logo
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಯೋಗೇಶ್ವರ್‌ ಗೆಲುವು; ಎನ್‌ ಡಿಎ ಅಭ್ಯರ್ಥಿ ನಿಖಿಲ್‌ ಗೆ ಹ್ಯಾಟ್ರಿಕ್‌ ಸೋಲು; ಯೋಗಿ ಕೈ ಹಿಡಿದಿದ್ದು ಹೇಗೆ

ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಯೋಗೇಶ್ವರ್‌ ಗೆಲುವು; ಎನ್‌ ಡಿಎ ಅಭ್ಯರ್ಥಿ ನಿಖಿಲ್‌ ಗೆ ಹ್ಯಾಟ್ರಿಕ್‌ ಸೋಲು; ಯೋಗಿ ಕೈ ಹಿಡಿದಿದ್ದು ಹೇಗೆ

Umesha Bhatta P H HT Kannada

Nov 23, 2024 06:10 PM IST

google News

ಚನ್ನಪಟ್ಟಣ ವಿಧಾನಸಭೆ ಚುನಾವಣೆ ಯೋಗೇಶ್ವರ್‌ ಗೆದ್ದು ಬೀಗಿದರೆ, ನಿಖಿಲ್‌ ಕುಮಾರಸ್ವಾಮಿ ಸೋಲು ಜೆಡಿಎಸ್‌ಗೆ ಏಟು ನೀಡಿದೆ.

  • Channapatna byelection results 2024: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಯೋಗೇಶ್ವರ್‌ ಮತ್ತೆ ತಮ್ಮ ಶಕ್ತಿ ತೋರಿದ್ದಾರೆ. ಅಮ್ಮನ ನಂತರ ಮಗನನ್ನೂ ಸೋಲಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ವಿರುದ್ದದ ಎರಡು ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಚನ್ನಪಟ್ಟಣದ ಚುನಾವಣೆ ಒಳನೋಟ ಇಲ್ಲಿದೆ.

    (ರಾಜಕೀಯ ವಿಶ್ಲೇಷಣೆ: ಎಚ್.ಮಾರುತಿ)

ಚನ್ನಪಟ್ಟಣ ವಿಧಾನಸಭೆ ಚುನಾವಣೆ ಯೋಗೇಶ್ವರ್‌ ಗೆದ್ದು ಬೀಗಿದರೆ, ನಿಖಿಲ್‌ ಕುಮಾರಸ್ವಾಮಿ ಸೋಲು ಜೆಡಿಎಸ್‌ಗೆ ಏಟು ನೀಡಿದೆ.
ಚನ್ನಪಟ್ಟಣ ವಿಧಾನಸಭೆ ಚುನಾವಣೆ ಯೋಗೇಶ್ವರ್‌ ಗೆದ್ದು ಬೀಗಿದರೆ, ನಿಖಿಲ್‌ ಕುಮಾರಸ್ವಾಮಿ ಸೋಲು ಜೆಡಿಎಸ್‌ಗೆ ಏಟು ನೀಡಿದೆ.

ಬೆಂಗಳೂರು: ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಚನ್ನಪಟ್ಟಣ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಣಮಿಸಿತ್ತು. ಘಟಾನುಘಟಿ ನಾಯಕರು ಅಖಾಡದಲ್ಲಿದ್ದು ಮತ್ತು ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಎನ್‌ ಡಿಎ ಪ್ರಬಲ ಪೈಪೋಟಿ ನೀಡಿದ್ದರೂ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆಗಳು ಹೆಚ್ಚು ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿತ್ತು ನಿರೀಕ್ಷೆಯಂತೆ ಕಾಂಗ್ರೆಸ್‌ ನ ಸಿ.ಪಿ ಯೋಗೇಶ್ವರ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಯೋಗೇಶ್ವರ್ 1,12,642 ಮತ ಪಡೆದು 25,413 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ. 36 ವರ್ಷದ ನಿಖಿಲ್‌ ಹ್ಯಾಟ್ರಿಕ್‌ ಸೋಲು ಕಂಡಿದ್ದಾರೆ. ಈ ಹಿಂದೆಯೂ ಇದೇ ಕ್ಷೇತ್ರದಿಂದ ಸ್ಪರ್ದಿಸಿ ಐದು ಬಾರಿ ಗೆಲುವು ಪಡೆದಿದ್ದ ಯೋಗೇಶ್ವರ್, 6ನೇ ಬಾರಿಗೆ ದಾಖಲೆಯ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ವಲಸೆ ಹಕ್ಕಿ ಎಂಬ ಕುಖ್ಯಾತಿಗೆ ಭಾಜನವಾಗಿದ್ದರೂ ಕ್ಷೇತ್ರದ ಜನ ಇವರನ್ನು ಕೈಬಿಟ್ಟಿಲ್ಲ.

ತರಹೇವಾರಿ ಚರ್ಚೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಲ್ಲಿ ಫಲಿತಾಂಶ ಏರುಪೇರಾಗಲಿದೆ ಎಂಬ ವದಂತಿಗಳು ಹರಡಿದ್ದವು. ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಎಂಟ್ರಿ ಕೊಡುವವರೆಗೂ ಬೊಂಬೆ ನಾಡು ಕೈನತ್ತ ವಾಲಿತ್ತು. ಜಮೀರ್ ಬಾಯಿಂದ ಹೊರಬಿದ್ದ ಮಾತುಗಳು ಯೋಗೇಶ್ವರ್‌ ಗೆ ದುಬಾರಿಯಾಗಿ ಪರಿಣಮಿಸಿದ್ದವು. ಪರಿಣಾಮ ಒಕ್ಕಲಿಗ ಸಮುದಾಯದ ಮತಗಳು ನಿಖಿಲ್ ಪರ ವರ್ಗಾವಣೆಯಾಗುತ್ತವೆ ಎಂಬ ವದಂತಿಗಳು ಹಬ್ಬಿದ್ದವು.

ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಆಯ್ಕೆಯಾಗಿ ರಾಜೀನಾಮೆ ನೀಡಿದ್ದರಿಂದ ಮರು ಚುನಾವಣೆ ನಡೆದಿತ್ತು. ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರೇ ಸೋತರೂ ಅದು ಹ್ಯಾಟ್ರಿಕ್ ಸೋಲಾಗುತ್ತದೆ. ಯೋಗೇಶ್ವರ್ 2018 ಮತ್ತು 2023 ರಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು. ನಿಖಿಲ್ 2019 ರಲ್ಲಿ ಮಂಡ್ಯ ಲೋಕಸಭೆ ಮತ್ತು 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ನಿಖಿಲ್‌ ಹ್ಯಾಟ್ರಿಕ್‌ ಸೋಲು ಕಂಡಿದ್ದಾರೆ.

2023ರಲ್ಲಿ ಕುಮಾರಸ್ವಾಮಿ ಅವರು 96,592 ಮತ ಗಳಿಸಿ ಜಯಸಾಧಿಸಿದ್ದರೆ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೇಶ್ವರ್ 80,677 ಮತ ಗಳಿಸಿದ್ದರು. 2013ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಯೋಗೇಶ್ವರ್‌ ವಿರುದ್ಧ ಸೋಲು ಕಂಡಿದ್ದರು.

ಫಲ ಕೊಡದ ಗೌಡರ ಪ್ರಯತ್ನ

ಈ ಬಾರಿ ಡಿ.ಕೆ. ಸಹೋದರರು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು. 93 ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಮೊಮ್ಮಗನ ಪರವಾಗಿ 5-6 ದಿನಗಳ ಕಾಲ ಪ್ರಚಾರ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್‌ ವಿರುದ್ಧ ಅಬ್ಬರಿಸಿದ್ದರು. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಗನ ಪರವಾಗಿ ಚನ್ನಪಟ್ಟಣದಲ್ಲೇ ಠಿಕಾಣಿ ಹೂಡಿದ್ದರು.

ಲೋಕಸಭಾ ಚುನಾವಣೆಯ ಸೋಲು ಡಿ.ಕೆ. ಸಹೋದರರನ್ನು ಗಾಯಗೊಂಡ ಹುಲಿಯನ್ನಾಗಿ ಮಾಡಿತ್ತು. ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವಲಸೆ ಹೋಗುತ್ತಿರುವುದು ಖಚಿತವಾದ ದಿನದಿಂದಲೇ ಚನ್ನಪಟ್ಟಣದಲ್ಲಿ ಪ್ರಚಾರ ಆರಂಭಿಸಿದ್ದರು. ಅರಂಭದಲ್ಲಿ ಡಿಕೆ ಸುರೇಶ್‌ ಸ್ಪರ್ಧಿಸುತ್ತಾರೆ ಎಂಬ ಗುಲ್ಲು ಹಬ್ಬಿತ್ತಾದರೂ ಕೊನೆಯ ಗಳಿಗೆಯಲ್ಲಿ ಬಿಜೆಪಿಯಲ್ಲಿದ್ದ ಸಿ.ಪಿ. ಯೋಗೇಶ್ವರ್‌ ಅವರನ್ನು ಕರೆತಂದು ಅಭ್ಯರ್ಥಿ ಮಾಡಿದರು. ಅಲ್ಲಿಗೆ ಗೆಲುವೂ ಹತ್ತಿರವಾಗಿತ್ತು. ಯೋಗೇಶ್ವರ್‌ ವಿರುದ್ಧ ಯಾವೊಬ್ಬ ಜೆಡಿಎಸ್‌ ಮುಖಂಡನೂ ಎದುರಾಳಿಯಾಗಲು ಒಪ್ಪದ ಕಾರಣ ನಿಖಿಲ್‌ ಅವರನ್ನೇ ಕಣಕ್ಕಿಳಿಸಲಾಯಿತು.

ಯೋಗಿ ಗೆಲುವಿಗೆ ಕಾರಣಗಳೇನು?

ಯೋಗೇಶ್ವರ್‌ ಗೆಲುವಿಗೆ 5 ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಭಾವ ಯೋಗೇಶ್ವರ್ ಅವರ ವೈಯಕ್ತಿಕ ವರ್ಚಸ್ಸು ಗೆಲುವಿನ ದಡ ದಾಟಿಸಲು ಸಹಾಯಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರ ಕೈ ಹಿಡಿದಿದೆ. ಇಡೀ ಸಚಿವ ಸಂಪುಟ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು. ಡಿಕೆ ಸಹೋದರರು ಯೋಗೇಶ್ವರ್‌ ಬೆನ್ನಿಗೆ ಬಂಡೆಯಂತೆ ನಿಂತಿದ್ದರು. ತಾವೇ ಅಭ್ಯರ್ಥಿ ಎನ್ನುವಂತೆ ಹಗಲಿರುಳೂ ಶ್ರಮಿಸಿದ್ದರು.

ಇನ್ನು ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ವಲಸಿಗ, ಅವರನ್ನು ಹಾಸನಕ್ಕೆ ಕಳುಹಿಸೋಣ ಎಂಬ ಪ್ರಚಾರವೂ ನಡೆದಿತ್ತು. ಮತ್ತೊಂದು ಕಡೆ ಸ್ತಳೀಯ ಯೋಗೇಶ್ವರ್‌ ಅವರನ್ನು ಗೆಲ್ಲಿಸಬೇಕು ಎಂಬ ಸ್ವಾಭಿಮಾನದ ಕಿಚ್ಚು ಹತ್ತಿತ್ತು. ಯೋಗೇಶ್ವರ್‌ ಅವರ ಕೆರೆ ತುಂಬಿಸಿದ್ದು ಅವರ ಮತಪೆಟ್ಟಿಗೆ ತುಂಬಲು ಕಾರಣವಾಗಿದ್ದು ಸುಳ್ಳಲ್ಲ. ಜೊತೆಗೆ ಐದು ಗ್ಯಾರಂಟಿಗಳು ಕಾಂಗ್ರೆಸ್‌ ಕೈ ಬಿಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿದೆ. ರಾಮನಗರ ಜಿಲ್ಲೆಯ ಏಕೈಕ ಜೆಡಿಎಸ್‌ ಶಾಸಕರಾಗಿದ್ದರು. ಇದೀಗ ಚನ್ನಪಟ್ಟಣವೂ ಕೈವಶವಾಗಿದ್ದು, ರಾಮನಗರ ಜಿಲ್ಲೆಯಿಂದ ಜೆಡಿಎಸ್‌ ಶೂನ್ಯ ಸಾಧನೆ ಮಾಡಿದೆ.

(ರಾಜಕೀಯ ವಿಶ್ಲೇಷಣೆ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ