Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು

Karnataka Congress New Chief: ಉತ್ತರ ಕರ್ನಾಟಕದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ; ಈ ಮೂವರಲ್ಲಿ ಮುಂದಿನ ಸಾರಥಿ ಯಾರು

Karnataka Congress New Chief: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಹೊಸ ಅಧ್ಯಕ್ಷರ ನೇಮಕದ ಚರ್ಚೆಗಳೂ ಶುರುವಾಗಿದೆ.ಯಾರು ಅಧ್ಯಕ್ಷರಾಗಿ ನೇಮಕಗೊಳ್ಳಬಹುದು ಎನ್ನುವ ಕುರಿತ ರಾಜಕೀಯ ವಿಶ್ಲೇಷಣೆ ಇಲ್ಲಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಡಾ.ಎಂ.ಬಿ.ಪಾಟೀಲ. ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿವೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಚಿವರಾದ ಡಾ.ಎಂ.ಬಿ.ಪಾಟೀಲ. ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿವೆ.

Karnataka Congress New Chief: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಬದಲಾಯಿಸಿ ಹೊಸಬರಿಗೆ ನೇಮಕ ಮಾಡುವ ಪ್ರಕ್ರಿಯೆಗಳು ನಡೆದಿವೆ. ಅದರಲ್ಲೂ ನಾಲ್ಕು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿ ಕಳೆದ ವರ್ಷ ಬಹುಮತದೊಂದಿಗೆ ಸರ್ಕಾರ ಬರಲು ಶ್ರಮಿಸಿರುವ ಡಿ.ಕೆ.ಶಿವಕುಮಾರ್‌ ಈಗಾಗಲೇ ಉಪಮುಖ್ಯಮಂತ್ರಿಯಾಗಿದ್ದು, ಮುಖ್ಯಮಂತ್ರಿಯಾಗಲು ಕಾಯುತ್ತಿದ್ದಾರೆ. ಈಗ ಅಧ್ಯಕ್ಷರನ್ನು ಬದಲಿಸಿ ಹೊಸಬರನ್ನು ನೇಮಿಸಬೇಕು ಎನ್ನುವ ಲೆಕ್ಕಾಚಾರ ಪಕ್ಷದ ದೆಹಲಿ ವರಿಷ್ಠರ ತಲೆಯಲ್ಲಿದೆ. ಈಗ ಈ ಪ್ರಕ್ರಿಯೆ ಆರಂಭಿಸಿದರು ಮೂರ್ನಾಲ್ಕು ತಿಂಗಳಲ್ಲಿ ಮುಗಿಸುವ ಗುರಿ ಹೊಂದಲಾಗಿದೆ. ಸರ್ಕಾರ ಇದ್ದಾಗ ಪಕ್ಷದ ಅಧ್ಯಕ್ಷರಾದವರಿಗೆ ಹೆಚ್ಚಿನ ಮಹತ್ವ ಇರುತ್ತದೆ, ಇದರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲು ‌ ಹಲವರು ಉತ್ಸುಕರಾಗಿದ್ದಾರೆ. ಮೂವರ ಹೆಸರು ಪ್ರಮುಖವಾಗಿ ಪರಿಗಣನೆಯಲ್ಲಿದೆ.

ಡಿಕೆಶಿ ಹಳೆಯ ಷರತ್ತು

ಕಳೆದ ಮೇನಲ್ಲಿ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಸಹಜವಾಗಿಯೇ ಪಕ್ಷದ ಅಧ್ಯಕ್ಷರಾದವರು ಸಿಎಂ ಸ್ಥಾನಕ್ಕೆ ಪ್ರಮುಖರೂ ಆಗಿರುತ್ತಾರೆ. ಕಾಂಗ್ರೆಸ್‌ನಲ್ಲಿ ಪಕ್ಷದ ಅಧ್ಯಕ್ಷರಾದವರು ಅಧಿಕಾರಕ್ಕೆ ತಂದಾಗ ಅವರನ್ನೇ ಸಿಎಂ ಮಾಡುವ ಸಂಪ್ರದಾಯವಿದೆ. ಅದರಂತೆ ಡಿಕೆಶಿವಕುಮಾರ್‌ ಪ್ರಮುಖ ಆಕಾಂಕ್ಷಿಯೂ ಆಗಿದ್ದರು.

ಆದರೆ ಹಿರಿತನ, ಆಡಳಿತ ನಡೆಸುವ ಚಾಣಾಕ್ಷತೆ, ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳ ಸಹಿತ ಇತರೆ ಕಾರ್ಯಕ್ರಮಗಳ ಜಾರಿಯ ಹೊಣೆಗಾರಿಕೆ ಕಾರಣಕ್ಕೆ ಡಿಕೆಶಿ ಬದಲು ಸಿದ್ದರಾಮಯ್ಯ ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿತ್ತು.

ಆಗ ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದ ಡಿಕೆಶಿ ಕೊನೆಗೆ ಡಿಸಿಎಂ ಜತೆಗೆ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ದಿ ಸಚಿವರಾದರು.

ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲೋಕಸಭೆ ಚುನಾವಣೆವರೆಗೂ ಮುಂದುವರೆಸಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಅದರಂತೆ ಲೋಕಸಭೆ ಚುನಾವಣೆ, ಬಳಿಕ ಉಪ ಚುನಾವಣೆಯೂ ಮುಗಿದಿದೆ. ಈಗ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಹಲವು ಆಕಾಂಕ್ಷಿಗಳು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸಚಿವರಾದ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಕೆ.ಎಚ್‌.ಮುನಿಯಪ್ಪ, ಕೆ.ಎನ್.ರಾಜಣ್ಣ,ರಾಮಲಿಂಗಾರೆಡ್ಡಿ. ಎಚ್‌.ಕೆ.ಪಾಟೀಲ್‌, ಡಾ.ಎಚ್‌.ಸಿ.ಮಹದೇವಪ್ಪ, ಕೃಷ್ಣಬೈರೇಗೌಡ, ಸಲೀಂ ಅಹಮದ್‌ ಸಹಿತ ಹಲವು ಹೆಸರುಗಳಿವೆ.

ಕೆಲವರು ಪಕ್ಷದ ಅಧ್ಯಕ್ಷರಾಗಲು ಸಚಿವ ಸ್ಥಾನ ಕೂಡ ಬಿಡುತ್ತೇವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಇರುವಾಗ ಪಕ್ಷದ ಅಧ್ಯಕ್ಷರಾದರೆ ಒಳ್ಳೆಯದು ಎನ್ನುವ ಲೆಕ್ಕಾಚಾರವೂ ಹಲವರಲ್ಲಿದೆ. ಇದೇ ಕಾರಣಕ್ಕೆ ಬಹಿರಂಗವಾಗಿಯೂ ಕೆಲ ಸಚಿವರು ಮಾತನಾಡುತ್ತಿರುವುದೂ ಇದೆ.

ಹೈಕಮಾಂಡ್‌ ಲೆಕ್ಕಾಚಾರ

ಕರ್ನಾಟಕದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಬಣ ರಾಜಕಾರಣ ಒಳಗೊಳಗೆ ಕೆಲಸ ಮಾಡುತ್ತಿದೆ.

ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಅವರ ಬಣವಿದೆ.ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಬಣ ರಾಜಕಾರಣದ ಭಾಗವೇ. ಇದರ ನಡುವೆ ಕಾಂಗ್ರೆಸ್‌ ನಿಷ್ಠರ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಬಣವೂ ಒಂದಿದೆ.

ಇದರಿಂದ ಲೆಕ್ಕಾಚಾರ ಮಾಡಿ ಜಾತಿ, ಪ್ರದೇಶದ ಜತೆಗೆ ಪಕ್ಷವನ್ನು ಸರಿದೂಗಿಸಿಕೊಂಡು ಹೋಗಬಲ್ಲ ಛಾತಿ ಇರುವವರು ಬೇಕು. ಸರ್ಕಾರ ಹಾಗೂ ಹೈಕಮಾಂಡ್‌ನ ಕೊಂಡಿಯಾಗಿ ಶಕ್ತಿ ತುಂಬಬಲ್ಲವರೂ ಬೇಕಾಗುತ್ತದೆ. ಇಂತವರು ಯಾರಿದ್ದಾರೆ ಎನ್ನುವ ಅಂಶಗಳನ್ನು ಪರಿಗಣಿಸಲಾಗುತ್ತಿದೆ.

ಮೂವರಲ್ಲಿ ಯಾರು ಸೂಕ್ತ

ಆಕಾಂಕ್ಷಿಗಳು ಹಲವರಿದ್ದರೂ ಪಕ್ಷದ ಹೈಕಮಾಂಡ್‌ ಹಂತದಲ್ಲಿ ಮೂರು ಹೆಸರು ಪರಿಗಣನೆಯಲ್ಲಿವೆ.ಅದರಲ್ಲೂ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಇಲ್ಲಿನ ಎಲ್ಲವೂ ಅವರಿಗೆ ಗೊತ್ತಿದೆ. ಈವರೆಗೂ ದಕ್ಷಿಣ ಕರ್ನಾಟಕ ಭಾಗದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಈ ಬಾರಿ ಉತ್ತರ ಕರ್ನಾಟಕದವರಿಗೆ ನೀಡಬೇಕು. ಲಿಂಗಾಯಿತ ಸಮುದಾಯದವರಿಗೆ ಈ ಹುದ್ದೆ ನೀಡಿಲ್ಲ. ಆ ಸಮುದಾಯಕ್ಕೆ ಅವಕಾಶ ಕೊಟ್ಟರೆ ಹೇಗೆ, ಅಹಿಂದ ವರ್ಗದವರಿಗೆ ಅವಕಾಶ ನೀಡಿದರೆ ಸರಿಯೇ ಎನ್ನುವ ಚರ್ಚೆಗಳು ನಡೆದಿವೆ.

ಅದರಲ್ಲಿ ಕಾಂಗ್ರೆಸ್‌ನವರೇ ಆದ ಹಿರಿಯ ಸಚಿವ, ವಿಜಯಪುರದ ಎಂ.ಬಿ.ಪಾಟೀಲ್‌ ಹೆಸರು ಮುಂಚೂಣಿಯಲ್ಲಿದೆ. ಆರು ಬಾರಿ ಶಾಸಕರಾಗಿ, ಒಮ್ಮೆ ಸಂಸದ, ಮೂರು ಬಾರಿ ಸಚಿವರಾಗಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದರು. ಖರ್ಗೆ, ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧವಿದೆ ಎನ್ನುವ ಕಾರಣಕ್ಕೆ ಇವರ ಹೆಸರು ಪರಿಗಣಿಸಾಗಿದೆ.

ಅದೇ ರೀತಿ ಮತ್ತೊಬ್ಬ ಕಾಂಗ್ರೆಸಿಗ ಹಾಗೂ ಸಚಿವ ಈಶ್ವರ ಖಂಡ್ರೆ ಹೆಸರೂ ಇದೆ. ಬೀದರ್‌ ಜಿಲ್ಲೆಯವರಾದ ಖಂಡ್ರೆ ಅವರೂ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು. ನಾಲ್ಕನೇ ಬಾರಿ ಶಾಸಕರಾಗಿ ಅರಣ್ಯ ಸಚಿವರಾಗಿಯೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದಾರೆ. ಖರ್ಗೆ ಅವರೊಂದಿಗೆ ಒಡನಾಟವೂ ಚೆನ್ನಾಗಿದೆ.

ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್‌ಗೆ ಬಂದು ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ,ತಂತ್ರಗಾರಿಕೆ ನಿಪುಣರೂ ಆಗಿರುವ ಸತೀಶ್‌ ಜಾರಕಿಹೊಳಿ ಹೆಸರೂ ಇದೆ. ಪರಿಶಿಷ್ಟ ಪಂಗಡಕ್ಕೂ ಅವಕಾಶ ಕೊಡಿ ಎನ್ನುವ ಬೇಡಿಕೆಯೂ ಸತೀಶ್‌ ಮೂಲಕ ನಡೆದಿದೆ.

ಸಿಎಂ ಬದಲಾವಣೆ ತಳುಕು

ಈ ಮೂವರ ಹೆಸರು ಪ್ರಮುಖವಾಗಿದ್ದರೂ ಸಿಎಂ ಬದಲಾವಣೆ ವಿಷಯವೂ ಇದರೊಂದಿಗೆ ತಳುಕು ಹಾಕಿಕೊಂಡಿದೆ.

ಆರು ತಿಂಗಳಿನಿಂದಲೂ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ಒಳಗೊಳಗೆ ನಡೆದೇ ಇದೆ. ಡಿ.ಕೆ.ಶಿವಕುಮಾರ್‌ ಸಿಎಂ ಸ್ಥಾನ ಹಿಡದೇ ತೀರಬೇಕು ಎಂದು ಆಗಾಗ ದೆಹಲಿ ಯಾತ್ರೆ ಕೈಗೊಳ್ಳುತ್ತಲೇ ಇರುತ್ತಾರೆ.

ಹೈಕಮಾಂಡ್‌ ಕೂಡ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಮಾಡಿದೆ ಎನ್ನುವ ಚರ್ಚೆಗಳಿಗೂ ಬರವಿಲ್ಲ.

ಈಗಾಗಲೇ ಒಂದೂವರೆ ವರ್ಷ ಅವಧಿಯೂ ಮುಗಿದಿದೆ. ಹಾಗೇನಾದರೂ ಸಿಎಂ ಬದಲಾವಣೆ ಸನ್ನಿವೇಶ ಎದುರಾಗಿ ಡಿಕೆಶಿ ಆ ಸ್ಥಾನ ಅಲಂಕರಿಸಿದರೆ ಸಿದ್ದರಾಮಯ್ಯ ಬಣ ಕೆಪಿಸಿಸಿ ಸ್ಥಾನದ ಜತೆಗೆ ಕನಿಷ್ಠ ನಾಲ್ಕು ಡಿಸಿಎಂ ಹುದ್ದೆಗೆ ಪಟ್ಟು ಹಿಡಿಯಬಹುದು, ಆಗ ಎಂಬಿಪಾಟೀಲ್‌, ಸತೀಶ್‌ ಜಾರಕಿಹೊಳಿ, ಜಮೀರ್‌ ಅಹಮದ್‌ ಖಾನ್‌, ಡಾ.ಮಹದೇವಪ್ಪ ಇಲ್ಲವೇ ಯತೀಂದ್ರ ಸಿದ್ದರಾಮಯ್ಯ ಹೆಸರೂ ಡಿಸಿಎಂ ಹುದ್ದೆಗೆ ಮುಂಚೂಣಿಗೆ ಬರಬಹುದು.

ಇಂತಹ ಸನ್ನಿವೇಶದಲ್ಲಿ ಈಶ್ವರ ಖಂಡ್ರೆ ಕೆಪಿಸಿಸಿ ಅಧ್ಯಕ್ಷರಾಬಹುದು ಅಥವಾ ಎಂಬಿ ಪಾಟೀಲ್‌ ಅವರು ಸಚಿವ ಸ್ಥಾನದೊಂದಿಗೆ ಅಧ್ಯಕ್ಷ ಸ್ಥಾನವನ್ನೂ ಪಡೆಯಬಹುದು ಎನ್ನುವ ಚರ್ಚೆಗಳು ಇವೆ. ಇದೆಲ್ಲದಕ್ಕೂ 2025 ರವರೆಗೂ ಕಾಯಬೇಕಾಗಬಹುದು.

Whats_app_banner