ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ; ರಾಮನಗರ ಸರಣಿ ಅಪಘಾತದಲ್ಲಿ ಪ್ರಥಮ ದರ್ಜೆ ಸಹಾಯಕಿ ಸಾವು, ಹಲವರಿಗೆ ಗಂಭೀರ ಗಾಯ
Dec 19, 2024 07:58 AM IST
ಡಿಸೆಂಬರ್ 18ರ ಬುಧವಾರ ರಾಮನಗರದಲ್ಲಿ ಸಂಬಂಧಿಸಿದ ಕಾರು ಸರಣಿ ಅಪಘಾತದಲ್ಲಿ ಎಫ್ ಡಿಎ ಮಹಿಳಾ ಉದ್ಯೋಗಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
- ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಪರಿಣಾಮವಾಗಿ ಪ್ರಥಮ ದರ್ಜೆ ಸಹಾಯಕಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳನ್ನು ನಿಷೇಧಿಸಿರುವ ವರದಿಯೂ ಇಲ್ಲಿದೆ.
ರಾಮನಗರ: ಕುಡುಕನೊಬ್ಬ ಮಾಡಿದ ಎಡವಟ್ಟಿನಿಂದ ಎಫ್ ಡಿಎ ಉದ್ಯೋಗಿಯೊಬ್ಬರ ಪ್ರಾಣ ಕಳೆದುಕೊಂಡಿರುವ ಘಟನೆ ರಾನಗರದಲ್ಲಿ ಸಂಭವಿಸಿದೆ. ರಾಮನಗರದ ಮಾಗಡಿ ರಸ್ತೆಯಲ್ಲಿ ಬುಧವಾರ (ಡಿಸೆಂಬರ್ 18) ವ್ಯಕ್ತಿಯೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಆಟೊಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆಟೊದಲ್ಲಿದ್ದ ಪ್ರಥಮ ದರ್ಜೆ ಸಹಾಯಕಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಅವಘಡದಲ್ಲಿ ಕಾರು ಸೇರಿದಂತೆ ನಾಲ್ಕು ವಾಹನಗಳು ಜಖಂಗೊಂಡಿದ್ದು, ಎರಡು ಅಂಗಡಿಗಳು ನಜ್ಜುಗುಜ್ಜಾಗಿವೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಎಚ್. ರೂಪಾ ಮೃತ ದುರ್ದೈವಿ. ಇವರು ಮದ್ದೂರು ತಾಲ್ಲೂಕಿನ ಬಿಳಗುಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರೂಪಾ ಅವರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅಪಘಾತ ಎಸಗಿದ ರಾಮನಗರದ ರಾಯರದೊಡ್ಡಿ ನಿವಾಸಿ ಪ್ರವೀಣ್‌ನನ್ನು ಸಾರ್ವಜನಿಕರು ಹಿಡಿದು, ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಪ್ರವೀಣ್ ತನ್ನ ಎರ್ಟಿಗಾ ಕಾರಿನಲ್ಲಿ ಮಾಗಡಿ ರಸ್ತೆ ಕಡೆಯಿಂದ ರಾಮನಗರ ಕಡೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೊದಲಿಗೆ ಕೆಂಪೇಗೌಡನ ದೊಡ್ಡಿ ಹತ್ತಿರ ಬಸ್‌ಗೆ ಗುದ್ದಿರುವ ಪ್ರವೀಣ್ ನಂತರ, ಅಲ್ಲಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ವಿಶ್ವೇಶ್ವರ ಬಾರ್ ಸಮೀಪ ಮುಂದಿದ್ದ ಆಟೊಗೆ ಡಿಕ್ಕಿ ಹೊಡೆದು, ಮುಂದಕ್ಕೆ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಪಲ್ಟಿಯಾದ ಆಟೊ ಕೋಳಿ ಅಂಗಡಿ ಎದುರು ಇಟ್ಟಿದ್ದ ಕೋಳಿ ಬಾಕ್ಸ್‌ಗಳಿಗೆ ಬಡಿದಿದೆ. ಡಿಕ್ಕಿಯ ರಭಸಕ್ಕೆ ಆಟೊದಲ್ಲಿದ್ದ ಐವರು ಕೆಳಗೆ ಬಿದ್ದಿದ್ದಾರೆ. ಘಟನೆ ವೇಳೆ ಆಟೊದ ಸೀಟಿನ ಕೊನೆಯಲ್ಲಿ ಕುಳಿತಿದ್ದ ರೂಪಾ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ಪ್ರಜ್ಞಾಹೀನರಾಗಿದ್ದಾರೆ. ಇತರರ ತಲೆ ಮತ್ತು ಕೈ- ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದರು. ಕೂಡಲೇ ಸ್ಥಳೀಯರು ರೂಪಾ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಟೊಗೆ ಡಿಕ್ಕಿ ಹೊಡೆದ ನಂತರ ಪ್ರವೀಣ್, ರಾಯರದೊಡ್ಡಿ ವೃತ್ತದವರೆಗೆ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಅಲ್ಲಿ ಎಡಕ್ಕೆ ಕಾರು ತಿರುಗಿಸಿಕೊಂಡ ಪ್ರವೀಣ್ ಎರಡು ಮೂರು ದ್ವಿಚಕ್ರ ವಾಹನಗಳು ಹಾಗೂ ಅಂಗಡಿಗಳ ಸೈನ್ ಬೋರ್ಡ್‌ಗೆ ಗುದ್ದಿದ್ದಾನೆ. ನಂತರ ದಿನಸಿ ಅಂಗಡಿಯ ಹಾಲು ಸಂಗ್ರಹಿಸಿಟ್ಟಿದ್ದ ರೆಫ್ರಿಜರೇಟರ್‌ಗೆ ಡಿಕ್ಕಿ ಹೊಡೆದು, ಪಕ್ಕದ ಬಟ್ಟೆ ಅಂಗಡಿಯ ಸಿಮೆಂಟ್ ಕಟ್ಟೆಗೆ ಗುದ್ದಿದ್ದಾನೆ. ಆಗ ಕಾರು ಜಖಂಗೊಂಡು ಅಲ್ಲೇ ನಿಂತಿದೆ.
ಈತ ಮತ್ತಷ್ಟು ಹಾನಿ ಮಾಡಬಹುದು ಎಂದು ಸ್ಥಳೀಯರು ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದಿದ್ದರಿಂದ ಮತ್ತಷ್ಟು ಅನಾಹುತ ತಪ್ಪಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಕೂಡಲೇ ಪ್ರವೀಣ್ ನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಆತನನ್ನು ಆಟೊ ಹತ್ತಿಸಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಪ್ರವೀಣ್ ಗೆ ನಿಂತುಕೊಳ್ಳುವುದಕ್ಕೂ ಶಕ್ತಿ ಇರಲಿಲ್ಲ, ಅಷ್ಟರ ಮಟ್ಟಿಗೆ ಕುಡಿದಿದ್ದ ಎಂದು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಾರೆ.
ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳ ನಿಷೇಧ
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಸರಕು ಸಾಗಣೆ ವಾಹನಗಳಾದ ಟಿಪ್ಪರ್, ಸರಕು ಆಟೋ, ಟೆಂಪೊ, ಮೊದಲಾದ ಸರಕು ಸಾಗಾಣೆ ವಾಹನಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಚರಿಸುತ್ತಿದ್ದವು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿತ್ತು. ವಿವಿ ಆವರಣದಲ್ಲಿ ಹಲವು ಬಾರಿ ಅಪಘಾತಗಳೂ ಸಂಭವಿಸಿದ್ದವು. ಆದ್ದರಿಂದ ಜ್ಞಾನಭಾರತಿ ಆವರಣದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರುವಂತೆ ವಿ.ವಿ ಆಡಳಿತ ಮಂಡಳಿ ಸಂಚಾರಿ ಪೊಲೀಸರನ್ನು ಕೋರಿದ್ದರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ವಿಶ್ವವಿದ್ಯಾಲಯದ ಆವರಣದಲ್ಲಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಉಲ್ಲಾಳ, ಮರಿಯಪ್ಪನಪಾಳ್ಯ, ನಾಗರಬಾವಿ ಸರ್ಕಲ್, ಜ್ಞಾನಭಾರತಿ ಕಡೆಯಿಂದ ಯಾವುದೇ ಸರಕು ವಾಹನಗಳು ವಿಶ್ವವಿದ್ಯಾಲಯ ಪ್ರವೇಶಿಸುವಂತಿಲ್ಲ. ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ.