logo
ಕನ್ನಡ ಸುದ್ದಿ  /  ಕರ್ನಾಟಕ  /  Kannada Prescriptions; ಔಷಧ ಚೀಟಿಯಲ್ಲಿ ಕನ್ನಡ ಬಳಸಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹಕ್ಕೆ ಮಿಶ್ರ ಪ್ರತಿಕ್ರಿಯೆ

Kannada Prescriptions; ಔಷಧ ಚೀಟಿಯಲ್ಲಿ ಕನ್ನಡ ಬಳಸಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹಕ್ಕೆ ಮಿಶ್ರ ಪ್ರತಿಕ್ರಿಯೆ

Umesh Kumar S HT Kannada

Sep 11, 2024 06:06 PM IST

google News

ಕನ್ನಡದಲ್ಲಿ ಔಷಧ ಚೀಟಿ ಕೊಡಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ಸ್ಪಂದನೆ (ಸಾಂಕೇತಿಕ ಚಿತ್ರ)

  • Doctor prescriptions in Kannada; ಕರ್ನಾಟಕದಲ್ಲಿ ವೈದ್ಯರು ಈಗ ಕನ್ನಡದಲ್ಲಿ ಔಷಧ ಚೀಟಿ (Doctor prescriptions in Kannada) ಬರೆದು ಕೊಡಲು ಶುರುಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿ ಕನ್ನಡದಲ್ಲಿ ಇರಬೇಕು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಆರೋಗ್ಯ ಸಚಿವರಿಗೆ ಪತ್ರ ಬರೆದ ಬೆನ್ನಿಗೆ ಈ ಬೆಳವಣಿಗೆ ಗಮನಸೆಳೆದಿದೆ.

ಕನ್ನಡದಲ್ಲಿ ಔಷಧ ಚೀಟಿ ಕೊಡಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ಸ್ಪಂದನೆ (ಸಾಂಕೇತಿಕ ಚಿತ್ರ)
ಕನ್ನಡದಲ್ಲಿ ಔಷಧ ಚೀಟಿ ಕೊಡಲಾರಂಭಿಸಿದ ವೈದ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ಸ್ಪಂದನೆ (ಸಾಂಕೇತಿಕ ಚಿತ್ರ) (@umesh_anush)

ಬೆಂಗಳೂರು: ಆರೋಗ್ಯ ಸೇವಾ ಕ್ಷೇತ್ರದಲ್ಲಿ ವೈದ್ಯರ ಚೀಟಿ ವಿಚಾರ ಪದೇಪದೆ ಚರ್ಚೆಯಾಗುತ್ತಿರುತ್ತದೆ. ರೋಗಿಗಳಿಗೆ ಅವರ ಆರೈಕೆ ಮಾಡುವವರಿಗೆ ಅರ್ಥವಾಗದ ಲಿಪಿಯಲ್ಲಿರುತ್ತೆ ಎಂಬ ಟೀಕೆ ಇದ್ದೇ ಇದೆ. ಹೀಗಿರುವಾಗಲೇ ಕರ್ನಾಟಕದಲ್ಲಿ ವೈದ್ಯರು ಈಗ ಕನ್ನಡದಲ್ಲಿ ಔಷಧ ಚೀಟಿ (Doctor prescriptions in Kannada) ಬರೆದು ಕೊಡಲು ಶುರುಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿ ಕನ್ನಡದಲ್ಲಿ ಇರಬೇಕು. ಇದಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಆರೋಗ್ಯ ಸಚಿವರಿಗೆ ಪತ್ರ ಬರೆದ ಬೆನ್ನಿಗೆ ಈ ಬೆಳವಣಿಗೆ ಗಮನಸೆಳೆದಿದೆ.

ಬೆಂಗಳೂರಿನ ಖಾಸಗಿ ಕ್ಲಿನಿಕ್ ವೈದ್ಯರೊಬ್ಬರು ಕನ್ನಡದಲ್ಲಿ ಔ‍ಷಧ ಚೀಟಿ ಬರೆಯುತ್ತಿರುವುದನ್ನು ಗಮನಿಸಿದ ಪ್ರಾಧಿಕಾರ, ಅದನ್ನು ಮಾದರಿಯಾಗಿ ಪರಿಗಣಿಸಿತು. ಅಲ್ಲದೆ, ಅದೇ ಮಾದರಿಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿ ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಇನ್ನಷ್ಟು ಸ್ಪಷ್ಟವಾಗುವಂತೆ ಮಾಡಲು ಸರ್ಕಾರಿ ವೈದ್ಯರು ಗಮನಹರಿಸಬೇಕು ಎಂದು ಹೇಳಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಕೆ.ವಿ.ಡೆಂಡಲ್ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಡಾ.ಹರಿಪ್ರಸಾದ್ ಸಿ.ಎಸ್. ಎಂಬುವರು ಔಷಧಿ ಚೀಟಿಯನ್ನು ಕನ್ನಡದಲ್ಲೇ ಬರೆದುಕೊಟ್ಟು ಮಾದರಿಯಾಗಿದ್ದಾರೆ. ಅವರಿಗೆ ಪ್ರಾಧಿಕಾರದ ವತಿಯಿಂದ ಅಭಿನಂದನೆಗಳು ಎಂದು ಸೆಪ್ಟೆಂಬರ್ 9 ರಂದು ಟ್ವೀಟ್ ಮಾಡಿತ್ತು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿಗೆ ಕನ್ನಡ ಕಡ್ಡಾಯ

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕನ್ನಡದಲ್ಲಿ ಪ್ರಿಸ್ಕ್ರಿಪ್ಷನ್ ಬರೆಯುವುದನ್ನು ಕಡ್ಡಾಯಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ)ವು ಸೆಪ್ಟೆಂಬರ್ 10 ರಂದು ಒತ್ತಾಯಿಸಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಬರೆದ ಪತ್ರದಲ್ಲಿ ಕೆಡಿಎ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಈ ಕ್ರಮವು ಕನ್ನಡ ಭಾಷೆಯ ಬೆಳವಣಿಗೆ ಮತ್ತು ಅಸ್ಮಿತೆಯನ್ನು ಹೆಚ್ಚಿಸುತ್ತದೆ ಎಂದು ಎತ್ತಿ ತೋರಿಸಿದ್ದಾರೆ.

ಬಿಳಿಮಲೆ ಅವರು ರಾಯಚೂರು ಜಿಲ್ಲೆಯ ವೈದ್ಯರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳ ಕಡಗೆ ಗಮನಸೆಳೆದಿದ್ದು, ಅವರು ಪ್ರಿಸ್ಕ್ರಿಪ್ಷನ್‌ಗಳಿಗೆ ಕನ್ನಡವನ್ನು ಬಳಸಲು ಪ್ರಾರಂಭಿಸಿದ್ದಾರೆ. ಕನ್ನಡವನ್ನು ಉತ್ತೇಜಿಸುವ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅದರ ಬಳಕೆಯನ್ನು ಪ್ರೋತ್ಸಾಹಿಸುವ ವೈದ್ಯರನ್ನು ಗೌರವಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದಾಗ್ಯೂ, ಕರ್ನಾಟಕ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘವು ಪ್ರಾಯೋಗಿಕ ಸವಾಲುಗಳು ಮತ್ತು ಔಷಧಿ ದೋಷಗಳ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಈ ವಿಚಾರವನ್ನು ಬೆಂಬಲಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್, ''ಕನ್ನಡದಲ್ಲಿ ಔಷಧಿ ಚೀಟಿ ನೀಡುವ ಪ್ರಸ್ತಾವನೆಯಲ್ಲಿ ಯಾವುದೇ ತಪ್ಪಿಲ್ಲ. ಬಹುತೇಕ ವೈದ್ಯರಿಗೆ ಕನ್ನಡ ಗೊತ್ತಿದ್ದರೂ ಅನುಕೂಲದ ವಿಚಾರ. ಔಷಧಿಯ ಹೆಸರುಗಳನ್ನು ಕನ್ನಡದಲ್ಲಿ ಬರೆಯುವುದನ್ನು ಕಲಿಯಬೇಕು" ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕೆಡಿಎ ಪತ್ರಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್, "ಪ್ರಿಸ್ಕ್ರಿಪ್ಷನ್‌ಗಳು ಮತ್ತು ವೈದ್ಯಕೀಯ ನಿಯಮಗಳು ಹೊಂದಿಕೊಳ್ಳುವಂತಿರಬೇಕು. ವೈದ್ಯರಿಗೆ ಕನ್ನಡ ತಿಳಿದಿದ್ದರೆ ಮತ್ತು ಸ್ಪಷ್ಟವಾಗಿ ಬರೆಯಲು ಸಾಧ್ಯವಾದರೆ ಅವರು ಹಾಗೆ ಮಾಡಬಹುದು. ಆದರೆ ಅದನ್ನು ಕಡ್ಡಾಯಗೊಳಿಸುವುದು ಪ್ರಾಯೋಗಿಕವಾಗಿ ತೋರುತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡದಲ್ಲೇ ಚೀಟಿ ಬರೆದುಕೊಡುವಂತೆ ವೈದ್ಯರಿಗೆ ಆದೇಶ

ಕನ್ನಡ ಅಭಿವೃದ್ಧಿ ಪ್ರಾಧಿಕಾರ(ಕೆಡಿಎ)ದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಸೆಪ್ಟೆಂಬರ್ ಮೊದಲ ವಾರ ಮಂಗಳೂರಿಗೆ ಆಗಮಿಸಿದ್ದ ವೇಳೆ, ಸರ್ಕಾರಿ ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿ(ಪ್ರಿಸ್ಕ್ರಿಪ್ಷನ್) ಬರೆಯುವುದನ್ನು ಕಡ್ಡಾಯಗೊಳಿಸಿ ಶೀಘ್ರವೇ ಆದೇಶ ಹೊರಡಿಸುವುದಾಗಿ ತಿಳಿಸಿದ್ದರು.

ಇತ್ತೀಚೆಗಷ್ಟೇ ರಾಯಚೂರಿನಲ್ಲಿ ಸರ್ಕಾರಿ ವೈದ್ಯರು ಕನ್ನಡದಲ್ಲಿ ಪ್ರಿಸ್ಕ್ರಿಪ್ಷನ್ ಬರೆಯುವಂತೆ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿ ಮತ್ತೊಂದು ಆದೇಶ ಹೊರಡಿಸಲಾಗುವುದು. ಪ್ರಸ್ತುತ ಅನೇಕ ರೋಗಿಗಳಿಗೆ ಇಂಗ್ಲಿಷ್ ಪ್ರಿಸ್ಕ್ರಿಪ್ಷನ್ ಅರ್ಥವಾಗುತ್ತಿಲ್ಲ. ಔಷಧ ಮಳಿಗೆಗಳಲ್ಲಿ ಆ ಚೀಟಿ ಓದಿ ಅರ್ಥಮಾಡಿಕೊಳ್ಳಲಾಗದೆ ತಪ್ಪು ಔಷಧ ನೀಡುವ ಸಾಧ್ಯತೆ ಇದೆ ಎಂದು ಬಿಳಿಮಲೆ ಅವರು ಕರ್ನಾಟಕ ಸರ್ಕಾರಕ್ಕೆ ವಿವರಿಸಿದ್ದರು.

ಕನ್ನಡದಲ್ಲಿ ವೈದ್ಯರ ಚೀಟಿ, ಸಾಮಾಜಿಕ ತಾಣದಲ್ಲಿ ಬಿಸಿಬಿಸಿ ಚರ್ಚೆ

ಕರ್ನಾಟಕದಲ್ಲಿ ವೈದ್ಯರು ತಮ್ಮ ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಜನರ ಭಾಷೆಯಲ್ಲಿ ಬರೆಯುವ ಮೂಲಭೂತ ಅಗತ್ಯವನ್ನು ಪೂರೈಸಲು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನಂತಹ ಜನರು ಮತ್ತು ಸಂಸ್ಥೆಗಳ ಕರೆಗೆ ವೈದ್ಯರು ಸ್ಪಂದಿಸಿದ್ದಾರೆ ಎಂದು ಉಮೇಶ್ ಶಿವರಾಜು ಎಂಬುವವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನೂ ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಇಬ್ಬರು ವೈದ್ಯರು ಕನ್ನಡದಲ್ಲಿ ಬರೆದ ಚೀಟಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಉಮೇಶ್ ಶಿವರಾಜು ಅವರ ಟ್ವೀಟ್‌ ಅನ್ಯಭಾಷಿಕರನ್ನು ಕಳವಳಕ್ಕೀಡುಮಾಡಿದ್ದು, ಕಾಮೆಂಟ್‌ಗಳಲ್ಲಿ ವ್ಯಕ್ತವಾಗಿದೆ. ಹೊರ ರಾಜ್ಯದವರನ್ನು ನೀವು ಗುರಿಯಾಗಿಸಿಕೊಂಡಿದ್ದೀರಿ ಎಂಬಿತ್ಯಾದಿ ಕಾಮೆಂಟ್‌ಗಳು ಅಲ್ಲಿವೆ. ಇದಲ್ಲದೆ, ಕನ್ನಡ ಭಾಷೆಯನ್ನು ವೈದ್ಯರು ಬಳಸುತ್ತಿರುವ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ