logo
ಕನ್ನಡ ಸುದ್ದಿ  /  ಕರ್ನಾಟಕ  /  Assembly Election Voting: ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ: 3 ಕ್ಷೇತ್ರದಲ್ಲಿ ಮತ ಹಾಕಿದವರು ಎಷ್ಟು

Assembly Election Voting: ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ಭಾರೀ ಪ್ರಮಾಣದಲ್ಲಿ ಮತದಾನ: 3 ಕ್ಷೇತ್ರದಲ್ಲಿ ಮತ ಹಾಕಿದವರು ಎಷ್ಟು

Umesha Bhatta P H HT Kannada

Nov 13, 2024 08:33 PM IST

google News

ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು

    • ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿಯೇ ಮತದಾನವಾಗಿದೆ. ಅದರ ವಿವರ ಇಲ್ಲಿದೆ.
    • (ವರದಿ: ಎಚ್‌.ಮಾರುತಿ. ಬೆಂಗಳೂರು)
ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು
ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ ಮಹಿಳೆಯರು

ಬೆಂಗಳೂರು: ಕರ್ನಾಟಕದ ಮಿನಿ ಸಮರ ಎಂದೇ ಪರಿಗಣಿಸಲ್ಪಟ್ಟು ಆಡಳಿತಾರೂಢ ಕಾಂಗ್ರೆಸ್‌, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದ್ದ ರಾಜ್ಯದ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಲ್ಲಿ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ. ಮೂರೂ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಸಣ್ಣಪುಟ್ಟ ಗೊಂದಲ ಬಿಟ್ಟರೆ ಬಹುತೇಕ ಶಾಂತಯುತವಾಗಿಯೇ ಮತದಾನವಾಗಿದೆ. ಚನ್ನಪಟ್ಟಣದಲ್ಲಿ ಅತೀ ಹೆಚ್ಚು, ಶಿಗ್ಗಾಂವಿಯಲ್ಲಿ ನಂತರ ಹಾಗೂ ಸಂಡೂರಿನಲ್ಲೂ ಉತ್ತಮ ಪ್ರಮಾಣದಲ್ಲಿಯೇ ಮತದಾನವಾಗಿದೆ. ಚನ್ನಪಟ್ಟಣದಲ್ಲಿ ಶೇ, 88.80 ಶಿಗ್ಗಾಂವಿಯಲ್ಲಿ ಶೇ80.48 ಹಾಗೂ ಸಂಡೂರಿನಲ್ಲಿ ಶೇ 76.24 ರಷ್ಟು ಮತದಾನವಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮೂರೂ ಕ್ಷೇತ್ರಗಳ ಉಪ ಚುನಾವಣೆಯನ್ನು ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪ್ರತಿಷ್ಠೆಯಾಗಿ ಪರಿಗಣಸಿದ್ದವು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬಿ.ಎಸ್.ಯಡಿಯೂರಪ್ಪ ಮತ್ತು ಇಡೀ ರಾಜ್ಯ ಸಚಿವ ಸಂಪುಟದ ಸದಸ್ಯರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಚನ್ನಪಟ್ಟಣದಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಸಿ. ಪಿ. ಯೋಗೇಶ್ವರ್ ಸೇರಿದಂತೆ 31 ಮಂದಿ ಕಣದಲ್ಲಿದ್ದರೆ, ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿ, ಕಾಂಗ್ರೆಸ್ನಿಂದ ಪಠಾಣ್ ಯಾಸೀರ್ ಅಹ್ಮದ್ ಖಾನ್ ಸೇರಿದಂತೆ 8 ಅಭ್ಯರ್ಥಿಗಳು ಉಮೇದುವಾರರಾಗಿದ್ದಾರೆ. ಸಂಡೂರಲ್ಲಿ ಕಾಂಗ್ರೆಸ್ ನ ಇ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತ ಸೇರಿ 6 ಹುರಿಯಾಳುಗಳು ಕಣದಲ್ಲಿದ್ದರು.

ಸಂಡೂರು ಕ್ಷೇತ್ರದಲ್ಲಿ 1,18,279 ಮಹಿಳಾ 1,17,739 ಪುರುಷ ಸೇರಿ ಒಟ್ಟು 2,36,047 ಮತದಾರರಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ 2,32,949 ಮತದಾರರಿದ್ದು 1,20,617 ಮಹಿಳಾ ಮತ್ತು 1,12,324 ಪುರುಷ ಮತದಾರರು. ಶಿಗ್ಗಾಂವಿ ಕ್ಷೇತ್ರದಲ್ಲಿ 1,16,076 ಮಹಿಳಾ, 1,21,443 ಪುರುಷ ಸೇರಿ ಒಟ್ಟು 2,37,525 ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.

ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತುಗಳಲ್ಲಿ ತೊಡಗಿಸಿಕೊಂಡಿದ್ದರು.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿತ್ತು ಯಾವುದೇ ಕ್ಷೇತ್ರದಲ್ಲಿ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿ ಮೂರೂ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸಿಬ್ಬಂದಿ ಮೇಲುಸ್ತುವಾರಿ ನೋಡಿಕೊಂಡರು.

ಶಿಗ್ಗಾಂವಿಯಲ್ಲಿ ಒಟ್ಟು 241 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಮತದಾನಕ್ಕೆ 1060 ಸಿಬ್ಬಂದಿ ಹಾಗೂ ಭದ್ರತೆಗಾಗಿ 716 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಚನ್ನಪಟ್ಟಣದಲ್ಲಿ 276 ಮತಗಟ್ಟೆ ಸ್ಥಾಪಿಸಲಾಗಿದ್ದು, ಚುನಾವಣೆಗೆ 1252 ಮತಗಟ್ಟೆ ಸಿಬ್ಬಂದಿ ಹಾಗೂ ಭದ್ರತೆಗೆ 650ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿತ್ತು. ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೂರೂ ಕ್ಷೇತ್ರಗಳಲ್ಲಿ ಮತದಾರರು ಹುರುಪಿನಿಂದ ಮತದಾನಕ್ಕೆ ಆಗಮಿಸಿದ್ದು, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿರುವುದು ಕಂಡು ಬಂದಿತು. ಸಂಡೂರು ಮತಗಟ್ಟೆ 67ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪತಿ ಇ.ತುಕಾರಾಂ, ಪುತ್ರ ರಘುನಂದನ್, ಪುತ್ರಿ ಚೈತನ್ಯ ಮತ ಚಲಾಯಿಸಿದ್ದಾರೆ. ಇನ್ನೂ ಹಲವು ಗಣ್ಯರು ಮತ ಹಾಕಿದ್ದಾರೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ