ಉಪ ಚುನಾವಣೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯೇ; ಮುಡಾ, ವಾಲ್ಮೀಕಿ ಹಗರಣ, ವಕ್ಫ್ ನೋಟೀಸ್ ವಿವಾದಗಳ ಪರಿಣಾಮ ಸಿದ್ದರಾಮಯ್ಯರ ಮೇಲೆ ಹೇಗಿರಬಹುದು?
Nov 05, 2024 07:44 AM IST
ಕರ್ನಾಟಕ ವಿಧಾನಸಭೆಯ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ಕ್ಞೇತ್ರಗಳ ಉಪಚುನಾವಣೆಯ ಫಲಿತಾಂಶ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮೇಲಾಗಬಹುದೇ ಎನ್ನುವ ಚರ್ಚೆಗಳು ನಡೆದಿವೆ.
- Karnataka Assembly Election Effect: ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಉಪ ಚುನಾವಣೆ ಮೇಲೆ ಇತ್ತೀಚಿನ ಹಗರಣ, ವಿವಾದಗಳ ಪರಿಣಾಮ ಬೀರಬಹುದು, ಸಿದ್ದರಾಮಯ್ಯ ಅವರ ನಾಯಕತ್ವ ಪರೀಕ್ಷೆಗೂ ವೇದಿಕೆ ಆಗಬಹುದೇ. ಇಲ್ಲಿದೆ ವಿಶ್ಲೇಷಣೆ.
- ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರು: ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಬಹುದೇ ಎನ್ನುವ ಚರ್ಚೆಗಳು ನಡೆದಿವೆ.. ಏಕೆಂದರೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ ವರ್ಷದ ನಂತರ ಈ ಚುನಾವಣೆ ನಡೆಯುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ಅವಾಸ್ತವ ಭರವಸೆಗಳನ್ನು ನೀಡಿ ಮತದಾರರನ್ನು ಮರುಳುಗೊಳಿಸುತ್ತಿದೆಎಂದು ವಾಗ್ದಾಳಿ ನಡೆಸಿದ್ದರು. ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಸಾಮಾನ್ಯ ಚುನಾವಣೆ ಮತ್ತು ಕರ್ನಾಟಕದ ಉಪ ಚುನಾವಣೆ ಹಿನ್ನಲೆಯಲ್ಲಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗಳ ಅಗ್ನಿ ಪರೀಕ್ಷೆ ಎಂದರೂ ತಪ್ಪಾಗಲಿಕ್ಕಿಲ್ಲ.
ಮೋದಿ ಏಟು- ಸಿದ್ದರಾಮಯ್ಯ ಎದಿರೇಟು
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಅವರ ಗ್ಯಾರಂಟಿಗಳನ್ನು ಪೂರೈಸಲು ಅಸಾಧ್ಯ. ಈ ರಾಜ್ಯಗಳ ಜನರನ್ನು ಕಾಂಗ್ರೆಸ್ ವಂಚಿಸುತ್ತಿದೆ ಎಂಬುದು ಮೋದಿ ಅವರ ಕಟು ಟೀಕೆ. ಇವರ ಕುತಂತ್ರ ರಾಜಕಾರಣಕ್ಕೆ ನಾಗರೀಕರು ಬಲಿಪಶುಗಳಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿಆಕ್ರೋಶ ಹೊರಹಾಕಿದ್ದರು.
ಮೋದಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಕ ಎದಿರೇಟು ಕೊಟ್ಟಿದ್ದಾರೆ. ಈಭರವಸೆಗಳು ಕೇವಲ ಚುನಾವಣೆ ಎದುರಿಸಲು ಮಾತ್ರ ನೀಡಿರುವುದಲ್ಲ. ಅವರ ಜೀವನವನ್ನು ಸುಧಾರಿಸಲು ನೀಡಿದ ಗ್ಯಾರಂಟಿಗಳಾಗಿವೆ. 52 ಸಾವಿರ ಕೋಟಿ ರೂ.ಗಳ ಅನುದಾನದಲ್ಲಿ ಈ ಭರವಸೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬೇಕಿದ್ದಲ್ಲಿ ಅಂಕಿಅಂಶಗಳ ಸಹಿತ ಬಹಿರಂಗ ಚರ್ಚೆಗೆ ಸಿದ್ದ ಎಂದು ತಿರುಗೇಟು ನೀಡಿದ್ದರು.
ಬಿಜೆಪಿ ಪರಿಸ್ಥಿತಿ ಹೇಗಿದೆ ಎಂದರೆ ಈ ಗ್ಯಾರಂಟಿಗಳನ್ನು ಬಲವಾಗಿ ಟೀಕಿಸಲೂ ಆಗುತ್ತಿಲ್ಲ. ಒಂದು ವೇಳೆ ಟೀಕಿಸಿದರೆ ಉಪ ಚುನಾವಣೆಯಲ್ಲಿ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಇದ್ದೇ ಇರುತ್ತದೆ. ಬದಲಾಗಿ ಈ ಗ್ಯಾರಂಟಿಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣ ತಲುಪುತ್ತಿಲ್ಲ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ನಾಯಕತ್ವ ಪರೀಕ್ಷೆ
ಈ ಉಪ ಚುನಾವಣೆ ಕೇವಲ ಕಾಂಗ್ರೆಸ್ ಸರ್ಕಾರದ ಭವಿಷ್ಯವನ್ನು ಮಾತ್ರ ನಿರ್ಧರಿಸುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ಒರೆಗೆ ಹಚ್ಚಿವೆ. ಜೊತೆಗೆ 4 ದಶಕಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ವೈಯಕ್ತಿಕವಾಗಿ ಅವರ ಶುಭ್ರ ಶ್ವೇತ ವಸ್ತ್ರಕ್ಕೆ ಮುಡಾ ಎಂಬ ಕಳಂಕ ಮೆತ್ತಿಕೊಂಡಿದೆ.
ವಾಲ್ಮೀಕಿ ಹಗರಣ ಬೆಂಬಿಡದೆ ಕಾಡುತ್ತಿದೆ. ಮೂರರಲ್ಲಿ ಸಂಡೂರು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು ಯಾವ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ವಕ್ಪ್ ನೋಟಿಸ್ ಎಫೆಕ್ಟ್
ಐದು ಗ್ಯಾರಂಟಿಗಳ ಕುದುರೆ ಕಟ್ಟಿ ನಾಗಾಲೋಟದಲ್ಲಿ ಸಾಗುತ್ತಿರುವ ಸರ್ಕಾರಕ್ಕೆ ವಕ್ಫ್ ನೋಟಿಸ್ ಹಗರಣ ಬ್ರೇಕ್ ಹಾಕಿದೆ. ಚುನಾವಣೆ ನಡೆಯುತ್ತಿರುವ ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳ ಮತದಾರರಿಗೂ ನೋಟಿಸ್ ತಲುಪಿದ್ದು, ಸರ್ಕಾರಕ್ಕೆ ತಲೆ ಬಿಸಿಯಾಗಿದೆ. ಭಾನುವಾರ ಇಲಾಖೆಯ ಸಭೆ ನಡೆಸಿದ ಸಿಎಂ ಮತ್ತು ಡಿಸಿಎಂ ವಕ್ಫ್ ಇಲಾಖೆ ನೀಡಿರುವ ನೋಟಿಸ್ ಗಳನ್ನು ಹಿಂಪಡೆಯುವುದಾಗಿ ಒಂದಲ್ಲ, ಎರಡಲ್ಲ, ಹತ್ತು ಬಾರಿ ಇಡೀ ಸರ್ಕಾರ ಮನವರಿಕೆ ಮಾಡಿಕೊಡುತ್ತಲೇ ಇದೆ.
ಆದರೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇದೇ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗರಿಷ್ಠ ಲಾಭ ಮಾಡಿಕೊಳ್ಳಲು ಹವಣಿಸುತ್ತಿವೆ. ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ಇಡೀ ರಾಜ್ಯಾದ್ಯಂತ ಹೋರಾಟದ ಕಿಚ್ಚನ್ನು ಹಬ್ಬಿಸಿದೆ. ಈ ಎಲ್ಲಾ ಪರಿಣಾಮಗಳು ಚುನಾವಣೆ ಮೇಲೆ ಆಗಲಿದೆಯೇ ಎನ್ನುವ ಫಲಿತಾಂಶದ ಜತೆಗೆ ಮತಗಣಿತದ ಲೆಕ್ಕಾಚಾರ ನೋಡಲು ನವೆಂಬರ್ 23 ರ ವರೆಗೆ ಕಾಯಬೇಕು.
ಫಲಿತಾಂಶ ಏನೇ ಆದರೂ ಬಹುಮತ ಹೊಂದಿರುವ ಸರ್ಕಾರಕ್ಕೆ ಧಕ್ಕೆ ಉಂಟಾಗುವುದಿಲ್ಲ ಎನ್ನುವುದು ನಿಜವಾದರೂ ಸರ್ಕಾರದ ನಡೆ ಕುರಿತು ಮತದಾರನ ಅಭಿಪ್ರಾಯವೇನು ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ಒಟ್ಟಿನಲ್ಲಿ ಮೂರರಲ್ಲಿ ಎರಡನ್ನು ಸೋತರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂತ್ಯದ ಆರಂಭ ಶುರುವಾಗುತ್ತದೆ ಎಂದು ನಿಶ್ಚಿತವಾಗಿ ಹೇಳಬಹುದು.
ಸುದ್ದಿ ವಿಶ್ಲೇಷಣೆ: ಎಚ್. ಮಾರುತಿ, ಬೆಂಗಳೂರು