Forest News: ಕರ್ನಾಟಕದ ಹುಲಿಧಾಮಗಳಲ್ಲಿ ಪ್ರವಾಸೋದ್ಯಮದಿಂದ ಹೆಚ್ಚಿದ ಪ್ಲಾಸ್ಟಿಕ್, ಪ್ರವಾಸಿಗರಿಗೆ ದಂಡ ವಿಧಿಸಲು ಸೂಚನೆ
Jun 21, 2024 10:59 AM IST
ಮಲೈಮಹಾದೇಶ್ವರ ಬೆಟ್ಟ ಅರಣ್ಯದಲ್ಲಿ ವಶಪಡಿಸಿಕೊಂಡಿದ್ದ ಪ್ಲಾಸ್ಟಿಕ್‌ನೊಂದಿಗೆ ಸಿಬ್ಬಂದಿ
- Plastic menace in forest ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಸಮಸ್ಯೆ ನಿಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ಬೆಳೆಯುತ್ತಿರುವ ನಡುವೆ ಬೆಟ್ಟದಷ್ಟು ರೂಪುಗೊಂಡ ಪ್ಲಾಸ್ಟಿಕ್ ಕೂಡ ಆತಂಕ ತಂದೊಡ್ಡುತ್ತಿದೆ. ಅರಣ್ಯದಲ್ಲಿ ಪ್ಲಾಸ್ಟಿಕ್ ಯಥೇಚ್ಛ ಕಂಡು ಬರುತ್ತಿರುವುದು ವನ್ಯಜೀವಿಗಳಿಗೂ ಮಾರಕವಾಗುವ ಆತಂಕ ಎದುರಾಗಿದೆ. ಕಳೆದ ತಿಂಗಳು ನಾಗರಹೊಳೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮಿತಿ ಮೀರಿದ ಪ್ಲಾಸ್ಟಿಕ್ ಸಮಸ್ಯೆ ಅರಿವಿಗೆ ಬಂದಿತ್ತು. ಈ ಕಾರಣದಿಂದಲೇ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆಯಲ್ಲಿ ಪ್ಲಾಸ್ಟಿಕ್ ವಿಚಾರವಾಗಿಯೂ ಗಂಭೀರವಾಗಿ ಚರ್ಚೆ ನಡೆದಿದೆ. ಕೂಡಲೇ ಎಲ್ಲಾ ಹುಲಿಧಾಮಗಳಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ಸೂಚನೆ ನೀಡಲಾಗಿದೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಡೆದ ಹುಲಿ ಸಂರಕ್ಷಣಾ ಪ್ರತಿಷ್ಠಾನದ 15ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಎಲ್ಲ ಅರಣ್ಯ ಪ್ರದೇಶವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಬಂಡೀಪುರ, ನಾಗರಹೊಳೆ, ಕುಮಾರಪರ್ವತದ ಅರಣ್ಯ ಪ್ರದೇಶಕ್ಕೆ ಸಾಗುವ ರಸ್ತೆಗಳ ಬದಿಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ನೀರಿನ ಬಾಟಲಿಗಳು ಬಿದ್ದಿರುವುದನ್ನು ತಾವೇ ಕಣ್ಣಾರೆ ಕಂಡಿರುವುದಾಗಿ ಸಭೆಗೆ ತಿಳಿಸಿದರು.
ಕಾಡಿನಿಂದ ಹೊರಬರುವ ವನ್ಯಜೀವಿಗಳ ಪ್ರಾಣಕ್ಕೇ ಈ ಪ್ಲಾಸ್ಟಿಕ್ ಕುತ್ತು ತರುತ್ತದೆ. ಇತ್ತೀಚೆಗೆ ಮೃತಪಟ್ಟ ಮೊಸಳೆ ಹೊಟ್ಟೆಯಲ್ಲಿ, ಜಿಂಕೆಯ ಹೊಟ್ಟೆಯಲ್ಲಿ 3-4 ಕೆ.ಜಿ. ಪ್ಲಾಸ್ಟಿಕ್ ಇದ್ದ ಬಗ್ಗೆ ಮಾಧ್ಯಮದಲ್ಲಿ ಓದಿದ್ದೇನೆ. ಇದು ಆತಂಕಕಾರಿ ವಿಷಯವಾಗಿದ್ದು, ಅರಣ್ಯದೊಳಗಿನ ಮಾರ್ಗದಲ್ಲಿ ಸಾಗುವ ಎಲ್ಲ ವಾಹನಗಳನ್ನು ಎರಡು ಹಂತದಲ್ಲಿ ಕಟ್ಟು ನಿಟ್ಟಿನ ತಪಾಸಣೆಗೆ ಒಳಪಡಿಸಿ ಎನ್ನುವುದು ಸಚಿವರ ನಿರ್ದೇಶನ.
ಮೊದಲ ಹಂತದಲ್ಲಿ ಸ್ವಯಂ ಪ್ರೇರಿತವಾಗಿ ಕಸದ ಬುಟ್ಟಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ತಿಳಿಸಿ, ಎರಡನೇ ಹಂತದಲ್ಲಿ ತಪಾಸಣೆ ಮಾಡಿ ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್ ತೆಗೆದುಕೊಂಡು ಬರುವವರಿಗೆ ದಂಡ ವಿಧಿಸಿ ಅರಣ್ಯದೊಳಗೆ ಹರಿಯುವ ನದಿಗಳ ಮೂಲಕವೂ, ಕಬಿನಿ ಹಿನ್ನೀರಿನಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಬರುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಲಾಂಟನಾ ತ್ವರಿತ ತೆರವು ಮಾಡಿ
ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಾಂಟನಾ, ಸನ್ನಾ ಮತ್ತು ಇತರ ಕಳೆಯನ್ನು ತ್ವರಿತವಾಗಿ ತೆರವುಗೊಳಿಸಲು ಕ್ರಮ ವಹಿಸುವಂತೆ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಹುಲಿ ಪ್ರತಿಷ್ಠಾನದ ಮೂಲ ಉದ್ದೇಶ ಹುಲಿ ಮತ್ತು ಹುಲಿ ಕಾಡಿನ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪ್ರಾಣಿಗಳ ವಾಸಸ್ಥಾನದ ಸಂರಕ್ಷಣೆಯಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು ಎಂದರು.
ಇಡಿಸಿ ಚಟುವಟಿಕೆಗೆ ಒತ್ತು ಕೊಡಿ
ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯಿಂದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿರುವ ಆದಿವಾಸಿಗಳ ಕ್ಷೇಮಾಭಿವೃದ್ಧಿಗೆ ಹಣ ವಿನಿಯೋಗಿಸಲು ಅವಕಾಶವಿದ್ದು, ಪರಿಸರ ಅಭಿವೃದ್ಧಿ ಸಮಿತಿಗಳ ವಿವಿಧ ಚಟುವಟಿಕೆಗಳ ಮೂಲಕ ಅರಣ್ಯದೊಳಗಿನ ಆದಿವಾಸಿಗಳ ಸಬಲೀಕರಣಕ್ಕೆ ಶ್ರಮಿಸುವಂತೆ ತಿಳಿಸಿದರು.
ಕಾಳಿ, ಬಿಆರ್.ಟಿ., ನಾಗರಹೊಳೆ, ಭದ್ರಾ ಹುಲಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಇಡಿಸಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇನ್ನೂ ಹೆಚ್ಚಿನ ಕಾರ್ಯಕ್ರಮ ರೂಪಿಸಿ, ಮಹಿಳೆಯರಿಗೆ ಸ್ವಾವಲಂಬಿಗಳಾಗಿ ಬದುಕಲು ನೆರವು ಒದಗಿಸುವಂತೆ, ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಆರಂಭಿಸಲು ಮತ್ತು ಪ್ರತಿಭಾವಂತ ಆದಿವಾಸಿ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಲು ಸೂಚನೆ ನೀಡಿದರು.
ಸಿಬ್ಬಂದಿ ಆಹಾರಕ್ಕೆ ಹೆಚ್ಚಿನ ಅನುದಾನ
ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದಿನವೊಂದಕ್ಕೆ ನೀಡಲಾಗುವ ಆಹಾರದ ಧಾನ್ಯದ ಭತ್ಯೆಯನ್ನು ಪ್ರಸ್ತುತ 80 ರೂಪಾಯಿಗಲಿಂದ 100 ರೂ.ಗೆ ಹೆಚ್ಚಿಸಲಾಗಿದ್ದು, ಇದನ್ನು ಇನ್ನೂ ಹೆಚ್ಚಿಗೆ ಮಾಡಲು ಸಾಧ್ಯವೆ ಎಂಬ ಬಗ್ಗೆ ಪ್ರಸ್ತಾವನೆ ಮಂಡಿಸಲು ಸೂಚಿಸಿದರು.
ಭದ್ರಾ ಹುಲಿ ಯೋಜನೆಗೆ 25 ವರ್ಷ
ಭದ್ರಾ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ 25 ವರ್ಷ ಆಗಿದ್ದು, ರಜತ ಮಹೋತ್ಸವ ಆಚರಣೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು.
ಬಿಳಿಗಿರಿ ರಂಗನಾಥ ದೇವಸ್ಥಾನ (ಬಿ.ಆರ್.ಟಿ.)ಯಲ್ಲಿ ಪಾರಂಪರಿಕ ಕಟ್ಟವಿದ್ದು, ಇದನ್ನು ಸಿಬ್ಬಂದಿಯ ವಸತಿಗೃಹವಾಗಿ ಬಳಕೆ ಮಾಡಲಾಗುತ್ತಿದೆ. ಇದು ಶಿಥಿಲಾವಸ್ಥೆಯಲ್ಲಿದ್ದು, ಮೂಲ ಸ್ವರೂಪಕ್ಕೆ ಚ್ಯುತಿ ಆಗದಂತೆ ಇದರ ದುರಸ್ತಿಗೆ ಸಹ ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ವಿಭಾಗ