logo
ಕನ್ನಡ ಸುದ್ದಿ  /  ಜೀವನಶೈಲಿ  /  ನವರಾತ್ರಿ ಸೀಸನ್‌; ಹೂವು, ಹಣ್ಣುಗಳ ಜೊತೆಗೆ ತರಕಾರಿ ದರವೂ ಹೆಚ್ಚಳ; ವಾರದಲ್ಲಿ ದುಪ್ಪಟ್ಟಾಯಿತು ಟೊಮೆಟೊ ದರ

ನವರಾತ್ರಿ ಸೀಸನ್‌; ಹೂವು, ಹಣ್ಣುಗಳ ಜೊತೆಗೆ ತರಕಾರಿ ದರವೂ ಹೆಚ್ಚಳ; ವಾರದಲ್ಲಿ ದುಪ್ಪಟ್ಟಾಯಿತು ಟೊಮೆಟೊ ದರ

Umesh Kumar S HT Kannada

Oct 06, 2024 08:00 AM IST

google News

ನವರಾತ್ರಿ ಹಬ್ಬದ ಹಿನ್ನೆಲೆ ತರಕಾರಿ ಬೇಡಿಕೆ ಹೆಚ್ಚಳವಾಗಿದ್ದು, ಟೊಮೆಟೋ ದರ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. (ಸಾಂಕೇತಿಕ ಚಿತ್ರ)

  • ನವರಾತ್ರಿ ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿ ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆ ಸಹಜ. ಈ ಬಾರಿ ಟೊಮೆಟೊ ದರ ಒಂದೇ ವಾರದಲ್ಲಿ ದುಪ್ಪಟ್ಟಾಗಿದ್ದು, ಸಾಮಾನ್ಯರ ಜೇಬಿಗೆ ಹೊರೆಯಾಗಿ ಪರಿಣಿಮಿಸಿದೆ. ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಗಿದೆ.

ನವರಾತ್ರಿ ಹಬ್ಬದ ಹಿನ್ನೆಲೆ ತರಕಾರಿ ಬೇಡಿಕೆ ಹೆಚ್ಚಳವಾಗಿದ್ದು, ಟೊಮೆಟೋ ದರ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. (ಸಾಂಕೇತಿಕ ಚಿತ್ರ)
ನವರಾತ್ರಿ ಹಬ್ಬದ ಹಿನ್ನೆಲೆ ತರಕಾರಿ ಬೇಡಿಕೆ ಹೆಚ್ಚಳವಾಗಿದ್ದು, ಟೊಮೆಟೋ ದರ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. (ಸಾಂಕೇತಿಕ ಚಿತ್ರ) (pexels)

ಬೆಂಗಳೂರು: ನವರಾತ್ರಿ ಹಬ್ಬದ ಸೀಸನ್‌ ಇದು. ಮಹಾನವಮಿ, ವಿಜಯ ದಶಮಿ ಹತ್ತಿರವಾಗುತ್ತಿರುವಂತೆ ತರಕಾರಿ ಬೆಲೆ ಗಗನಮುಖಿಯಾಗತೊಡಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆ ಆಗುತ್ತಿಲ್ಲ. ಅಕಾಲಿಕ ಮಳೆ, ಇಳುವರಿ ಕಡಿಮೆ ಇವೆಲ್ಲವೂ ಇದಕ್ಕೆ ಕಾರಣ. ಈ ನಡುವೆ, ಟೊಮೆಟೊ ಬೆಲೆ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ಇದ್ದ ಬೆಲೆಗೂ ಈ ವಾರದ ಬೆಲೆಗೂ ಹೋಲಿಸಿದರೆ ದುಪ್ಪಟ್ಟು ಏರಿಕೆಯಾಗಿರುವುದು ಕಂಡುಬಂದಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲೇ ಟೊಮೆಟೊ ದುಬಾರಿಯಾಗಿ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಂತಾಗಿದೆ. ಅಕಾಲಿಕ ಮಳೆಯಿಂದಾಗಿ ಟೊಮೆಟೊ ಇಳುವರಿ ಕುಸಿತ ಕಂಡಿದೆ. ಇನ್ನೊಂದೆಡೆ ಟೊಮೆಟೊ ಬೇಡಿಕೆ ಹೆಚ್ಚಳವಾಗಿದೆ. ಪೂರೈಕೆ ಕಡಿಮೆ ಇರುವ ಕಾರಣ ಸಹಜವಾಗಿಯೇ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಇನ್ನು ಕೆಲವು ದಿನಗಳ ಕಾಲ ಟೊಮೆಟೊ ದರ ಇನ್ನಷ್ಟು ಏರಬಹುದು ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಬೆಂಗಳೂರಲ್ಲಿ ದುಪ್ಪಟ್ಟಾಯಿತು ಟೊಮೆಟೊ ದರ

ಹೂವು, ಹಣ್ಣು, ತರಕಾರಿ ದುಬಾರಿಯಾದರೆ ಸಂಕಷ್ಟಕ್ಕೆ ಒಳಗಾಗುವುದು ಬಹುತೇಕ ಬಡ ಮಧ್ಯಮ ವರ್ಗದ ಜನರು. ಆದಾಯ- ಖರ್ಚು ವೆಚ್ಚಗಳ ಹೊಂದಾಣಿಕೆಯೇ ಬಹುದೊಡ್ಡ ಸವಾಲು. ಹೀಗಾಗಿ ಬೆಲೆ ಏರಿಕೆಯ ಬಿಸಿ ಈ ವರ್ಗದ ಜನರಿಗೆ ಬಹುಬೇಗ ತಟ್ಟಿಬಿಡುತ್ತದೆ. ಈರುಳ್ಳಿ-ಬೆಳ್ಳುಳ್ಳಿ, ತರಕಾರಿ, ಹೂವು, ಹಣ್ಣುಗಳ ಬೆಲೆ ಏರಿಕೆಯಾದ ಬೆನ್ನಲ್ಲೇ ಈಗ ಟೊಮೆಟೊ ದರವೂ ದುಪ್ಪಟ್ಟಾಗಿದೆ. ಕಳೆದ ವಾರ ಒಂದು ಕಿಲೋ ಟೊಮೆಟೊಗೆ 40 ರೂಪಾಯಿ ಇತ್ತು. ಅದು ಈಗ 80 ರೂಪಾಯಿ ಆಗಿದೆ. ಅಕಾಲಿಕ ಮಳೆಯ ಕಾರಣ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು, ಈಗ ಈರುಳ್ಳಿ ದರ ಕಿಲೋಗೆ 70 ರೂಪಾಯಿ ಗಡಿ ದಾಟಿದೆ. ಇನ್ನು ಪ್ರತಿ ಕಿಲೋ ಬೆಳ್ಳುಳ್ಳಿ ದರ 500 ರೂಪಾಯಿ ತಲುಪಿದೆ.

ಹೂವು, ಹಣ್ಣುಗಳ ಬೆಲೆ ಏರುತ್ತಿದೆ

ನವರಾತ್ರಿ ಹಬ್ಬದ ಕಾರಣ ಹೂವಿನ ದರ ದಿನೇದಿನೆ ಏರಿಕೆಯಾಗುತ್ತಿದೆ. ಮಹಾನವಮಿ, ಆಯುಧ ಪೂಜೆ ಹತ್ತಿರವಿರುವ ಕಾರಣ ಹೂವುಗಳ ಬೆಲೆಯೂ ಗಗನಮುಖಿಯಾಗಿದೆ. ಎರಡು ದಿನಗಳ ಹಿಂದೆ ಮಲ್ಲಿಗೆ ಹೂ ಮಾರು ಒಂದಕ್ಕೆ 300-450 ರೂ ನಿಗದಿಯಾಗಿದ್ದರೆ ಸೇವಂತಿಗೆ ಮಾರಿಗೆ 100-250 ರೂ.ಗೆ ಏರಿಕೆಯಾಗಿದೆ. ಈ ದರಗಳು ಬೆಂಗಳೂರಿನಲ್ಲಿ ಏರಿಯಾದಿಂದ ಏರಿಯಾಕ್ಕೆ ಬದಲಾಗುತ್ತಿದೆ. ಗುಲಾಬಿ ಕೆಜಿಗೆ 500 ರೂ.ಗೆ ಏರಿಕೆಯಾಗಿದೆ. ಕೆಜಿ ಲೆಕ್ಕದಲ್ಲಿ ಸೇವಂತಿಗೆ-300- 400 ರೂಪಾಯಿ, ಕಾಕಡ-500-600 ರೂಪಾಯಿ, ಕನಕಾಂಬರ-900- 100 ರೂಪಾಯಿ, ಗುಲಾಬಿ-250-350 ರೂಪಾಯಿ, ಸುಗಂಧರಾಜ-60- 100 ರೂಗಳಿಗೆ ಮಾರಾಟವಾಗುತ್ತಿದೆ.

ದಾಳಿಂಬೆ ಕಿಲೋಗೆ 400- 500 ರೂ ಇದ್ದು, 600 ರೂಪಾಯಿ ದಾಟಲಿದೆ. ಸೇಬು ಕೆಜಿಗೆ 350-400 ರೂ, ಸಾಮಾನ್ಯ ಸೇಬಿನ ಬೆಲೆ 200-300 ರೂ. ಆಸುಪಾಸಿನಲ್ಲಿದೆ. ಸೀತಾಫಲದ ಬೆಲೆ 180 ರೂ, ಬಾಳೆಹಣ್ಣಿನ ಬೆಲೆ 150 ರೂ.ಗೆ ಮಾರಾಟವಾಗುತ್ತಿದೆ. ತೆಂಗಿನ ಕಾಯಿ ಬೆಲೆ ಗಾತ್ರದ ಮೇಲೆ ನಿಗದಿಯಾಗಿದ್ದು, ಸಾಮಾನ್ಯವಾಗಿ 50 ರೂಪಾಯಿ ತನಕ ಇದೆ ಎಂದು ಹಣ್ಣಿನ ವ್ಯಾಪಾರು ಹೇಳುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ