logo
ಕನ್ನಡ ಸುದ್ದಿ  /  ಕರ್ನಾಟಕ  /  Ayodhya Ram Lalla: ಅಯೋಧ್ಯೆಯ ಬಾಲರಾಮ ವಿಗ್ರಹದ ಆಯ್ಕೆ ಅಂತಿಮವಾಗಿಲ್ಲ ಎಂದ ಪೇಜಾವರ ಶ್ರೀ; ವದಂತಿಗಳದ್ದೇ ಹವಾ

Ayodhya Ram Lalla: ಅಯೋಧ್ಯೆಯ ಬಾಲರಾಮ ವಿಗ್ರಹದ ಆಯ್ಕೆ ಅಂತಿಮವಾಗಿಲ್ಲ ಎಂದ ಪೇಜಾವರ ಶ್ರೀ; ವದಂತಿಗಳದ್ದೇ ಹವಾ

HT Kannada Desk HT Kannada

Jan 17, 2024 09:46 PM IST

google News

ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮಂದಿರ ಟ್ರಸ್ಟ್‌ ಅಧಿಕೃತವಾಗಿ ತೀರ್ಮಾನವನ್ನು ಪ್ರಕಟಿಸುವ ಮೊದಲೇ ವದಂತಿಗಳನ್ನು ಹರಡಲಾಗಿದೆ ಎಂದು ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

  • ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲಾ (ಬಾಲರಾಮ)ನ ಮೂರ್ತಿ ಆಯ್ಕೆ ಅಂತಿಮವಾಗಿದ್ದರೂ ಫಲಿತಾಂಶವನ್ನು ಟ್ರಸ್ಟ್ ಅಧಿಕೃತವಾಗಿ ಪ್ರಕಟಿಸಿಲ್ಲ. ಈಗ ಸುದ್ದಿ ಆಗಿರುವುದೆಲ್ಲವೂ ವದಂತಿ ಎಂದು ಶ್ರೀರಾಮಜನ್ಮಭೂಮಿ ಮಂದಿರ ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮಂದಿರ ಟ್ರಸ್ಟ್‌ ಅಧಿಕೃತವಾಗಿ ತೀರ್ಮಾನವನ್ನು ಪ್ರಕಟಿಸುವ ಮೊದಲೇ ವದಂತಿಗಳನ್ನು ಹರಡಲಾಗಿದೆ ಎಂದು ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮಂದಿರ ಟ್ರಸ್ಟ್‌ ಅಧಿಕೃತವಾಗಿ ತೀರ್ಮಾನವನ್ನು ಪ್ರಕಟಿಸುವ ಮೊದಲೇ ವದಂತಿಗಳನ್ನು ಹರಡಲಾಗಿದೆ ಎಂದು ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಅಯೋಧ್ಯೆಯಲ್ಲಿ ಟ್ರಸ್ಟ್ ಜತೆ ಕಾರ್ಯನಿರ್ವಹಿಸುವವರು ಇದನ್ನು ಸ್ಪಷ್ಟಪಡಿಸಿದರೆ, ಖುದ್ದು ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೂಡ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳು, ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿ ಯಾವುದು ಎಂದು ಇನ್ನೂ ಅಂತಿಮಗೊಂಡಿಲ್ಲ. ಟ್ರಸ್ಟ್ ನ ಸದಸ್ಯರು ಸಭೆ ಸೇರಿ ಮೂರು ಮೂರ್ತಿಗಳಲ್ಲಿ ಒಂದನ್ನು ಆಯ್ಕೆ ಮಾಡಿದ್ದೇವೆ. ಇದರ ವಿವರ ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ. ಗರ್ಭಗೃಹದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಮೇಲಂತಸ್ತಿನಲ್ಲಿ ರಾಮನ ಪಟ್ಟಾಭಿಷೇಕ ಮತ್ತು ಪರಿವಾರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜನವರಿ 22ರಂದು ಪ್ರಾಣಪ್ರತಿಷ್ಠೆಯ ಬಳಿಕ ಜನವರಿ 23ರಿಂದ ಮಾರ್ಚಿ 10ರವರೆಗೆ 48 ದಿನಗಳ ಕಾಲ ಮಂಡಲೋತ್ಸವ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಪ್ರಾಣಪ್ರತಿಷ್ಠೆ ಪ್ರಕ್ರಿಯೆ ಜನವರಿ 18ಕ್ಕೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜನವರಿ 10ರೊಳಗೆ ಮೂರ್ತಿಯ ಆಯ್ಕೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಂದಿರ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳುವ ಮೂಲಗಳು ತಿಳಿಸಿವೆ.

ಗೊಂದಲಕ್ಕೆ ಕೆಡಹಿದ ಹೇಳಿಕೆಗಳು: ಅಯೋಧ್ಯೆಯ ಶ್ರೀರಾಮ ಮೂರ್ತಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯಾಗಿದೆ ಎಂದು ಬಿಜೆಪಿಯ ಉನ್ನತ ನಾಯಕರು ಸೇರಿ ಪ್ರಮುಖರು ಹೇಳಿಕೆಗಳನ್ನು ನೀಡುವುದು, ಮಾಧ್ಯಮಗಳು ಈ ಕುರಿತು ಸುದ್ದಿಯನ್ನು ಬಿತ್ತರಿಸಿದ ವಿಷಯಗಳಿಂದಾಗಿ ಮೂರ್ತಿ ಆಯ್ಕೆ ದಿಢೀರನೆ ಗೊಂದಲ ಸೃಷ್ಟಿಗೂ ಕಾರಣವಾಗಿದೆ. ಯಾಕೆ ಹೀಗಾಯಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಅಯೋಧ್ಯೆಯಲ್ಲಿ ಈ ಕುರಿತು ಯಾವುದೇ ಗೊಂದಲ ಇಲ್ಲ. ಆದರೆ ಕರ್ನಾಟಕದ ರಾಜಕಾರಣಿಗಳು ಪೈಪೋಟಿಗೆ ಬಿದ್ದಂತೆ ಹೇಳಿಕೆಗಳನ್ನು ನೀಡಿ ಅಭಿನಂದಿಸಿರುವುದು ಕುತೂಹಲಕ್ಕೂ ಕಾರಣವಾಗಿದ್ದು, ಇದರ ಹಿಂದೇನಾದರೂ ರಾಜಕೀಯ ಇದೆಯೇ ಎಂಬುದೂ ಅನುಮಾನಕ್ಕೆ ಕಾರಣವಾಗಿದೆ.

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯೇ ಅಂತಿಮ ಆಗಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸಂಪರ್ಕಿಸಿದಾಗ ಅವರು ಅದನ್ನು ಅಲ್ಲಗಳೆದು, ಯಾವುದೂ ಅಂತಿಮ ಆಗಿಲ್ಲ ಎಂದಿದ್ದಾರೆ. ಹೀಗಿರುವ ಸಂದರ್ಭ ಮೂರ್ತಿ ಅಂತಿಮವಾಗಿದೆ ಎಂಬ ಸುದ್ದಿ ಸೋರಿಕೆ ಆದದ್ದಾರರೂ ಹೇಗೆ ಎಂಬುದು ಪ್ರಶ್ನೆ.

ಯಾರೆಲ್ಲ ಶಿಲ್ಪಿಗಳು?: ಈ ಮಧ್ಯೆ ಅಯೋಧ್ಯೆ ಮೂರ್ತಿ ಕೆತ್ತಿದ ಶಿಲ್ಪಿ ನಾನೇ ಎಂದು ಕೆಲವರು ಹೇಳಿಕೊಂಡು ಅದನ್ನು ಮಾಧ್ಯಮಗಳಲ್ಲಿ ಬಿತ್ತರಿಸುವ ಕಾರ್ಯಗಳೂ ನಡೆಯುತ್ತಿವೆ. ವಾಸ್ತವವಾಗಿ ಮೈಸೂರಿನ ಅರುಣ್ ಯೋಗಿರಾಜ್, ಹೊನ್ನಾವರದ ಗಣೇಶ್ ಎಲ್. ಭಟ್ ಮತ್ತು ರಾಜಸ್ತಾನದ ಸತ್ಯನಾರಾಯಣ ಪಾಂಡೆ ಅವರೇ ಅಂತಿಮವಾಗಿ ಆಯ್ಕೆಗೊಂಡ ಶಿಲ್ಪಿಗಳು. ಇವರು ಕೆತ್ತಿದ 51 ಇಂಚು ಎತ್ತರದ ಬಾಲರಾಮನ ಮೂರ್ತಿಗಳೇ ಅಂತಿಮವಾಗಿದ್ದು, ಇವುಗಳಲ್ಲಿ ಫೈನಲ್ ಆಗಿ ಯಾವ ಮೂರ್ತಿ ಅಂತಿಮಗೊಳ್ಳಲಿದೆ ಎಂಬುದರ ಕುರಿತು ವೋಟಿಂಗ್ ಆಗಿದ್ದು, ಫಲಿತಾಂಶ ಹೊರಬೀಳುವುದು ಬಾಕಿ ಇದೆ. ವೋಟಿಂಗ್ ಮಾಡಿ ಬಂದಿದ್ದೇವೆ ಫಲಿತಾಂಶ ಪ್ರಕಟಿಸುತ್ತೇವೆ, ಅದನ್ನು ಟ್ರಸ್ಟ್ ಪ್ರಕಟಿಸಲಿದೆ ಎಂದು ಸ್ವತಃ ಪೇಜಾವರ ಶ್ರೀಗಳು ಹೇಳಿದ್ದಾರೆ.

ಮೂರು ಮೂರ್ತಿಗಳೂ ರಾಮ ಮಂದಿರ ಸೇರಲಿವೆ: ಮೂರ್ತಿಗಳನ್ನು ಮೂರು ಶಿಲ್ಪಿಗಳೂ ರಾಮ ಮಂದಿರ ಟ್ರಸ್ಟ್ ಗೆ ಹಸ್ತಾಂತರ ಮಾಡಿದ್ದಾರೆ. ಮೂವರು ರೂಪಿಸಿದ ಮೂರ್ತಿಗಳೂ ರಾಮ ಮಂದಿರ ಸೇರಲಿವೆ. ಒಂದು ಗರ್ಭಗುಡಿ ಪ್ರವೇಶಿಸಿದರೆ, ಉಳಿದ ಎರಡೂ ಮಂದಿರದ ಇತರ ಕಡೆಗಳಲ್ಲಿ ಸ್ಥಾಪನೆಗೊಳ್ಳಲಿವೆ.

ಕರ್ನಾಟಕದವರು ಕೆತ್ತಿದ ಮೂರ್ತಿಗಳು: ಕರ್ನಾಟಕದವರಾದ ಅರುಣ್ ಯೋಗಿರಾಜ್ ಹಿಂದೆ ಕೇದಾರನಾಥ ಶಂಕರಾಚಾರ್ಯ ಪ್ರತಿಮೆ, ದೆಹಲಿಯ ಇಂಡಿಯಾ ಗೇಟ್ ನ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸೇರಿ ಹಲವೆಡೆ ಮೂರ್ತಿ, ಪ್ರತಿಮೆ ಕೆತ್ತಿದ ಖ್ಯಾತಿ ಉಳ್ಳವರು.

ಹಾಗೆಯೇ ಹೊನ್ನಾವರದ ಶಿಲ್ಪಿ ಗಣೇಶ ಭಟ್ ಅವರು, ಮೂರ್ತಿ ಶಿಲ್ಪ ರಚನೆಯಲ್ಲಿ ವಿದೇಶಕ್ಕೂ ಹೋಗಿಬಂದವರು. ಅವರು ಪುನರ್ವಸು ನಕ್ಷತ್ರದ ದಿನದಂದು ಅಭಿಜಿನ್ ಮುಹೂರ್ತದಲ್ಲಿ ಶಿಲಾಪೂಜೆ ನೆರವೇರಿಸಿ ಕೆತ್ತನೆ ಕಾರ್ಯ ಆರಂಭಿಸಿ, ಮೂರ್ತಿಯನ್ನು ಒಪ್ಪಿಸಿದ್ದಾರೆ. ಇನ್ನು ಸತ್ಯನಾರಾಯಣ ಪಾಂಡೆ ಅವರೂ ಮೂರ್ತಿಶಿಲ್ಪ ರಚನೆಯಲ್ಲಿ ಸಿದ್ಧಹಸ್ತರು.

- ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ