ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮ್ಯೂಚುವಲ್ ಫಂಡ್‌ ಎಸ್‌ಐಪಿ; 7 ರೀತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಪ್ರಯೋಜಕಾರಿ, 500 ರೂಪಾಯಿ ಇದ್ದರೆ ಸಾಕು ಉಳಿತಾಯ ಮಾಡೋದಕ್ಕೆ

ಮ್ಯೂಚುವಲ್ ಫಂಡ್‌ ಎಸ್‌ಐಪಿ; 7 ರೀತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಪ್ರಯೋಜಕಾರಿ, 500 ರೂಪಾಯಿ ಇದ್ದರೆ ಸಾಕು ಉಳಿತಾಯ ಮಾಡೋದಕ್ಕೆ

ಉಳಿತಾಯದ ವಿಚಾರ ಬಂದಾಗ ಚಿಲ್ಲರೆ ಹೂಡಿಕೆದಾರರ ನಡುವೆ ಜನಪ್ರಿಯವಾಗುತ್ತಿದೆ ಮ್ಯೂಚುವಲ್ ಫಂಡ್‌ ಎಸ್‌ಐಪಿ. ಇದು 7 ರೀತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಪ್ರಯೋಜಕಾರಿ ಎಂಬುದೇ ಇದಕ್ಕೆ ಕಾರಣ. 500 ರೂಪಾಯಿ ಇದ್ದರೆ ಸಾಕು ಉಳಿತಾಯ ಮಾಡೋದಕ್ಕೆ ಶುರುಮಾಡಿ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು ನೋಡಿ.

ಮ್ಯೂಚುವಲ್ ಫಂಡ್‌ ಎಸ್‌ಐಪಿ; 7 ರೀತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಪ್ರಯೋಜಕಾರಿ, 500 ರೂಪಾಯಿ ಇದ್ದರೆ ಸಾಕು ಉಳಿತಾಯ ಮಾಡೋದಕ್ಕೆ
ಮ್ಯೂಚುವಲ್ ಫಂಡ್‌ ಎಸ್‌ಐಪಿ; 7 ರೀತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಪ್ರಯೋಜಕಾರಿ, 500 ರೂಪಾಯಿ ಇದ್ದರೆ ಸಾಕು ಉಳಿತಾಯ ಮಾಡೋದಕ್ಕೆ

ಮ್ಯೂಚುವಲ್ ಫಂಡ್ ಎಸ್‌ಐಪಿ ( Mutual Fund SIP): ವೈಯಕ್ತಿಕ ಹಣಕಾಸಿನ ವಿಚಾರಕ್ಕೆ ಬಂದಾಗ, ಉಳಿತಾಯ ಮಾಡಬೇಕು ನಿಜ. ಹೇಗೆ ಮಾಡಬೇಕು ಎಂಬ ಬಗ್ಗೆ ಒಂದು ಸ್ಪಷ್ಟ ತಿಳಿವಳಿಕೆ, ಯೋಜನೆ ಇದ್ದರೆ ದೊಡ್ಡ ಪ್ರಮಾಣದಲ್ಲಿ ಉಳಿತಾಯದ ಫಲವನ್ನು ಪಡೆಯಲು ಸಾಧ್ಯವಿದೆ. ಇದಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಮ್ಯೂಚುವಲ್ ಫಂಡ್ ಎಸ್‌ಐಪಿ ( Mutual Fund SIP) ಕಡೆಗೆ ಗಮನಹರಿಸತೊಡಗಿದ್ದಾರೆ. ಇದು ಚಿಲ್ಲರೆ ಹೂಡಿಕೆದಾರರನ್ನು ಹಲವಾರು ರೀತಿಯಲ್ಲಿ ಸಬಲಗೊಳಿಸಬಲ್ಲದು. ಈ ಹೂಡಿಕೆಯ ವಿಧಾನವು ಅವಕಾಶಗಳನ್ನು ಎಲ್ಲರಿಗೂ ಹಂಚಿಕೊಡುತ್ತದೆ.

ಸಣ್ಣ ಹೂಡಿಕೆದಾರರು ಸಹ ಕಾಲಾನುಕ್ರಮದಲ್ಲಿ ಗಣನೀಯ ಬಂಡವಾಳವನ್ನು ನಿರ್ಮಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಬಂಡವಾಳ ವೃದ್ಧಿ, ಶಿಸ್ತುಬದ್ಧ ಗುರಿ-ಆಧಾರಿತ ಉಳಿತಾಯ, ಅಪಾಯ ನಿರ್ವಹಣೆ, ಕೈಗೆಟುಕುವಿಕೆ ಮತ್ತು ಹೂಡಿಕೆಯ ಸುಲಭ ವಿಧಾನವು ಈ ಯೋಜನೆಗಳ ಮೂಲಕ ಚಿಲ್ಲರೆ ಹೂಡಿಕೆದಾರರನ್ನು ಸಬಲಗೊಳಿಸುವ ಪ್ರಮುಖ ಅಂಶಗಳಾಗಿ ಕಾಣುತ್ತವೆ.

ಮ್ಯೂಚುವಲ್ ಫಂಡ್‌ ಎಸ್‌ಐಪಿ; 7 ರೀತಿಯಲ್ಲಿ ಸಣ್ಣ ಹೂಡಿಕೆದಾರರಿಗೆ ಪ್ರಯೋಜಕಾರಿ

1) ಸಣ್ಣ ಮೊತ್ತದ ಹೂಡಿಕೆ: ಮ್ಯೂಚುವಲ್ ಫಂಡ್‌ ಎಸ್‌ಐಪಿಯು ಸಂಪತ್ತಿನ ಕೊರತೆ ಇರುವಂಥವರಿಗೆ ಕೈಗೆಟಕುವ ಸಣ್ಣ ಮೊತ್ತದ ಹೂಡಿಕೆಗೂ ಸಹಕಾರಿ. ಈ ಯೋಜನೆಯು ದೊಡ್ಡ ಸಂಖ್ಯೆಯ ಚಿಲ್ಲರೆ ಹೂಡಿಕೆದಾರರ ಆರ್ಥಿಕ ಸಾಮರ್ಥ್ಯಗಳಿಗೆ ಸರಿ ಹೊಂದುತ್ತದೆ. ಎಸ್‌ಐಪಿ ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಸಂಪತ್ತಿನ ಕೊರತೆ ಇದ್ದಾಗ ತಾತ್ಕಾಲಿಕವಾಗಿ ಹೂಡಿಕೆಗೆ ವಿರಾಮ ನೀಡಿ ಮತ್ತೆ ಮುಂದುವರಿಸಲು ಅವಕಾಶವಿದೆ. ಹೂಡಿಕೆ ಹೆಚ್ಚು ಮಾಡುವುದಕ್ಕೂ ಅವಕಾಶವಿದೆ. ಈ ಸ್ವಾತಂತ್ರ್ಯವು ಚಿಲ್ಲರೆ ಹೂಡಿಕೆದಾರರ ಬಲವನ್ನು ಹೆಚ್ಚಿಸಿದೆ. ಅಂದ ಹಾಗೆ ಮ್ಯೂಚುವಲ್ ಫಂಡ್‌ ಎಸ್‌ಐಪಿ ಶುರುಮಾಡಲು ಪ್ರತಿ ತಿಂಗಳು 500 ರೂಪಾಯಿ ಉಳಿತಾಯ ಮಾಡಿದರೂ ಸಾಕು.

ಟ್ರೆಂಡಿಂಗ್​ ಸುದ್ದಿ

2) ಸ್ಪಷ್ಟ ಹಣಕಾಸಿನ ಗುರಿ ನಿಗದಿ: ಚಿಲ್ಲರೆ ಹೂಡಿಕೆದಾರರ ಸ್ಪಷ್ಟ ಹಣಕಾಸಿನ ಗುರಿಗಳ ಕಡೆಗೆ ಸ್ಥಿರವಾದ ಮತ್ತು ಶಿಸ್ತಿನ ಉಳಿತಾಯವನ್ನು ಮ್ಯೂಚುವಲ್ ಫಂಡ್‌ ಎಸ್‌ಐಪಿ ಖಚಿತಪಡಿಸುತ್ತವೆ. ಚಿಲ್ಲರೆ ಹೂಡಿಕೆದಾರರು ಒಂದು ನಿರ್ದಿಷ್ಟ ಮೊತ್ತವನ್ನು ನಿಯತವಾಗಿ ಹೂಡಿಕೆ ಮಾಡುವ ಮೂಲಕ ಮತ್ತು ಹಂತ-ಹಂತವಾಗಿ ತಮ್ಮ ಹಣಕಾಸಿನ ಗುರಿ ಈಡೇರಿಸಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಒತ್ತಡವನ್ನು ಹೂಡಿಕೆದಾರರು ಅನುಭವಿಸುವುದಿಲ್ಲ. ಮಕ್ಕಳ ಶಿಕ್ಷಣ, ನಿವೃತ್ತಿ, ಅಥವಾ ಮನೆ ಖರೀದಿ ಸೇರಿ ಯಾವುದೇ ಹಣಕಾಸಿನ ಗುರಿ ಇಟ್ಟುಕೊಂಡು ಎಸ್‌ಐಪಿ ಶುರುಮಾಡಬಹುದು. ಇಂತಹ ಗುರಿ ಈಡೇರಿಸಲು ಮ್ಯೂಚುವಲ್ ಫಂಡ್‌ಗಳ ಆಯ್ಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

3) ಪೋರ್ಟ್‌ಫೋಲಿಯೊ ವೈವಿಧ್ಯಗೊಳಿಸುವುದು: ಮ್ಯೂಚುವಲ್ ಫಂಡ್‌ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು ಶುರುಮಾಡುವಾಗ, ಅವರವರ ಹಣಕಾಸಿನ ಉದ್ದೇಶಗಳನ್ನು ನೋಡಿಕೊಂಡು ಹೂಡಿಕೆಯ ಮೊತ್ತ ಮತ್ತು ಎಷ್ಟು ಬಾರಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ಸಣ್ಣ ಮೊತ್ತದಿಂದ ಶುರುಮಾಡಿ ಕ್ರಮೇಣ ದೊಡ್ಡ ಮೊತ್ತ ಹೂಡಿಕೆ ಮಾಡಬಹುದು. ಅದಕ್ಕೂ ಇಲ್ಲಿ ಅವಕಾಶವಿದೆ.

4) ಕಾಂಪೌಂಡಿಂಗ್‌ ಪ್ರಯೋಜನ: ಮ್ಯೂಚುವಲ್ ಫಂಡ್ ಎಸ್‌ಐಪಿಯಲ್ಲಿ ಕಾಂಪೌಂಡಿಂಗ್ ಅಥವಾ ಚಕ್ರಬಡ್ಡಿಯ ರೀತಿಯಲ್ಲಿ ಹೂಡಿಕೆ ಬೆಳೆಯುವ ವಿಶೇಷ ಅಂಶವಿದೆ. ಇದು ಹೂಡಿಕೆಯ ಅವಧಿ ವಿಸ್ತರಣೆಯ ಅವಕಾಶವನ್ನು ಹೆಚ್ಚಿಸಿದೆ. ಹೂಡಿಕೆ ವಿಸ್ತರಿಸಿದಷ್ಟೂ ಲಾಭ ಹೆಚ್ಚು. ಇಲ್ಲಿ ಹೂಡಿಕೆಯಿಂದ ಬಂದ ಆದಾಯ ಮತ್ತೆ ಹೂಡಿಕೆಯಾಗಿ ಬೆಳೆಯುತ್ತ ಸಾಗುತ್ತದೆ. ಇದಕ್ಕೇ ಕಾಂಪೌಂಡಿಂಗ್ ಎಂದು ಹೇಳುವುದು. ದೀರ್ಘಾವಧಿ ಹೂಡಿಕೆಯನ್ನು ಉತ್ತೇಜಿಸಲು ಇದು ಪ್ರೋತ್ಸಾಹಕ ಅಂಶವಾಗಿ ಕಂಡುಬರುತ್ತದೆ. ಇದಕ್ಕೆ ವಿಶೇಷ ತಾಳ್ಮೆ ಬೇಕು.

5) ರೂಪಾಯಿ ವೆಚ್ಚದ ಸರಾಸರಿ ಪ್ರಯೋಜನ: ಹಣಕಾಸಿನ ಅಪಾಯ ನಿರ್ವಹಣೆಯು ಎಸ್‌ಐಪಿಗಳ ಮತ್ತೊಂದು ಪ್ರಮುಖ ಪ್ರಯೋಜನವಾಗಿದೆ. ನಿಯತ ಮಧ್ಯಂತರದಲ್ಲಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ಷೇರು ಮಾರುಕಟ್ಟೆಯ ಹೆಚ್ಚಿನ ಅಪಾಯದ ಸ್ವಭಾವವನ್ನು ತಗ್ಗಿಸಬಹುದು. ರೂಪಾಯಿ ವೆಚ್ಚದ ಸರಾಸರಿಯು ಬೆಲೆಗಳು ಕಡಿಮೆಯಾದಾಗ ಹೆಚ್ಚು ಯೂನಿಟ್‌ಗಳನ್ನು ಖರೀದಿಸಲು ಮತ್ತು ಬೆಲೆಗಳು ಹೆಚ್ಚಾದಾಗ ಕಡಿಮೆ ಯೂನಿಟ್‌ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಇದು ಸ್ವಾಭಾವಿಕವಾಗಿ ಅಪಾಯವನ್ನು ಸಮತೋಲನಗೊಳಿಸುತ್ತದೆ ಮತ್ತು ತುಲನಾತ್ಮಕವಾಗಿ ಸುರಕ್ಷಿತ. ಅಷ್ಟೇ ಅಲ್ಲ ಸುರಕ್ಷಿತ ಆದಾಯವನ್ನು ಖಾತ್ರಿಗೊಳಿಸುತ್ತದೆ.

6) ವೃತ್ತಿಪರ ನಿಧಿ ನಿರ್ವಹಣೆ: ಮ್ಯೂಚುಯಲ್ ಫಂಡ್‌ಗಳನ್ನು ನಿರ್ವಹಿಸುವ ಅನುಭವಿ ಫಂಡ್ ಮ್ಯಾನೇಜರ್‌ಗಳ ವೃತ್ತಿಪರ ಕೌಶಲಗಳ ಕಾರಣವೇ ಚಿಲ್ಲರೆ ಹೂಡಿಕೆದಾರರಿಗೆ ಎಸ್‌ಐಪಿ ಪ್ರಯೋಜನಕಾರಿ ಎಂಬ ಸುರಕ್ಷಿತ ಭಾವನೆ ಮೂಡಿರುವಂಥದ್ದು. ಇದು ಎಸ್‌ಐಪಿಗಳ ವಿಶೇಷ. ಅನುಭವಿ ಫಂಡ್ ಮ್ಯಾನೇಜರ್‌ಗಳು ಹೂಡಿಕೆ ಪೋರ್ಟ್‌ಫೋಲಿಯೋಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುತ್ತ ಅದನ್ನು ನಿರ್ವಹಿಸುತ್ತಾರೆ.

7) ಹೂಡಿಕೆಯ ನಮ್ಯತೆ: ಎಸ್‌ಐಪಿಗಳು ನಿಮ್ಮ ಹೂಡಿಕೆಯ ಮೊತ್ತ ಮತ್ತು ಆವರ್ತನವನ್ನು ನಿಮ್ಮ ಹಣಕಾಸಿನ ಉದ್ದೇಶಗಳಿಗೆ ಬೇಕಾದಂತೆ ಕಸ್ಟಮೈಸ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಇದಲ್ಲದೆ, ಯಾವುದೇ ಘಟನೆಯ ಸಂದರ್ಭದಲ್ಲಿ ನೀವು ತಕ್ಷಣವೇ ನಿಮ್ಮ ಎಸ್‌ಐಪಿಗಳನ್ನು ಮಾರ್ಪಡಿಸಬಹುದು ಅಥವಾ ನಿಲ್ಲಿಸಬಹುದು. ಈ ಬಹುಮಾದರಿ ನಮ್ಯತೆ ಅಥವಾ ಹೊಂದಾಣಿಕೆಯು ಎಸ್‌ಐಪಿಗಳನ್ನು ಹೆಚ್ಚು ಜನಪ್ರಿಯಗೊಳಿಸಿವೆ.

ಚಿಲ್ಲರೆ ಹೂಡಿಕೆದಾರರನ್ನು ಮತ್ತಷ್ಟು ಸಜ್ಜುಗೊಳಿಸುವುದು, ಡಿಜಿಟಲ್ ಯುಗವು ಎಸ್‌ಐಪಿಗಳಲ್ಲಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಬಳಕೆದಾರ ಸ್ನೇಹಿ ಹೂಡಿಕೆ ಪ್ರಕ್ರಿಯೆ ಮತ್ತು ಪೋರ್ಟ್‌ಫೋಲಿಯೋ ಕಾರ್ಯಕ್ಷಮತೆ ಟ್ರ್ಯಾಕಿಂಗ್‌ ಸುಲಭ ಮಾಡಿಕೊಟ್ಟಿದೆ.

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ

ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ ಮಾಡುವ ಮೊದಲು, ನೀವು ಹೂಡಿಕೆ ಮಾಡಲು ಬಯಸುವ ಮ್ಯೂಚುವಲ್ ಫಂಡ್ ಉತ್ಪನ್ನದ ಬಗ್ಗೆ ತಿಳಿದುಕೊಳ್ಳಿ. ಅದರ ಕನಿಷ್ಠ ಮೂರು ವರ್ಷಗಳ ಸಿಎಜಿಆರ್ ಅಥವಾ ವಾರ್ಷಿಕ ಸರಾಸರಿ ಲಾಭಾಂಶವನ್ನು ಗಮನಿಸಿ, ತುಲನೆ ಮಾಡಿ ನೋಡಿ. ಮ್ಯೂಚುವಲ್ ಫಂಡಗಳಲ್ಲಿ ಆಯಾ ಉತ್ಪನ್ನಗಳನ್ನು ಒದಗಿಸುವ ಕಂಪನಿಗಳು ವಿಧಿಸುವ ಶುಲ್ಕಗಳ ಬಗ್ಗೆಯೂ ನಿಗಾ ಇರಲಿ.

ಮ್ಯೂಚುವಲ್ ಫಂಡ್ ಕೂಡ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಉತ್ಪನ್ನವಾದ ಕಾರಣ, ಅದರದ್ದೇ ಅದ ಅಪಾಯವನ್ನು ಹೊಂದಿದೆ. ಹೀಗಾಗಿ, ಖಚಿತವಾದ ಮಾಹಿತಿ ಇಲ್ಲದೆ, ತಿಳಿವಳಿಕೆ ಇಲ್ಲದೇ ಹೂಡಿಕೆಮಾಡುವುದು ಒಳ್ಳೆಯದಲ್ಲ. ಪರಿಣತರ ನೆರವು, ಸಲಹೆ, ಮಾರ್ಗದರ್ಶನ ಪಡೆಯಿರಿ. ಮ್ಯೂಚುವಲ್ ಫಂಡ್‌ ಕುರಿತು ತಿಳಿದುಕೊಂಡು ಹೂಡಿಕೆ ಮಾಡಬೇಕು.