಗುತ್ತಾ; ಬೆಂಗಳೂರಲ್ಲಿ ಈಗ ತರಕಾರಿಯೂ ದುಬಾರಿಯಾಗಿದ್ದು, ದರ ವಿವರ ಹೀಗಿದೆ. (pexels)

ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಸಲ ಹೂವು, ಹಣ್ಣುಗಳ ದರವಷ್ಟೇ ಅಲ್ಲ ತರಕಾರಿ ದರವೂ ಏರಿಕೆಯಾಗುತ್ತಲೇ ಇದೆ. ಹಬ್ಬದ ಸಂಭ್ರಮ, ಸಡಗರ ಕಂಡರೂ ಜೇಬಿಗೆ ಹೊರೆಯಾಗುವ ದರಗಳ ಕಾರಣ ಬಡ ಮತ್ತು ಕೆಳ ಮಧ್ಯಮವರ್ಗಕ್ಕೆ ಹಬ್ಬ ಖುಷಿ ನೀಡಿಲ್ಲ. ಬೆಂಗಳೂರಿನಲ್ಲಿ ಬಹುಪಾಲು ಸಂಖ್ಯೆ ಇದೇ ವರ್ಗದ್ದಾಗಿದ್ದು, ತರಕಾರಿ ದರ ಅವರನ್ನು ಚಿಂತೆಗೀಡುಮಾಡಿದೆ. ಟೊಮೆಟೋ, ಈರುಳ್ಳಿ, ಬೆಳ್ಳುಳ್ಳಿ ದರ ದಿನೇದಿನೇ ಏರಿಕೆಯಾಗುತ್ತಿದ್ದು, ಇಳುವರಿ ಕಡಿಮೆ ಮತ್ತು ಬೇಡಿಕೆಗೆ ತಕ್ಕಷ್ಟು ಪೂರೈಕೆ ಕೊರತೆ ಇದಕ್ಕೆ ಕಾರಣ ಎಂದು ವ್ಯಾಪಾರಿಗಳು ಹೇಳುತ್ತಿದ್ಧಾರೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಟೊಮೆಟೋ ದರ ಕಿಲೋಗೆ 100 ರೂಪಾಯಿ ದಾಟಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿರುವ ಕಾರಣ ಅದೂ ದುಬಾರಿಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಬುಧವಾರ ದರವನ್ನು ಗಮನಿಸುವುದಾದರೆ, ಬಟಾಣಿ ಕೆ.ಜಿ.ಗೆ 250 ರೂ., ಶುಂಠಿ 200 ರೂ., ಬೀನ್ಸ್ 110-135 ರೂ., ಗೋರಿಕಾಯಿ 80 ರೂ., ಹಸಿ ಮೆಣಸಿನಕಾಯಿ 72 ರೂ., ಬೆಂಡೆಕಾಯಿ 68 ರೂ., ದಪ್ಪ ಮೆಣಸಿನಕಾಯಿ 66 ರೂ., ಟೊಮೆಟೋ 66 ರೂ., ಕ್ಯಾರೆಟ್ 66 ರೂ., ಆಲೂಗೆಡ್ಡೆ 64 ರೂ., ಹೂಕೋಸು 60 ರೂ., ಹೀರೇಕಾಯಿ 52ರೂ., ಬದನೆಕಾಯಿ 42., ತಲುಪಿದೆ.

ಬೆಂಗಳೂರಲ್ಲಿ ತರಕಾರಿ ದರ ಹೀಗಿದೆ ನೋಡಿ

ಟೊಮೆಟೋ, ಈರುಳ್ಳಿ ಇಲ್ದೇ ಸಾರು, ಸಾಂಬಾರು ಮಾಡೋಕಾಗುತ್ಯೆ ಎಂಬ ಮಾತುಗಳು ಕಿಟಕಿಯಿಂದಾಚೆಗೆ ಹರಿದು ರಸ್ತೆ ಮೇಲೆ ಹೋಗುವವರ ಕಿವಿಗೂ ಬೀಳತೊಡಗಿದೆ. ಬೆಂಗಳೂರಿನಲ್ಲಿ ಯಶವಂತಪುರ ಸುತ್ತಮುತ್ತ ತರಕಾರಿ ದರ ಹೀಗಿದೆ. ಇದು ಏರಿಯಾದಿಂದ ಏರಿಯಾಕ್ಕೆ ವ್ಯತ್ಯಾಸವಿದೆ. ಇದರ ಆಸುಪಾಸಿನಲ್ಲಿ ದರ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಮತ್ತು ಕೇವಲ ಮಾಹಿತಿಗಾಗಿ ಈ ದರ ವಿವರ ನೀಡಲಾಗಿದೆ.

ಸೊಪ್ಪು (ಕಟ್ಟು) ಮತ್ತು ತರಕಾರಿ (ಕಿಲೋ) ದರ ರೂಪಾಯಿಯಲ್ಲಿ

ಸೊಪ್ಪು/ತರಕಾರಿಕಳೆದ ವಾರದ ದರ (ರೂ)ಈಗಿನ ದರ (ರೂ)
ಟೊಮೆಟೊ60-80100 
ಈರುಳ್ಳಿ 50-6060-80
ಬೆಳ್ಳುಳ್ಳಿ300- 350400-500
ಕ್ಯಾರೆಟ್‌6080
ಕ್ಯಾಪ್ಸಿಕಮ್‌5070
ಬೀನ್ಸ್ 60-8080-100
ಬೂದುಗುಂಬಳ3040-50
ಬಟಾಣಿ200250-300
ಹೀರೇಕಾಯಿ5060
ಹಾಗಲಕಾಯಿ40-5060-70
ಬೀಟ್‌ರೂಟ್‌40-5040+50
ಆಲೂಗಡ್ಡೆ25-3025-35
ಶುಂಠಿ 140160-180
ಬೆಂಡೆಕಾಯಿ6070-80
ಕೊತ್ತಂಬರಿ ಸೊಪ್ಪು2030-40
ಪುದೀನಾ ಸೊಪ್ಪು10-1515-20
ಪಾಲಕ್ ಸೊಪ್ಪು10-1515-25
ಸಬ್ಬಕ್ಕಿ ಸೊಪ್ಪು15-2020-25
ಮೆಂತ್ಯೆ ಸೊಪ್ಪು10-1515-25

ಟೊಮೆಟೋ, ಈರುಳ್ಳಿ ದುಬಾರಿ

ಟೊಮೆಟೋ ಮತ್ತು ಈರುಳ್ಳಿ ದುಬಾರಿಯಾಗಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಚಳ್ಳಕೆರೆ ಕೆಲವು ಕಡೆ ಟೊಮೇಟೊ ಬೆಳೆಯುವರ ಸಂಖ್ಯೆ ಹೆಚ್ಚು. ಈ ಸಲ ರೋಗ ಬಾಧೆ ಮತ್ತು ಮಳೆ ಏರುಪೇರಾದ ಕಾರಣ ಇಳುವರಿ ಕುಸಿದಿದೆ. ರೈತರು ಈ ಬಾರಿ ಟೊಮೆಟೋ ಬದಲು ಬೇರೆ ತರಕಾರಿ ಬೆಳೆದ ಕಾರಣ ಟೊಮೆಟೋ ಪೂರೈಕೆ ಕಡಿಮೆಯಾಗಿದೆ. ಈ ಹಿಂದೆ ಯಶವಂತಪುರ ಎಪಿಎಂಸಿಗೆ ಒಂದು ದಿನಕ್ಕೆ 40 ಸಾವಿರ ಟೊಮೇಟೊ ಬಾಕ್ಸ್‌ಗಳು ಬರುತ್ತಿದ್ದವು. ಇದೀಗ 20 ಬಾಕ್ಸ್‌ಗಳು ಮಾತ್ರ ಬರುತ್ತಿದ್ದು, ಸಗಟು ಬೆಲೆ ಹೆಚ್ಚಾಗಿದೆ. ಸದ್ಯ ಕರ್ನಾಟಕಕ್ಕೆ ಶೇಕಡ 40ರಷ್ಟು ಟೊಮೆಟೋ ಪೂರೈಕೆ ಕಡಿಮೆಯಾಗಿದೆ. ಮುಂಬೈ, ಕೋಲ್ಕತ್ತಾ, ಗುಜರಾತ್‌ಗೆ ಹೆಚ್ಚು ಟೊಮೆಟೋ ಹೋಗುತ್ತಿದೆ. ಈ ಹಿಂದೆ ಮಹಾರಾಷ್ಟ್ರ, ನಾಸಿಕ್, ಕರಾಡ ಸೇರಿ ವಿವಿಧ ಭಾಗಗಳಿಂದ ಟೊಮೆಟೋ ಬೆಂಗಳೂರಿಗೆ ಬರುತ್ತಿತ್ತು. ಈ ವರ್ಷ ಇದು ಕಡಿಮೆಯಾಗಿದೆ. ಇದೆಲ್ಲವೂ ಬೆಲೆ ಏರಿಕೆ ಕಾರಣ.

ಇನ್ನೊಂದೆಡೆ, ವಿಜಯಪುರ ಹಾಗೂ ಇತರ ಜಿಲ್ಲೆಗಳಿಂದ ನಿತ್ಯ 400-500 ಲಾರಿ ಈರುಳ್ಳಿ ಯಶವಂತಪುರ ಎಪಿಎಂಸಿಗೆ ಬರುತ್ತಿದೆ. ಉಳಿದಂತೆ, ಏಪ್ರಿಲ್ ಮತ್ತು ಮೇ ಬೆಳೆಯ ಫಲ ಈಗ ಮಹಾರಾಷ್ಟ್ರದಿಂದಲೂ ಪೂರೈಕೆಯಾಗುತ್ತಿದೆ. ಇವನ್ನು ಹೆಚ್ಚು ದಿನ ಸಂಗ್ರಹಿಸಬಹುದು. ಗುಣಮಟ್ಟ ಚೆನ್ನಾಗಿದ್ದು, ಗಾತ್ರದಲ್ಲೂ ದೊಡ್ಡದಿರುತ್ತದೆ. ರಾಜ್ಯದಲ್ಲಿ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆ ಕಟಾವಿನ ಸಮಯ ಈಗ. ಕೆಲ ದಿನಗಳ ಮಟ್ಟಿಗೆ ಮಳೆ ಬರದಿದ್ದರೆ ಉತ್ತಮ. ಹಾಗೇನಾದರೂ ನಿರಂತರ ಮಳೆ ಬಂದಲ್ಲಿ ಈರುಳ್ಳಿ ಬೆಳೆ ಇನ್ನಷ್ಟು ಹಾಳಾಗಲಿದ್ದು, ದೀಪಾವಳಿ ವೇಳೆಗೆ ಈರುಳ್ಳಿ ದರ ಮತ್ತಷ್ಟು ಹೆಚ್ಚಳವಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ