Deepavali 2024: ಬೆಳಕನ್ನು ನಮ್ಮೊಳಗೇ ಹುಟ್ಟಿಸಿಕೊಳ್ಳಬೇಕು, ಹರಡಬೇಕು ಮತ್ತು ಬದುಕಬೇಕು: ರಹಮತ್ ತರಿಕೆರೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  Deepavali 2024: ಬೆಳಕನ್ನು ನಮ್ಮೊಳಗೇ ಹುಟ್ಟಿಸಿಕೊಳ್ಳಬೇಕು, ಹರಡಬೇಕು ಮತ್ತು ಬದುಕಬೇಕು: ರಹಮತ್ ತರಿಕೆರೆ ಬರಹ

Deepavali 2024: ಬೆಳಕನ್ನು ನಮ್ಮೊಳಗೇ ಹುಟ್ಟಿಸಿಕೊಳ್ಳಬೇಕು, ಹರಡಬೇಕು ಮತ್ತು ಬದುಕಬೇಕು: ರಹಮತ್ ತರಿಕೆರೆ ಬರಹ

ಭಾರತದ ಸೂಫಿಗಳಿಂದ ಪ್ರೇರಿತರಾಗಿಯೊ, ಸ್ಥಳೀಯ ಪ್ರಭಾವದಿಂದಲೊ ಮೊಗಲ್ ಚಕ್ರವರ್ತಿಗಳು ಅರಮನೆಯಲ್ಲಿ ದೀವಳಿಗೆ ಅಚರಿಸುವ ಕ್ರಮ ಜಾರಿಗೆ ತಂದರು. ದೀಪಾವಳಿ ಕೇವಲ ಹಿಂದೂಗಳಿಷ್ಟೇ ಸಮೀತವಾಗಿದೆಯೇ? ಯಾರು ಹೇಗೆ ದೀಪಾವಳಿಯನ್ನು ಆಚರಿಸುತ್ತಾರೆ. ರಹಮತ್ ತರಿಕೆರೆ ಅವರ ಬರಹ ಓದಿ.

ಕತ್ತಲೆಯನ್ನು ಸರಿಸಿ ಬೆಳನ್ನು ನೀಡುವ ದೀಪಾವಳಿ ಹಬ್ಬವನ್ನು ಯಾರು ಹೇಗೆ ಆಚರಿಸುತ್ತಾರೆ. ರಹಮತ್ ತರಿಕೆರೆ ಅವರ ಬರಹ ಇಲ್ಲಿದೆ.
ಕತ್ತಲೆಯನ್ನು ಸರಿಸಿ ಬೆಳನ್ನು ನೀಡುವ ದೀಪಾವಳಿ ಹಬ್ಬವನ್ನು ಯಾರು ಹೇಗೆ ಆಚರಿಸುತ್ತಾರೆ. ರಹಮತ್ ತರಿಕೆರೆ ಅವರ ಬರಹ ಇಲ್ಲಿದೆ.

ದೆಹಲಿಯ ಸೂಫಿಸಂತ ಹಜರತ್ ನಿಜಾಮುದ್ದೀನರ ದರ್ಗಾದಲ್ಲಿ ದೀಪಾವಳಿಯನ್ನು ' ಜಶನ್ ಎ ಚಿರಾಗ್' ಹೆಸರಲ್ಲಿ ಆಚರಿಸಲಾಗುತ್ತದೆ. ಸಾಧಕರು ತಮ್ಮನ್ನು ತಾವು ಅರಿವ ಅಧ್ಯಾತ್ಮಿಕ ವಿದ್ಯೆಯನ್ನು 'ಚಿರಾಗ್' ರೂಪಕದಲ್ಲಿ ಗ್ರಹಿಸುವ ಸೂಫಿ ಪರಂಪರೆಯಲ್ಲಿ, ಬೆಳಕಿಗೆ ಬಹಳ ಮಹತ್ವದ ಅರ್ಥಗಳಿವೆ.‌ ಕರ್ನಾಟಕದ ಸೂಫಿ ಉರುಸುಗಳಲ್ಲೂ ಒಂದು ದಿನವನ್ನು ಚಿರಾಗೆ ಎಂದು ಆಚರಿಸುವ ಪದ್ಧತಿಯಿದೆ. ಆ ದಿನ ದರ್ಗಾದ ತುಂಬಾ ದೀಪಗಳನ್ನು ಹತ್ತಿಸಿ ಇಡಲಾಗುತ್ತದೆ. ಬಾಬಾಬುಡನಗರಿ ಮತ್ತು ಶಿರಾದ ದರ್ಗಾಗಳಲ್ಲಿ ಸದಾ ಹತ್ತಿಸಿದ ನಂದಾದೀಪಗಳಿವೆ. ಮುಶಾಯರಗಳಲ್ಲಿ ಕವನ ವಾಚಿಸುವ ಕವಿಯ ಮುಂದೆ ಶಮಾ (ದೀಪ) ಹಚ್ಚಿಡುವ ರಿವಾಜಿದೆ. ನಿನ್ನ ಬೆಳಕು ನಮಗೂ ದಾಟಿಸು ಎಂಬರ್ಥದಲ್ಲಿ. ನಾನು- ಬಾನು ನಮ್ಮ ಮೊದಲ ಕೂಸಿಗೆ ಶಮಾ ಎಂದೇ ಹೆಸರಿಟ್ಟೆವು.

ಹಜರತ್ ನಿಜಾಮುದ್ದೀನರ ಶಿಷ್ಯರಾದ ನಾಸಿರುದ್ದೀನ್ ಚಿಸ್ತಿಯವರಿಗೆ 'ಚಿರಾಗ್ ಎ ದೆಹಲಿ' (ದೆಹಲಿಯ ದೀಪ) ಎಂಬ ಬಿರುದು ಇತ್ತು. ಹೀಗಾಗಿ ನಾಸಿರುದ್ದೀನರ ಶಿಷ್ಯರಾದ ಕಲಬುರ್ಗಿಯ ಬಂದೇ ನವಾಜ್ ದರ್ಗಾದಲ್ಲೂ ಬೆಳಕಿನ ಹಬ್ಬ ಆಚರಿಸಲಾಗುತ್ತದೆ. ಕಳೆದ ವರ್ಷ, ಇದೇ ದಿನಗಳಲ್ಲಿ ನಾನು-ಬಾನು ಬಾಗ್ದಾದಿನ ಸೂಫಿಸಂತ‌ ಅಬ್ದುಲ್ ಖಾದರ್ ಜೀಲಾನಿಯವರ ಉರುಸಿನಲ್ಲಿದ್ದೆವು. ಆಗ, ಭಾರತದಿಂದ ಬಂದವರು ದೀಪಗಳನ್ನು ಬೆಳಗಿಸುತ್ತಿದ್ದನ್ನು ಗಮನಿಸಿದೆವು. ದೀಪದ‌ ಮುಂದೆ ದುವಾ ಮಾಡುತ್ತಿರುವ ವ್ಯಕ್ತಿ ಕೇಸರಿ‌ ಮತ್ತು ಹಸಿರು ಶಾಲು ಧರಿಸಿರುವರು. ಭಾರತದ ಚಿಸ್ತಿಸೂಫಿಗಳು ಕಾವೀಧಾರಿಗಳು.

ಇವತ್ತಿಗೂ ಜೀಲಾನಿಯವರ ಪುಣ್ಯತಿಥಿಯನ್ನು ನಮ್ಮ ಮನೆಗಳಲ್ಲಿ ಮಾಲ್ದಿಯ ಮೇಲೆ 11 ತುಪ್ಪದ ದೀಪಗಳನ್ನು ಬೆಳಗಿಸಿ ಆಚರಿಸಲಾಗುತ್ತದೆ. ಇದನ್ನು ಗ್ಯಾರವ್ಞೀ (ಹನ್ನೊಂದನೇ ದಿನ) ಎಂದು ಕರೆಯುವರು. ಬಹುಶಃ ಭಾರತದ ಸೂಫಿಗಳಿಂದ ಪ್ರೇರಿತರಾಗಿಯೊ ಸ್ಥಳೀಯ ಪ್ರಭಾವದಿಂದಲೊ ಮೊಗಲ್ ಚಕ್ರವರ್ತಿಗಳು ಅರಮನೆಯಲ್ಲಿ ದೀವಳಿಗೆ ಅಚರಿಸುವ ಕ್ರಮ ಜಾರಿಗೆ ತಂದರು. ಈ ಬಗ್ಗೆ ಸಮಕಾಲೀನ ಲೇಖಕರೂ ವರ್ಣಚಿತ್ರ ಕಲಾವಿದರೂ ದಾಖಲಿಸಿದ್ದಾರೆ. ಭಾರತದ ಫಾರಸಿ ಉರ್ದು ಸಾಹಿತ್ಯದಲ್ಲಿ ದೀವಳಿಗೆಯ ಮೇಲೆ ಸಾವಿರಾರು ವರ್ಣನೆಗಳಿವೆ.

ಶರಣರು ಅಜ್ಞಾನವೆಂಬ ತಮಂಧದ ಕೇಡನ್ನು ತಿಳಿವಿನ ಬಲದಿಂದ ನೋಡಬೇಕೆಂದು ಬಯಸಿದರು. ಮಂಟೆಸ್ವಾಮಿ ಕಾವ್ಯವು ಶುರುವಾಗುವುದೇ ತಿಪ್ಪೆಯ‌ಮೇಲೆ ಕತ್ತಿಸಿ ಇಟ್ಟರೂ ಭೇದವಿಲ್ಲದೆ ಉರಿಯುವ ಜ್ಯೋತಿಯ ವರ್ಣನೆಯಿಂದ. ಕೆಲವು ಊರುಗಳಲ್ಲಿ ಈದಿನ ತಿಪ್ಪೆಯ ಮೇಲೆ ಹತ್ತಿಸಿಟ್ಟು ತಿಪ್ಪೇಲಕ್ಷ್ಮಿ ಎಂದು ಕರೆದು ಮಾಡುವ ಆಚರಣೆಗಳಿವೆ. ಕರ್ನಾಟಕದಲ್ಲಿ ತತ್ವಪದ ಹಾಡಿಕೆಯ ಗೋಷ್ಠಿಗಳು ಸಂಪನ್ನಗೊಳ್ಳುವುದು ನಿಜಗುಣರ 'ಜ್ಯೋತಿ ಬೆಳಗುತಿದೆ' ಪದದಿಂದ. ಸತ್ಸಂಗಗಳ‌ ಕೊನೆಗೂ ದೀಪಹಚ್ಚಿ ಆರತಿ ಬೆಳಗಲಾಗುತ್ತದೆ. ನಮ್ಮೊಳಗಿನ ಬೆಳಕನ್ನು ಸಾಧನೆಯ ಮೂಲಕ ಸಾಧಕರು ಸ್ವತಃ ಕಂಡುಕೊಳ್ಳಬೇಕು ಎಂಬುದು ಎಲ್ಲಾ ಅಧ್ಯಾತ್ಮ ಚಳುವಳಿಗಳ ಆಶಯ.

ಬೆಳಕಿನ ಆರಾಧನೆ ಮಾಡುವ ಸಮಾಜಗಳು ಜ್ಞಾನಮುಖಿಯಾಗುವ ಆಶಯವನ್ನು ಹೊಂದಿರುತ್ತವೆ.‌ ಅದೇ ಕಾಲಕ್ಕೆ ತಮ್ಮ ಆಸುಪಾಸಿನಲ್ಲಿ ಗಾಢವಾದ ಕತ್ತಲು ತುಂಬಿದೆ ಎಂಬ ಕಟುವಾಸ್ತವವನ್ನೂ ನೆ‌ನಪಿಸುತ್ತಿರುತ್ತವೆ. ಮಳೆಯನ್ನು ಆವಾಹಿಸುವುದೇ ಬರಬಿದ್ದಾಗ ತಾನೇ? ಬೆಳಕು ತಾನಾಗಿ ಬರುವುದಿಲ್ಲ. ಅದನ್ನು ಆಹ್ವಾನಿಸಿ ಜತೆಯಲ್ಲಿ ಇರಿಸಿಕೊಳ್ಳಬೇಕು- ಕವಿದ ತಮಂಧವನ್ನು ನೀಗುವಂತೆ. ಆದರೆ, ಕರುಣಾಳು ಬಾಬೆಳಕೇ ಮುಸುಕಿದೀ‌ ಮಬ್ಬಿನಲಿ ಕೈಹಿಡಿದು ನಡೆಸೆನ್ನನು, ತಮಸೋಮಾ ಜ್ಯೋತಿರ್ಗಮಯ ಎಂದು ಕರೆದರೆ ಸಾಕೇ? ಬೆಳಕನ್ನು ನಮ್ಮೊಳಗೇ ಹುಟ್ಟಿಸಿಕೊಳ್ಳಬೇಕು, ಹರಡಬೇಕು ಮತ್ತು ಬದುಕಬೇಕು. ಸಮಸ್ಯೆ ಹೊರಗೆ ದೀಪವನ್ನು ಹಚ್ಚಿ ಒಳಗೆ ತಮಂಧವನ್ನು ತುಂಬಿಕೊಂಡಿರುವ ವೈರುಧ್ಯಗಳದ್ದು. ಸದಾಶಯಗಳು ಯಾಂತ್ರಿಕ ಆಚರಣೆಗಳೂ ಆಗುತ್ತವೆ. ಆಗ ಬೆಳಗಬೇಕಾದ ದೀಪ ಉರಿಯುವ ಬೆಂಕಿಯಾಗಿ ಕರಕಲು ಉಳಿಯುವುದು.

Whats_app_banner