logo
ಕನ್ನಡ ಸುದ್ದಿ  /  ಕರ್ನಾಟಕ  /  ಆನ್​ಲೈನ್​​ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್, ಟಿಕೆಟ್; ಈ ದಿನದಿಂದ ಟಿಕೆಟ್ ಖರೀದಿಗೆ ಅವಕಾಶ, ದರ ಎಷ್ಟು?

ಆನ್​ಲೈನ್​​ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್, ಟಿಕೆಟ್; ಈ ದಿನದಿಂದ ಟಿಕೆಟ್ ಖರೀದಿಗೆ ಅವಕಾಶ, ದರ ಎಷ್ಟು?

Prasanna Kumar P N HT Kannada

Sep 23, 2024 07:54 PM IST

google News

ಆನ್​ಲೈನ್​​ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್

    • Mysore Dasara 2024: ಆನ್​ಲೈನ್ ಮುಖಾಂತರ ಮೈಸೂರು ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಸಿಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5 ದಿನಗಳ ಕಾಲ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೂ ಮಾರಾಟಕ್ಕೆ ಅವಕಾಶ ಇರಲಿದೆ.
ಆನ್​ಲೈನ್​​ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್
ಆನ್​ಲೈನ್​​ ಮೂಲಕ ಪಡೆಯಿರಿ ದಸರಾ ಗೋಲ್ಡ್ ಕಾರ್ಡ್

ಮೈಸೂರು: ನಾಡಹಬ್ಬ ಮೈಸೂರು ದಸರಾಗೆ (Mysore Dasara 2024) ದಿನಗಣನೆ ಶುರುವಾಗಿದೆ. ವಿಶ್ವವಿಖ್ಯಾತ ಉತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪದರ್ಶನದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೈಸೂರಿನ‌ ವಿಜಯನಗರದಲ್ಲಿ ಇರುವ ಚೆಸ್ಕಾಂನ ಪ್ರಧಾನ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್​ಸಿ ಮಹದೇವಪ್ಪ (HC Mahadevappa) ಅವರು ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ಸಚಿವರು, ಈ ಬಾರಿ 21 ದಿನಗಳ ಕಾಲ ದಸರಾ ವಿದ್ಯುತ್ ದೀಪಾಲಂಕಾರ ಆಯೋಜನೆ ಮಾಡಲಾಗಿದೆ. ದಸರಾ ಮುಗಿದ ಬಳಿಕವೂ ಹತ್ತು ದಿನ ವಿದ್ಯುತ್ ದೀಪಾಲಂಕಾರ ವಿಸ್ತರಿಸಿದ್ದೇವೆ. ಮೈಸೂರು ನಗರದ ಸುತ್ತಮುತ್ತ 130 ಕಿಮೀ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಜಂಬೂಸವಾರಿ ಮೆರವಣಿಗೆಯಲ್ಲಿ ವಿದ್ಯುತ್ ರಥ ಸ್ಥಬ್ದಚಿತ್ರ ಸಾಗಲಿದೆ. ಅಕ್ಟೊಬರ್ 6, 7, 11, 12 ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 4 ದಿನಗಳ ಕಾಲ ಡ್ರೋನ್ ಶೋ ಆಯೋಜಿಸಿದ್ದೇವೆ. ಮೈಸೂರಿನ ಹಲವು ವೃತ್ತಗಳಲ್ಲಿ ಪ್ರಜಾಪ್ರಭುತ್ವ ಸಾಗಿ ಬಂದ ಹಾದಿ, ತಾಯಿ ಭುವನೇಶ್ವರಿ, ಸೋಮನಾಥೇಶ್ವರ ದೇವಾಲಯ, ಸಂವಿಧಾನ ಪ್ರಸ್ತಾವನೆ, ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಣಿ ಕೆಂಪ ನಂಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರತಿಕೃತಿಗಳಿರಲಿವೆ. ಈ ಬಾರಿಯ ದಸರಾಗೆ ವಿದ್ಯುತ್ ದೀಪಾಲಂಕಾರ ಮೆರುಗು ನೀಡಲಿದೆ ಎಂದು ಪೋಸ್ಟರ್ ಬಿಡುಗಡೆ ಬಳಿಕ ಮಹಾದೇವಪ್ಪ ಮಾಹಿತಿ ನೀಡಿದರು.

ದಸರಾ ಗೋಲ್ಡ್ ಕಾರ್ಡ್ ಮಾರಾಟಕ್ಕೆ ವ್ಯವಸ್ಥೆ

ಆನ್​ಲೈನ್ ಮುಖಾಂತರ ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಸಿಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5 ದಿನಗಳ ಕಾಲ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೂ ಮಾರಾಟಕ್ಕೆ ಅವಕಾಶ ಇರಲಿದೆ. ಪ್ರತಿನಿತ್ಯ 1000 ದಿಂದ 1500 ಗೋಲ್ಡ್ ಕಾರ್ಡ್​ಗಳನ್ನು ಮಾರಾಟ ಮಾಡಲಾಗುತ್ತದೆ. ಒಂದು ದಸರಾ ಗೋಲ್ಡ್ ಕಾರ್ಡ್​ಗೆ 6500 ರೂಪಾಯಿ ನಿಗದಿಯಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್​ ಪಡೆದವರು ಜಂಬೂಸವಾರಿ ಮೆರವಣಿಗೆ, ಪಂಜಿ‌ನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶ ಇರಲಿದೆ. ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಟಿಕೆಟ್ ದರ 3500 ರೂಪಾಯಿ, ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ದರ 1000 ರೂಪಾಯಿ ನಿಗದಿ ಮಾಡಲಾಗಿದೆ ಎಂದು ಮಹಾದೇವಪ್ಪ ತಿಳಿಸಿದರು.

8 ದಿನಗಳ ಯುವ ಸಂಭ್ರಮ, ರುಕ್ಮಿಣಿ ವಸಂತ್-ಶ್ರೀಮುರುಳಿ ಭಾಗಿ

ಈ ಬಾರಿ ಎಂಟು ದಿನಗಳ ಕಾಲ ಯುವ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಾನಸಗಂಗೋತ್ರಿಯ ಬಯಲು ರಂಗಂಮದಿರದಲ್ಲಿ ಯುವ ಸಂಭ್ರಮ ಅನಾವರಣ ಮಾಡಲಾಗಿದೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ ಯುವ ಸಂಭ್ರಮ ನಡೆಯಲಿದೆ. ಸೆಪ್ಟೆಂಬರ್ 24 ರಂದು ಸ್ಯಾಂಡಲ್​ವುಡ್​ನ ಖ್ಯಾತ ನಟ- ನಟಿ ಶ್ರೀಮುರುಳಿ ಮತ್ತು ರುಕ್ಮಿಣಿ ವಸಂತ್ ಅವರು ಯುವ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಯುವ ಸಂಭ್ರಮದಲ್ಲಿ ಭಾಗಿಯಾಗಲು 470 ಕಾಲೇಜುಗಳ ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ. ಈ ಮೊದಲು ಏಳು ದಿನಗಳ ಕಾಲ ಯುವ ಸಂಭ್ರಮ ಆಯೋಜಿಸಲು ಚಿಂತಿಸಲಾಗಿತ್ತು. ಆದರೆ 7 ದಿನಗಳ ಕಾಲ ನಡೆದರೆ 350 ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗಲಿದೆ. ಹಾಗಾಗಿ ಎಲ್ಲಾ ಕಾಲೇಜುಗಳಿಗೂ ಅವಕಾಶ ಸಿಗಲೆಂದು ಒಂದು ದಿನ‌ ವಿಸ್ತರಿಸಿ 8 ದಿನಗಳ ಯುವ ಸಂಭ್ರಮ ಆಯೋಜನೆ ಮಾಡಲಾಗಿದೆ ಎಂದು ಸಚಿವ ಮಹಾದೇವಪ್ಪ ಮಾಹಿತಿ ನೀಡಿದರು. ಚೆಸ್ಕಾಂನ ಅಧ್ಯಕ್ಷ, ಶಾಸಕ ರಮೇಶ್ ಬಂಡೀಸಿದ್ದೇಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಚೆಸ್ಕಾಂ ಎಂಡಿ ಶೀಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ