ಆನೆಗಳ ಸಹಜ ಸಂಚಾರಕ್ಕೆ, ಉಳಿವಿಗೆ ಬೇಡವೇ ಪ್ರತ್ಯೇಕ ಹೆದ್ದಾರಿ? ಆಮೆ ನಡಿಗೆಯಲ್ಲಿದೆ ಕರ್ನಾಟಕದ ಎಲಿಫೆಂಟ್‌ ಕಾರಿಡಾರ್‌; ಕಾಡಿನ ಕಥೆಗಳು-column elephant corridor in karnataka going slow phase kadina kathegalu article indicate human animal conflict fact kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಆನೆಗಳ ಸಹಜ ಸಂಚಾರಕ್ಕೆ, ಉಳಿವಿಗೆ ಬೇಡವೇ ಪ್ರತ್ಯೇಕ ಹೆದ್ದಾರಿ? ಆಮೆ ನಡಿಗೆಯಲ್ಲಿದೆ ಕರ್ನಾಟಕದ ಎಲಿಫೆಂಟ್‌ ಕಾರಿಡಾರ್‌; ಕಾಡಿನ ಕಥೆಗಳು

ಆನೆಗಳ ಸಹಜ ಸಂಚಾರಕ್ಕೆ, ಉಳಿವಿಗೆ ಬೇಡವೇ ಪ್ರತ್ಯೇಕ ಹೆದ್ದಾರಿ? ಆಮೆ ನಡಿಗೆಯಲ್ಲಿದೆ ಕರ್ನಾಟಕದ ಎಲಿಫೆಂಟ್‌ ಕಾರಿಡಾರ್‌; ಕಾಡಿನ ಕಥೆಗಳು

Elephants Day 2024: ಕರ್ನಾಟಕದಲ್ಲಿ ಆನೆಗಳ ಸಂಚಾರಕ್ಕೆ ಪೂರಕವಾಗಿ ರೂಪಿಸಿದ ಆನೆ ಕಾರಿಡಾರ್‌ (Elephant Corridor) ಸ್ಥಿತಿಗತಿ ಹೇಗಿದೆ ಎನ್ನುವ ಬಗ್ಗೆ ಬೆಳಕು ಚೆಲ್ಲಲಿದೆ ಈ ವಾರದ ಕಾಡಿನ ಕಥೆಗಳು (Forest Tales) ಅಂಕಣ.

ಆನೆಗಳ ಸಹಜ ಸಂಚಾರಕ್ಕೆ, ಉಳಿವಿಗೆ ಬೇಡವೇ ಪ್ರತ್ಯೇಕ ಹೆದ್ದಾರಿ? ಆಮೆ ನಡಿಗೆಯಲ್ಲಿದೆ ಕರ್ನಾಟಕದ ಎಲಿಫೆಂಟ್‌ ಕಾರಿಡಾರ್‌; ಕಾಡಿನ ಕಥೆಗಳು
ಆನೆಗಳ ಸಹಜ ಸಂಚಾರಕ್ಕೆ, ಉಳಿವಿಗೆ ಬೇಡವೇ ಪ್ರತ್ಯೇಕ ಹೆದ್ದಾರಿ? ಆಮೆ ನಡಿಗೆಯಲ್ಲಿದೆ ಕರ್ನಾಟಕದ ಎಲಿಫೆಂಟ್‌ ಕಾರಿಡಾರ್‌; ಕಾಡಿನ ಕಥೆಗಳು (pixabay)

ಅಣ್ಣಾವ್ರು ಡಾ ರಾಜ್‌ಕುಮಾರ್ ಅರಣ್ಯಾಧಿಕಾರಿಯಾಗಿ ಅಭಿನಯಿಸಿದ್ದ ‘ಗಂಧದಗುಡಿ’ (1972) ನೋಡದ ಕನ್ನಡಿಗರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆ ಸಿನಿಮಾದಲ್ಲಿ ಬರುವ ಹಾಡಿನಲ್ಲಿ 'ಚಿಮ್ಮುತ ಓಡಿವೆ ಜಿಂಕೆಗಳು, ಕುಣಿದಾಡುತ ನಲಿದಿವೆ ನವಿಲುಗಳು .. ಇದು ವನ್ಯಮೃಗಗಳ ಲೋಕವೋ, ಈ ಭೂಮಿಗೆ ಇಳಿದ ನಾಕವೋ' ಎಂದು ಆನೆಯ ಮೇಲೆ ಕುಳಿತು ‘ಅಣ್ಣಾವ್ರು’ ಹಾಡುವಾಗ ಕನ್ನಡಿಗರಿಗೆ ತಮ್ಮ ಅರಣ್ಯ ಸಂಪತ್ತಿನ ಬಗ್ಗೆ ಹೆಮ್ಮೆ ಎನಿಸುತ್ತದೆ. ಸಲಗದ ಮೇಲೆ ಕುಳಿತು ಕರುನಾಡಿನ ವನ್ಯಲೋಕವನ್ನು ರಾಜಣ್ಣ ಹೀಗೆ ಬಣ್ಣಿಸುತ್ತಿದ್ದರೆ ಎಂಥವರ ಕಿವಿಗೂ ಆನಂದ. ಕಣ್ಣ ಮುಂದೆಯೇ ಅರಣ್ಯದ ವೈವಿಧ್ಯ ಹಾದು ಹೋದಂಥ ಅನುಭವ. ಈ ಹಾಡನ್ನು ಈಗಿನ ಸನ್ನಿವೇಶಕ್ಕೂ ಅನ್ವಯಿಸುವ ಆಲೋಚನೆ ಮಾಡೋಣವೇ? ಹೇಗೂ ಇಂದು (ಆಗಸ್ಟ್ 12) ವಿಶ್ವ ಆನೆಗಳ ದಿನ. ಬನ್ನಿ ಕರ್ನಾಟಕದಲ್ಲಿರುವ ಆನೆಗಳ ಕಾರಿಡಾರ್‌ ಬಗ್ಗೆ ತುಸು ಚಿಂತನೆ ನಡೆಸೋಣ.

ಆನೆಗಳು ಒಂದು ಬಾರಿ ಯಾವುದೇ ದಾರಿಯಲ್ಲಿ ಕ್ರಮಿಸಿದರೆ ಅವು ಎಂದಿಗೂ ಮರೆಯಲಾರವು. 20 ಇಲ್ಲವೇ 30 ವರ್ಷದ ನಂತರವೂ ಅದೇ ಮಾರ್ಗದಲ್ಲಿ ಹೆಜ್ಜೆ ಹಾಕಬಲ್ಲವು. 100ರಿಂದ 200 ಕಿಮೀ ಆನೆಗಳಿಗೆ ಸಂಚಾರ ಕಷ್ಟವೇ ಅಲ್ಲ. ಅದಕ್ಕಿಂತ ಹೆಚ್ಚಿನ ಅಂತರವನ್ನೂ ಅವು ಪದೇಪದೇ ಕ್ರಮಿಸಬಲ್ಲವು. ಅವುಗಳ ನೆನಪಿನ ಶಕ್ತಿ ಅಗಾಧ. ಹೀಗೆ ಒಮ್ಮೆ ಹೋಗಿ ಬಂದ ಮಾರ್ಗದಲ್ಲಿ ಮತ್ತೊಮ್ಮೆ ಸಂಚರಿಸುವುದು ಎಂದರೆ ಆನೆಗಳಿಗೂ ಎಲ್ಲಿಲ್ಲದ ಖುಷಿ. ಇಂತಹ ಹಲವು ಉದಾಹರಣೆಗಳೂ ಇವೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ಬಂದ ಆನೆಗಳ ಕಥೆಗಳು ಆಸಕ್ತಿದಾಯಕವೇ. ಏಕೆಂದರೆ ಆನೆಗಳು ಮನುಷ್ಯರಂತೆಯೇ ಸಂಘಜೀವಿಗಳು. ಗುಂಪಾಗಿ ಕುಟುಂಬದೊಂದಿಗೆ ಇರಲು ಬಯಸುತ್ತವೆ. ಅಷ್ಟೇ ಅಲ್ಲ, ನಿರಂತರವಾಗಿ ಸುತ್ತು ಹಾಕುತ್ತವೆ. 

ಆನೆಗಳು ಆಹಾರ ಪ್ರಿಯ ಪ್ರಾಣಿಗಳು. ದಿನದ ಬಹುತೇಕ ಅವಧಿ ಆನೆಗಳು ಸುತ್ತುತ್ತಲೇ ಇರುವ ಜತೆಗೆ ತಿನ್ನುತ್ತಲೇ ಇರುತ್ತವೆ. ತಮಗೆ ಇಷ್ಟವಾದ ಆಹಾರ ಎಷ್ಟೇ ದೂರದಲ್ಲಿದ್ದರೂ ಹುಡುಕಿಕೊಂಡು ಹೋಗಿ ತಿಂದು ಬರಲೇಬೇಕು ಎನ್ನುವ ಜಾಯಮಾನ ಆನೆಗಳದ್ದು. ಅದರಲ್ಲೂ ಒಮ್ಮೆ ಅಂತಹ ಆಹಾರ ಈ ಭಾಗದಲ್ಲಿ ಸಿಗುತ್ತದೆ ಎಂದು ಗೊತ್ತಾದರೆ ಹೋಗದೇ ಇರವು. ಅಷ್ಟು ನೆನಪಿನ ಶಕ್ತಿ ಈ ಆನೆಗಳದ್ದು. ಹೀಗೆ ಬದುಕುವ ಆನೆಗಳಿಗೆ ದಾರಿಗಳು ಬೇಡವೇ. ಅದರಲ್ಲೂ ಹೆದ್ದಾರಿಗಳು ಇರಬೇಡವೇ! ಇಂತಹ ಮಾರ್ಗಗಳನ್ನೇ ಕಾರಿಡಾರ್‌ ಎಂದು ಕರೆಯಲಾಯಿತು. ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ನೇಹಿ ಆವಾಸಸ್ಥಾನಗಳ ನಡುವೆ ಆನೆಗಳ ಚಲನೆಯನ್ನು ಶಕ್ತಗೊಳಿಸುವ ಭೂಪ್ರದೇಶ ಎಂದರೆ ಅದು ಕಾರಿಡಾರ್‌ ಎಂದು ಹೇಳಲಾಯಿತು.

ಆನೆಗಳಿಗೆ ಕಾರಿಡಾರ್‌ ಏಕೆ ಬೇಕು?

ಭಾರತದಲ್ಲಿ ಆನೆಗಳಿಗೂ ಕಾರಿಡಾರ್‌ಗಳು ಬೇಕು ಎನ್ನುವ ಪರಿಕಲ್ಪನೆ ಹಳೆಯದು. ಸುಮಾರು 20 ವರ್ಷಗಳಿಂದಲೂ ಈ ಧ್ವನಿ ಕೇಳಿಬಂದಿದೆ. ಕಳೆದ ದಶಕದಲ್ಲಂತೂ ಭಾರತದಾದ್ಯಂತ ಆನೆ ಕಾರಿಡಾರ್‌ಗಳ ಕುರಿತು ಭಾರೀ ಚರ್ಚೆಗಳು ಆದವು. ಅವು ಬರೀ ಚರ್ಚೆಗೆ ಸೀಮಿತವಾಗಲಿಲ್ಲ. ಕ್ಷೇತ್ರದ ಹಂತಕ್ಕೂ ಇದು ಇಳಿಯಿತು. ಅಂದರೆ ಭಾರತದಲ್ಲಿ ಎಲ್ಲೆಲ್ಲಿ ಆನೆಗಳ ಆವಾಸ ಸ್ಥಾನವಿದೆಯೋ, ಆನೆಗಳ ಸಂಚಾರ ಇರುವ ಅರಣ್ಯ ಪ್ರದೇಶಗಳನ್ನಾಧರಿಸಿ ಆನೆ ಕಾರಿಡಾರ್‌ ಗುರುತಿಸುವ ಕೆಲಸವೂ ಶುರುವಾಯಿತು. ಮೊದಲು ಆನೆ ಕಾರಿಡಾರ್‌ಗಳು ಯಾವುವು? ಆಯಾ ಅರಣ್ಯ ಪ್ರದೇಶದ ಕಾರಿಡಾರ್‌ಗಳು, ಅಂತರ್‌ ಜಿಲ್ಲಾ ಹಾಗೂ ಅಂತರ್‌ ರಾಜ್ಯದ ಕಾರಿಡಾರ್‌ಗಳನ್ನೂ ಗುರುತಿಸಲಾಯಿತು. ಆನೆಗಳು ಬರೀ ರಾಜ್ಯ ದಾಟಿ ಮಾತ್ರವಲ್ಲ ದೇಶವನ್ನೂ ದಾಟಿ ಬರುವ ಸಾಮರ್ಥ್ಯ ಹೊಂದಿವೆ ಎನ್ನುವ ಸಂಶೋಧನೆ ಆಧರಿಸಿ ಅಂತರರಾಷ್ಟ್ರೀಯ ಕಾರಿಡಾರ್‌ಗಳನ್ನು ಗುರುತಿಸಲಾಯಿತು.

ಭಾರತದಲ್ಲಿ ಎಷ್ಟು ಆನೆ ಕಾರಿಡಾರ್‌ಗಳಿವೆ?

2010ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ‘ಆನೆ ಕಾರ್ಯಪಡೆ ವರದಿ’ಯಲ್ಲಿ (ಗಜ ವರದಿ) 88 ಕಾರಿಡಾರ್‌ಗಳನ್ನು ಪಟ್ಟಿ ಮಾಡಲಾಗಿತ್ತು. ಆನಂತರ ಇದು 101 ಆನೆ ಕಾರಿಡಾರ್​ಗಳಿಗೆ ಏರಿಕೆಯಾಯಿತು. ಕಳೆದ ವರ್ಷ ಬಿಡುಗಡೆಯಾದ ವರದಿಯಂತೆ ಭಾರತದಲ್ಲಿರುವ ಆನೆ ಕಾರಿಡಾರ್‌ಗಳ ಸಂಖ್ಯೆ 150. ಇವುಗಳಲ್ಲಿ 59 ಕಾರಿಡಾರ್‌ಗಳಲ್ಲಿ ಆನೆಗಳ ಚಲನವಲನ ಹೆಚ್ಚಿರುವುದು ಕಂಡುಬಂದಿದೆ. 29 ಕಾರಿಡಾರ್‌ಗಳಲ್ಲಿ ಯಥಾಸ್ಥಿತಿ ಕಂಡುಬಂದಿದ್ದರೆ, 29 ಕಾರಿಡಾರ್‌ಗಳಲ್ಲಿ ಕಡಿಮೆಯಾಗಿದೆ. 15 ಕಾರಿಡಾರ್‌ಗಳ ಪುನರುಜ್ಜೀವನ ಅಗತ್ಯವಿದ್ದರೆ, 18 ಕಾರಿಡಾರ್‌ಗಳ ಕುರಿತ ಮಾಹಿತಿ ಲಭ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಅದರಲ್ಲೂ ಆನೆ ಹಾಗೂ ಮಾನವ ಸಂಘರ್ಷ ಅತಿಯಾಗಿ ಆನೆಗಳ ಜತೆಗೆ ಮಾನವ ಸಾವಿನ ಪ್ರಮಾಣವೂ ಅಧಿಕವಾಗಿರುವುದು. ಆಸ್ತಿ ಪಾಸ್ತಿ ನಷ್ಟವಾಗಿ ಅರಣ್ಯದ ಅಸ್ತಿತ್ವಕ್ಕೆ ಧಕ್ಕೆ ಬರುವಂತಹ ಸನ್ನಿವೇಶ ಎದುರಾಗಿದ್ದರಿಂದ ಭಾರತ ಸರ್ಕಾರವು ಒಂದೇ ವರ್ಷದಲ್ಲಿ ಹೊಸದಾಗಿ 62 ಹೊಸ ಆನೆ ಕಾರಿಡಾರ್‌ಗಳನ್ನು ಗುರುತಿಸಿದೆ , ಇದು ವನ್ಯಜೀವಿ ಸಂರಕ್ಷಣೆಗೆ ರಾಷ್ಟ್ರದ ಬದ್ಧತೆಯಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಅರಣ್ಯ ತಜ್ಞರು ಹೇಳುತ್ತಾರೆ.

ಯಾವ ರಾಜ್ಯದಲ್ಲಿ ಹೆಚ್ಚು ಆನೆ ಕಾರಿಡಾರ್‌ ಗುರುತಿಸಲಾಗಿದೆ?

ಆನೆ ಕಾರ್ಯಪಡೆ ನೀಡಿರುವ ವರದಿಯ ಪ್ರಕಾರ, ಪಶ್ಚಿಮ ಬಂಗಾಳವು 26 ಕಾರಿಡಾರ್‌ಗಳೊಂದಿಗೆ ಮುಂಚೂಣಿಯಲ್ಲಿದ್ದು, ಒಟ್ಟು ಶೇ 17 ರಷ್ಟಿದೆ. ಪೂರ್ವ ಮಧ್ಯ ಭಾರತವು ಶೇ 35 (52 ಕಾರಿಡಾರ್‌ಗಳು) ಕೊಡುಗೆ ನೀಡಿದರೆ, ಈಶಾನ್ಯ ಪ್ರದೇಶವು ಶೇ 32 (48 ಕಾರಿಡಾರ್‌ಗಳು) ಹೊಂದಿದೆ. ದಕ್ಷಿಣ ಭಾರತವು ಶೇ 21 (32 ಕಾರಿಡಾರ್‌ಗಳು), ಉತ್ತರ ಭಾರತವು ಶೇ 12 (18 ಕಾರಿಡಾರ್‌ಗಳು) ದೊಂದಿಗೆ ಅತ್ಯಂತ ಕಡಿಮೆ ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ 11 ಕಾರಿಡಾರ್​ಗಳನ್ನು ಗುರುತಿಸಲಾಗಿದೆ. ಬಹುತೇಕ ದಕ್ಷಿಣ ಭಾರತದಲ್ಲಿಯೇ ಇವೆ. ಬಿಆರ್‌ಟಿ, ಬಂಡೀಪುರ, ನಾಗರಹೊಳೆ, ಭದ್ರಾ ರಾಷ್ಟ್ರಿಯ ಉದ್ಯಾನವನ ಮಾತ್ರವಲ್ಲದೇ ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡದವರೆಗೂ ಹಬ್ಬಿವೆ. ಕರಡಿಕಲ್-ಮಾದೇಶ್ವರ (ರಾಗಿಹಳ್ಳಿ ಕಾರಿಡಾರ್), ತಾಳಿ-ಬಿಳಿಕ್ಕನ್, ಬಿಳಿಕಲ್-ಜವಳಗಿರಿ, ಎಡಯಹಳ್ಳಿ- ಗುತ್ತಿಯಾಲತ್ತೂರು, ಎಡೆಯಹಳ್ಳಿ-ದೊಡ್ಡಸಮಳ್ಳಿ, ಚಾಮರಾಜನಗರ-ತಲಮಲೈ ಪುಣಜೂರು, ಚಾಮ ರಾಜನಗರ-ತಲಮಲೈ ಕಾರಿಡಾರ್ ಪ್ರಮುಖವಾದವು.

ಕರ್ನಾಟಕವು ಕೇರಳ ಹಾಗೂ ತಮಿಳುನಾಡಿನಲ್ಲೂ ಹಲವಾರು ಆನೆ ಕಾರಿಡಾರ್‌ಗಳೊಂದಿಗೆ ಸಂಪರ್ಕ ಹೊಂದಿದೆ. ಉತ್ತರದಲ್ಲಿ ಮಹಾರಾಷ್ಟ್ರ, ತೆಲಂಗಾಣದೊಂದಿಗೂ, ಆಂಧ್ರಪ್ರದೇಶದೊಂದಿಗೂ ಕೆಲವು ಭಾಗದಲ್ಲಿ ಸಂಪರ್ಕ ಹೊಂದಿದೆ.

ಕರ್ನಾಟಕದ ಆನೆ ಕಾರಿಡಾರ್‌ ಸ್ಥಿತಿಗತಿ ಹೇಗಿದೆ?

ಕರ್ನಾಟಕದ ಈ ಕಾರಿಡಾರ್‌ಗಳ ಸ್ಥಿತಿಯನ್ನು ನೋಡಿದರೆ ಅಬ್ಬಾ ಎನ್ನಿಸದೇ ಇರದು. ಏಕೆಂದರೆ ಕರ್ನಾಟಕದಲ್ಲಿ ಕಳೆದ ದಶಕವೇ ಇಂತಹ ಕಾರಿಡಾರ್‌ಗಳ ಪುನಶ್ಚೇತನ ಯೋಜನೆಗೆ ಕೈಹಾಕಲಾಗಿತ್ತು. ಆಗ ಅದೆಷ್ಟೋ ಕಾರಿಡಾ್‌ರ್‌ಗಳ ಸುತ್ತಮುತ್ತ ಅರಣ್ಯ ಪ್ರದೇಶದ ಒತ್ತುವರಿ ಕುರುಹುಗಳೂ ಸಿಕ್ಕಿದ್ದವು. ಹಲವು ಕಾರಿಡಾರ್‌ಗಳಲ್ಲಿ ಹೋಂಸ್ಟೇ, ಗಣ್ಯರು ವಾರಾಂತ್ಯ ತಂಗುವ ಗೃಹಗಳು ಇರುವುದು ಕಂಡು ಬಂದಿದೆ. ಬಹಳಷ್ಟು ಕಡೆಗಳಲ್ಲಿ ರೈತರ ಜಮೀನುಗಳೂ ಇದ್ದವು. ಆನೆಗಳು ಸಂಚರಿಸುವ ಮಾರ್ಗ ಬಹುತೇಕ ಕಡೆಗಳಲ್ಲಿ ಹೀಗೆ ಅಡ್ಡಿ ಆತಂಕಗಳಿಂದ ತುಂಬಿ ಹೋಗಿತ್ತು. ಈ ಕಾರಣದಿಂದಲೇ ಆನೆಗಳು ಅಡ್ಡಿ ಆತಂಕಗಳನ್ನೂ ದಾಟಿಕೊಂಡು ಬರುವಾಗ ಊರಿಗೆ ನುಗ್ಗುವುದು, ಜಮೀನುಗಳಿಗೆ ಹಾಯ್ದು ಬೆಳೆ ನಾಶ ಮಾಡುವುದು ಬಯಲಾಗಿತ್ತು. ಆನೆಗಳಿಗೆ ತಾವು ನಡೆಯುವ ಹಾದಿ ಹಾಳಾದರೆ ಪಕ್ಕದಲ್ಲಿಯಾದರೂ ಮುಂದೆ ಹೋಗಬೇಕು ಎನ್ನುವ ಉತ್ಕಟ ಹಂಬಲ. ಒಂದು ಕಡೆ ಅವುಗಳಿಗೆ ಆಹಾರದ ಅನಿವಾರ್ಯತೆ. ಮತ್ತೊಂದು ಕಡೆ ನಿರಂತರವಾಗಿ ಸಂಚರಿಸಬೇಕಾದ ಅಗತ್ಯತೆ.

ಆದರೂ ಕರ್ನಾಟಕ ಅರಣ್ಯ ಇಲಾಖೆ ಮೂಲಕ ಆನೆ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳನ್ನು ಖರಿದೀಸಿ ಆನೆ ಕಾರಿಡಾರ್‌ ಆಗಿ ಪರಿವರ್ತಿಸುವ ಕೆಲಸವೂ ಆಯಿತು. ಇದನ್ನು ಕಾಂಪಾ (CAMPA) ಅಂದರೆ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (Compensatory Afforestation Fund Management and Planning Authority -CAMPA) ಅಡಿ ತರಲಾಯಿತು. ಇದರಡಿ ಆಯಾ ರಾಜ್ಯಗಳಲ್ಲಿ ಸಾಕಷ್ಟು ಅನುದಾನವೂ ಇದೆ. ಕೇಂದ್ರ ಸರ್ಕಾರವೂ ಕಾಂಪಾ ಅಡಿಯೇ ಅರಣ್ಯ ವಿಸ್ತರಣೆ ಯೋಜನೆಗಳಿಗೆ ಅನುದಾನ ನೀಡುತ್ತದೆ. ಅಲ್ಲದೇ ಸುಪ್ರೀಂಕೋರ್ಟ್‌ ಕೂಡ ಕಾಂಪಾ ಅನುದಾನವನ್ನು ಬಳಸಿಕೊಂಡು ಅರಣ್ಯ ಚಟುವಟಿಕೆ ನಡೆಸಿ ಎನ್ನುವ ನಿರ್ದೇಶನವನ್ನು ನೀಡಿದೆ. ಇದನ್ನಾಧರಿಸಿಯೇ ಕಾಂಪಾ ಅಡಿ ಆನೆಗಳ ಕಾರಿಡಾರ್‌ ಅಕ್ಕಪಕ್ಕದ ಜಮೀನು ಖರೀದಿಸುವ ಪ್ರಯತ್ನ ಮಾಡಲಾಗಿದೆ. ಇದು ಹಲವಾರು ಅಡ್ಡಿಗಳಿಂದ ಪೂರ್ಣವಾಗಲೇ ಇಲ್ಲ. ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ.

ಭಾರತದಲ್ಲಿ ಅತಿಹೆಚ್ಚು ಆನೆಗಳು ಇರುವ ರಾಜ್ಯ ಕರ್ನಾಟಕ

ಕರ್ನಾಟಕದಲ್ಲಿ ಆನೆ ಕಾರಿಡಾರ್‌ ಯೋಜನೆಗೆ ಆರಂಭದಲ್ಲಿ ವೇಗವೇನೋ ಸಿಕ್ಕಿತು. ಆನಂತರ ಅದು ಅಲ್ಲಿಗೆ ನಿಂತು ಹೋಗಿದೆ. ಭಾರತದಲ್ಲಿಯೇ ಅತಿ ಹೆಚ್ಚು ಆನೆಗಳು ಇರುವುದು ಕರ್ನಾಟಕದಲ್ಲಿ ಎನ್ನುವ ಹಿರಿಮೆ ನಮ್ಮದು. ಅವುಗಳ ಚಲನವಲನ ಸುಸೂತ್ರವಾಗಿ ನಡೆದು ಸಂಘರ್ಷದ ಪ್ರಮಾಣವೂ ತಗ್ಗಲಿ ಎನ್ನುವುದು ಕಾರಿಡಾರ್‌ ಹಿಂದಿದ್ದ ಆಶಯ. ‘ಕರ್ನಾಟಕದ ಅರಣ್ಯ ಇಲಾಖೆಯು ಭಾರತದ ಆನೆ ಕಾರಿಡಾರ್‌ಗಳ ಕುರಿತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿ ಆಧರಿಸಿ ಕೆಲಸ ಮಾಡಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯವಿದೆ’ ಎನ್ನುವುದು ಮೈಸೂರಿನ ವಾಯ್ಸ್‌ ಫಾರ್‌ ವೈಲ್ಡ್‌ಲೈಫ್‌ ಸಂಸ್ಥೆಯ ಕೆ.ಎಸ್.ಸುಧೀರ್‌ ಅಭಿಪ್ರಾಯ.

ಕರ್ನಾಟಕದಲ್ಲಿ ಅರಣ್ಯ ಯೋಜನೆ, ವನ್ಯಜೀವಿ, ಆನೆ, ಕಾಂಪಾ ಸಹಿತ ಹಲವಾರು ಯೋಜನೆಗಳಿಗೆ ಪ್ರತ್ಯೇಕ ಎಪಿಸಿಸಿಎಫ್‌ ಹುದ್ದೆಯ ಹಿರಿಯ ಅರಣ್ಯ ಅಧಿಕಾರಿಗಳು ಇದ್ದಾರೆ. ಅವರ ಸಮನ್ವಯದಿಂದ ಆನೆ ಕಾರಿಡಾರ್‌ ಸಂರಕ್ಷಣೆ ಕೆಲಸ ಚುರುಕುಗೊಳ್ಳಬೇಕಿತ್ತು. ಅದು ನಿಧಾನವಾಗಿಯೇ ಹೋಗಿದೆ. ಈಗ ನಿಂತೇ ಹೋಗಿದೆ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಆನೆ ಕಾರಿಡಾರ್‌ ಯೋಜನೆ ಕರ್ನಾಟಕದಲ್ಲಿ ಕುಂಟುತ್ತಾ ಸಾಗಿದೆ. ಆನೆ ಯೋಜನೆಗೆ ಕರ್ನಾಟಕದಲ್ಲಿ ಪ್ರತ್ಯೇಕ ಕಚೇರಿ, ಅಧಿಕಾರಿಯೂ ಇದ್ರೆದಾ. ನಿಶ್ಯಕ್ತಗೊಂಡಿರುವ ಆನೆ ಯೋಜನೆಗೆ ಬಲ ತುಂಬಿದರೆ ಆನೆ ಕಾರಿಡಾರ್‌ ಸರಿದಾರಿಗೆ ಬರಲಿವೆ.

-ಕುಂದೂರು ಉಮೇಶಭಟ್ಟ, ಮೈಸೂರು