ಮೈಸೂರು ದಸರಾ ಆನೆಗಳೊಂದಿಗೆ ಫೋಟೋ ಶೂಟ್ಸ್, ರೀಲ್ಸ್‌ಗೆ ಬ್ರೇಕ್, ಧನಂಜಯ್- ಕಂಜನ್ ಆನೆ ಗದ್ದಲ ಬಳಿಕ ಅರಣ್ಯ ಸಚಿವ ಕಟ್ಟಾಜ್ಞೆ
ಮೈಸೂರು ಅರಮನೆ ಆವರಣದಲ್ಲಿ ಧನಂಜಯ ಹಾಗೂ ಕಂಜನ್ ಆನೆಗಳ ಗದ್ದಲದ ನಂತರ ದಸರಾ ಆನೆಗಳೊಂದಿಗೆ ಫೋಟೋ ಶೂಟ್ ಹಾಗೂ ವಿಡಿಯೋ ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಮೂರು ದಿನದ ಹಿಂದೆ ಮೈಸೂರು ದಸರಾ ಆನೆಗಳಾದ ಧನಂಜಯ ಹಾಗೂ ಕಂಜನ್ ಆನೆಯ ಕಾದಾಟದ ನಂತರ ಎಚ್ಚೆತ್ತುಕೊಂಡಿರುವ ಕರ್ನಾಟಕ ಅರಣ್ಯ ಇಲಾಖೆ ಆನೆಗಳ ಬಳಿ ಫೋಟೋ ಶೂಟ್, ರೀಲ್ಸ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾವುದೇ ಕಾರಣಕ್ಕೆ ಸಾರ್ವಜನಿಕರು ಆನೆಗಳ ಬಳಿ ದಂತ ಹಿಡಿದುಕೊಂಡು ಫೋಟೋ ಶೂಟ್ ಮಾಡಿಸುವುದು, ವಿಡಿಯೋ ಮಾಡಿಕೊಂಡು ರೀಲ್ಸ್‌ಗೆ ಮುಂದಾಗುವಂತ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು. ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿ ಅನಾಹುತವೂ ಆಗಬಹುದು ಎನ್ನುವುದು ಅರಣ್ಯ ಇಲಾಖೆ ವಹಿಸಿರುವ ಎಚ್ಚರ.
ಏನು ಸಚಿವರ ಸೂಚನೆ
ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದನಾಡಿಗೆ ಬಂದು ಪ್ರಸ್ತುತ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಸಾಕಾನೆಗಳ ಬಳಿ ಫೋಟೋ ಶೂಟ್ ಹಾಗೂ ರೀಲ್ಸ್ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳೇ ಅವಕಾಶ ನೀಡಿದ್ದಾರೆ.
ಇದರಿಂದ ಆನೆಗಳು ವಿಚರಿತವಾಗಿ ಅನುಚಿತವಾಗಿ ವರ್ತಿಸುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಕಂಜನ್ ಹಾಗೂ ಧನಂಜನ್ ಎನ್ನುವ ಆನೆಗಳ ನಡುವೆ ಕಾದಾಟ ಆಗಲು ಇದೂ ಒಂದು ಕಾರಣವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪಿಸಿಸಿಎಫ್ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಲವರು ಆನೆಗಳ ದಂತಗಳನ್ನು ಹಿಡಿದುಕೊಂಡು, ಮತ್ತ ಕೆಲವರು ಸೊಂಡಿಲು ತಬ್ಬಿಕೊಂಡು ಫೋಟೋ ತೆಗೆಸಿರುವ ಚಿತ್ರಗಳೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಎಚ್ಚರಿಸಿದ್ದಾರೆ.
ಶಿಬಿರದಿಂದ ಆನೆಗಳನ್ನು ತಂದ ನಂತರ ಸುರಕ್ಷಿತವಾಗಿ ಅವುಗಳನ್ನು ಶಿಬಿರಕ್ಕೆ ಬಿಡುವವರೆಗೂ ಯಾವುದೇ ಅನಾಹುತ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೀಲ್ಸ್‌ಮಾಡಲು ಅವಕಾಶ ನೀಡಿ ನಿರ್ಲಕ್ಷ್ಯ ತೋರಿರುವ ಅಧಿಕಾರಿ ಹಾಗು ಸಿಬ್ಬಂದಿಗೆ ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಘಟನೆ ಸುತ್ತಮುತ್ತ
ಒಂದು ತಿಂಗಳ ಹಿಂದೆಯೇ ಮೊದಲನೇ ತಂಡ ಅರಮನೆ ಆವರಣಕ್ಕೆ ಆಗಮಿಸಿದ್ದರೆ, ಮೂರು ವಾರದ ಹಿಂದೆಯೇ ಎರಡನೇ ತಂಡವೂ ಆಗಮಿಸಿ ಒಟ್ಟು ಹದಿನಾಲ್ಕು ಆನೆಗಳು ಮೈಸೂರಿನಲ್ಲಿ ಬೀಡು ಬಿಟ್ಟಿವೆ. ಧನಂಜಯ ಎನ್ನುವ ಆನೆ ಮದವೇರಿದ್ದು. ಈ ವೇಳೆ ಊಟದ ಸಮಯದಲ್ಲಿ ಅಲ್ಲಿಗೆ ಹೋದ ಕಂಜನ್ ಎಂಬ ಆನೆ ಮೇಲೆ ದಾಳಿ ಮಾಡಿದೆ. ಈ ವೇಳೆ ಅಲ್ಲಿಂದ ಎರಡೂ ಆನೆಗಳು ಜಗಳಕ್ಕೆ ಬಿದ್ದು ಓಡುತ್ತಿರುವ ಚಿತ್ರ ಭಾರೀ ವೈರಲ್ ಆಗಿತ್ತು. ಅದರಲ್ಲೂ ದಸರಾ ವೇಳೆ ಆನೆಗಳ ನಡುವೆ ಹೀಗೆ ಕಾಳಗದ ವಾತಾವರಣ ಸೃಷ್ಟಿಯಾಗಿದ್ದು. ಆನೆ ಬೆಂಗಳೂರು- ಊಟಿ ರಸ್ತೆಗೂ ಬಂದಿದ್ದೂ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಈಗ ಹೇಗಿದೆ ಸ್ಥಿತಿ
ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳೊಂದಿಗೆ ಗಜ ಸೇವಕರು ಹಾಗೂ ಕುಟುಂಬದವರು ಇದ್ದಾರೆ.ಬೆಳಿಗ್ಗೆ ಹಾಗೂ ಸಂಜೆ ಆನೆಗಳ ತಾಲೀಮು ನಡೆಯುತ್ತದೆ. ಈ ವೇಳೆ ಮಾರ್ಗದಲ್ಲಿ ಹೋಗುವಾಗ ಗಜಪ್ರಿಯರು ಫೋಟೋ/ ವಿಡಿಯೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಅದನ್ನು ಬಿಟ್ಟರೆ ಸಾಮಾನ್ಯರನ್ನು ಅರಮನೆ ಒಳಗೆ ಪೊಲೀಸರು ಬಿಡುವುದಿಲ್ಲ. ಅರಣ್ಯ ಇಲಾಖೆಯವರೂ ಹತ್ತಿರ ಹೋಗಲು ಅವಕಾಶ ಕೊಡೋಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಪರಿಚಯವಿದ್ದರೆ, ಪೊಲೀಸರಿಗೆ ಪರಿಚಯವಿದ್ದರೆ ಮಾತ್ರ ಬಿಡುವುದುಂಟು. ಮೊನ್ನೆ ನಡೆದ ಘಟನೆ ವಿಡಿಯೋ ಮಾಡಿರುವುದು ಒಳಗಿನವರ ಅಥವಾ ಹೊರಗಿನವರ ಎನ್ನುವ ಅನುಮಾನಗಳು ಇವೆ. ಆದರೆ ಹೊರಗಡೆ ನಿಂತಿದ್ದ ಪ್ರವಾಸಿಗರೊಬ್ಬರು ಹೀಗೆ ಆನೆ ಓಡಿ ಬರುವುದನ್ನು ಕುತೂಹಲದಿಂದ ಗಮನಿಸಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದು, ವೈರಲ್ ಆಗಿದೆ.