ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿ; ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಬೆಲೆ ಏರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿ; ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಬೆಲೆ ಏರಿಕೆ

ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿ; ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಬೆಲೆ ಏರಿಕೆ

ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಬೆಲೆ ಏರಿಕೆ ಬಡ ಮಧ್ಯಮ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ. ಹೌದು, ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿಯಾಗಿದೆ. ಸದ್ಯದ ಮಾರುಕಟ್ಟೆ ಚಿತ್ರಣ ಹೀಗಿದೆ.

ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿಯಾಗಿದೆ. ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದೆ ಬೆಲೆ ಏರಿಕೆ. (ಸಾಂಕೇತಿಕ ಚಿತ್ಋ)
ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿಯಾಗಿದೆ. ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದೆ ಬೆಲೆ ಏರಿಕೆ. (ಸಾಂಕೇತಿಕ ಚಿತ್ಋ) (Pexels)

ಬೆಂಗಳೂರು: ಹಬ್ಬದ ಸೀಸನ್‌ನಲ್ಲಿ ಜನರ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚುವಂತೆ ಈ ಬಾರಿ ಹೂವು, ಹಣ್ಣು, ತರಕಾರಿಗಳೊಂದಿಗೆ ತೆಂಗಿನ ಕಾಯಿ, ಎಳನೀರು, ಈರುಳ್ಳಿ, ಬೆಳ್ಳುಳ್ಳಿ ದರಗಳೂ ಏರಿಕೆಯಾಗಿವೆ. ವಿಶೇಷವಾಗಿ ಬೆಂಗಳೂರು ಮಹಾನಗರದಲ್ಲಿ ತೆಂಗಿನ ಕಾಯಿ ಮತ್ತು ಎಳನೀರು ಪೂರೈಕೆ ಕಡಿಮೆಯಾಗಿರುವ ಕಾರಣ ದರ ಏರಿದೆ. ಸದ್ಯ ಒಂದು ತೆಂಗಿನ ಕಾಯಿಗೆ 50 ರೂಪಾಯಿ, ಎಳನೀರು 60 ರೂಪಾಯಿಗೆ ಮಾರಾಟವಾಗುತ್ತಿವೆ. ಸಾಗಣೆ ವೆಚ್ಚದ ಕಾರಣ ಏರಿಯಾದಿಂದ ಏರಿಯಾಕ್ಕೆ ಈ ದರದಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಇದೆ. ಸಾಮಾನ್ಯವಾಗಿ ಮಳೆಗಾಲ ಮತ್ತು ನಂತರದ ಕೆಲ ತಿಂಗಳು ಎಳನೀರು, ತೆಂಗಿನ ಕಾಯಿ ದರ ಬಹಳ ಕಡಿಮೆ. ಆದರೆ ಈ ಬಾರಿ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೂರೈಕೆ ಕೂಡ ಬೇಡಿಕೆ ಈಡೇರಿಸುವಷ್ಟು ಇಲ್ಲದ ಕಾರಣ ಇವುಗಳ ದರವೂ ಈಗ ಗಗನಮುಖಿಯಾಗಿದೆ.

ಬೆಂಗಳೂರಲ್ಲಿ ಎಳನೀರು, ತೆಂಗಿನ ಕಾಯಿ ದುಬಾರಿ

ಬೆಂಗಳೂರು ಮಹಾನಗರದಲ್ಲಿ ಈ ಬಾರಿ ಎಳನೀರು ಮತ್ತು ತೆಂಗಿನ ಕಾಯಿ ದುಬಾರಿಯಾಗಿದೆ. ಇದರ ಬಿಸಿ ಗ್ರಾಹಕರಿಗೆ ತಟ್ಟಿದೆ. "ರೂಢಿಯಂತಾದರೆ ಪ್ರತಿ ವರ್ಷ ಮಳೆಗಾಲದಲ್ಲಿ ಒಂದು ಎಳನೀರಿನ ಬೆಲೆ 30 ರೂಪಾಯಿಯಿಂದ 40 ರೂಪಾಯಿ. ಆದರೆ ಈ ವರ್ಷ ಬೇಸಿಗೆಯಲ್ಲಿ ಮಾರಾಟವಾಗುತ್ತಿದ್ದ ಅದೇ 60 ರೂಪಾಯಿ ಆಸುಪಾಸಿನ ದರ ಮುಂದುವರಿದಿದೆ. ಇನ್ನು ತೆಂಗಿನ ಕಾಯಿ ದರ ಈ ಹೊತ್ತಿಗೆ 20 ರೂಪಾಯಿಯಿಂದ 25 ರೂಪಾಯಿ ಇರುತ್ತಿತ್ತು. ಈ ವರ್ಷ ಅದು ಇನ್ನೂ 50 ರೂಪಾಯಿ ಆಸುಪಾಸಿನಲ್ಲಿದೆ. ಈ ಟ್ರೆಂಡ್ ದೀಪಾವಳಿ ತನಕವೂ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ಹೇಳಿರುವುದಾಗಿ ಪ್ರಜಾವಾಣಿ ವರದಿ ವಿವರಿಸಿದೆ.

ಬೆಂಗಳೂರು ಮಹಾನಗರಕ್ಕೆ ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು ಭಾಗದಿಂದ ಎಳನೀರು ಪೂರೈಕೆಯಾಗುತ್ತದೆ. ಆದರೆ ಎರಡು ವರ್ಷ ಮಳೆಯ ಕೊರತೆ ಕಾರಣ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಕೊರತೆ ಉಂಟಾಗಿದ್ದು ತೆಂಗಿನ ಫಸಲು ಕಡಿಮೆಯಾಗಿದೆ. ಇದೇ ಕಾರಣಕ್ಕೆ ಎಳನೀರು ಮತ್ತು ತೆಂಗಿನ ಕಾಯಿ ಪೂರೈಕೆ ಕಡಿಮೆಯಾಗಿದೆ. ಸಹಜವಾಗಿಯೇ ದರ ಏರಿಕೆಯಾಗಿದೆ. ಹೊಸ ಫಸಲು ಬಂದ ಬಳಿಕ ಬೆಲೆ ಇಳಿಯುವ ಸಾಧ್ಯತೆ ಇದೆ. ಮದ್ದೂರು ಭಾಗದ ಎಳನೀರು ಮಹಾರಾಷ್ಟ್ರ, ಗುಜರಾತ್‌ ಕಡೆಗೆ ರವಾನೆಯಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಕಣ್ಣೀರು ತರಿಸುವ ಈರುಳ್ಳಿ, ಬೆಳ್ಳುಳ್ಳಿ ಒಗ್ಗರಣೆ ಎರಡೂ ಇನ್ನು ಸ್ವಲ್ಪ ದಿನ ಕಷ್ಟ

ಬೆಳ್ಳುಳ್ಳಿ ದರವೂ ಏರಿಕೆಯಾಗತೊಡಗಿದ್ದು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಕಿಲೋಗೆ 450 ರೂಪಾಯಿ ದಾಟಿದೆ. ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶದಿಂದ ಬರುತ್ತಿದ್ದ ಬೆಳ್ಳುಳ್ಳಿ ಕಡಿಮೆಯಾಗಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಹೊಸ ಫಸಲು ಬರಲಿದ್ದು ಆಗ ಪೂರೈಕೆ ಹೆಚ್ಚಳವಾಗಿ ಬೆಳ್ಳುಳ್ಳಿ ದರ ಇಳಿಕೆಯಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಿರುವುದಾಗಿ ಪ್ರಜಾವಾಣಿ ವರದಿ ವಿವರಿಸಿದೆ.

ಯಶವಂತಪುರ ಎಪಿಎಂಸಿಗೆ ಎರಡು ವಾರದ ಹಿಂದೆ ನಿತ್ಯವೂ 7000 ಚೀಲದಷ್ಟು ಬೆಳ್ಳುಳ್ಳಿ ಆವಕವಾಗುತ್ತಿತ್ತು. ಒಂದು ಚೀಲ ಅಂದರೆ 50 ಕಿಲೋ ತೂಕ. ಪ್ರಸ್ತುತ ಇದು 2000 ಚೀಲಕ್ಕೆ ಇಳಿಕೆಯಾಗಿದೆ. ಆವಕ ಕಡಿಮೆಯಾದ ಕಾರಣ ದರ ಏರಿದೆ. ಮಂಗಳವಾರದ ವಹಿವಾಟಿನಲ್ಲಿ ಬೆಳ್ಳುಳ್ಳಿ ಸಗಟು ಮಾರಾಟ ದರ ಕಿಲೋಗೆ 360 ರೂಪಾಯಿ, ಚಿಲ್ಲರೆ ಮಾರುಕಟ್ಟೆ ದರ 400 ರೂಪಾಯಿ ಮೇಲಿತ್ತು ಎಂದು ವರದಿ ಹೇಳಿದೆ.

ಇನ್ನು, ಈರುಳ್ಳಿ ದರವೂ ಗಗನಮುಖಿಯಾಗಿದೆ. ಮಂಗಳವಾರ ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ 1 ಲಕ್ಷಕ್ಕೂ ಹೆಚ್ಚು ಚೀಲ ಈರುಳ್ಳಿ ಆವಕವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ 80 ರೂಪಾಯಿ ಆಸುಪಾಸಿನಲ್ಲಿದೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.

980 ಲಾರಿ ಈರುಳ್ಳಿ ಮಂಗಳವಾರ ಬೆಂಗಳೂರು ಮಾರುಕಟ್ಟೆಗೆ ಬಂದಿವೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ 95,783, ದಾಸನಪುರ ಮಾರುಕಟ್ಟೆಗೆ 4,427 ಚೀಲ ಈರುಳ್ಳಿ ತಂದಿದ್ದವು. ಸಗಟು ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಹಳೆ ಈರುಳ್ಳಿ ಕ್ವಿಂಟಲ್‌ಗೆ ಬರೋಬ್ಬರಿ 5200 ರೂಪಾಯಿವರೆಗೆ ಗರಿಷ್ಠ ದರಕ್ಕೆ ಹರಾಜಾಯಿತು. ಕನಿಷ್ಠ ದರವೇ 3500 ರೂಪಾಯಿ ಇತ್ತು. ಮಳೆಯ ಕಾರಣ ಬೆಳೆ ನಾಶವಾಗಿದ್ದು ಈ ಸಲ ಇಳುವರಿ ಕಡಿಮೆ. ಹೀಗಾಗಿ ಇನ್ನೂ ಸ್ವಲ್ಪ ತಿಂಗಳು ಈರುಳ್ಳಿ ಬೆಲೆ ಏರಿಕೆಯಾಗುತ್ತಿರಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.