ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಪರ ಒಂದು ಗಂಟೆ ವಾದ ಮಂಡಿಸಿದ ವಕೀಲ; ಜೈಲಾ, ಬೇಲಾ? ಇಂದೇ ಭವಿಷ್ಯ ನಿರ್ಧಾರ
Renukaswamy Murder Case: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಇಂದು ಅಂದರೆ ಅಕ್ಟೋಬರ್ 5 ಶನಿವಾರ ಮಧ್ಯಾಹ್ನ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಜಾಮೀನು ಸಿಗಲಿರುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದು ನ್ಯಾಯಾಂಗ ಬಂಧನದಲ್ಲಿ ಬಳ್ಳಾರಿ ಜೈಲಿನಲ್ಲಿರುವ ಚಿತ್ರನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ಭವಿಷ್ಯ ಇಂದು (ಅಕ್ಟೋಬರ್ 5, ಶನಿವಾರ) ನಿರ್ಧಾರವಾಗಲಿದೆ. ಶುಕ್ರವಾರ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ಮಂಡಿಸಿದ ವಾದದ ಆಧಾರದ ಹಿನ್ನೆಲೆಯಲ್ಲಿ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳು.
ಶುಕ್ರವಾರ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದಿಸಿ ಪೊಲೀಸರ ತನಿಖೆಯ ವೈಖರಿಯನ್ನೇ ತರಾಟೆಗೆ ತೆಗೆದುಕೊಂಡರು. ಪ್ರತಿ ಹಂತದಲ್ಲೂ ದರ್ಶನ್ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಸೃಷ್ಟಿಸುತ್ತಾ ಬರಲಾಗಿದ್ದು ತಮ್ಮ ಕಕ್ಷಿದಾರರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದು ವಾದಿಸಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಇದೊಂದು ಅತ್ಯುತ್ತಮ ತನಿಖೆ ಎಂದು ಪ್ರಶಂಶೆ ಮಾಡಿದ್ದಾರೆ. ಆದರೆ ನನ್ನ ದೃಷ್ಟಿಯಲ್ಲಿ ಇದೊಂದು ಅತ್ಯಂತ ಕಳಪೆ ತನಿಖೆಯಾಗಿದೆ. ಮೃತ ದೇಹದ ಮೇಲೆ ನಾಯಿ ಕಚ್ಚಿದ ಗುರುತುಗಳಿದ್ದು, ಇದನ್ನೇ ಹಲ್ಲೆ ಎಂದು ಬಿಂಬಿಸಲಾಗಿದೆ.
ದರ್ಶನ್ರನ್ನು ಸಿಲುಕಿಸುವ ಪ್ರಯತ್ನ
ದರ್ಶನ್ ಅವರನ್ನು ಬಂಧಿಸಿದ ದಿನದಿಂದ ಹಿಡಿದು ಚಾರ್ಜ್ ಶೀಟ್ ಸಲ್ಲಿಸುವವರೆಗೂ ಪ್ರತಿ ಹಂತದಲ್ಲೂ ಲೋಪ ಎಸಗಲಾಗಿದೆ ಮತ್ತು ದರ್ಶನ್ ಅವರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾ ಬರಲಾಗಿದೆ. ಆರೋಪಿಯು ಚಪ್ಪಲಿ ಧರಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ಅವರ ನಿವಾಸದಿಂದ ಶೂಗಳನ್ನು ವಶಪಡಿಸಿಕೊಂಡಿದ್ದಾರೆ. 37 ಲಕ್ಷ ರೂ. ಹಣವನ್ನು ಜೂನ್ 2ರಂದು ದರ್ಶನ್ ಅವರಿಗೆ ನೀಡಲಾಗಿದೆ. ಆದರೆ ಹಣವನ್ನು ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ನೀಡಲಾಗಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ವಾದಿಸಿದರು.
ಕೃತ್ಯ ನಡೆದಿದೆ ಎನ್ನಲಾದ ಸ್ಥಳದಲ್ಲಿ ಜೂನ್ 12ರಂದು ನೈಲಾನ್ ಹಗ್ಗ, ಮರದ ತುಂಡು, ಸ್ಟೋನಿ ಬ್ರೂಕ್ ಪಬ್ ಹೆಸರಿನ ನೀರಿನ ಬಾಟಲ್ ವಶಕ್ಕೆ ಪಡೆದಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಆದರೆ ಈ ವಸ್ತುಗಳು ಜೂನ್ 9ರಂದೇ ಪೊಲೀಸರ ಬಳಿ ಇದ್ದವು. ಮೇಲಾಗಿ ಟಾರ್ಚ್ ಬೆಳಕಿನಲ್ಲಿ ಪಂಚನಾಮೆ ನಡೆಸಲಾಗಿದೆ. ಆದ್ದರಿಂದ ಈ ಅಂಶಗಳನ್ನು ನಂಬುವಂತಿಲ್ಲ ಎಂದರು. ಕೃತ್ಯ ನಡೆದ ದಿನ ದರ್ಶನ್ ತೊಟ್ಟಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಬಟ್ಟೆಗಳನ್ನು ತೊಳೆದು ಒಣಗಿಸಲಾಗಿದ್ದರೂ ಈ ಬಟ್ಟೆಗಳಲ್ಲಿ ರಕ್ತದ ಕಲೆಗಳಿದ್ದವು ಎಂದು ಪೊಲೀಸರು ಉಲ್ಲೇಖ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ನಾಗೇಶ್ ಪ್ರಶ್ನಿಸಿದರು.
ಕಲೆ ಹಾಕಿರುವ ಸಣ್ಣಪುಟ್ಟ ಸಾಕ್ಷ್ಯಗಳನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಇಡೀ ತನಿಖೆಯಲ್ಲಿ ಪೊಲೀಸರು ಲೋಪಗಳನ್ನು ಎಸಗುತ್ತಾ ಬಂದಿದ್ದಾರೆ. ಈ ತನಿಖೆ ಅರೇಬಿಯನ್ ನೈಟ್ಸ್ ಸ್ಟೋರಿ ಮಾದರಿಯಲ್ಲಿದೆ ಎಂದರು. ತಮ್ಮ ಕಕ್ಷಿದಾರ ದರ್ಶನ್ ಅವರು ನೋಡಲು ಒರಟಾಗಿ ಕಂಡರೂ ಹೃದಯವಂತ ಮನುಷ್ಯ. ತಾವೂ ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸಿದ್ದಾರೆ ಎನ್ನವುದನ್ನು ನ್ಯಾಯಾಯಲಯದ ಗಮನಕ್ಕೆ ತಂದರು. ಶನಿವಾರವೂ ನಾಗೇಶ್ ಅವರು ತಮ್ಮ ವಾದವನ್ನು ಮುಂದುವರೆಸಲಿದ್ದಾರೆ. ನಂತರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ತಮ್ಮ ಆಕ್ಷೇಪಗಳನ್ನು ಸಲ್ಲಿಸಲಿದ್ದಾರೆ.
ಪವಿತ್ರ ಗೌಡ ಜಾಮೀನು ಅರ್ಜಿ ವಿಚಾರಣೆ
ಅಂತಿಮವಾಗಿ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ದರ್ಶನ್ ಅವರಿಗೆ ಜಾಮೀನು ಸಿಕ್ಕರೆ ಇತರೆ ಆರೋಪಿಗಳಿಗೂ ಸುಲಭವಾಗಿ ಜಾಮೀನು ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಕೊಲೆ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯೂ ಇಂದು ನಡೆಯಲಿದೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ 17 ಆರೋಪಿಗಳ ಪೈಕಿ 15, 16 ಮತ್ತು 17ನೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.