logo
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್, ಜೈಲು ವಾಸದ ನಂತರ ದಾಸನಿಗೆ ಬಿಡುಗಡೆ ಭಾಗ್ಯ

Breaking News: ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್, ಜೈಲು ವಾಸದ ನಂತರ ದಾಸನಿಗೆ ಬಿಡುಗಡೆ ಭಾಗ್ಯ

Umesha Bhatta P H HT Kannada

Oct 30, 2024 11:51 AM IST

google News

ನಟ ದರ್ಶನ್‌ಗೆ ಕರ್ನಾಟಕದ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

    •  ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದ ಕರ್ನಾಟಕ ಸ್ಯಾಂಡಲ್‌ ವುಡ್‌ ನಟ ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 
    • ವರದಿ: ಎಚ್‌.ಮಾರುತಿ,ಬೆಂಗಳೂರು
ನಟ ದರ್ಶನ್‌ಗೆ ಕರ್ನಾಟಕದ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನಟ ದರ್ಶನ್‌ಗೆ ಕರ್ನಾಟಕದ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳಿನಿಂದ ಜೈಲಿನಲ್ಲಿಯೇ ಇದ್ದ ನಟ ದರ್ಶನ್‌ ತೂಗುದೀಪ ಅವರಿಗೆ ಮಧ್ಯಂತರ ಜಾಮೀನು ದೊರೆತಿದೆ. ಕರ್ನಾಟಕ ಹೈಕೋರ್ಟ್‌ ಜಾಮೀನು ಕುರಿತು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ ಷರತ್ತುಬದ್ದ ಮಧ್ಯಂತರ ಜಾಮೀನನ್ನು ನೀಡಿದೆ.ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಪಾಸ್ ಪೋರ್ಟ್ ನ್ಯಾಯಾಲಯದ ವಶಕ್ಕೆ ಸಲ್ಲಿಸಬೇಕು ಮತ್ತು ವಿದೇಶ ಪ್ರವಾಸ ಮಾಡುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿದೆ. ಅನಾರೋಗ್ಯದ ಹಿನ್ನೆಯಲ್ಲಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಪ್ರಕ್ರಿಯೆಗಳು ಪೂರ್ಣಗೊಂಡರೆ ಇಂದೇ ಜೈಲಿನಿಂದ ಹೊರ ಬರಲಿದ್ದಾರೆ.

131 ದಿನಗಳ ಸೆರೆವಾಸದ ನಂತರ ದರ್ಶನ್ ಹೊರಗೆ ಬರಲಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ 2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಾಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ. ತನ್ನ ಆಪ್ತೆಗೆ ಸಂದೇಶ ಕಳುಹಿಸುತ್ತಿದ್ದ ಎಂಬ ಸಿಟ್ಟು ದರ್ಶನ್ ಗೆ ಇತ್ತು. ಇದರಿಂದ ಕೆರಳಿದ ಅವರು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎನ್ನುವುದು ಆರೋಪದ ಹೂರಣ. ಕೊಲೆ ಪ್ರಕರಣದಲ್ಲಿ ಇದುವರೆಗೆ 17 ಮಂದಿಯನ್ನು ಬಂಧಿಸಲಾಗಿದ್ದು, ಮೂವರಿಗೆ ಈಗಾಗಲೇ ಜಾಮೀನು ದೊರೆತಿದೆ. ಉಳಿದ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆರಂಭದಲ್ಲಿ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ದರ್ಶನ್ ಕೆಲವು ಆರೋಪಿಗಳೊಂದಿಗೆ ಕುಳಿತು ಚಹಾ ಸೇವಿಸುತ್ತಿದ್ದ ಫೋಟೋ ವೈರಲ್ ಆದ ನಂತರ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಮಂಗಳವಾರ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಅದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ನಿನ್ನೆ ದರ್ಶನ್ ಪರ ವಕೀಲರು ಕನಿಷ್ಠ 3 ತಿಂಗಳ ಮಧ್ಯಂತರ ಜಾಮೀನು ನೀಡಿ ಎಂದು ಮನವಿ ಮಾಡಿಕೊಂಡಿದ್ದರು.

ದರ್ಶನ್‌ ಪರ ವಕೀಲ ಖ್ಯಾತ ಕ್ರಿಮಿನಲ್‌ ವಕೀಲ ಸಿ.ವಿ.ನಾಗೇಶ್‌ ತಮ್ಮ ವಾದವನ್ನು ಮಂಡಿಸಿ ದರ್ಶನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು. ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು. ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಅವರ ಅನಾರೋಗ್ಯ ಕುರಿತು ಹೆಚ್ಚಿನ ಮಾಹಿತಿ ಲಭಿಸುತ್ತದೆ. ಚಿಕಿತ್ಸೆಗೆ ಎಷ್ಟು ದಿನ ಬೇಕೆಂದು ವೈದ್ಯರು ಮಾತ್ರ ಹೇಳಬಹುದು. ನಾವು ಕೇಳುತ್ತಿರುವುದು ಕೇವಲ ಮಧ್ಯಂತರ ಜಾಮೀನು ಮಾತ್ರ. ಬಳ್ಳಾರಿಯ ವೈದ್ಯರು ಈಗಾಗಲೇ ವರದಿ ನೀಡಿದ್ದಾರೆ. ಇದನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ವಾದಿಸಿದ್ದರು.

ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಿ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ವಕೀಲರು ದರ್ಶನ್ ಮೈಸೂರಿನ ನಿವಾಸಿಯಾಗಿದ್ದು, ಈ ಹಿಂದೆ ಅಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಸಾಕ್ಷಿಗಳಿರುವುದರಿಂದ ಅವರು ಬೆಂಗಳೂರಿನಲ್ಲಿ ಇರುವುದಿಲ್ಲ. ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಕಾಲಕಾಲಕ್ಕೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕರಣವನ್ನು ಪ್ರಸ್ತಾಪಿಸಿದ ಸಿ.ವಿ. ನಾಗೇಶ್ ಅವರು, ದೆಹಲಿ ಹೈಕೋರ್ಟ್ ಅನಾರೋಗ್ಯ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್‌ ಅವರಿಗೆ ಜಾಮೀನು ನೀಡಿತ್ತು. ಬಿಪಿ, ಶುಗರ್, ಥೈರಾಯಿಡ್ ಸಮಸ್ಯೆಗಳಿಗೆ ಅವರು 3 ಬಾರಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವೆಲ್ಲ ಸಾಮಾನ್ಯವಾದ ಕಾಯಿಲೆಗಳಾಗಿದ್ದರೂ ಜಾಮೀನು ನೀಡಲಾಗಿತ್ತು. ಆದರೆ ದರ್ಶನ್ ದೊಡ್ಡ ಪ್ರಮಾಣದ ಸಮಸ್ಯೆ ಎದುರಿಸುತ್ತಿದ್ದಾರೆ. ದರ್ಶನ್ ಗೆ MRI ಸ್ಕ್ಯಾನ್ ಮಾಡಿಸಲಾಗಿದೆ. ಬೆನ್ನಿನ ನರದ L5, S1 ನಲ್ಲಿ ಸಮಸ್ಯೆ ಇದೆ. ದರ್ಶನ್ ಒಂದು ಕಾಲಿನ ಪಾದದಲ್ಲಿ ಸಮಸ್ಯೆ ಇದೆ ಎಂಬುದನ್ನೂ ತಿಳಿಸಿದರು.

ಇಂತಹುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂದು ಪ್ರಾಸಿಕ್ಯೂಷನ್ ಹೇಳಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತಂಕ ಇದ್ದೇ ಇರುತ್ತದೆ. ಆದ್ದರಿಂದ ದರ್ಶನ್ ತಮಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಆದೇಶವೂ ಇದೆ ಎಂದು ಹೇಳಿದ್ದರು.

ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದಿರುವ ಹಲವು ತೀರ್ಪುಗಳಿವೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹೇಳಿದಾಗ ಎರಡನೇ ಅಭಿಪ್ರಾಯವನ್ನು ಬೆಂಗಳೂರಿನಲ್ಲಿ ಪಡೆಯಬಹುದಲ್ಲವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಎರಡನೇ ಅಭಿಪ್ರಾಯ ಏಕೆ ಬೇಕು? ನರರೋಗ ತಜ್ಞರು ಆಪರೇಷನ್ ಮಾಡಿಸಬೇಕು ಎಂದು ಹೇಳಿದ್ದಾರೆ ಎಂದು ನಾಗೇಶ್‌ ಉತ್ತರಿಸಿ

ಕನಿಷ್ಠ 3 ತಿಂಗಳು ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. 3 ತಿಂಗಳು ಜಾಮೀನು ಕೊಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಪರೀಕ್ಷಿಸಿ ಮೈಸೂರಲ್ಲಿ ಚಿಕಿತ್ಸೆ ಪಡೆಯಬಹುದಲ್ಲವೇ ಎಂದರು. ಆಗ ನಾಗೇಶ್ ಅವರು ಭದ್ರತೆಯ ಸಮಸ್ಯೆ ಉಂಟಾಗುತ್ತದೆ ಎಂದರು. ಆ ಸಮಸ್ಯೆಯನ್ನು ಗೃಹ ಇಲಾಖೆ ನೋಡಿಕೊಳ್ಳುತ್ತದೆ ಎಂದರು. ಅಂತಿಮವಾಗಿ ಬುಧವಾರ ಆದೇಶ ಹೊರಡಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದರು. ಅದರಂತೆ ಆರು ವಾರಗಳ ಷರತ್ತು ಬದ್ದ ಜಾಮೀನನ್ನು ನೀಡಿದ್ದಾರೆ ಆದೇಶ ಹೊರಡಿಸಿದರು.

(ವರದಿ: ಎಚ್‌.ಮಾರುತಿ. ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ