ನನ್ನ ವಿರುದ್ದ ಬಿಜೆಪಿಯಿಂದ ಸುಳ್ಳು ಆರೋಪ, ದೇವೇಗೌಡರಿಂದ ಗರ್ವಭಂಗದ ಟೀಕೆಗೆ ಜನರಿಂದ ತಕ್ಕ ಉತ್ತರ: ಸಿದ್ದರಾಮಯ್ಯ ಟೀಕಾ ಪ್ರಹಾರ ಹೇಗಿತ್ತು
Nov 23, 2024 04:56 PM IST
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆದ್ದ ನಂತರ ಸಿಎಂ ಸಿದ್ದರಾಮಯ್ಯ ಉತ್ಸಾಹದಿಂದಲೇ ಮಾತನಾಡಿದರು.
- Karnataka by election results 2024: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಚುನಾವಣೆ ವೇಳೆ ಎದುರಾದ ಟೀಕೆಗಳಿಗೆ, ಫಲಿತಾಂಶ ಕುರಿತಾಗಿ ಸಿಎಂ ಸಿದ್ದರಾಮಯ್ಯ ಉತ್ತರವನ್ನು ನೀಡಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆದ್ದ ನಂತರ ಸಿಎಂ ಸಿದ್ದರಾಮಯ್ಯ ಉತ್ಸಾಹದಿಂದಲೇ ಮಾತನಾಡಿದರು.
ಬೆಂಗಳೂರು: ಈ ಉಪಚುನಾವಣಾ ಫಲಿತಾಂಶ ಬೇರೆ ಕಾರಣಕ್ಕಾಗಿ ನನಗೆ ಮಹತ್ವದ್ದಾಗಿತ್ತು. ಈ ಬಾರಿ ನಾನು ಮುಖ್ಯಮಂತ್ರಿಯಾದ ನಂತರ ನನ್ನ ಮತ್ತು ನಮ್ಮ ಸರ್ಕಾರದ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಾ ನನ್ನ ಚಾರಿತ್ರ್ಯ ಹರಣ ಮಾಡುವ ಪ್ರಯತ್ನವನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಾ ಬಂದಿ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರಂತೂ ನನ್ನ ಗರ್ವಭಂಗ ಮಾಡಬೇಕು ಎನ್ನುವ ಹೇಳಿಕೆಯನ್ನು ನೀಡಿದರು. ಜನರ ಪರವಾಗಿ ಯೋಜನೆ ರೂಪಿಸಿ ಅದನ್ನು ಜಾರಿಗೊಳಿಸಿದರೂ ನನ್ನ ಮೇಲೆ ಈ ಮಟ್ಟಕ್ಕೂ ಚುನಾವಣೆಯಲ್ಲಿ ಅಪಪ್ರಚಾರ ಮಾಡಲಾಯಿತು. ಆದರೆ ಜನರೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಎದುರಾಳಿಗಳಿಗೆ ನೀಡಿದ ಉತ್ತರ.
ಸಿದ್ದರಾಮಯ್ಯ ಹೇಳಿದ್ದಿಷ್ಟು
- ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಆರೋಪ ನನಗೆ ಬಹಳ ಬೇಸರ ಆಗಿದೆ. ನಾನು ಬಹಳ ವರ್ಷ ಅವರ ಜೊತೆಗೆ ಇದ್ದವನು. ಆದ್ರೂ ಕೂಡ, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿ, ಸಿದ್ದರಾಮಯ್ಯ ಅಹಂಕಾರ, ಸೊಕ್ಕು ಮುರಿತೀನಿ ಅಂತೆಲ್ಲಾ ಮಾತಾಡಿದರು. ನಾನು ಮಂತ್ರಿ ಆಗಿ 40 ವರ್ಷ ಆಯ್ತು. ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೇನೆ. ಯಾವತ್ತೂ ಸೊಕ್ಕು, ಅಹಂಕಾರ ಮಾಡಿಲ್ಲ. ಜನ ಅವಕಾಶ ಕೊಟ್ಟಾಗ ಅಧಿಕಾರ ನಡೆಸಿದ್ದೇವೆ. ಸೋತಾಗ ಹೋರಾಟ ಮಾಡಿದ್ದೇವೆ. ಸಾಲದ್ದಕ್ಕೆ ದೇವೇಗೌಡರು, ಕುಮಾರಸ್ವಾಮಿ ಅವ್ರು, ನಿಖಿಲ್ ಎಲ್ರೂ ಅಳೋದು. ಅಳೋದನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೂ ಜನ ನಮಗೆ ಮತ ಹಾಕಿದ್ದಾರೆ.
ಇದನ್ನೂ ಓದಿರಿ: Channapatna election results 2024: ಚನ್ನಪಟ್ಟಣದಲ್ಲಿ ಜೆಡಿಎಸ್ ಎಡವಿದ್ದೆಲ್ಲಿ, ಅತೀ ಕುಟುಂಬ ರಾಜಕಾರಣಕ್ಕೆ ಬಿದ್ದ ಹೊಡೆತವೇ: 5 ಅಂಶಗಳು - ಇದು ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ-ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ವಿರೋಧ ಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ. ಈ ಗೆಲುವಿನ ಹಿಂದಿರುವ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಅಪಾರ ಶ್ರಮವನ್ನು ಇದೇ ವೇಳೆ ನೆನೆಯುತ್ತೇನೆ. ಈ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ.
- ನಮ್ಮ ಸರ್ಕಾರದ ಸಾಧನೆಗಳನ್ನು ನಮ್ಮ ಜನ ಬೆಂಬಲಿಸುತ್ತಲೇ ಬಂದಿದ್ದಾರೆ. ನಾನು ದಂತಗೋಪುರದಲ್ಲಿ ಕೂತವನಲ್ಲ, ನಿರಂತರವಾಗಿ ಬಗ್ಗೆ ಜನರ ಜೊತೆ ಒಡನಾಟ ಇಟ್ಟುಕೊಂಡವನು, ನಮ್ಮ ಎಲ್ಲ ಗ್ಯಾರಂಟಿ ಯೋಜನಗಳ ಫಲಾನುಭವಿಗಳು ಖುಷಿಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಧ್ಯಮಗಳ ಮೂಲಕ ಗ್ಯಾರಂಟಿ ಯೋಝನೆಗಳ ಬಗ್ಗೆ ಅಪಪ್ರಚಾರ ಮಾಡುತ್ಗಿದ್ದರು. ಸಾಕ್ಷಾತ್ ಪ್ರಧಾನಿಯವರೇ ನಮ್ಮ ಗ್ಯಾರಂಟಿ ಯೋಜನೆಗಲ ಅನುಷ್ಟಾನದ ಬಗ್ಗೆ ಸುಳ್ಳು ಹೇಳಿದರು. ಮಹಾರಾಷ್ಟ್ರದಲ್ಲಿ ಸುಳ್ಳು ಜಾಹೀರಾತು ನೀಡಿದ್ದರು. ಇದಕ್ಕೆಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿರಿ: Shiggaon byelection results 2024: ಶಿಗ್ಗಾಂವಿ ಬಿಜೆಪಿ ಲೆಕ್ಕಾಚಾರಕ್ಕೆ ಒಳಹೊಡೆತದ ರಾಜಕೀಯ: ಬೊಮ್ಮಾಯಿಗೆ ಒಳೇಟು ಕೊಟ್ಟವರು ಯಾರು - ಈ ಎರಡೂ ಪಕ್ಷಗಳು ಕೂಡಿ ಕೊಂಡು ರಾಜಭವನದಿಂದ ಹಿಡಿದು ಕೇಂದ್ರ ತನಿಖಾ ಸಂಸ್ಥೆಗಳ ವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿ ಹಗರಣವನ್ನು ಸೃಷ್ಟಿಸಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹಣಿಯುವ ಪ್ರಯತ್ನ ಮಾಡಿದ್ದರು. ರಾಜಕೀಯ ದ್ವೇಷಸಾಧನೆಗಾಗಿ ನನ್ನ ಕುಟುಂಬದ ವಿರುದ್ದವೂ ಸುಳ್ಳು ಆರೋಪವನ್ನು ಮಾಡಿ ತನಿಖೆ ನಡೆಸುವಂತೆ ಮಾಡಿದರು. ನನ್ನನ್ನು ಕಟ್ಟಿಹಾಕುವ ದೂರಾಲೋಚನೆಯಿಂದಲೇ ಬಿಜೆಪಿ ನಾಯಕರು ನನ್ನ ಮತ್ತು ನನ್ನ ಪತ್ನಿಯ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆದರೆ ಕರ್ನಾಟಕದ ಜನತೆ ಕಳೆದ ನಾಲ್ಕು ದಶಕಗಳ ನನ್ನ ರಾಜಕಾರಣವನ್ನು ಕಂಡಿದ್ದಾರೆ. ಬಿಜಪೆ ಮತ್ತು ಜೆಡಿಎಸ್ ನಾಯಕರ ಸುಳ್ಳುಗಳನ್ನು ಯಾರೂ ನಂಬಿಲ್ಲ. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ.
- ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರದ ಮೂಲಕ ಧಾರ್ಮಿಕ ಉನ್ಮಾದಗಳನ್ನು ಸೃಷ್ಟಿಸಿ ಜಾತಿ-ಧರ್ಮಗಳ ನಡುವೆ ಒಡಕು ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಯತ್ನಿಸಿದೆ. ಕರ್ನಾಟಕದ ಜಾತ್ಯತೀತ ಮತ್ತು ಶಾಂತಿಪ್ರಿಯ ಇದನ್ನು ಒಪ್ಪಿಕೊಳ್ಳದೆ ನಮ್ಮನ್ನು ಗೆಲ್ಲಿಸಿದ್ದಾರೆ.
ಇದನ್ನೂ ಓದಿರಿ: Karnataka by election results 2024: ಉಮೇದಿನಲ್ಲಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು ಎಲ್ಲಿ, ಕಮಲ ಬಣ ಬಡಿದಾಟ ಫಲವೇ: 10 ಅಂಶಗಳು - ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ದದ ಮತದಾರರ 136 ಸ್ಥಾನಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಆದರೆ ಚುನಾವಣಾ ಫಲಿತಾಂಶದ ಮರುದಿನದಿಂದಲೇ ಬಿಜೆಪಿ ಮತ್ತು ಜೆಡಿಎಸ್ ಕೂಡಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನ ಶುರುಮಾಡಿದ್ದರು. ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ನಮ್ಮ ಶಾಸಕರನ್ನು ಖರೀದಿಸುವ ದುಷ್ಟ ಪ್ರಯತ್ನ ಮಾಡಿದ್ದರು. - ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ರಾಜ್ಯದ ಜನತೆ ಸಹಿಸಿಲ್ಲ ಎನ್ನುವುದನ್ನು ಕೂಡಾ ಈ ಫಲಿತಾಂಶ ಹೇಳಿದೆ.
- ನಾವು ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿದಾಗ ಒಂದಷ್ಟು ವಿರೋಧ ವ್ಯಕ್ತವಾಗಿರುವುದು ನಿಜ. ಇದರಿಂದ ಹಿಂದೂ ಮತ ಧ್ರುವೀಕರಣವಾಗುತ್ತದೆ ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದರು. ನನ್ನ ಮೇಲೆಯೂ ಒತ್ತಡ ಇತ್ತು. ಹೀಗಿದ್ದರೂ ಮುಸ್ಲಿಮ್ ವ್ಯಕ್ತಿಗೆ ನಾವು ಟಿಕೆಟ್ ಕೊಟ್ಟೆವು. ಜಾತಿ-ಧರ್ಮದ ಭೇದ ಮಾಡದೆ ಸಮರ್ಥ ಅಭ್ಯರ‍್ಥಿಗೆ ಮತ ಹಾಕಿ ಎಂದು ಕೇಳಿಕೊಂಡೆವು. ಜನ ನಮ್ಮ ಮಾತಿಗೆ ಒಪ್ಪಿಕೊಂಡು ಶಿಗ್ಗಾಂವ್ ನಲ್ಲಿ ನಮ್ಮ ಅಭ್ಯರ‍್ಥಿಯನ್ನು ಗೆಲ್ಲಿಸಿದ್ದಾರೆ. ಇದು ಬಿಜೆಪಿಯವರ ಕೋಮುವಾದಿ ರಾಜಕಾರಣಕ್ಕೆ ನೀಡಿದ ಉತ್ತರವಾಗಿದೆ
- ಉಪಚುನಾವಣೆಗಳಲ್ಲಿ ಸೋಲು ಬಿಜೆಪಿ ನಾಯಕರ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿ. ಇನ್ನಾದರೂ ಅವರು ರಾಜಕೀಯ ದ್ವೇಷದ ರಾಜಕಾರಣವನ್ನು ಕೈಬಿಟ್ಟು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡಲಿ.