Arun Yogiraj: ಅಯೋಧ್ಯೆ ರಾಮಲಲಾ ಮೂರ್ತಿ ತಯಾರಕರ ಪೈಕಿ ಒಬ್ಬರು ಮೈಸೂರಿನ ಭರವಸೆಯ ಶಿಲ್ಪಿ ಅರುಣ್ ಯೋಗಿರಾಜ್‌
ಕನ್ನಡ ಸುದ್ದಿ  /  ಕರ್ನಾಟಕ  /  Arun Yogiraj: ಅಯೋಧ್ಯೆ ರಾಮಲಲಾ ಮೂರ್ತಿ ತಯಾರಕರ ಪೈಕಿ ಒಬ್ಬರು ಮೈಸೂರಿನ ಭರವಸೆಯ ಶಿಲ್ಪಿ ಅರುಣ್ ಯೋಗಿರಾಜ್‌

Arun Yogiraj: ಅಯೋಧ್ಯೆ ರಾಮಲಲಾ ಮೂರ್ತಿ ತಯಾರಕರ ಪೈಕಿ ಒಬ್ಬರು ಮೈಸೂರಿನ ಭರವಸೆಯ ಶಿಲ್ಪಿ ಅರುಣ್ ಯೋಗಿರಾಜ್‌

ಅಯೋಧ್ಯೆಯಲ್ಲಿ ರಾಮಲಲಾ ಮೂರ್ತಿ ಪ್ರಾಣಪ್ರತಿಷ್ಠೆಗೆ ದಿನಗಣನೆ ಶುರುವಾಗಿದೆ. ಇದಕ್ಕಾಗಿ ರಾಮಲಲಾ ಮೂರ್ತಿ ತಯಾರಿಸಲು ಮೂವರು ಶಿಲ್ಪಿಗಳಿಗೆ ಹೊಣೆಗಾರಿಕೆ ನೀಡಲಾಗಿತ್ತು. ಅವರ ಪೈಕಿ ಒಬ್ಬರು ಮೈಸೂರಿನ ಅರುಣ್‌ ಯೋಗಿರಾಜ್‌. ಈ ವಿರಳ ಅವಕಾಶದ ಕುರಿತು ಅವರು ಅನಿಸಿಕೆಗಳನ್ನು ಮಾಧ್ಯಮ ಪ್ರತಿನಿಧಿಗಳ ಜತೆಗೆ ಹಂಚಿಕೊಂಡಿದ್ದು, ಆ ವಿವರ ಹೀಗಿದೆ.

ಶ್ರೀ ರಾಮ ಸೀತೆ, ಲಕ್ಷ್ಮಣರ ಪ್ರತಿಮೆಯೊಂದಿಗೆ ಮೈಸೂರಿನ ಭರವಸೆಯ ಶಿಲ್ಪಿ ಅರುಣ್ ಯೋಗಿರಾಜ್‌.
ಶ್ರೀ ರಾಮ ಸೀತೆ, ಲಕ್ಷ್ಮಣರ ಪ್ರತಿಮೆಯೊಂದಿಗೆ ಮೈಸೂರಿನ ಭರವಸೆಯ ಶಿಲ್ಪಿ ಅರುಣ್ ಯೋಗಿರಾಜ್‌. (PC - arunyogiraj.com)

ಮೈಸೂರು: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ಲಲಾ (ಬಾಲ ರಾಮ) ಪ್ರಾಣ ಪ್ರತಿಷ್ಠೆ (ಜ.22)ಗೆ ದಿನಗಣನೆ ಶುರುವಾಗಿದೆ. ಮೂವರು ಶಿಲ್ಪಿಗಳು ಸಿದ್ಧಪಡಿಸಿರುವ ಮೂರು ಪ್ರತ್ಯೇಕ ಮೂರ್ತಿಗಳ ಪೈಕಿ ಒಂದನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣವಾಗಿದ್ದು, ರಾಮಮಂದಿರ ಟ್ರಸ್ಟ್ ಇನ್ನೂ ಅಂತಿಮ ತೀರ್ಮಾನ ಪ್ರಕಟಿಸಿಲ್ಲ.

ರಾಮಲಲಾ ಮೂರ್ತಿ 5 ವರ್ಷದ ಬಾಲಕನ ಪ್ರತಿರೂಪದಂತೆ ನಿರ್ಮಿಸುವುದಕ್ಕೆ ಶಿಲ್ಪಿಗಳಿಗೆ ಸೂಚನೆ ನೀಡಲಾಗಿತ್ತು. ಇದರಂತೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಮೂರ್ತಿಗಳನ್ನು ಸಿದ್ಧಪಡಿಸಿ ಪರಿಶೀಲನೆಗೆ ಒಪ್ಪಿಸಿದ್ದಾರೆ.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೃಷ್ಣಶಿಲೆಯನ್ನು ಮೂರ್ತಿ ನಿರ್ಮಿಸುವುದಕ್ಕಾಗಿ ಅರುಣ್‌ ಯೋಗಿ ರಾಜ್ ಬಳಸಿದ್ದಾರೆ. ಈ ಮೂರ್ತಿಯನ್ನು ಅಂತಿಮಗೊಳಿಸಲು ಅವರು ಆರು ತಿಂಗಳು ಸಮಯ ತೆಗೆದುಕೊಂಡಿದ್ದರು. ರಾಮಲಲಾನ ಪ್ರತಿಮೆ ತಯಾರಿಕೆಗೆ ಮುನ್ನ 5 ವರ್ಷದ ಬಾಲಕರ ಚಲನವಲನ, ಶರೀರ ರಚನೆ ಮುಂತಾದವುಗಳ ಅಧ್ಯಯನವನ್ನು ಅರುಣ್ ಯೋಗಿರಾಜ್ ಮಾಡಿದ್ದರು.

ಅರುಣ್ ಅವರ ಸಿದ್ಧಪಡಿಸಿರುವ ರಾಮಲಲಾ (ಬಾಲರಾಮ)ನ ಪ್ರತಿಮೆ ಎಂಟು ಅಡಿ ಎತ್ತರ, ಮೂರೂವರೆ ಅಡಿ ಅಗಲ ಇದೆ. ಪಾದದಿಂದ ಹಣೆ ತನಕ 51 ಇಂಚು ಎತ್ತರ ಇದ್ದರೆ, ಅಲ್ಲಿಂದಾಚೆಗೆ ಪ್ರಭಾವಳಿಯ ಎತ್ತರ ಸೇರಿಕೊಂಡಿದೆ.

ಅರುಣ್ ಅವರಿಗೆ ರಾಮಲಲಾ ಮೂರ್ತಿ ಮಾಡುವ ಅವಕಾಶ ಸಿಕ್ಕಿದ್ದು ಹೇಗೆ?

ಮಾಧ್ಯಮಗಳ ಜತೆಗೆ ಮಾತನಾಡಿರುವ ಅರುಣ್ ಯೋಗಿರಾಜ್‌, ರಾಮಲಲಾ ಮೂರ್ತಿ ತಯಾರಿಸುವ ಅವಕಾಶ ಸಿಕ್ಕಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ, ಸುಭಾಷ್‌ ಚಂದ್ರ ಬೋಸರ ಪ್ರತಿಮೆಗಳನ್ನು ಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ಬಂದಿತ್ತು. ಅಯೋಧ್ಯೆಯ ರಾಮಲಲಾನ ಮೂರ್ತಿ ತಯಾರಿಕೆ ವಿಚಾರ ಪ್ರಸ್ತಾಪವಾದಾಗ ಪ್ರಸ್ತಾವನೆ ಸಲ್ಲಿಸವುದಕ್ಕೆ ಆಹ್ವಾನ ಸಿಕ್ಕಿತ್ತು. ಅದರಂತೆ ಪಿಪಿಟಿ ಸಿದ್ಧಪಡಿಸಿಕೊಂಡು ಆಯ್ಕೆ ಸಮಿತಿಗೆ ಸಲ್ಲಿಸಿ, ಅವರೆದುರು ಅದರ ವಿವರಣೆ ನೀಡಿದ್ದೆ. ಅಲ್ಲಿ ಅಂತಿಮವಾಗಿ ನಾವು ಮೂವರು ಆಯ್ಕೆಯಾದೆವು ಎಂದು ಹೇಳಿಕೊಂಡಿದ್ದಾರೆ.

ಮೂವರು ಪರಸ್ಪರ ಪರಿಚಯ ಮಾಡಿಕೊಂಡಿದ್ದರೂ, ರಾಮಲಲಾ ಮೂರ್ತಿ ವಿಚಾರದಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಅಯೋಧ್ಯೆಯ ರಾಮಲಲಾ ಮೂರ್ತಿ ದೇಶಕ್ಕೆ ಸಲ್ಲಿಸುವ ಅದ್ಭುತ ಕೊಡುಗೆಯಾಗಿರುವ ಕಾರಣ ಮೂವರು ಕೂಡ ಅತ್ಯುತ್ತಮವಾದುದನ್ನೇ ಸಲ್ಲಿಸಲು ಪ್ರಯತ್ನಿಸುತ್ತಿದ್ದೇವೆ. ಪರಸ್ಪರ ಮಾತನಾಡಿಕೊಂಡರೆ, ನೋಡಿದರೆ ಅದರ ಪ್ರಭಾವ ಶಿಲ್ಪದ ಮೇಲಾಗುವ ಸಾಧ್ಯತೆ ಇರುವ ಕಾರಣ ಉದ್ದೇಶ ಪೂರ್ವಕವಾಗಿ ಪರಸ್ಪರ ಚರ್ಚಿಸಿಲ್ಲ. ಈ ವಿಚಾರದಲ್ಲಿ ನಮಗೆ ಟ್ರಸ್ಟ್ ಯಾವುದೇ ನಿಬಂಧನೆಗಳನ್ನು ವಿಧಿಸಿಲ್ಲ ಎಂದು ಅರುಣ್‌ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡುತ್ತ ಹೇಳಿದ್ದರು.

ಬಾಲರಾಮನ ಸೃಷ್ಟಿಯ ಕೆಲಸವೇ ಸವಾಲಿನದ್ದು. ನಾವು ಯಾರೂ ಬಾಲರಾಮನನ್ನು ನೋಡಿಲ್ಲ. ಹೀಗಾಗಿ ಏನು ಮಾಡಬೇಕು ಎಂಬ ಚಿಂತನೆ ಮೂಡಲು 20 ದಿನ ಬೇಕಾಯಿತು. ಕೊನೆಗೆ 5 ವರ್ಷದ ಬಾಲಕನ ಶರೀರ ರಚನೆ, ದೇಹ ಸ್ವರೂಪ, ಶ್ರೀ ರಾಮಚಂದ್ರನ ವರ್ಚಸ್ಸು ಹೊಂದಿದ ಮುಖವನ್ನು ಮನಸ್ಸಿನಲ್ಲಿ ತುಂಬಿಕೊಂಡು ಕೆಲಸ ಶುರುಮಾಡಲಾಗಿತ್ತು ಎಂದು ಅರುಣ್ ವಿವರಿಸಿದ್ಧಾರೆ.

ಅರುಣ್‌ ಯೋಗಿರಾಜ್ ಯಾರು?

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ 2000 ಗಣ್ಯರ ಪೈಕಿ ಅರುಣ್ ಯೋಗಿರಾಜ್ ಒಬ್ಬರು. ಅರುಣ್ ಅವರ ತಂದೆ ಹೆಸರು ಯೋಗಿ ರಾಜ್ ಅವರು ಕೂಡ ಶಿಲ್ಪಿ. ಅವರ ತಂದೆ ಅಂದರೆ ಅರುಣ್ ಅವರ ಅಜ್ಜ ಬಸವಣ್ಣ ಶಿಲ್ಪಿ. ಸರಿ ಸುಮಾರು 5 ತಲೆಮಾರುಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿರುವ ಕುಟುಂಬದವರು ಅರುಣ್‌.

ಮೈಸೂರಿನವರೇ ಆದ ಅರುಣ್ ಎಂಬಿಎ ವ್ಯಾಸಂಗ ಮಾಡಿದ ಬಳಿಕ ಬಹುರಾಷ್ಟ್ರೀಯ ಕಂಪನಿಗೆ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಕೆಲಸ ಶುರುಮಾಡಿದ ಬಳಿಕ, ಶಿಲ್ಪ ಕಲೆಯ ಕಡೆಗೆ ಹೆಚ್ಚಿನ ಆಸಕ್ತಿ ಮೂಡಿದ್ದು, 2008ರಲ್ಲಿ ಕೆಲಸ ಬಿಟ್ಟು, ಕುಲಕಸುಬಾದ ಶಿಲ್ಪ ಕಲೆಯನ್ನೇ ಉದ್ಯೋಗವನ್ನಾಗಿ ಸ್ವೀಕರಿಸಿದರು. ಸಂತೋಷದಿಂದ ಮಾಡುತ್ತಿರುವ ಕೆಲಸವಾದ ಕಾರಣ, ಹೆಚ್ಚು ತೃಪ್ತಿ ಇದೆ ಎನ್ನುತ್ತಾರೆ ಅರುಣ್ ಯೋಗಿರಾಜ್.

ಅರುಣ್ ಯೋಗಿರಾಜ್ ಅವರು ವೆಬ್‌ ಸೈಟ್‌ ಹೊಂದಿದ್ದು ಅಲ್ಲಿ ಅವರ ಕೆಲಸಗಳ ವಿವರ ಮತ್ತು ಸಂಪರ್ಕ ಸಂಖ್ಯೆ ಎಲ್ಲವೂ ಇದೆ. ಅವರಿಗೆ ಶುಭಹಾರೈಸುವುದಕ್ಕೆ ಅವರ ವೆಬ್‌ಸೈಟ್ https://arunyogiraj.com/contact/

Whats_app_banner