ಪ್ರೇಮಿಗಳ ದಿನಕ್ಕೆ ರಾಜ್ಯದ ಗುಲಾಬಿ ಹೂಗಳಿಗೆ ಫುಲ್ ಡಿಮ್ಯಾಂಡ್; ವಿಶ್ವದಾದ್ಯಂತ ರಫ್ತಾಗುತ್ತಿದೆ ಬೆಂಗಳೂರಿನ ಬಣ್ಣದ ಗುಲಾಬಿಗಳು
ವಿಶ್ವ ಪ್ರೇಮಿಗಳ ದಿನದಂದು ಗುಲಾಬಿ ಹೂಗಳಿಗೆ ಸಖತ್ ಡಿಮ್ಯಾಂಡ್. ಬೆಂಗಳೂರಿನ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ ಎಲ್ಲಿ ನೋಡಿದರೂ ಗುಲಾಬಿಗಳ ರಾಶಿ ತುಂಬಿದೆ. ಹತ್ತಾರು ಬಣ್ಣದ ಗುಲಾಬಿಗಳು ಹತ್ತಾರು ನಗರ, ದೇಶಗಳಿಗೆ ರಫ್ತಾಗುತ್ತದೆ. ಬಹುಶಃ ಜಗತ್ತಿನ ಪ್ರೇಮಿಗಳು ಅತಿ ಹೆಚ್ಚು ಬಳಸುವುದು ಬೆಂಗಳೂರಿನ ಗುಲಾಬಿ. (ವರದಿ: ಎಚ್. ಮಾರುತಿ)
ಬೆಂಗಳೂರು: ಪ್ರೇಮಿಗಳ ದಿನ ಎಂದರೆ ಗುಲಾಬಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ. ಅದೆಷ್ಟೇ ಬೆಲೆಯಾದರೂ ಪ್ರೀತಿ ಪಾತ್ರರಿಗೆ ಗುಲಾಬಿ ಹೂ ನೀಡುವ ಮೂಲಕ ಅಥವಾ ನಾವಿಷ್ಟ ಪಟ್ಟವರಿಂದ ಗುಲಾಬಿ ಹೂ ಸ್ವೀಕಾರ ಮಾಡಿದ್ರೆ ಏನೋ ಸಂತೃಪ್ತಿ. ಬೇರೆಲ್ಲಾ ದಿನ ಸಿಗುವ ಗುಲಾಬಿಗಿಂತ ಅಂದು ಸಿಗುವ ಗುಲಾಬಿ ಬಹಳ ಸ್ಟೆಷಲ್ ಆಗಿ ಕಾಣಿಸೋದು ನಿಜ.
ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಇದೆ. ಪ್ರತಿ ದಿನ ಇಲ್ಲಿ ಹೂಗಳ ಹರಾಜು ನಡೆಯುತ್ತಲೇ ಇರುತ್ತದೆಯಾದರೂ ವ್ಯಾಲೆಂಟೈನ್ ಡೇ ಅಂಗವಾಗಿ ಒಂದು ವಾರ ಗುಲಾಬಿ ಹೂಗಳ ಬೆಟ್ಟವನ್ನೆ ಕಾಣಬಹುದು. ಒಂದಲ್ಲ, ಎರಡಲ್ಲ ಹತ್ತಾರು ಬಣ್ಣದ ಗುಲಾಬಿ ಹೂಗಳು ಇಲ್ಲಿಗೆ ಆಗಮಿಸುತ್ತವೆ.
ಹೆಬ್ಬಾಳ ಸಮೀಪ ಕೃಷಿ ವಿಶ್ವವಿದ್ಯಾಲಯ ಪಕ್ಕದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ (ಐಎಫ್‌ಎಬಿ)ವಿದೆ.
ಇಲ್ಲಿಂದ ಈ ವಾರದಲ್ಲಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಅಪಾರ ಪ್ರಮಾಣದಲ್ಲಿ ಗುಲಾಬಿ ರಫ್ತಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತ
ದೊಡ್ಡಬಳ್ಳಾಪುರ, ಕೋಲಾರ ಚಿಕ್ಕಬಳ್ಳಾಪುರ ಮೊದಲಾದ ಪ್ರದೇಶಗಳಿಂದ ಇಲ್ಲಿಗೆ ಹೂಗಳ ಮಾರಾಟಗಾರರು ತಾವು ಬೆಳೆದ ಹೂಗಳನ್ನು ಹೊತ್ತು ತರುತ್ತಾರೆ. ಇಲ್ಲಿನ ಮಣ್ಣಿನ ಹವಾ ಗುಲಾಬಿಗೆ ಹೇಳಿ ಮಾಡಿಸಿದಂತಿದ್ದು, ಹಾಗಾಗಿ ಇಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗುಲಾಬಿ ಬೆಳೆಯುತ್ತಾರೆ. ಇಲ್ಲಿನ ಗುಲಾಬಿಗಳಿಗೆ ದೇಶ ವಿದೇಶಗಳಲ್ಲಿ ಬಾರಿ ಬೇಡಿಕೆ ಇದೆ.
ಈ ಗುಲಾಬಿಗಳಿಗೆ ವಿಶೇಷ ಗುಣವಿದೆ. ಗುಲಾಬಿಗಳನ್ನು ಕತ್ತರಿಸಿದ ಬಳಿಕ ಏಳು ದಿನಗಳವರೆಗೆ ತಾಜಾವಾಗಿ ಇರುತ್ತದೆ. ಇಲ್ಲಿ ಹೂಗಳ ಹರಾಜು ಪ್ರಕ್ರಿಯೆ ನಂತರ ಬೇರೆ ಬೇರೆ ಸ್ಥಳಗಳಿಗೆ ಪೂರೈಕೆಯಾಗುತ್ತದೆ. ಈ ಕೇಂದ್ರದಲ್ಲಿ ಶೀತಲೀಕರಣ ವ್ಯವಸ್ಥೆ ಇದ್ದು ಕೆಡುವ ಪ್ರಮೇಯವೇ ಬರುವುದಿಲ್ಲ.
ʼಇಲ್ಲಿ ನೋಂದಣಿ ಮಾಡಿಸಿದ ಹೂ ಬೆಳೆಗಾರರಿಗೆ ಹಾಗೂ ಖರೀದಿದಾರರಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶವಿದೆ. 235 ರೈತರು ಹಾಗೂ 200ಕ್ಕೂ ಹೆಚ್ಚು ಖರೀದಿದಾರರು ಈ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದಾರೆ. ಪ್ರತಿನಿತ್ಯ ನಡೆಯುವ ವಹಿವಾಟಿನಲ್ಲಿ 80ರಿಂದ 100 ರೈತರು ಹಾಗೂ 30ರಿಂದ 40 ಖರೀದಿದಾರರು ಪ್ರತಿದಿನದ ವ್ಯಾಪಾರ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಾರೆʼ ಎಂದು ಐಎಫ್‌ಎಬಿ ಸಹಾಯಕ ಮುಖ್ಯ ವ್ಯವಸ್ಥಾಪಕಿ ವೀಣಾ ಹೇಳುತ್ತಾರೆ.
ಈ ಐಎಫ್‌ಎಬಿ ಕೇಂದ್ರದಿಂದ ಗುಜರಾತ್, ರಾಜಸ್ಥಾನ ಹಾಗೂ ಉತ್ತರ ಪ್ರದೇಶ, ಒಡಿಶಾ ಸೇರಿದಂತೆ ಹಲವು ರಾಜ್ಯಗಳು, ಗುವಾಹಟಿ ಚೆನ್ನೈ, ಕೋಲ್ಕತ್ತ, ದೆಹಲಿ, ಮುಂಬೈ, ಹೈದರಾಬಾದ್, ಚಂಡೀಗಢ ಸೇರಿದಂತೆ ಪ್ರಮುಖ ನಗರಗಳು ಹಾಗೂ ಸಿಂಗಾಪುರ, ಮಲೇಷ್ಯಾ, ಅರಬ್ ರಾಷ್ಟ್ರಗಳು ಮತ್ತು ನ್ಯೂಜಿಲ್ಯಾಂಡ್‌ಗೆ ಪ್ರತಿನಿತ್ಯ ಲಕ್ಷಾಂತರ ಗುಲಾಬಿಗಳು ರಫ್ತಾಗುತ್ತಿವೆ.
ಫೆಬ್ರುವರಿ 14ರ ಪ್ರೇಮಿಗಳ ದಿನಕ್ಕೆ ಕಟಾವಿಗೆ ಬರುವ ಹಾಗೆ ರೈತರು ಗುಲಾಬಿ ಬೆಳೆಯುತ್ತಾರೆ. ಈ ತಿಂಗಳ ಎರಡನೇ ವಾರದಲ್ಲಿ ಪ್ರತಿನಿತ್ಯ ಬರುವ ಗುಲಾಬಿಗಳ ಪ್ರಮಾಣ ಹೆಚ್ಚುತ್ತದೆ ಮತ್ತು ಫೆ. 14ರ ಪ್ರೇಮಿಗಳ ದಿನಕ್ಕೆ ಮುಂಚಿತವಾಗಿ ಇಲ್ಲಿಂದ ಪೂರೈಕೆಯಾಗುವ ಗುಲಾಬಿ ಹೂಗಳ ಸಂಖ್ಯೆ ದುಪ್ಪಟ್ಟಾಗುತ್ತದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಗುಲಾಬಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಈ ಕೇಂದ್ರಕ್ಕೆ ಪ್ರತಿನಿತ್ಯ 5 ಲಕ್ಷ ಗುಲಾಬಿಗಳು ಪೂರೈಕೆಯಾಗುತ್ತವೆ. ಕಳೆದ ವರ್ಷ ಈ ಹಬ್ಬಕ್ಕೆ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಗುಲಾಬಿಗಳು ಪೂರೈಕೆಯಾಗಿದ್ದವು. ಈ ವರ್ಷ ಪ್ರತಿನಿತ್ಯ 9 ಲಕ್ಷದಿಂದ 10 ಲಕ್ಷ ಗುಲಾಬಿಗಳು ಪೂರೈಕೆಯಾಗಿವೆ. ಅಂದಾಜು 50 ಲಕ್ಷ ಗುಲಾಬಿಗಳು ಇಲ್ಲಿಂದ ಪೂರೈಕೆಯಾಗಿವೆ ಎಂದು ವೀಣಾ ತಿಳಿಸಿದ್ದಾರೆ.
ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಇಲ್ಲಿ ಕೆಂಗುಲಾಬಿಗೆ 15 ರೂಪಾಯಿಗೆ ಒಂದರಂತೆ ಹರಾಜಿನಲ್ಲಿ ಮಾರಾಟವಾಗಿತ್ತು. ಹೋದ ವರ್ಷ ನೇರಳೆ ಬಣ್ಣದ ಅಥವಾ ನ್ಯೂ ಆರ್ಲಿಯನ್ಸ್ ಗುಲಾಬಿ ಒಂದಕ್ಕೆ ಗರಿಷ್ಠ ದರ ₹40ರಂತೆ ಹರಾಜಿನಲ್ಲಿ ಮಾರಾಟವಾಗಿತ್ತು ಎಂದು ವೀಣಾ ಹೇಳುತ್ತಾರೆ.