Dharwad News:ಪರ್ಸ್‌ಗಳ ಮೂಲಕ ಮಾದಕವಸ್ತು ಮಾರಾಟ; ಧಾರವಾಡ ಕೇಂದ್ರವಾಗಿಸಿಕೊಂಡಿದ್ದ ನೈಜೀರಿಯಾ ಪ್ರಜೆ ಬಂಧನ
Sep 15, 2024 12:48 PM IST
ಧಾರವಾಡದಲ್ಲಿದ್ದುಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜರೀಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
Dharwad News ಧಾರವಾಡದಲ್ಲಿದ್ದುಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾದ ಪ್ರಜೆಯನ್ನು ಬಂಧಿಸಲಾಗಿದೆ. ಆತನಿಂದ ಭಾರೀ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ವರದಿ: ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ
ಧಾರವಾಡ: ಕೆಲವು ವರ್ಷಗಳಿಂದ ಧಾರವಾಡದಲ್ಲಿಯೇ ನೆಲೆಸಿ ಮಾದಕವಸ್ತುಗಳ ಮಾರಾಟದ ಬೃಹತ್ ಜಾಲವನ್ನೇ ನಿರ್ಮಿಸಿಕೊಂಡಿದ್ದ ನೈಜೀರಿಯಾ ದೇಶದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ನಿಖರ ಮಾಹಿತಿ ಮೇರೆಗೆ ಧಾರವಾಡ ಮಾಳಮಡ್ಡಿ 3ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನೈಜಿರಿಯಾ ಪ್ರಜೆಯನ್ನು ಬೆಂಗಳೂರು ನಾರ್ಕೋಟಿಕ್ ಕಂಟ್ರೋಲ್ ಬ್ಯುರೋದಿಂದ ಬಂಧಿಸಲಾಗಿದೆ. ಕೇಂದ್ರ ಗೃಹ ಇಲಾಖೆ ಅಧೀನದ ನಾರ್ಕೋಟಿಕ್ ಕಂಟ್ರೊಲ್ ಬ್ಯುರೋದವರಿಗೆ ದೊರೆತದ ನಿಖರ ಮಾಹಿತಿ ಮೇರೆಗೆ ಭಾನುವಾರ ದಾಳಿ ನಡೆಸಿ ಆತನ ಬಳಿ ಸಂಗ್ರಹಿಸಿ ಹೊರ ರಾಜ್ಯದಲ್ಲಿ ಬಂಧಿಸಿ ಕರೆತಂದು ಮಾದಕ ವಸ್ತುಗಳನ್ನು ಧಾರವಾಡದ ಮನೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ನೈಜೀರಿಯಾ ಪ್ರಜೆ ಧಾರವಾಡದಲ್ಲಿ ನೆಲೆಸಿ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ಇತ್ತು. ಆತ ಧಾರವಾಡದ ರೈಲ್ವೆ ನಿಲ್ದಾಣದ ಬಳಿಯೇ ಮನೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದ. ಗೋವಾ, ಮಹಾರಾಷ್ಟ್ರ ಜತೆಗೆ ಕರ್ನಾಟಕದ ನಾನಾ ಭಾಗಗಳಲ್ಲಿಯೂ ಆತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ. ಈ ಮಾಹಿತಿ ಆಧರಿಸಿಯೇ ಬೆಂಗಳೂರು ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲ ದಿನಗಳಿಂದ ಆತನ ಜಾಡು ಹಿಡಿದಿದಿದ್ದರು.
ಆತ ಎಲ್ಲೆಲ್ಲಾ ಹೋಗುತ್ತಾನೆ. ಆತನ ಕಾರ್ಯಾಚರಣೆ ಕ್ಷೇತ್ರ ಯಾವುದು, ಗ್ರಾಹಕರು ಎನ್ನುವ ಕುರಿತು ವಿವರವಾದ ಮಾಹಿತಿ ಕಲೆ ಹಾಕಿದ್ದರು. ಕೊನೆಗೂ ಆತನನ್ನು ಬೇರೆ ರಾಜ್ಯದಲ್ಲಿ ಬಂಧಿಸಿಕೊಂಡು ಅಧಿಕಾರಿಗಳು ಧಾರವಾಡಕ್ಕೆ ಭಾನುವಾರ ಕರೆ ತಂದಿದ್ದರು.
ಮಾಳಮಡ್ಡಿ ಮನೆಗೆ ಕರೆ ತಂದಾಗ ಮನೆಯಲ್ಲಿ ಅಪಾರ ಪ್ರಮಾಣದ ಲೇಡಿಜ್ ವ್ಯಾನಿಟಿ ಬ್ಯಾಗ್, ಪರ್ಸ್ ಗಳು ಪತ್ತೆಯಾಗಿವೆ. ಪರ್ಸ್ ಮಾರಾಟದ ನೆಪದಲ್ಲಿ ಕೊಕೆನ್ ಸಾಗಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ಆತನ ಮನೆಯಲ್ಲಿ ತೂಕದ ಯಂತ್ರ, ಪ್ಯಾಕಿಂಗ್ ಯಂತ್ರಗಳು ಸಹ ಪತ್ತೆಯಾಗಿದ್ದು, ಬಾಡಿಗೆ ಮನೆಯಲ್ಲಿಯೇ ಕೊಕೆನ್ ಪ್ಯಾಕ್ ಮಾಡಿ, ಪರ್ಸ್ ಗಳಲ್ಲಿ ಹಾಕಿ ಸಾಗಿಸುತ್ತಿದ್ದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.
ದೇಶದ ವಿವಿಧೆಡೆ ಕೊಕೆನ್ ಮಾರಾಟ ಜಾಲ ಹೊಂದಿದ್ದ ವ್ಯಕ್ತಿ ಮಾರ್ಟಿನ್, ಮ್ಯಾಥೂ, ಟೀಮ್ ಎಂದು ವಿವಿಧ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದಾನೆ. ಹಲವಾರು ವರ್ಷಗಳಿಂದ ವಾಸವಾಗಿದ್ದರೂ ಕೊಕೆನ್ ಸಾಗಾಟ ಗೌಪ್ಯವಾಗಿದ್ದು ನೆರೆ ಹೊರೆಯವರಿಗೂ ತಿಳಿದಿರಲಿಲ್ಲ.
ಉನ್ನತ ವ್ಯಾಸಂಗ ಮಾಡೊಕೆ ಬಂದಿರೋದಾಗಿ ಹೇಳಿಕೊಂಡು ಬಾಡಿಗೆ ಮನೆ ಪಡೆದು ವಾಸವಾಗಿದ್ದ ಬೇರೆ ಬೇರೆ ರಾಜ್ಯಗಳಲ್ಲಿ ಕೊಕೆನ್ ಮಾರಾಟ ಜಾಲದ ತನಿಖೆ ಮುಂದುವರಿದಿದೆ ಎಂದು ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉನ್ನತ ವ್ಯಾಸಂಗ ಮಾಡೊಕೆ ಬಂದಿರೋದಾಗಿ ಹೇಳಿಕೊಂಡು ಬಾಡಿಗೆ ಮನೆ ಪಡೆದು ವಾಸವಾಗಿದ್ದುಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಕೊಕೆನ್ ಮಾರಾಟ ಜಾಲದ ತನಿಖೆ ಕೈಗೊಳ್ಳಲಾಗಿದೆ. ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ 8 ಅಧಿಕಾರಿಗಳ ತಂಡ ಧಾರವಾಡದಲ್ಲಿಯೇ ಬೀಡು ಬಿಟ್ಟು ಪರಿಶೀಲನೆ ಕೈಗೊಂಡಿದ್ದಾರೆ.
(ವರದಿ: ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ)
ವಿಭಾಗ