Deepavali 2024: ಬೆಂಗಳೂರಿನಲ್ಲಿ ಕಣ್ಣಿಗೆ ಹಾನಿ, 40ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ; ಅಕ್ರಮ ಪಟಾಕಿ ಮಾರಾಟಗಾರರ ವಿರುದ್ಧ 56 ಎಫ್‌ಐಆರ್
Nov 02, 2024 12:04 AM IST
ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ವೇಳೆ ಕೆಲವು ಕಡೆ ಪಟಾಕಿ ಸಿಡಿತದಿಂದ ಗಾಯಗೊಂಡ ಹಲವರು ಚಿಕಿತ್ಸೆ ಪಡೆದಿದ್ದಾರೆ.
- ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಏಟು ಬಿದ್ದು ಕೆಲವರಿಗೆ ಗಾಯಗಳಾಗಿವೆ. ಆಸ್ಪತ್ರೆಗೂ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
- ವರದಿ: ಎಚ್.ಮಾರುತಿ,ಬೆಂಗಳೂರು
ಬೆಂಗಳೂರು: ಕಳೆದ ಎರಡು ದಿನಗಳಿಂದ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಮಧ್ಯೆಯೇ ಪಟಾಕಿ ಸಿಡಿತದಿಂದ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ವಿವಿಧ ವಿವಿಧ ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ಶುಕ್ರವಾರ ಸಂಜೆಯವರೆಗೆ ಸರಕಾರಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 6 ಕಣ್ಣಿಗೆ ಗಾಯ ಮಾಡಿಕೊಂಡಿರುವ ಪ್ರಕರಣಗಳು ದಾಖಲಾಗಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗಾಗಿ ನಾಲ್ವರು ದಾಖಲಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷದಲ್ಲಿ ಕಣ್ಣಿಗೆ ಗಾಯಗೊಂಡವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯರು ತಿಳಿಸಿದ್ದಾರೆ.
ದೀಪಾವಳಿ ಆರಂಭದ ಮೊದಲ ದಿನವಾದ ಅಕ್ಟೋಬರ್ 31ರಂದು ಪಟಾಕಿ ಸಿಡಿತದಿಂದಾಗಿ ಕಣ್ಣಿಗೆ ಗಾಯ ಮಾಡಿಕೊಂಡ 15 ಪ್ರಕರಣಗಳು ವರದಿಯಾಗಿದ್ದವು.
ಎಲ್ಲೆಲ್ಲಿ ಅನಾಹುತ
ಕಣ್ಣಿಗೆ ಹಾನಿ ಎಂದರೆ ಕಾರ್ನಿಯಾಗೆ ಉಂಟಾಗುವ ಸಣ್ಣ ಹಾನಿಯಿಂದ ಹಿಡಿದು ಹೈಫೆಮಾ ಮತ್ತು ಎಪಿಥೆಲಿಯಲ್ ದೋಷವಿರುವ ಗಂಭೀರ ಪ್ರಕರಣಗಳು ವರದಿಯಾಗಿವೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಎರಡು ಮತ್ತು ಶುಕ್ರವಾರ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸಂಭವವಿದೆ. ಐದು ವರ್ಷದ ಬಾಲಕನೊಬ್ಬನಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಶಂಕರ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದ ಮೂರು ವರ್ಷದ ಬಾಲಕಿಯ ಕಣ್ಣಿನ ಕಾರ್ನಿಯಾಗೆ ಹಾನಿಯುಂಟಾಗಿದೆ. ಸಿಡಿಯದ ಪಟಾಕಿಯನ್ನು ಪರೀಕ್ಷಿಸಲು ಹೋದಾಗ ಮತ್ತೊಬ್ಬ ಬಾಲಕನ ಕಣ್ಣಿಗೆ ಅಪಾಯವಾಗಿದೆ.
ಶೇಖರ್ ಐ ಆಸ್ಪತ್ರೆಯಲ್ಲಿ ಐದು ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಹದಿಮೂರು ವರ್ಷದ ಬಾಲಕನೊಬ್ಬನ ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದ್ದರೆ ಏಳು ವರ್ಷದ ಬಾಲಕನಿಗೆ ಪಟಾಕಿಯಲ್ಲಿರುವ ರಾಸಾಯನಿಕದಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಅಗರ್ ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಸಿಡಿಸುವಾಗ ಕಣ್ಣಿಗೆ ಕನ್ನಡಕ ಧರಿಸುವುದು ಕ್ಷೇಮ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಕೊನನೆಯದಾಗಿ ಸಿಡಿಯದ ಪಟಾಕಿಗಳನ್ನು ಯಾವುದೇ ಕಾರಣಕ್ಕೂ ಪರೀಕ್ಷಿಸಲು ಪ್ರಯತ್ನಿಸಬೇಡಿ ಎಂಬ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಕ್ಷೇಮ ಎನ್ನುವುದು ವೈದ್ಯರು ನೀಡುವ ಸಲಹೆ
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ.
ನಿಯಮ ಉಲ್ಲಂಘಿಸಿದ ಪ್ರಕರಣಗಳು
ಬೆಂಗಳೂರಿನಲ್ಲಿ ಗುರುವಾರ ಮತ್ತು ಶುಕ್ರವಾರ ದೀಪಾವಳಿ ಅಂಗವಾಗಿ ಪಟಾಕಿ ನಿಯಮಗಳನ್ನು ಉಲ್ಲಂಘಿಸಿರುವ 56 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉತ್ತರ ವಿಭಾಗದಲ್ಲಿ 9, ದಕ್ಷಿಣ ವಿಭಾಗದಲ್ಲಿ 4, ಪೂರ್ವ ವಿಭಾಗದಲ್ಲಿ 6, ಈಶಾನ್ಯ ವಿಭಾಗದಲ್ಲಿ 19, ಆಗ್ನೇಯ ವಿಭಾಗದಲ್ಲಿ 9, ವೈಟ್ ಫೀಲ್ಡ್ ವಿಭಾಗದಲ್ಲಿ 9 ಪ್ರಕರಣಗಳು ದಾಖಲಾಗಿವೆ. ತಳ್ಳುವ ಗಾಡಿ, ಸಣ್ಣ ಸಣ್ಣ ಅಂಗಡಿಗಳು ಮತ್ತು ರಸ್ತೆ ಬದಿಗಳಲ್ಲಿ ಪಟಾಕಿ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಟಾಕಿ ಮಾರಾಟಕ್ಕೆ 72 ಮೈದಾನಗಳಲ್ಲಿ 375 ಪರವಾನಗಿ ನೀಡಲಾಗಿದೆ. ಆದರೆ ಪರವಾನಗಿ ಪಡೆಯದೆ ಪಟಾಕಿ ಮಾರಾಟ ಮಾಡುವವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 10 ಗಂಟೆಯ ನಂತರವೂ ಪಟಾಕಿ ಸಿಡಿಸಿದರೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
(ವರದಿ: ಎಚ್.ಮಾರುತಿ ಬೆಂಗಳೂರು)