Peppermint Oil: ಅಂದ ಹೆಚ್ಚಿಸುವುದಲ್ಲದೇ, ಕೂದಲಿನ ಸಮಸ್ಯೆಯನ್ನೂ ಪರಿಹರಿಸುತ್ತೆ ಪುದೀನಾ ಎಣ್ಣೆ; ಇದನ್ನ ಹೀಗೆಲ್ಲಾ ಬಳಸಬಹುದು
ನಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಎಸೆನ್ಷಿಯಲ್ ಎಣ್ಣೆಗಳ ಪಾತ್ರ ಮಹತ್ವದ್ದು. ಇದು ತ್ವಚೆಯ ಆರೈಕೆ ಮಾಡುವ ಜೊತೆಗೆ ಕೂದಲಿನ ಕಾಳಜಿಯನ್ನೂ ಮಾಡುತ್ತದೆ. ಚರ್ಮ ಹಾಗೂ ಕೂದಲಿನ ಅಂದ ಹೆಚ್ಚಿಸಿಕೊಳ್ಳಲು ಎಸೆನ್ಷಿಯಲ್ ಎಣ್ಣೆಯನ್ನು ಹೇಗೆ ಬಳಸಬಹುದು ನೋಡಿ. (ಬರಹ: ಮೇಘನಾ ಬಿ.)
ಎಸ್ಸೆನ್ಶಿಯಲ್ ಆಯಿಲ್ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಈ ಎಣ್ಣೆಯನ್ನು ಸಸ್ಯಗಳಿಂದ ಹೊರತೆಗೆಯಲಾಗಿರುತ್ತದೆ. ಲ್ಯಾವೆಂಡರ್ ಆಯಿಲ್, ಟೀ ಟ್ರೀ ಆಯಿಲ್, ಪುದೀನಾ ಎಣ್ಣೆ, ನಿಂಬೆ ಹುಲ್ಲಿನ ಎಣ್ಣೆ ಮುಂತಾದವುಗಳು
ಎಸ್ಸೆನ್ಶಿಯಲ್ ಆಯಿಲ್ ಪಟ್ಟಿಯಲ್ಲಿ ಬರುತ್ತವೆ. ವಿವಿಧ ಚರ್ಮ ಮತ್ತು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಾರೆ. ಈ ಪೈಕಿ ಪುದೀನ ಎಣ್ಣೆ (Peppermint Oil) ಕೂಡ ಚರ್ಮ ಮತ್ತು ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಪ್ರತಿದಿನ ಕೆಲವು ಹನಿ ಪುದೀನ ಎಣ್ಣೆಯನ್ನು ಬಳಸಿದರೆ ಸಾಕು ಮೊಡವೆ, ತಲೆಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ದೂರಾಗುತ್ತದೆ. ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಪುದೀನ ಎಣ್ಣೆಯ ಪ್ರಯೋಜನಗಳು ಹಾಗೂ ಅದನ್ನು ಹೇಗೆ ಬಳಸಬೇಕೇಂದು ತಿಳಿಯೋಣ.
ಚರ್ಮದ ಆರೋಗ್ಯ ಕಾಪಾಡುವ ಪುದೀನಾ ಎಣ್ಣೆ
ಪುದೀನಾ ಎಣ್ಣೆಯ ಮೆಂಥಾಲ್ ಅಂಶವು ನಮ್ಮನ್ನು ತಂಪಾದಿಸುವ ಸಂವೇದನೆಯನ್ನು ನೀಡುತ್ತದೆ. ನೀವು ಬಳಸುವ ಮಾಯಿಶ್ಚರೈಸರ್‌ಗೆ ಒಂದೆರಡು ಹನಿ ಪುದೀನಾ ಎಣ್ಣೆಯನ್ನು ಸೇರಿಸಿ, ನಿಮ್ಮ ಚರ್ಮಕ್ಕೆ ಅನ್ವಯಿಸಬಹುದು. ಇದು ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೊಡೆದುಹಾಕಿ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಎದುರಿಸಲು ಕೆಲಸ ಮಾಡುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಮೊಡವೆಗಳು ಆಗದಂತೆ ತಡೆಯುತ್ತದೆ.
ತಲೆಹೊಟ್ಟು ಕಡಿಮೆ ಮಾಡುತ್ತದೆ
ಪುದೀನ ಎಣ್ಣೆಯು ನಿಮ್ಮ ಕೂದಲಿನ ಆರೋಗ್ಯಕ್ಕೂ ದೊಡ್ಡ ವರದಾನವಾಗಿದೆ. ನೀವು ತಲೆಯಲ್ಲಿ ತುರಿಕೆ ಅಥವಾ ತಲೆಹೊಟ್ಟಿನೊಂದಿಗೆ ಹೋರಾಡುತ್ತಿದ್ದರೆ, ಪುದೀನಾ ಎಣ್ಣೆಯು ನಿಮಗೆ ಸಹಾಯ ಮಾಡುತ್ತದೆ.
ಪುದೀನಾ ಎಣ್ಣೆಯಲ್ಲಿರುವ ಮೆಂಥಾಲ್ ಅಂಶವು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಹೊಟ್ಟು ಕಡಿಮೆ ಮಾಡಿ ನಿಮ್ಮ ನೆತ್ತಿಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಗೆ ಕೆಲವು ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ನೆತ್ತಿಗೆ ಸವರಿ ಚೆನ್ನಾಗಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಎಕ್ಸ್‌ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ
ನೀವು ನಿಮ್ಮ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಪುದೀನಾ ಎಣ್ಣೆ ಉತ್ತಮ ಆಯ್ಕೆ. ಇದಕ್ಕಾಗಿ ನೀವು ಸ್ಕ್ರಬ್ ತಯಾರಿಸಬೇಕು. ಒಂದು ಕಪ್ ಸಕ್ಕರೆ, ಅರ್ಧ ಕಪ್ ತೆಂಗಿನ ಎಣ್ಣೆ ಮತ್ತು 10-15 ಹನಿ ಪುದೀನಾ ಎಣ್ಣೆಯನ್ನು ಮಿಶ್ರಣ ಮಾಡಿ ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಸ್ಕ್ರಬ್ ಬಳಸಬಹುದು.
ಪುದೀನಾ ಲಿಪ್ ಬಾಮ್
ನಿಮ್ಮ ತುಟಿಯ ಸೌಂದರ್ಯ ಹೆಚ್ಚಿಸಲು ಪ್ರಕೃತಿಯ ಗರಿಷ್ಠ ಲಾಭವನ್ನು ಪಡೆಯಲು ಮತ್ತೊಂದು ಸುಲಭ ಮಾರ್ಗವೆಂದರೆ ಮನೆಯಲ್ಲಿ ಲಿಪ್ ಬಾಮ್ ಅನ್ನು ತಯಾರಿಸುವುದು. 1 ಚಮಚ ಜೇನುಮೇಣದ ಉಂಡೆಗಳು, 1 ಚಮಚ ಶಿಯಾ ಬೆಣ್ಣೆ, 1 ಚಮಚ ತೆಂಗಿನ ಎಣ್ಣೆಯನ್ನು ಒಟ್ಟಿಗೆ ಹಾಕಿ ಕರಗಿಸಿ. ಬಳಿಕ 5-10 ಹನಿ ಪುದೀನಾ ಎಣ್ಣೆಯನ್ನು ಈ ಮಿಶ್ರಣಕ್ಕೆ ಸುರಿದು ತಣ್ಣಗಾಗಲು ಬಿಡಿ. ಈಗ ಲಿಪ್ ಬಾಮ್ ರೆಡಿ. ಇದನ್ನು ಡಬ್ಬಿಯೊಳಗೆ ಹಾಕಿ ವಾತಾವರಣಕ್ಕೆ ಒಡ್ಡಿಕೊಳ್ಳದ ಪ್ರದೇಶದಲ್ಲಿ ಇಟ್ಟು ಪ್ರತಿದಿನ ನಿಮ್ಮ ತುಟಿಗೆ ಅನ್ವಯಿಸಬಹುದು.
ವಿಭಾಗ