Shiggaon Assembly Election: ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ, ಮತದಾರರು ಎಷ್ಟಿದ್ದಾರೆ
ಕನ್ನಡ ಸುದ್ದಿ  /  ಕರ್ನಾಟಕ  /  Shiggaon Assembly Election: ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ, ಮತದಾರರು ಎಷ್ಟಿದ್ದಾರೆ

Shiggaon Assembly Election: ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ, ಮತದಾರರು ಎಷ್ಟಿದ್ದಾರೆ

ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಸಿದ್ದತೆಗಳು ನಡೆದಿವೆ. ಎಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಿದ್ದತೆಗಳು ಆಗಿದ್ದು, ಬುಧವಾರ ಮತದಾನ ನಡೆಯಲಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಿದ್ದತೆಗಳು ಆಗಿದ್ದು, ಬುಧವಾರ ಮತದಾನ ನಡೆಯಲಿದೆ.

ಹಾವೇರಿ: ಕಿತ್ತೂರು ಕರ್ನಾಟಕ ಭಾಗದ ಯಾಲಕ್ಕಿ ನಾಡು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ 2024 ನವೆಂಬರ್‌13ರಂದು ನಡೆಯಲಿದ್ದು, ಇದಕ್ಕಾಗಿ ಹಾವೇರಿ ಜಿಲ್ಲಾಡಳಿತ ಹಾಗೂ ಶಿಗ್ಗಾಂವಿ ತಾಲ್ಲೂಕು ಆಡಳಿತವು ಸಿದ್ದತೆಗಳನ್ನು ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಗದಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಬಳಿಕ ತೆರವಾದ ಶಾಸಕ ಸ್ಥಾನಕ್ಕೆ ಇಲ್ಲಿ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿ ಹಾವೇರಿ ಜಿಲ್ಲೆಯಲ್ಲಿದ್ದರೂ ಇದು ಧಾರವಾಡ ಲೋಕಸಭಾ ಕ್ಷೇತ್ರದ ಭಾಗ. ಧಾರವಾಡ ಹಾಗೂ ಗದಗ ಜಿಲ್ಲೆಗಳೊಂದಿಗೆ ಬೆಸೆದಿರುವ ಶಿಗ್ಗಾಂವಿ ರಾಜಕೀಯ ಮಹತ್ವ ಇರುವ ಕ್ಷೇತ್ರ.

ಶಿಗ್ಗಾಂವಿ ಚುನಾವಣೆ ಇತಿಹಾಸ

ಮೊದಲಿನಿಂದಲೂ ಶಿಗ್ಗಾಂವಿ ಹಾಗೂ ಸವಣೂರು ತಾಲ್ಲೂಕುಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವಿದು. ಇಲ್ಲಿ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರು ಒಮ್ಮೆ ಸ್ಪರ್ಧಿಸಿ ಗೆದ್ದಿದ್ದರು. ಆನಂತರ ಕಾಂಗ್ರೆಸ್‌ ಹೆಚ್ಚು ಇಲ್ಲಿ ಗೆಲ್ಲುತ್ತಾ ಬಂದಿದ್ದು. ಇತ್ತೀಚಿನ ಆರು ಚುನಾವಣೆಗಳಲ್ಲಿ ಒಮ್ಮೆ ಜೆಡಿಎಸ್‌ ಹಾಗೂ ಐದು ಬಾರಿ ಬಿಜೆಪಿ ಗೆದ್ದಿದೆ. ನಾಲ್ಕು ಬಾರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸಿದ್ದಾರೆ.

ಲಿಂಗಾಯಿತರು ಹಾಗೂ ಮುಸ್ಲೀಮರ ಬಾಹುಳ್ಯವುಳ್ಳ ಈ ಕ್ಷೇತ್ರವನ್ನು ಎರಡೂ ಸಮುದಾಯದವರು ಪ್ರತಿನಿಧಿಸಿದ್ದಾರೆ. ನೆರೆಯ ಕುಂದಗೋಳ ತಾಲ್ಲೂಕಿನವರಾದರೂ ಬೊಮ್ಮಾಯಿ ಅವರು ಹುಬ್ಬಳ್ಳಿ ನಂತರ ಶಿಗ್ಗಾಂವಿಯಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡು ಇಲ್ಲಿಂದಲೇ ವಿಧಾನಸಭೆಗೆ ಆಯ್ಕೆಯಾಗಿ ಸಚಿವರಾಗಿ ನಂತರ ಸಿಎಂ ಆದವರು. ಈ ಕ್ಷೇತ್ರಕ್ಕೆ ಹೊರಗಿನಿಂದ ಬಂದ ಇಬ್ಬರು ಸಿಎಂ ಸ್ಥಾನ ಅಲಂಕರಿಸಿರುವುದು ವಿಶೇಷ.

ಅಭ್ಯರ್ಥಿಗಳು ಯಾರು

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಭರತ್ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಯಾಸೀರ್ ಅಹ್ಮದ್ ಖಾನ್ ಪಠಾಣ, ಕೆಆರ್‌ಎಸ್‌ನಿಂದ ರವಿ ಕೃಷ್ಣಾರೆಡ್ಡಿ, ಸೋಸಿಯಲಿಸ್ ಪಾರ್ಟಿ (ಇಂಡಿಯಾ)ದಿಂದ ಖಾಜಾ ಮೊಹಿದ್ದೀನ್ ಗುಡಗೇರಿ, ಪಕ್ಷೇತರರಾಗಿ ಡಾ.ಜಿ.ಎಚ್.ಇಮಾಪುರ, ಎಸ್.ಎಸ್.ಪಾಟೀಲ, ಸಿದ್ದಪ್ಪ ಹೊಸಳ್ಳಿ, ಸಾತಪ್ಪ ನೀಲಪ್ಪ ದೇಸಾಯಿ ಚುನಾವಣಾ ಕಣದಲ್ಲಿರುವ ಇತರರು.

ಭರ್ಜರಿ ಪ್ರಚಾರ

ಶಿಗ್ಗಾಂವಿ ಸವಣೂರು ಕ್ಷೇತ್ರದ ಉಪಚುನಾವಣೆಗೆ ಈ ಬಾರಿ ಭರ್ಜರಿ ಪ್ರಚಾರವೇ ನಡೆಯಿತು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಕೆಲವೇ ನಾಯಕರು ಬಂದಿದ್ದರು. ಈ ಬಾರಿ ಘಟಾನುಘಟಿ ನಾಯಕರು ಇಲ್ಲಿಗೆ ಬಂದಿದ್ದರು. ಅದರಲ್ಲೂ ಕಾಂಗ್ರೆಸ್‌ನ ಸಚಿವರ ದಂಡೇ ಚುನಾವಣೆ ಉಸ್ತುವಾರಿ ಹೊತ್ತಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್‌ ಮತ ಪ್ರಚಾರ ನಡೆದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಿಜೆಪಿ ಪ್ರಚಾರದ ಉಸ್ತುವಾರಿ ಹೊತ್ತಿದ್ದರು. ಸಿಎಂ ಸಿದ್ದರಾಮಯ್ಯ. ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹಿತ ಹಲವರು ಶಿಗ್ಗಾಂವಿ ಪ್ರಚಾರದಲ್ಲಿ ನಿರತರಾಗಿದ್ದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ,ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಹಲವರು ಪ್ರಚಾರ ಕೈಗೊಂಡರು.

ಮತದಾನಕ್ಕೆ ಭಾರೀ ಸಿದ್ದತೆ

ಶಿಗ್ಗಾಂವಿ ತಾಲ್ಲೂಕಿನ 28 ಹಾಗೂ ಸವಣೂರ ತಾಲ್ಲೂಕಿನ 21 ಗ್ರಾಮಪಂಚಾಯಿತಿಗಳು ಸೇರಿ 200ಕ್ಕೂ ಅಧಿಕ ಹಳ್ಳಿಗಳಲ್ಲಿ ಮತಗಟ್ಟೆಗಳು ಸ್ಥಾಪನೆಯಾಗಿವೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಒಟ್ಟು ಸ್ಥಾಪನೆಯಾಗಿರುವ ಮತಗಟ್ಟೆಗಳು 241 ಮತಗಟ್ಟೆಗಳು. ಇದರಲ್ಲಿ 92 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಉಳಿದವು ಸಾಮಾನ್ಯ ಮತಗಟ್ಟೆಗಳು. ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಯಾಗಿ 10 ಮಂದಿ ವೀಕ್ಷಕರನ್ನು ನೇಮಿಸಲಾಗಿದ್ದು, ಭಾರೀ ಭದ್ರತೆಯನ್ನೂ ಒದಗಿಸಲಾಗಿದೆ. ಚುನಾವಣೆ ಕಾರ್ಯಕ್ಕೆಂದು ಒಟ್ಟು 1,060 ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅವರೆಲ್ಲರೂ ಇಂದೇ ಮತಗಟ್ಟೆ ಕೇಂದ್ರಗಳಿಗೆ ತೆರಳಿದ್ದಾರೆ.

ಅದೇ ರೀತಿ ಚುನಾವಣಾ. ಭದ್ರತೆಗೆ ಪೊಲೀಸ್, ಸಿಆರ್​ಪಿಎಫ್, ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎನ್ನುವುದು ಎಸ್ಪಿ ಅಂಶುಕುಮಾರ ನೀಡಿರುವ ವಿವರಣೆ.

121 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಮಾಡಲಾಗಿದೆ. ಮತದಾನದ ಚಿತ್ರೀಕರಣಕ್ಕಾಗಿ ಕ್ಷೇತ್ರದಲ್ಲಿ 20 ವಿಡಿಯೋ ಗ್ರಾಫರ್​​ಗಳನ್ನು ನಿಯೋಜಿಸಲಾಗಿದೆ. ಪ್ರತಿ ಬೂತ್‌ನಲ್ಲೂ ಸಿಬ್ಬಂದಿ ಹಾಜರಿದ್ದು ಮತದಾರರಿಗೆ ಮಾಹಿತಿ ನೀಡಲಿದ್ದಾರೆ.

ಮತಗಟ್ಟೆಗಳಲ್ಲಿ , ಕುಡಿಯುವ ನೀರು,ರ‍್ಯಾಂಪ್ ವ್ಹೀಲ್​​ಚೇರ್‌ ಸೌಲಭ್ಯ ವ್ಯವಸ್ಥೆಗಳನ್ನೂ ಒದಗಿಸಲಾಗಿದೆ, ಹಿರಿಯ ನಾಗರಿಕರ ಮತದಾನಕ್ಕೆ ಬೇಕಾದ ಸಿದ್ದತೆಗಳೂ ಅಗಿವೆ. ಮತಗಟ್ಟೆಗಳನ್ನೂ ಹಲವು ಕಡೆ ಸುಂದರವಾಗಿ ಅಣಿಗೊಳಿಸಲಾಗಿದೆ.

Whats_app_banner