Ayodhya Ram Lalla: ಅಯೋಧ್ಯಾ ರಾಮಲಲಾ ಮೂರ್ತಿ ಆಯ್ಕೆ ಬಿಜೆಪಿ ನಾಯಕರ ಟ್ವೀಟ್; ಅರುಣ್ ಯೋಗಿರಾಜ್ ತಾಯಿ ಪ್ರತಿಕ್ರಿಯೆ
ಮೂವರು ಶಿಲ್ಪಿಗಳು ತಯಾರಿಸಿದ ವಿಗ್ರಹಗಳ ಪೈಕಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಯಾರಿಸಿದ ರಾಮಲಲಾ ಮೂರ್ತಿ ಅಂತಿಮವಾಗಿದೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದು, ಸಂಚಲನಕ್ಕೆ ಕಾರಣವಾಗಿದೆ. ಈ ನಡುವೆ, ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲಾ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಬಾಲರಾಮನ ಮೂರ್ತಿ ಅಂತಿಮಗೊಂಡಿದೆ. ಕರ್ನಾಟಕದ ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲಾ ಮೂರ್ತಿ ಅಂತಿಮಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿಯವರು, ಅತ್ಯಂತ ಸಂತಸದ ಸಮಯ ಎಂದು ಎಎನ್‌ಐಗೆ ಪ್ರತಿಕ್ರಿಯಿಸಿದ್ದಾರೆ.
“ಇದು ನಮಗೆ ಅತ್ಯಂತ ಸಂತಸದ ಕ್ಷಣ. ಮಗ ಅರುಣ್ ರಾಮಲಲಾ ಕೆತ್ತನೆ ಮತ್ತು ಆಕಾರವನ್ನು ನೀಡುವುದನ್ನು ನೋಡಲು ಬಯಸಿದ್ದೆ. ಆದರೆ ಕೊನೆಯ ದಿನ ವಿಗ್ರಹದ ದರ್ಶನಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಮಗ ಭರವಸೆ ನೀಡಿದ್ದ. ಆದ್ದರಿಂದ, ರಾಮಮಂದಿರದಲ್ಲಿ ಅದರ ಭವ್ಯವಾದ ಪ್ರತಿಷ್ಠಾಪನೆಯ ದಿನದಂದು ಆ ಮೂರ್ತಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ನನ್ನದಾಗಲಿದೆ” ಎಂದು ಸರಸ್ವತಿ ಪ್ರತಿಕ್ರಿಯಿಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆಗಾರಿಕೆ ಹೊತ್ತುಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅರುಣ್ ಯೋಗಿರಾಜ್ ನಿರ್ಮಿಸಿದ ಮೂರ್ತಿಯನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಟ್ರಸ್ಟ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಮೂವರು ಶಿಲ್ಪಿಗಳು ನಿರ್ಮಿಸಿರುವ ರಾಮಲಲಾ ಮೂರ್ತಿಗಳು ಟ್ರಸ್ಟ್‌ನ ಪರಿಗಣನೆಯಲ್ಲಿವೆ. ರಾಮಮಂದಿರದ ಗರ್ಭಗುಡಿಯೊಳಗೆ ಭವ್ಯವಾದ ಪ್ರತಿಷ್ಠಾಪನೆಗಾಗಿ ಪರಿಗಣಿಸಲಾಗುತ್ತಿರುವ ರಾಮಲಾ ವಿಗ್ರಹ ಐದು ವರ್ಷದ ಬಾಲಕನ ರೂಪದಲ್ಲಿ ಇರಲಿದ್ದು ಎತ್ತರ 51 ಇಂಚು ಎಂದು ನಿಗದಿ ಮಾಡಲಾಗಿತ್ತು.
ಇದಕ್ಕೂ ಮುನ್ನ, ರಾಮಲಲಾ ವಿಗ್ರಹದ ಆಯ್ಕೆ ಮಾನದಂಡದ ಕುರಿತು ಮಾತನಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ಚಂಪತ್ ರಾಯ್ ಅವರು, "ಟ್ರಸ್ಟ್‌ನ ಅಂದಾಜಿನ ಪ್ರಕಾರ, ವಿಶೇಷ ದೈವಿಕ ನೋಟ ಹೊಂದಿರುವಂತಹ ರಾಮಲಲಾ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಎಎನ್‌ಐಎಗೆ ಹೇಳಿದ್ದರು.
ಈ ನಡುವೆ, ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಸಾವಿರಾರು ಗಣ್ಯರು ಮತ್ತು ಸಮಾಜದ ಎಲ್ಲ ವರ್ಗಗಳ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ರಾಮಲಲಾ (ಬಾಲರಾಮ) ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ಆಚರಣೆಗಳು ನಡೆಯಲಿವೆ. ಮುಖ್ಯ ಸಮಾರಂಭಕ್ಕೆ ಒಂದು ವಾರದ ಮೊದಲು ಜನವರಿ 16 ರಂದು ಈ ವೈದಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಟ್ವೀಟ್‌ನಲ್ಲಿ, "ಎಲ್ಲಿ ರಾಮನೋ ಅಲ್ಲಿ ಹನುಮನು" ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು" ಎಂದು ಹೇಳಿದ್ದರು.
ಪ್ರಹ್ಲಾದ್ ಜೋಶಿ ಅವರಂತೆ ಬಿಜೆಪಿ ಕರ್ನಾಟಕದ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಸೇರಿ ಕೆಲವು ಬಿಜೆಪಿ ನಾಯಕರು ಅರುಣ್ ಯೋಗಿರಾಜ್ ಅವರನ್ನು ಅಭಿನಂದಿಸಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ನಡುವೆ, ಅರುಣ್ ಯೋಗಿರಾಜ್ ಅವರು ಟ್ರಸ್ಟ್ ಕಡೆಯಿಂದ ವಿಗ್ರಹ ಆಯ್ಕೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಪಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಲಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಆಹ್ವಾನಿತರಿಗಷ್ಟೆ ಪಾಲ್ಗೊಳ್ಳುವುದಕ್ಕೆ ಅವಕಾಶ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.