ಮಹಾರಾಷ್ಟ್ರ ಚುನಾವಣೆ ಹೊಸ್ತಿಲಲ್ಲಿ ಮರಾಠಿ ಸೇರಿ 5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ; ಕೇಂದ್ರ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ಸರ್ಕಾರ ಮರಾಠಿ ಸೇರಿ 5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇದಕ್ಕೆ ಸಂಬಂಧಪಟ್ಟ ಪ್ರಸ್ತಾವನೆ ಅಂಗೀಕರಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿತು.
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕೇಂದ್ರ ಸರ್ಕಾರ ಮರಾಠಿ ಸೇರಿ 5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿ ಐತಿಹಾಸಿಕ ತೀರ್ಮಾನವನ್ನು ಪ್ರಕಟಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಮುಂದಿನ ತಿಂಗಳು ದಿನಾಂಕ ಪ್ರಕಟವಾಗುವ ನಿರೀಕ್ಷೆ ಇದೆ. ಮರಾಠಿಗೆ ಹೊರತಾಗಿ, ಅಸ್ಸಾಮೀಸ್, ಪಾಲಿ, ಪ್ರಾಕೃತ್ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪ್ರಕಟವಾಗಿರುವಂಥದ್ದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಗುರುವಾರ (ಅಕ್ಟೋಬರ್ 3) ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಸಭೆಯ ಬಳಿಕ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು.
ಮರಾಠಿ ಸೇರಿ 5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ, ಮಾನದಂಡವೂ ಪರಿಷ್ಕರಣೆ
ಮರಾಠಿ ಸೇರಿ 5 ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಕೇಂದ್ರ ಸಚಿವ ಸಂಪುಟವು, ಕೇಂದ್ರದ ಭಾಷಾ ಪರಿಣತರ ಕಮಿಟಿಯು ಶಾಸ್ತ್ರೀಯ ಭಾಷೆಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡವನ್ನು ಪರಿಷ್ಕರಿಸಿದ ಪ್ರಸ್ತಾವನೆಯನ್ನೂ ಅಂಗೀಕರಿಸಿದೆ. ಇದಕ್ಕೂ ಮೊದಲು ಹಿಂದೆಯೇ ಗುರುತಿಸಲಾದ ಆರು ಭಾಷೆಗಳನ್ನು ಅಂದರೆ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳ, ಒಡಿಯಾ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳು ಎಂದು 2014ರಲ್ಲಿ ಕೇಂದ್ರ ಸರ್ಕಾರ ಪರಿಗಣಿಸಿತ್ತು. ಇದರೊಂದಿಗೆ ಈಗ ಶಾಸ್ತ್ರೀಯ ಭಾಷೆಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಇದೊಂದು ಐತಿಹಾಸಿಕ ತೀರ್ಮಾನ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ್ದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇಲ್ಲಿಯವರೆಗೆ, ಅಧಿಸೂಚಿತ ಶಾಸ್ತ್ರೀಯ ಭಾಷೆಗಳಲ್ಲಿ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾಗಳಿದ್ದವು. ಈ ಭಾಷೆಗಳು ಈಗಾಗಲೇ ಶಾಸ್ತ್ರೀಯ ಭಾಷೆಗಳೆಂದು ಗುರುತಿಸಲ್ಪಟ್ಟಿವೆ. ಹೊಸ ಪ್ರಸ್ತಾವನೆಗಳನ್ನು ಇದೇ ಚೌಕಟ್ಟಿನೊಳಗೆ ಪರಿಶೀಲಿಸಲಾಗಿದೆ. ಸರಿಯಾದ ವೈಜ್ಞಾನಿಕ ಪುರಾವೆಗಳು, ಸಂಶೋಧನೆ ಮತ್ತು ಐತಿಹಾಸಿಕ ದತ್ತಾಂಶಗಳ ಆಧಾರದ ಮೇಲೆ ಭವಿಷ್ಯದ ಯಾವುದೇ ಪ್ರಸ್ತಾಪಗಳನ್ನು ಸಹ ಅದೇ ರೀತಿಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ
ಈ ಕೆಲವು ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯು ಒಂದು ದಶಕದ ಹಿಂದಿನದು. 2013ರಲ್ಲಿ ಮಹಾರಾಷ್ಟ್ರ ಸರಕಾರ ಮರಾಠಿಗೆ ಮನ್ನಣೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ನಂತರ 2014 ರಲ್ಲಿ ಭಾಷೆಯ ಮೌಲ್ಯಮಾಪನಕ್ಕಾಗಿ ಭಾಷಾ ತಜ್ಞರ ಸಮಿತಿಯನ್ನು ಸ್ಥಾಪಿಸಿದರು. ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸಲು ಎಲ್ಲಾ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ಸಮಿತಿಯು ದೃಢಪಡಿಸಿದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಈಗ ಮಹಾರಾಷ್ಟ್ರದ ಚುನಾವಣೆ ಘೋಷಣೆಗೆ ಕೆಲವೇ ದಿನಗಳ ಮೊದಲು ಮರಾಠಿಗೆ ಶಾಸ್ತ್ರೀಯ ಸ್ಥಾನಮಾನದ ಪ್ರಸ್ತಾವನೆಯನ್ನು ಅಂಗೀಕರಿಸಿದೆ.
ಮರಾಠಿಯನ್ನು "ಭಾರತದ ಹೆಮ್ಮೆ" ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, "ಈ ಗೌರವವು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಮರಾಠಿಯ ಶ್ರೀಮಂತ ಸಾಂಸ್ಕೃತಿಕ ಕೊಡುಗೆಯನ್ನು ಗುರುತಿಸುತ್ತದೆ. ಮರಾಠಿ ಯಾವಾಗಲೂ ಭಾರತೀಯ ಪರಂಪರೆಯ ಮೂಲಾಧಾರವಾಗಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನದೊಂದಿಗೆ, ಇನ್ನೂ ಹೆಚ್ಚಿನ ಜನರು ಅದನ್ನು ಕಲಿಯಲು ಪ್ರೇರೇಪಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿಕೆ ನೀಡಿದ್ಧಾರೆ.
ಹೊಸ ಶಾಸ್ತ್ರೀಯ ಭಾಷೆಗಳ ಸೇರ್ಪಡೆ ಬಗ್ಗೆ ಯಾರು ಏನು ಹೇಳಿದರು
“ನಮ್ಮ ಸರ್ಕಾರವು ಭಾರತದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಗೌರವಿಸುವುದಲ್ಲದೆ, ಅದನ್ನು ಸಂಭ್ರಮಿಸುತ್ತದೆ ಕೂಡ. ಪ್ರಾದೇಶಿಕ ಭಾಷೆಗಳನ್ನು ಜನಪ್ರಿಯಗೊಳಿಸುವ ನಮ್ಮ ಬದ್ಧತೆಯಲ್ಲೂ ನಾವು ಅಚಲವಾಗಿದ್ದೇವೆ. ಅಸ್ಸಾಮಿ, ಬೆಂಗಾಲಿ, ಮರಾಠಿ, ಪಾಲಿ ಮತ್ತು ಪ್ರಾಕೃತಕ್ಕೆ ಶಾಸ್ತ್ರೀಯ ಭಾಷೆಗಳ ಸ್ಥಾನಮಾನವನ್ನು ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ! ಅವುಗಳಲ್ಲಿ ಪ್ರತಿಯೊಂದೂ ಸುಂದರ ಭಾಷೆ, ನಮ್ಮ ಅದ್ಭುತ ವೈವಿಧ್ಯವನ್ನು ಎತ್ತಿ ತೋರಿಸುತ್ತದೆ. ಎಲ್ಲರಿಗೂ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು 2014ರ ಜುಲೈನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆ 2024ರ ಮೇ 5ಂದು ನೆನಪಿಸಿದ್ದೆವು. ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ಬೇಕು ಎಂದು ಆಗ್ರಹಿಸಿದ್ದೆವು. ಈ ವರ್ಷ ಮೇ 12, 13 ರಂದು ಸಂಸತ್ತಿನ ಹೊರಗೆ ಮತ್ತು ಒಳಗೆ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನದ ಆಗ್ರಹಕ್ಕೆ ಧ್ವನಿಗೂಡಿಸಿದ್ದೆವು. ಕಳೆದ ತಿಂಗಳುವರೆಗೂ ಪದೇಪದೆ ಈ ವಿಚಾರ ನೆನಪಿಸಲಾಗಿತ್ತು. 2024ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕವಾಗಿ ಇಂಡಿಯಾ ಬ್ಲಾಕ್ ನೀಡಿದ ಭರವಸೆಯನ್ನು ಈಗ ಕೇಂದ್ರ ಸರ್ಕಾರ ಅಂಗೀಕರಿಸಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕೇಂದ್ರ ಸಚಿವ ಸಂಪುಟದ ತೀರ್ಮಾನವನ್ನು ಸ್ವಾಗತಿಸಿದ್ದು, ಇದೊಂದು ಐತಿಹಾಸಿಕ ತೀರ್ಮಾನ. ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿ ರಾಜ್ಯದ ಪ್ರಯತ್ನವನ್ನು ಉಲ್ಲೇಖಿಸಿದ್ದಾರೆ.
ವಿಭಾಗ