ಮಧ್ಯರಾತ್ರಿ ಬೊಮ್ಮಾಯಿ ತುರ್ತು ಸಭೆ, ಜನೋತ್ಸವ ರದ್ದು, ಪ್ರವೀಣ್ ನೆಟ್ಟಾರು ಹತ್ಯೆಗೆ ಕಾರ್ಯಕರ್ತರ ಆಕ್ರೋಶದ ಬಳಿಕ ರಾಜ್ಯ ಬಿಜೆಪಿ "ಗಂಭೀರʼʼ
Jul 28, 2022 06:20 AM IST
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
- ಬೆಳ್ಳಾರೆಯ ಪ್ರವೀಣ್ ನೆಟ್ಟಾರು (praveen nettaru)ಹತ್ಯೆಯ ಬಳಿಕ ಕಾರ್ಯಕರ್ತರ ಆಕ್ರೋಶವು ರಾಜ್ಯ ಸರಕಾರಕ್ಕೆ ತಲ್ಲಣ ಉಂಟು ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರು ಮಧ್ಯರಾತ್ರಿ 12.15ಕ್ಕೆ ತುರ್ತು ಸಭೆ ಕರೆದು ಇಂದು (ಜುಲೈ 28)ಕ್ಕೆ ಹಮ್ಮಿಕೊಂಡಿದ್ದ "ಸಾಧನಾ ಸಮಾವೇಶ- ಜನೋತ್ಸವ" ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ.
ಬೆಂಗಳೂರು: ಬೆಳ್ಳಾರೆಯ ಪ್ರವೀಣ್ ನೆಟ್ಟಾರು (praveen nettaru) ಹತ್ಯೆಯ ಬಳಿಕ ಕಾರ್ಯಕರ್ತರ ಆಕ್ರೋಶವು ರಾಜ್ಯ ಸರಕಾರಕ್ಕೆ ತಲ್ಲಣ ಉಂಟು ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರು ಮಧ್ಯರಾತ್ರಿ 12.15ಕ್ಕೆ ತುರ್ತು ಸಭೆ ಕರೆದು ಇಂದು (ಜುಲೈ 28)ಕ್ಕೆ ಹಮ್ಮಿಕೊಂಡಿದ್ದ "ಸಾಧನಾ ಸಮಾವೇಶ- ಜನೋತ್ಸವ" ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯು ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಮೊನ್ನೆ ರಾತ್ರಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನದ ಸಮಯದಲ್ಲಿ ಕಟ್ಟೆಯೊಡೆದ ಕಾರ್ಯಕರ್ತರ ಆಕ್ರೋಶ, ಬಿಜೆಪಿ ವಿರುದ್ಧ ದಿಕ್ಕಾರ, ಕಾರ್ಯಕರ್ತರ ನೋವನ್ನು ಗಮನಿಸಿದ ಬಿಜೆಪಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಮಧ್ಯರಾತ್ರಿ ತುರ್ತು ಸಭೆ ಬಳಿಕ ಬಸವರಾಜ ಬೊಮ್ಮಾಯಿ ಅವರು ಆರ್.ಟಿ. ನಗರದ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ 12.30ಕ್ಕೆ ತುರ್ತು ಸುದ್ದಿ ಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಗೂ ಮುನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರಿಗೆ ಜನೋತ್ಸವ ರದ್ದಾದ ಮಾಹಿತಿಯನ್ನು ಮತ್ತು ರಾಜ್ಯದ ಬೆಳವಣಿಗೆಗಳ ಬಗ್ಗೆ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
"ನಿನ್ನೆಯಿಂದ ಬಹಳ ತೊಳಲಾಟದಲ್ಲಿ ಕಳೆದೆ. ಪ್ರವೀಣ್ ನೆಟ್ಟಾರು ಅವರ ತಾಯಿಯ ಆಕ್ರಂದನ, ಪ್ರವೀಣ್ ನೆಟ್ಟರು ಹತ್ಯೆಯ ನೋವು, ಯುವ ಸಮುದಾಯದ ಭಾವನೆಗಳಿಂದ ಮನಸ್ಸಿಗೆ ಬೇಸರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ನಮ್ಮ ಪಕ್ಷದ ಕಾರ್ಯಕರ್ತರ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಜನೋತ್ಸವವನ್ನು ರದ್ದುಪಡಿಸಲಾಗಿದೆʼʼ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
"ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ನಮ್ಮ ಪಕ್ಷದ ಯುವ ಜನತೆಯ ಆಕ್ರೋಶವನ್ನು ಗಮನಿಸಿದೆ. ಪ್ರವೀಣ್ ನೆಟ್ಟಾರು ಅವರ ತಾಯಿಯ ನೋವು, ಆಕ್ರಂದನದಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇಂತಹ ದುಃಖದ ಸಂದರ್ಭದಲ್ಲಿ ಸಾಧನಾ ಸಮಾವೇಶ- ಜನೋತ್ಸವದಲ್ಲಿ ಭಾಗಿಯಾಗಲು ಮನಸ್ಸು ಒಪ್ಪದು. ಹೀಗಾಗಿ ಜನೋತ್ಸವವನ್ನು ಮುಂದೂಡುವ ತೀರ್ಮಾನಕ್ಕೆ ಬಂದೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಏಕೆ ಜನೋತ್ಸವ?
ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸರಕಾರದ ಅನೇಕ ಜನಪರ ಕಾರ್ಯಕ್ರಮಗಳನ್ನು ಮತ್ತು ಮುಂದಿನ ಯೋಜನೆಗಳನ್ನು ಘೋಷಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯು ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ, ರಾಜ್ಯದ ಬಿಜೆಪಿ ಕಾರ್ಯಕರ್ತರು, ಯುವ ಸಮುದಾಯವು ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ನೋವಿನಲ್ಲಿರುವಾಗ ಈ ಕಾರ್ಯಕ್ರಮ ನಡೆಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಜುಲೈ 28ರಂದು ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ. ನಾವು ಹಮ್ಮಿಕೊಂಡ ಹಿಂದುಳಿದ ಜನರ, ದಲಿತರ, ಯುವಕರ, ಮಹಿಳೆಯರ ಪರವಾದ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರೆಯಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜನೋತ್ಸವ ರದ್ದು ಪಡಿಸಿರುವುದರಿಂದ ನಮ್ಮ ಮುಂದಿನ ಯೋಜನೆಗಳು, ಜನಪರ ಕಾರ್ಯಕ್ರಮಗಳ ವಿವರಗಳನ್ನು ಇಂದು ಮಾಧ್ಯಮದವರ ಮುಂದೆ ಇಡಲಾಗುವುದು. ಇದಕ್ಕಾಗಿ ಇಂದು ಬೆಳಗ್ಗೆ ವಿಶೇಷ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಜನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಸಚಿವರಾದ ಸುಧಾಕರ್, ಮುನಿರತ್ನ, ನಾಗರಾಜ್ ಮತ್ತು ಇತರೆ ಎಲ್ಲಾ ಬಿಜೆಪಿ ಕಾರ್ಯಕರ್ತರಲ್ಲಿ ಕಾರ್ಯಕ್ರಮ ರದ್ದುಗೊಳಿಸಿರುವುದಕ್ಕೆ ಕ್ಷಮೆ ಕೇಳುತ್ತಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.