logo
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಬೆಂಗಳೂರಿನ ಹಸಿರ ಉಸಿರಾಟಕ್ಕೆ ಅರಣ್ಯ ಒತ್ತುವರಿ ಕಂಟಕ, ಯಲ್ಲಪ್ಪರೆಡ್ಡಿ ಬಯಕೆ, ಈಶ್ವರ ಖಂಡ್ರೆ ಪ್ರಯತ್ನಕ್ಕೆ ಫಲ ಯಾವಾಗ?

ಕಾಡಿನ ಕಥೆಗಳು: ಬೆಂಗಳೂರಿನ ಹಸಿರ ಉಸಿರಾಟಕ್ಕೆ ಅರಣ್ಯ ಒತ್ತುವರಿ ಕಂಟಕ, ಯಲ್ಲಪ್ಪರೆಡ್ಡಿ ಬಯಕೆ, ಈಶ್ವರ ಖಂಡ್ರೆ ಪ್ರಯತ್ನಕ್ಕೆ ಫಲ ಯಾವಾಗ?

Umesha Bhatta P H HT Kannada

Oct 23, 2024 06:13 PM IST

google News

ಬೆಂಗಳೂರಿನ ಅರಣ್ಯ, ಹಸಿರಿನ ಸ್ಥಿತಿ ಹೇಗಾಗಿದೆ ಎನ್ನುವ ಕಾಡಿನ ಕಥೆಗಳ ಕಥನ.

  •  ಬೆಂಗಳೂರು ನಗರ ಒಂದು ಕಾಲಕ್ಕೆ ಕೆರೆಗಳ ಊರು. ಅರಣ್ಯದಿಂದ ಸುತ್ತುವರಿದಿದ್ದ ನಗರ. ಈಗ ಆಭಿವೃದ್ದಿ ಹೆಸರಲ್ಲಿ ಎಲ್ಲ ಎಲ್ಲೆಗಳನ್ನು ತೊಡೆದು ಹಾಕಲಾಗಿದೆ. ಇದನ್ನು ಅರಣ್ಯ ತಜ್ಞ ಅ.ನಾ.ಯಲ್ಲಪ್ಪರೆಡ್ಡಿ ಅವರು ಹೇಳುತ್ತಲೇ ಇದ್ದಾರೆ. ಈಗಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಯತ್ನ ಮುಂದುವರಿದಿದೆ. ಇದರ ಕುರಿತು ಈ ವಾರದ ಕಾಡಿನ ಕಥೆಗಳು.

ಬೆಂಗಳೂರಿನ ಅರಣ್ಯ, ಹಸಿರಿನ ಸ್ಥಿತಿ ಹೇಗಾಗಿದೆ ಎನ್ನುವ ಕಾಡಿನ ಕಥೆಗಳ ಕಥನ.
ಬೆಂಗಳೂರಿನ ಅರಣ್ಯ, ಹಸಿರಿನ ಸ್ಥಿತಿ ಹೇಗಾಗಿದೆ ಎನ್ನುವ ಕಾಡಿನ ಕಥೆಗಳ ಕಥನ.

ಬೆಂಗಳೂರಿನ ಸುತ್ತಮುತ್ತ ಅದ್ಭುತವಾದ ಕೆರೆ, ಕಟ್ಟೆ, ಕಲ್ಯಾಣಿಗಳು ನಿರ್ಮಾಣಗೊಂಡವು. ಗೋಕಟ್ಟೆಗಳಿಂದ ಅಂತರ್ಜಲ ಹರಿದುಬರುತಿತ್ತು. ಅಂತರ್ಜಲವನ್ನು ಪರಸ್ಪರ ಸಂಪರ್ಕಿಸಿದರು. ಭೂಮಿಯ ಮೇಲೆ ಬಿದ್ದ ನೀರು ಕೂಡ ಹರಿದುಕೊಂಡು ಹೋಗುತ್ತಿತ್ತು. ಅಲ್ಲಿ ಒಂದು ಕೆರೆ ಕಟ್ಟಿದರೆ ಅನುಕೂಲವಾಗುತ್ತದೆಂಬ ಭಾವನೆಯಿಂದ ನಿರ್ಮಾಣ ಮಾಡಿದ್ದರು.ಇಂದಿನ ಆಧುನೀಕರಣದಲ್ಲಿ ಅಭಿವೃದ್ಧಿಯ ಭರಾಟೆಯಲ್ಲಿ ಎಲ್ಲವೂ ನಾಶವಾಗಿದ್ದು, ಬಲಾಢ್ಯರ ಕೈವಶವಾಗಿವೆ. ಟಿವಿ, ಲ್ಯಾಪ್‌ಟಾಪ್, ಕಂಪ್ಯೂಟರ್ ತ್ಯಾಜ್ಯಗಳು. ನಾಯಂಡಹಳ್ಳಿ ಪ್ರದೇಶದಲ್ಲಿ ಗುಜರಿ ಸಂಗ್ರಾಹಕ ಕಂಪ್ಯೂಟರಿನ ಬೆಲೆಬಾಳುವ ವಸ್ತು ತೆಗೆದುಕೊಳ್ಳುವುದಕ್ಕಾಗಿ ಅದನ್ನು ಸುಡುತ್ತಾನೆ. ಮಿಕ್ಕಿದ್ದೆಲ್ಲ ಬಿಸಾಡುತ್ತಾನೆ. ಅದು ಸಮೀಪದ ವೃಷಭಾವತಿ ನದಿಗೆ ಹೋಗುತ್ತದೆ. ಮುಂದೆ ಅದು ಕಾವೇರಿಗೂ ಸೇರುತ್ತದೆ. ಆಮೇಲೆ ನಮಗೇ ವಾಪಸು ಬರಬಹುದು. ಹೀಗೆ ನಮ್ಮಲ್ಲಿ ತಂತ್ರಜ್ಞಾನವನ್ನು ಪ್ರಮೋಟ್ ಮಾಡಿದರೇ ವಿನಾ ಅದರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಇಷ್ಟು ವರ್ಷಗಳಾದರೂ ಬೆಂಗಳೂರಿನಲ್ಲಿ ಒಂದೇ ಒಂದು ಗುಂಡು ತೋಪು ಕೂಡ ಆಗಿಲ್ಲ. ಹೊಸದಾಗಿ ಒಂದು ಕುಂಟೆಯನ್ನೂ ಕಟ್ಟಿಲ್ಲ. ಹಿಂದೆ 20 ಸಾವಿರ ಕುಂಟೆಗಳಿದ್ದವು. ಬೆಂಗಳೂರಿನಲ್ಲಿ 20 ಸಾವಿರ ಅಶ್ವತ್ಥಕಟ್ಟೆಗಳಿದ್ದವು. ಹೀಗಾದರೆ ಬೆಂಗಳೂರು ಹಸಿರ ಪರಿಸರ ಹೇಗೆ ಉಳಿಯುತ್ತದೆ ಹೇಳಿ..

ಬೆಂಗಳೂರು ವಿಶ್ವದ ತಂತ್ರಜ್ಞಾನ ನಗರಿ, ಭಾರತದ ಉದ್ಯಾನ ನಗರಿ ಎನ್ನುವ ಹೆಸರು ಪಡೆದಿದ್ದರೂ ನಗರದೊಳಗಿನ, ಸುತ್ತಮುತ್ತಲಿನ ಅರಣ್ಯ, ಹಸಿರಿನ ಪರಿಸ್ಥಿತಿಯನ್ನು ಕರ್ನಾಟಕದ ನಿವೃತ್ತ ಅರಣ್ಯಾಧಿಕಾರಿ ಅ.ನಾ.ಯಲ್ಲಪ್ಪ ರೆಡ್ಡಿ ಅವರು ಕಟು ಮಾತುಗಳಲ್ಲಿ ವಿಮರ್ಶಿಸಿದರು. ಕೆಲ ದಿನಗಳ ಹಿಂದೆ ಉತ್ಥಾನ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಬೆಂಗಳೂರಿನ ಪರಿಸರದ ಕುರಿತೇ ಹೆಚ್ಚು ಮಾತನಾಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ್ದ ಮನೆಯಂಗಳದ ಮಾತುಕತೆಯಲ್ಲಿಯೇ ಇದೇ ದನಿ ಅವರದ್ದಾಗಿತ್ತು.

ಇದು ಯಲ್ಲಪ್ಪರೆಡ್ಡಿ ಅವರೊಬ್ಬರ ಅಭಿಪ್ರಾಯ ಅಂದರೆ ತಪ್ಪಾದೀತು. ಬೆಂಗಳೂರು ಪ್ರೀತಿಸುವ ಪ್ರತಿಯೊಬ್ಬರೂ ಹೀಗೆಯೇ ಹೇಳಬಹುದು. ಯಲ್ಲಪ್ಪರೆಡ್ಡಿ ಅವರು ಇತ್ತೀಚಿನ ದಶಕಗಳಲ್ಲಿ ಬೆಂಗಳೂರಿನ ಜ್ಞಾನಭಾರತಿ ಸಹಿತ ಹಲವು ಭಾಗಗಳಲ್ಲಿ ಹಸಿರು ವೈವಿಧ್ಯ ಉಳಿಸಲು ಕೊಡುಗೆ ನೀಡಿರುವುದರಿಂದ ಅವರ ಮಾತಿಗೆ ಹೆಚ್ಚಿನ ಬೆಲೆಯಿದೆ.


ಬೆಂಗಳೂರಿನ ಆ ದಿನಗಳು

ಬೆಂಗಳೂರು ಒಂದು ಕಾಲಕ್ಕೆ ಹಸಿರ ನಗರಿ. ಉದ್ಯಾನಗಳ ತವರೂರು. ಎಲ್ಲಿ ನೋಡಿದರೂ ಮರ ಗಿಡಗಳೇ ಕಾಣುತ್ತಿದ್ದವು. ಬೆಂಗಳೂರು ಅರಣ್ಯದಿಂದಲೇ ಸುತ್ತುವರೆದ ಊರು. ಬನ್ನೇರಘಟ್ಟ, ಹೆಸರಘಟ್ಟ, ತುರಹಳ್ಳಿ ಅರಣ್ಯ ಪ್ರದೇಶಗಳು ಬೆಂಗಳೂರಿನ ಹಸಿರ ವಲಯವನ್ನು ಕಾಪಿಟ್ಟಿವೆ. ಈಗಲೂ ಕೆಲವು ಅರಣ್ಯ ಪ್ರದೇಶ ಹಿಂದಿನ ವೈಭವವನ್ನೇ ಹೊಂದಿವೆ. ಬೆಂಗಳೂರು ನಗರದಲ್ಲೂ ಕೆರೆ ಕಟ್ಟೆಗಳು, ವಿಶಾಲ ಉದ್ಯಾನಗಳಿದ್ದವು. ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಇವುಗಳಲ್ಲಿ ಪ್ರಮುಖವಾದವು. ವಿಶಾಲವಾದ ರಸ್ತೆ, ಹಸಿರಿನ ಸಾಂಧ್ರತೆಯೂ ಅಧಿಕವಾಗಿತ್ತು. ಇದೇ ಕಾರಣಕ್ಕೆ ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಅಭಿದಾನ ಹಾಗೆಯೇ ಉಳಿದುಕೊಂಡಿದೆ. ನಾಡಗೌಡ ಕೆಂಪೇಗೌಡರು ಕಟ್ಟಿದ ನಗರ, ಎಂ.ಎಚ್.ಮರೀಗೌಡರಂತವರ ಹಸಿರು ಮನಸುಗಳಿಂದಲೇ ಬೆಂಗಳೂರಿನ ಹಸಿರು ಅಡಿಪಾಯ ಈಗಲೂ ಗಟ್ಟಿಯಾಗಿಯೇ ಇದೆ. ಇದು ಇತಿಹಾಸ ಎನ್ನಿಸಿದರೂ ಈಗಿನ ಸ್ಥಿತಿ ಕೊಂಚ ಗಾಬರಿ ಎನ್ನುವ ಮಟ್ಟಕ್ಕೆ ಬೆಳೆದಿದೆ. ಇದರ ಹಿಂದೆ ಇರುವುದು ಮಿತಿ ಮೀರಿದ ಅಭಿವೃದ್ದಿ, ಬೆಂಗಳೂರಿಗೆ ಎಲ್ಲೆಯೇ ಇಲ್ಲದ ರೀತಿ ಬೆಳೆದಿರುವುದು. ಇವುಗಳಿಗಿಂತ ಅರಣ್ಯಭೂಮಿ ಒತ್ತುವರಿಯಾಗಿರುವುದು ಆತಂಕದ ಸಂಗತಿಯೇ.

ಅರಣ್ಯ ಒತ್ತುವರಿ ಎಂಬ ಭೂತ

ಕೆಲವು ದಿನಗಳ ಹಿಂದೆ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ಈಶ್ವರಖಂಡ್ರೆ ಅವರು, ಬೆಂಗಳೂರಿನ ಅರಣ್ಯ ಪ್ರದೇಶದ ಸ್ಥಿತಿಗತಿ, ಒತ್ತುವರಿ ಅರಣ್ಯದ ಪ್ರಮಾಣ, ತೆರವುಗೊಂಡಿರುವ ಪ್ರದೇಶ, ಇನ್ನೂ ಬಾಕಿ ಇರುವ ಪ್ರಕರಣಗಳ ವಿವರಗಳನ್ನು ವಿಧಾನಪರಿಷತ್‌ ಬಿಡುಗಡೆ ಮಾಡಿದ್ದರು. ಬೆಂಗಳೂರು ಸುತ್ತಮುತ್ತಲೇ ಶೇ.10 ರಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದ್ದು ಇದರ ವಶಕ್ಕೆ ಪ್ರಯತ್ನಗಳು ನಿಂತಿಲ್ಲ. ಕಾಲಮಿತಿಯೊಳಗೆ ಯಾರೇ ದೊಡ್ಡವರಿದ್ದರೂ ಒತ್ತುವರಿತೆರವು ಮಾಡಲಾಗುತ್ತದೆ ಎಂದೂ ಹೇಳಿದ್ದರು.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಭಾಗದ ಅರಣ್ಯ ಒತ್ತುವರಿಯನು ಹತ್ತಿಕ್ಕುತ್ತಿದ್ದೇವೆ. ಅತಿಕ್ರಮಣದಾರರನ್ನು ನಿರ್ದಯವಾಗಿ ತೆರವು ಮಾಡುತ್ತಿದ್ದೇವೆ. ಆದಾಗ್ಯೂ, ಬೆಂಗಳೂರಿನಲ್ಲಿ 46 ವ್ಯಕ್ತಿಗಳು ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (ಬಿಎನ್‌ಪಿ) ಮಿತಿಯಲ್ಲಿ ಒಬ್ಬರು ತಮ್ಮ ತೆರವಿನ ವಿರುದ್ಧ ತಡೆಯಾಜ್ಞೆ ಪಡೆದಿದ್ದಾರೆ. ಅದೇನೇ ಇದ್ದರೂ, ಆ ತಡೆಗಳನ್ನು ತೆರವುಗೊಳಿಸಿ ಅರಣ್ಯ ಭೂಮಿಯನ್ನು ಮರಳಿ ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ನಿಧಾನವಾಗಿಯಾದರೂ ತಮ್ಮ ಪ್ರಯತ್ನದಿಂದ ವಿಚಲಿತರಾಗೋಲ್ಲ ಎಂದು ಅರಣ್ಯ ಸಚಿವರು ಸ್ಪಷ್ಟ ದನಿಯಲ್ಲಿ ಹೇಳಿದ್ದರು.

ಅರಣ್ಯ ಇಲಾಖೆಯಲ್ಲಿಯೇ ಲಭ್ಯ ಇರುವ ಮಾಹಿತಿಗಳಂತೆ, ಬೆಂಗಳೂರು 9,991 ಹೆಕ್ಟೇರ್ ಅರಣ್ಯ ಪ್ರದೇಶದಿಂದ ಆವೃತವಾಗಿದೆ. ಆನೇಕಲ್ 3,826.8 ಹೆಕ್ಟೇರ್ ಅರಣ್ಯ ಭೂಮಿಯೊಂದಿಗೆ ಅತಿ ಹೆಚ್ಚು ಅರಣ್ಯ ಭೂಮಿಯನ್ನು ಹೊಂದಿದೆ, ನಂತರ ಬೆಂಗಳೂರು ದಕ್ಷಿಣ 3,467.3 ಹೆಕ್ಟೇರ್ ಅರಣ್ಯವನ್ನು ಹೊಂದಿದೆ. ಬೆಂಗಳೂರು ಪೂರ್ವದಲ್ಲಿ ಕೇವಲ 601.3 ಹೆಕ್ಟೇರ್ ಮತ್ತು ಬೆಂಗಳೂರು ಉತ್ತರದಲ್ಲಿ 711.8 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಅಂಕಿ ಅಂಶಗಳಿಗೂ ಈಗಿರುವ ಅರಣ್ಯ ಪ್ರದೇಶದ ತಾಳೆ ನೋಡಿದರೆ ಒತ್ತುವರಿ ಪ್ರಮಾಣವೇ ಅಧಿಕವಾಗಿ ಕಾಣುತ್ತದೆ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ಸುತ್ತಮುತ್ತಲಿನ 827.7 ಹೆಕ್ಟೇರ್ ಅಂದರೆ 2045.2 ಎಕರೆ ಭೂಮಿಯನ್ನು ಅತಿಕ್ರಮಿಸಲಾಗಿದೆ. 705 ಅತಿಕ್ರಮಣ ಪ್ರಕರಣಗಳು ಕೂಡ ದಾಖಲಾಗಿವೆ. ಇದರಲ್ಲಿ ಬನ್ನೇರಘಟ್ಟ ಪಕ್ಕದ ಕಗ್ಗಲಿಪುರದಲ್ಲಿ ಅತಿ ಹೆಚ್ಚು 945.3 ಎಕರೆ ಅರಣ್ಯ ಒತ್ತುವರಿಯಾಗಿದೆ. ನಂತರದ ಸ್ಥಾನದಲ್ಲಿ ಕೃಷ್ಣರಾಜ ಪುರ (ಕೆಆರ್ ಪುರ) ವ್ಯಾಪ್ತಿಯಲ್ಲೇ 570.5 ಎಕರೆ ಅರಣ್ಯ ಒತ್ತುವರಿಯಾಗಿದೆ. ಕೆಆರ್ ಪುರ) ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅರಣ್ಯ ಅತಿಕ್ರಮಣದ 255 ಪ್ರಕರಣಗಳು ದಾಖಲಾಗಿವೆ.

ಸಚಿವರ ಪ್ರಯತ್ನದ ಫಲ

ಬೆಂಗಳೂರಿನಲ್ಲಿ ಅರಣ್ಯ ಒತ್ತುವರಿ ವಿಚಾರವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆಗಾಗ ಸಭೆ ನಡೆಸಿ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸುತ್ತಿರುವುದು, ಕಾಲಮಿತಿಯನ್ನು ನೀಡಿ ಒತ್ತುವರಿ ತೆರವಿಗೆ ಮುಂದಾಗಿರುವುದು ಒಂದು ವರ್ಷದಲ್ಲಿ ತಕ್ಕ ಮಟ್ಟಿಗಿನ ಸಂಚಲನವನ್ನೂ ಮೂಡಿಸಿದೆ. ಬೆಂಗಳೂರಿನಲ್ಲಿ ನೂರು ಎಕರೆಗೂ ಅಧಿಕ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖಂಡ್ರೆ ಹೇಳಿಕೆ ನೀಡಿದ್ದರು.

ಬೆಳವಣಿಗೆಗೆ ಗಡಿಯೇ ಇಲ್ಲದ ಬೆಂಗಳೂರಿನ ಜನಸಂಖ್ಯೆ ಎರಡು ಕೋಟಿಯನ್ನು ದಾಟಿದೆ. ವಾಹನಗಳ ಸಂಖ್ಯೆ 40 ಲಕ್ಷಕ್ಕೂ ಅಧಿಕ. ಕಾರುಗಳ ಪ್ರಮಾಣವೂ ಸಾಕಷ್ಟಿದೆ. ಹೀಗಿರುವಾಗ ಬೆಂಗಳೂರಿನ ಸಂಚಾರ ದಟ್ಟಣೆ, ಪರಿಸರ ಮಾಲಿನ್ಯದ ಪ್ರಮಾಣ ಕೂಡ ಹೆಚ್ಚುತ್ತಲೆ ಇದೆ. ಬೆಳವಣಿಗೆಯನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಹಾಗೆಂದು ಯೋಜಿತ ಅಭಿವೃದ್ದಿಗೆ, ವ್ಯವಸ್ಥಿತ ಕಾರ್ಯಚಟುವಟಿಕೆಗಳ ಮೂಲಕ ಮಾದರಿ ನಗರ ಕಟ್ಟಲು ಅವಕಾಶವಿದೆ. ಬ್ರಾಂಡ್‌ ಬೆಂಗಳೂರು ಎಂಬ ಪರಿಕಲ್ಪನೆ ರೂಪ ಪಡೆದಿದೆ. ಬ್ರಾಂಡ್‌ ಬೆಂಗಳೂರು ಎನ್ನುವುದಕ್ಕೆ ಅಯಾಮ ವಿಶಾಲವಾಗಿದ್ದರೂ ಅಲ್ಲಿ ಹಸಿರಿಗೆ, ಅರಣ್ಯಕ್ಕೆ, ಪರಿಸರ ನೀತಿಗಳಿಗೂ ಅವಕಾಶ ಬೇಕೇ ಬೇಕು. ಒಂದು ಕಡೆ ಅರಣ್ಯದ ಒತ್ತುವರಿ, ಇದರಿಂದ ಕಾಡು ಪ್ರಾಣಿಗಳ ಉಪಟಳ, ಆನೆ, ಚಿರತೆಯಿಂದ ಜನರಿಗೆ ತೊಂದರೆಯಾಗುತ್ತಿವುದು ಕಾಣುತ್ತಲೇ ಇದೆ. ಪರಿಸರ ಮಾಲಿನ್ಯದ ಪ್ರಮಾಣವೂ ವರ್ಷಗಳಲ್ಲಿ ಏರಿಕೆಯಾಗಿರುವುದು ಆತಂಕದ ಮೂಲವೂ ಹೌದು. ಮರ-ಗಿಡಗಳು, ಹಸಿರು, ನೀರು ಎನ್ನುವುದು ಜನರ ಬೇಡಿಕೆಗಳಾದರೂ ಸರ್ಕಾರವೇ ಎಲ್ಲವನ್ನೂ ನೀಡಲು ಆಗುವುದಿಲ್ಲ. ಪರಿಸರ ಸಂರಕ್ಷಣೆಯಿಂದ, ಬೆಂಗಳೂರು ಸುತ್ತಲಿನ ಹಸಿರು ಹೊದಿಕೆ ಗಟ್ಟಿಗೊಳಿಸುವುದರಿಂದ ಇದಕ್ಕೆ ಪರಿಹಾರ ಸಿಗಬಹುದು. ಇದರಲ್ಲಿ ಜನರ ಪಾತ್ರವೂ ಹಿರಿದೇ. ನಮ್ಮ ಬೆಂಗಳೂರು ಎನ್ನುವ ಮನೋಭಾವವೂ ಹಸಿರಿನಂತೆಯೆ ಗಟ್ಟಿಗೊಳ್ಳಬೇಕು. ಇಲ್ಲದೇ ಇದ್ದರೆ ದೆಹಲಿಯಲ್ಲಿ ಅನುಭವಿಸಿದ ವಾಯುಮಾಲಿನ್ಯದ ಸನ್ನಿವೇಶ, ಶುದ್ದ ನೀರಿಗೆ ಪರದಾಡುವ, ಶುದ್ದ ಗಾಳಿ ಕೊಡಿ ಎಂದು ಬೇಡುವ ಸ್ಥಿತಿ ನಮ್ಮ ಬೆಂಗಳೂರಿಗೂ ಎದುರಾಗಬಹುದು.

ಕಲುಷಿತ ಗಾಳಿಯ ಕಳವಳ

ಕೆಲ ದಿನಗಳ ಹಿಂದೆ ವಿಶ್ವ ಕಲುಷಿತ ಗಾಳಿ ಇರುವ ನಗರಗಳ ಪಟ್ಟಿ ಬಿಡುಗಡೆ ಮಾಡಿತು. ಅದರಲ್ಲಿ ದೆಹಲಿ ಇತ್ತು. ಬೆಂಗಳೂರು ಇರಲಿಲ್ಲ. ಭಾರತದ ಪಟ್ಟಿಯಲ್ಲೂ ಬೆಂಗಳೂರು ಆತಂಕದ ಪಟ್ಟಿಯಲ್ಲೇನೂ ಇಲ್ಲ. ಹಾಗೆಂದು ನಿರ್ಲಕ್ಷಿಸುವ ಹಾಗಿಲ್ಲ. ನಾಲ್ಕು ಮಳೆ ಬಂದ ಕಾರಣಕ್ಕೆ ಜನ ಅಬ್ಬಬ್ಬಾ ಎಂದು ಹೋದರು. ಇದೂ ಕೂಡ ಭಾರತದ ಇತರೆ ನಗರಗಳಂತೆ ವ್ಯವಸ್ಥಿತವಲ್ಲದ ಅಭಿವೃದ್ದಿಯ ಸ್ಥಿತಿಯನ್ನು ತೆರೆದಿಟ್ಟತು.

ಯಲ್ಲಪ್ಪರೆಡ್ಡಿ ಅವರ ಕಾಳಜಿ

ಬೆಂಗಳೂರಿನ ಆ ದಿನಗಳ ಕಥೆಯನ್ನು ಯಲ್ಲಪ್ಪ ರೆಡ್ಡಿ ಅವರು ವಿವರಿಸುತ್ತಾ ಹೋದರು.

ಆಗ ಪ್ರತಿಯೊಂದು ಗ್ರಾಮದಲ್ಲಿ ನಮ್ಮ ನೈಸರ್ಗಿಕವಾದ ಪರಿಸರ ವ್ಯವಸ್ಥೆಯೇ ಆಗಿದ್ದ ಎರಡು ಗುಂಡು ತೋಪುಗಳಿದ್ದವು. ಅಲ್ಲಿ ಕಾಡನ್ನು ಸಂರಕ್ಷಿಸುತ್ತಿದ್ದರು. ಜನ, ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಅಲ್ಲಿ ಔಷಧಿ ಗಿಡಗಳನ್ನು ಬೆಳೆಸುತ್ತಿದ್ದರು. ವರ್ಷಕ್ಕೊಮ್ಮೆ ಹೋಗಿ ಅಲ್ಲಿನ ಗ್ರಾಮದೇವತೆಯನ್ನು ಪೂಜಿಸುತ್ತಿದ್ದರು. ಇಂದು ಎಲ್ಲಿಯೂ ಒಂದು ಗುಂಡು ತೋಪು ಕೂಡ ಇಲ್ಲ. ಒಂದೇ ಒಂದು ಕುಂಟೆ ಇಲ್ಲ.

ಬೆಂಗಳೂರು ಡೈರಿಯ ಹಿಂದೆ ನಮ್ಮ ಮನೆ, ಜಾಗ ಇತ್ತು. ನಮ್ಮ ಹೊಲದಲ್ಲಿ ಮೂರು ಕುಂಟೆಗಳಿದ್ದವು. ಒಂದು ಇಂಚು ನೀರು ಕೂಡ ಒಳಗಡೆ ಹೋಗಲು ಅವಕಾಶವಾಗದ ಮಟ್ಟಿಗೆ ಅಭಿವೃದ್ದಿ ಆಗಿ ಹೋಗಿದೆ. ಎಂತೆಂಥ ಮರಗಳಿದ್ದವು ಅಲ್ಲಿ. ನೀವು ಡೈರಿ ಸರ್ಕಲ್‌ನಲ್ಲಿ ಕುಳಿತುಕೊಂಡರೆ ಸರ್ ಎಂ. ವಿಶ್ವೇಶ್ವರಯ್ಯನವರು ಬನ್ನೇರುಘಟ್ಟ ರಸ್ತೆಯಲ್ಲಿ ಬರುತ್ತಿದ್ದರು. ಅಲ್ಲಿ ಉದ್ದಕ್ಕೂ ದೊಡ್ಡ ದೊಡ್ಡ ನೇರಳೆ ಮರಗಳಿದ್ದವು. ಸಾಯಂಕಾಲ ವಿಶ್ವೇಶ್ವರಯ್ಯನವರು ಕಾರನ್ನು ಅಲ್ಲಿ ನಿಲ್ಲಿಸಿ, ಕೋಲು ಹಿಡಿದುಕೊಂಡು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಅಲ್ಲಿ ಸ್ವಲ್ಪ ಹಿಂದುಗಡೆ ನಮ್ಮ ಹೊಲ. ವಿಶ್ವೇಶ್ವರಯ್ಯನವರನ್ನು ನೋಡಲು ಅಲ್ಲಿಗೆ ಹೋಗುತ್ತಿದ್ದೆವು. ಶಾಲೆಗೆ ರಜೆ ಇದ್ದಾಗ ಅಲ್ಲಿ ಬಂದು ಕುಳಿತುಕೊಂಡು ಅವರನ್ನು ನೋಡುತ್ತಿದ್ದೆವು. ಈಗ ಅಲ್ಲಿ ಎಷ್ಟು ಮರ ಇದೆ? ಎಂದು ಮಾತುಗಳಲ್ಲಿಯೇ ನಿಟ್ಟುಸಿರು ಬಿಟ್ಟರು ಯಲ್ಲಪ್ಪರೆಡ್ಡಿ.

ಬೆಂಗಳೂರು ಬದಲಾಗಿರುವುದು ನಿಜ. ಮುಗಿಲೆತ್ತರದ ಕಟ್ಟಡಗಳು, ಮೆಟ್ರೋ, ವಿಮಾನ ನಿಲ್ದಾಣ, ಹೊಸ ಬಸ್‌ ನಿಲ್ದಾಣ ಎಲ್ಲೆಲ್ಲೂ ಬಂದಿರಬಹುದು. ಪರಿಸರ ಉಳಿಸಿಕೊಳ್ಳಲು ಇನ್ನಷ್ಟು ಪ್ರಯತ್ನ ಆಗಬೇಕು ಎನ್ನುವುದು ಅ. ನ. ಯಲ್ಲಪ್ಪ ರೆಡ್ಡಿ ಅವರ ಸಲಹೆ ನೈಜವೂ ಹೌದು.

ಅರಣ್ಯ ಸಚಿವ ಈಶ್ವರಖಂಡ್ರೆ ಬೆಂಗಳೂರಿನ ಹಸಿರು ಎಲ್ಲೆ ಬಿಗಿಗೊಳಿಸಲು ಟೊಂಕ ಕಟ್ಟಿ ನಿಂತಿರುವಂತೆ ಕಾಣುತ್ತಿದೆ. ಮೂರು ದಿನದ ಅರಣ್ಯ ಭೂಮಿ ವಶಪಡಿಸಿಕೊಂಡದ್ದನ್ನು ಹೇಳುತ್ತಲೇ ಎರಡೂವರೆ ಸಾವಿರ ಕೋಟಿ ರೂ. ಬೆಲೆ ಬಾಳುವ ಭೂಮಿ ಎನ್ನುವ ಮಾಹಿತಿ ನೀಡಿದ್ದರು. ಬೆಂಗಳೂರಿನ ಭೂಮಿಗೆ ಬೆಲೆ ಕಟ್ಟಬಹುದು. ಆ ಪರಿಸರಕ್ಕೆ ಬೆಲೆ ಕಟ್ಟಲಾದೀತೆ, ಬೆಂಗಳೂರು ಜನ ಶುದ್ದ ಗಾಳಿ, ನೀರು ಪಡೆಯಲು ಅದೆಷ್ಟು ಹಣ ಬೇಕಾಗಬಹುದು?.

-ಕುಂದೂರು ಉಮೇಶಭಟ್ಟ, ಮೈಸೂರು

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ