logo
ಕನ್ನಡ ಸುದ್ದಿ  /  ಕರ್ನಾಟಕ  /  Kiccha Sudeep Campaign: ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿರುವ ನಟ ಸುದೀಪ್‌ ಖರ್ಚು ಯಾರ ಲೆಕ್ಕಕ್ಕೆ; ಎಎಪಿ ಪ್ರಶ್ನೆ

Kiccha Sudeep Campaign: ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿರುವ ನಟ ಸುದೀಪ್‌ ಖರ್ಚು ಯಾರ ಲೆಕ್ಕಕ್ಕೆ; ಎಎಪಿ ಪ್ರಶ್ನೆ

Meghana B HT Kannada

Apr 27, 2023 03:36 PM IST

google News

ಬಿಜೆಪಿ ಪರ ಸುದೀಪ್​ ಪ್ರಚಾರ

    • Kiccha Sudeep:ಬಿಜೆಪಿ ಅಧಿಕೃತ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸುದೀಪ್‌ ಹೆಸರಿಲ್ಲ. ಆದರೂ ಪ್ರಚಾರ ಮಾಡುತ್ತಿದ್ದಾರೆ. ಹೆಲಿಕಾಪ್ಟರ್‌ ಮೂಲಕ ತೆರಳಿ, ಐಶಾರಾಮಿ ಕಾರುಗಳಲ್ಲಿ ತಿರುಗಾಡಿದ್ದಾರೆ. ಇದಕ್ಕೆಲ್ಲ ಕನಿಷ್ಠ 15ರಿಂದ 40 ಲಕ್ಷ ರೂ. ಖರ್ಚಾಗಿರುತ್ತದೆ. ಈ ಖರ್ಚುಗಳನ್ನು ಚುನಾವಣಾ ಆಯೋಗವು ಯಾರ ಲೆಕ್ಕಕ್ಕೆ ಸೇರಿಸುತ್ತದೆ? ಎಂದು ಎಎಪಿ ಪ್ರಶ್ನಿಸಿದೆ. 
ಬಿಜೆಪಿ ಪರ ಸುದೀಪ್​ ಪ್ರಚಾರ
ಬಿಜೆಪಿ ಪರ ಸುದೀಪ್​ ಪ್ರಚಾರ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ನಟ ಕಿಚ್ಚ ಸುದೀಪ್​ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ(Actor Kiccha Sudeep BJP campaign). ಆದರೆ ಸುದೀಪ್​ ಅವರ ಪ್ರಚಾರದ ಖರ್ಚುಗಳು ಯಾರ ಲೆಕ್ಕಕ್ಕೆ ಎಂದು ಆಮ್​ ಆದ್ಮಿ ಪಕ್ಷ ಪ್ರಶ್ನಿಸಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ವಕೀಲರ ಘಟಕದ ಸದಸ್ಯರಾದ ಗಂಗಾಧರ್‌, “ಖ್ಯಾತ ನಟ ಸುದೀಪ್‌ರವರು ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಮಾತ್ರ ಮತಯಾಚನೆ ಮಾಡುವುದೆಂದು ಹೇಳಿದ್ದರು. ಬಿಜೆಪಿ ಅಧಿಕೃತ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸುದೀಪ್‌ ಹೆಸರಿಲ್ಲ. ಆದರೂ ಏಪ್ರಿಲ್‌ 26 ರಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ತಿಪ್ಪೇಸ್ವಾಮಿ ಪರ ಸುದೀಪ್‌ ಪ್ರಚಾರ ಮಾಡಿದ್ದಾರೆ. ಹೆಲಿಕಾಪ್ಟರ್‌ ಮೂಲಕ ತೆರಳಿ, ಐಶಾರಾಮಿ ಕಾರುಗಳಲ್ಲಿ ತಿರುಗಾಡಿದ್ದಾರೆ. ಇದಕ್ಕೆಲ್ಲ ಕನಿಷ್ಠ 15ರಿಂದ 40 ಲಕ್ಷ ರೂಪಾಯಿಯಾದರೂ ಖರ್ಚಾಗಿರುತ್ತದೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತಿದೆ ಹಾಗೂ ಈ ಖರ್ಚುಗಳನ್ನು ಚುನಾವಣಾ ಆಯೋಗವು ಯಾರ ಲೆಕ್ಕಕ್ಕೆ ಸೇರಿಸುತ್ತದೆ?” ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಬೆಂಬಲ ಸೂಚಿಸಿದ್ದ ಸುದೀಪ್‌ ಅವರು ಮೊದಲು ಸಿಎಂ ಬೊಮ್ಮಾಯಿಯವರು ತಮ್ಮ ತವರು ಕ್ಷೇತ್ರ ಶಿಗ್ಗಾಂವಿ- ಸವಣೂರಿನಲ್ಲಿ ನಾಮಪತ್ರ ಸಲ್ಲಿಸುವಾಗ ರೋಡ್‌ ಶೋದಲ್ಲಿ ಪ್ರಚಾರ ಕಹಳೆ ಮೊಳಗಿಸಿದ್ದರು. ಅದಾದ ಬಳಿಕ ಚಿತ್ರದುರ್ಗದಲ್ಲಿಯೂ ಮತಯಾಚನೆ ಮಾಡಿದ್ದರು. ಇದೀಗ ಗಣಿನಾಡು ಬಳ್ಳಾರಿಯತ್ತ ಮುಖ ಮಾಡಿದ್ದು, ಇಂದು ಬಳ್ಳಾರಿ ಜಿಲ್ಲೆಯ ಹಲವೆಡೆಗಳಲ್ಲಿ ಸುದೀಪ್‌ ಪ್ರಚಾರ ಮಾಡಲಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ್‌ ವಿ ನಾಯಕ್‌ ಅವರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.

ಕೂಡ್ಲಿಗಿ ಪ್ರಚಾರ ಮುಗಿಯುತ್ತಿದ್ದಂತೆ, ನೇರವಾಗಿ ಹಾವೇರಿಗೆ ತೆರಳಲಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಸಿ.ಪಾಟೀಲ್‌ ಪರವಾಗಿ ಪ್ರಚಾರ ಕಣಕ್ಕಿಳಿಯಲಿದ್ದಾರೆ. ಅದಾದ ಮೇಲೆ ಬ್ಯಾಡಗಿಯ ವಿರೂಪಾಕ್ಷಪ್ಪ, ರಾಣೆಬೆನ್ನೂರಿನ ಅರುಣ್‌ ಪೂಜಾರ, ಕುಂದಗೋಳದಲ್ಲಿ ಎಂ.ಆರ್‌ ಪಾಟೀಲ್‌ ಪರ ಸುದೀಪ್‌ ಕ್ಯಾಂಪೇನ್‌ ಮಾಡಲಿದ್ದಾರೆ.

ಇನ್ನು, ಸ್ಥಳೀಯ ಚುನಾವಣಾ ಅಧಿಕಾರಿಗಳು ಬಿಜೆಪಿ ಪರವಾಗಿ ವರ್ತಿಸುತ್ತಿದ್ದು, ಆಮ್‌ ಆದ್ಮಿ ಪಾರ್ಟಿ ವಿರುದ್ಧ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಗಳಿಗೆ ಬಿಜೆಪಿ ಅಭ್ಯರ್ಥಿಗಳು ತೊಂದರೆ ನೀಡುತ್ತಿದ್ದಾರೆ. ಜೊತೆಗೆ, ಚುನಾವಣಾ ಅಧಿಕಾರಿಗಳು ಕೂಡ ತಾರತಮ್ಯ ಮಾಡುತ್ತಿದ್ದಾರೆ. ಎಎಪಿ ಮುಖಂಡರು ನೀಡುವ ದೂರುಗಳಿಗೆ ಚುನಾವಣಾ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಗಂಗಾಧರ್​ ಇದೇ ವೇಳೆ ಆಗ್ರಹಿಸಿದರು.

ಬೆಂಗಳೂರಿನ ಗಾಂಧಿನಗರ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮೀ ಲೇಔಟ್, ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ಆರ್‌ಒಗಳು ಎಎಪಿಗೆ ನೋಟಿಸ್‌ಗಳನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ. ಮನೆಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮನೆಮನೆ ಪ್ರಚಾರಕ್ಕೂ ಅವಕಾಶ ನೀಡದಿದ್ದರೆ ಪ್ರಚಾರ ಮಾಡುವುದು ಹೇಗೆ? ಮನೆಮನೆ ಪ್ರಚಾರಕ್ಕೆ 48 ಗಂಟೆ ಕಾಲ ಮೊದಲೇ ಎಲ್ಲ ವಿವರಗಳನ್ನು ನೀಡಿ ಅನುಮತಿ ಪಡೆಯಬೇಕೆಂದು ಹೇಳುತ್ತಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಖಾತೆಗಳಲ್ಲಿ ಜಾಹೀರಾತಲ್ಲದ ಪೋಸ್ಟ್‌ ಹಾಕುವುದಕ್ಕೂ ಚುನಾವಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಗಾಧರ್‌ ಬೇಸರ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ತೋಳದಿನ್ನೆ ಗ್ರಾಮದಲ್ಲಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಶಾಂತಿಯುತವಾಗಿ ಬೀದಿಸಭೆ ನಡೆಸುತ್ತಿದ್ದರು. ಅಲ್ಲಿಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ನಮ್ಮವರ ಮೇಲೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಚುನಾವಣಾ ಆಯೋಗ, ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಅಧಿಕಾರಿಗಳು ಹಾಗೂ ಪೊಲೀಸರು ಆಡಳಿತ ಪಕ್ಷದ ಪರ ಕೆಲಸ ಮಾಡುವುದು ಸರಿಯಲ್ಲ ಎಂದು ಗಂಗಾಧರ್‌ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ