ಬೆಳಗಾವಿಗೆ ಮಹಾತ್ಮ ಗಾಂಧಿ ಭೇಟಿ, ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪು; ಡಿಸೆಂಬರ್ 26, 27ರಂದು ಕಾರ್ಯಕ್ರಮಕ್ಕೆ ತಯಾರಿ
Dec 03, 2024 07:45 AM IST
ಬೆಳಗಾವಿಯಲ್ಲಿ ಕಾಂಗ್ರೆಸ್ ಶತಮಾನೋತ್ಸವ ನೆನಪಿನ ಅಧಿವೇಶನ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಕುರಿತು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.
- Belagavi Congress Centanary Convention: ಬೆಳಗಾವಿಯಲ್ಲಿ ಶತಮಾನದ ಹಿಂದೆ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ನೆನಪಿಗೆ ನೂರು ವರ್ಷದ ನಂತರ ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿದೆ. ಡಿಸೆಂಬರ್ 26, 27 ರಂದು ವಿಶೇಷವಾಗಿ ಚಟುವಟಿಕೆ ರೂಪಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: 1924 ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿದ್ದ ಡಿಸೆಂಬರ್ 26, 27 ರಂದು ಬೆಳಗಾವಿಯಲ್ಲಿ ಸಿಡಬ್ಲುಸಿ ಸಭೆ ಜೊತೆಗೆ ಗಾಂಧಿ ತತ್ವಗಳ ವರ್ಷವಿಡೀ ಎಲ್ಲಾ ಶಾಲೆಗಳಲ್ಲಿ ʻಗಾಂಧಿ ಭಾರತʼ ಅಡಿಯಲ್ಲಿ ʻನಾವು ಮನುಜರುʼ ಕಾರ್ಯಕ್ರಮಗಳ ಆಯೋಜನೆಗೆ ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಗಾಂಧೀಜಿ ವಿಚಾರಧಾರೆ ಬಗ್ಗೆ ಅರಿವು ಮೂಡಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ. ಗಾಂಧೀಜಿ ಅವರು ಬೋಧಿಸಿದ ಸಪ್ತ ಪಾತಕಗಳು ಹಾಗೂ ಸಂವಿಧಾನದ ಪೀಠಿಕೆಗಳನ್ನು ಮುದ್ರಿಸಿ ಎಲ್ಲಾ ಶಾಲೆಗಳಲ್ಲಿ ವಿತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ "ಗಾಂಧಿ ಭಾರತ" ಹೆಸರಲ್ಲಿ 2025ರ ವರ್ಷವಿಡೀ ಅರ್ಥಪೂರ್ಣ ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆಯಲಿವೆ.
1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ನಡೆದ ಸಮಿತಿ ಸಭೆಯಲ್ಲಿ ಇಡೀ ವಿಶ್ವಕ್ಕೆ ಸಂದೇಶ ಹೋಗುವ ದಿಕ್ಕಿನಲ್ಲಿ ಸಿದ್ಧತೆ ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.
ತೀರ್ಮಾನ ಏನೇನು
- ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಡಿಸೆಂಬರ್ 26 ಮತ್ತು 27ರಂದು ಕಾರ್ಯಕ್ರಮಗಳಿಗೆ ಚಾಲನೆ.
• ಶತಮಾನೋತ್ಸವ ಅಂಗವಾಗಿ ವರ್ಷವಿಡೀ ʻಗಾಂಧೀ ಭಾರತʼ ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಅವರಿಂದ ಸೂಚನೆ.
• ಬೆಳಗಾವಿಯಲ್ಲಿ ಡಿ.26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮತ್ತು ಡಿ.27ರಂದು ಸಾರ್ವಜನಿಕ ಸಭೆ ನಡೆಸಲು ನಿರ್ಧಾರ.
• ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿ ನಗರದ ಪ್ರಮುಖ 32 ಕಿಮೀ ಉದ್ದದ ರಸ್ತೆ ಹಾಗೂ 30 ವೃತ್ತಗಳ ದೀಪಾಲಂಕಾರ.
• ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿ ವೀರಸೌಧ ಅಭಿವೃದ್ಧಿ. ಈ ಸ್ಥಳದಲ್ಲಿ ಗ್ರಂಥಾಲಯ ಮತ್ತು ಗಾಂಧಿ ಪ್ರತಿಮೆ ಅನಾವರಣ.
• ಬೆಳಗಾವಿಯ 2.1 ಕಿ.ಮೀ ಉದ್ದದ ಕಾಂಗ್ರೆಸ್ ರಸ್ತೆಯಲ್ಲಿ ಶತಮಾನೋತ್ಸವದ ಸ್ಮಾರಕವಾಗಿ ತಾತ್ಕಾಲಿಕ ವಿರೂಪಾಕ್ಷ ಗೋಪುರ ನಿರ್ಮಾಣ, ರೈಲು ಮಾರ್ಗದ ತಡೆಗೋಡೆಯುದ್ದಕ್ಕೂ ಉಬ್ಬು ಶಿಲ್ಪಗಳ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧಾರ.
• ಕಣಬರಗಿಯಲ್ಲಿ ಗಂಗಾಧರ ರಾವ್ ದೇಶಪಾಂಡೆಯವರ ಸ್ಮಾರಕದಲ್ಲಿ ಮೂರ್ತಿ ಸ್ಥಾಪನೆ, ಮ್ಯೂಸಿಯಂ ಉದ್ಘಾಟನೆ. ಹುದಲಿಯಲ್ಲಿ ಗಾಂಧೀ ಸ್ಮಾರಕ ಹಾಗೂ ಛಾಯಾಚಿತ್ರ ಗ್ಯಾಲರಿಯ ಅಭಿವೃದ್ಧಿ.
• ಗಾಂಧೀಜಿ ಅವರು ವಿವಿಧ ಕಾಲಘಟ್ಟಗಳಲ್ಲಿ ಭೇಟಿ ನೀಡಿದ ರಾಜ್ಯದ 120 ಸ್ಥಳಗಳಲ್ಲಿ ನೆನಪಿನ ಸ್ಥಂಭಗಳನ್ನು ನಿರ್ಮಿಸಲು ತೀರ್ಮಾನ.
• ಅಟನ್ ಬರೋ ನಿರ್ಮಿಸಿದ ಪ್ರಸಿದ್ಧ ʻಗಾಂಧಿʼ ಸಿನೆಮಾವನ್ನು ಕನ್ನಡದಲ್ಲಿ ನಿರ್ಮಿಸಲು ನಿರ್ಧಾರ.
• ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿವೇಶನ, ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರ ಗ್ಯಾಲರಿ ನಿರ್ಮಾಣ.
• ಡಿ.26 ರಂದು ಗಣ್ಯ ಪ್ರತಿನಿಧಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಿ.27 ರಂದು ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮ.
• ಶತಮಾನೋತ್ಸವದ ನೆನಪಿಗೆ ವಿಶೇಷ ಅಂಚೆ ಚೀಟಿ ಬಿಡುಗಡೆಗೆ ನಿರ್ಧಾರ ಕೂಡ ಆಗಿದೆ.