ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೇ 20ಕ್ಕೆ ಪ್ರಮಾಣವಚನ, ಡಿಕೆ ಶಿವಕುಮಾರ್‌ಗೆ ಡಿಸಿಎಂ ಸ್ಥಾನ
May 18, 2023 07:15 AM IST
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಕಗ್ಗಂಟಾಗಿದೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇವರಿಬ್ಬರಲ್ಲಿ ಮುಖ್ಯಮಂತ್ರಿ ಯಾರೆಂದು ಘೋಷಣೆ ಮಾಡುವ ಸಾಧ್ಯತೆಯಿದೆ.
ಸುರ್ಜೆವಾಲಾ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
ಎಐಸಿಸಿಯ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ದೆಹಲಿ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರು. ಇಬ್ಬರು ನಾಯಕರು ಕೆಲ ಹೊತ್ತು ಮಾತುಕತೆ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕೆ.ಸಿ.ವೇಣುಗೋಪಾಲ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನವದೆಹಲಿಯಲ್ಲಿರುವ ನಿವಾಸಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ನೀಡಿದ್ದಾರೆ. ಖರ್ಗೆ ಅವರ ಜತೆಗೆ ಮಾತುಕತೆ ಮುಂದುವರಿದಿದೆ.
ಸುರ್ಜೆವಾಲಾ ಮತ್ತು ಡಿಕೆ ಶಿವಕುಮಾರ್ ಜತೆಯಾಗಿ ಹೋದುದು ಎಲ್ಲಿಗೆ?
ಎಐಸಿಸಿಯ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ತಮ್ಮ ದೆಹಲಿಯ ನಿವಾಸದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜತೆಗೆ ಹೊರ ಹೋದರು. ಇಬ್ಬರು ತಮ್ಮ ತಮ್ಮ ಕಾರುಗಳಲ್ಲಿ ಬೆನ್ನುಬೆನ್ನಿಗೆ ಹೋದ ದೃಶ್ಯ ಕಂಡುಬಂತು ಎಂದು ಪಿಟಿಐ ವರದಿ ಮಾಡಿದೆ.
ಒಳಜಗಳ ಅಲ್ಲ, ಸೀನ್ ದೆಹಲಿಗೆ ಶಿಫ್ಟ್ ಆಗಿದೆ ಅಷ್ಟೆ; ಜಿ.ಪರಮೇಶ್ವರ್ ಹೇಳಿಕೆ
ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಿಸುವುದು ವಿಳಂಬವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್, "ಇದು ಒಳ ಜಗಳ ಅಲ್ಲ. ಸೀನ್ ದೆಹಲಿಗೆ ಶಿಫ್ಟ್ ಆಗಿದೆ ಅಷ್ಟೆ. ನಾನು ಕೂಡ 8 ವರ್ಷ ಕಾಲ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. 2013ರಲ್ಲಿ ನಾನು ಉಪಮುಖ್ಯಮಂತ್ರಿ ಆಗಿದ್ದೆ. ನನಗೆ ಹಿರಿತನವೂ ಇದೆ, ಸರಕಾರ ನಡೆಸುವ ಸಾಮರ್ಥ್ಯವೂ ಇದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ದೆಹಲಿ ನಿವಾಸಕ್ಕೆ ಎಂ.ಬಿ.ಪಾಟೀಲ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ರಾಜಾಜಿ ಮಾರ್ಗ 10ರಲ್ಲಿರುವ ನಿವಾಸಕ್ಕೆ ಎಂ.ಬಿ.ಪಾಟೀಲ್ ಭೇಟಿ ನೀಡಿದ್ದಾರೆ. ಅಲ್ಲಿ ಅವರು ರಾಜ್ಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು.
ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಅರ್ಜಿ ವಿಚಾರಣೆ ಜುಲೈ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 14ಕ್ಕೆ ಮುಂದೂಡಿದೆ. ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ. ವಿವರ ವರದಿ ಇಲ್ಲಿದೆ - DA Case: ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಕೇಸ್; ಸಿಬಿಐ ಅರ್ಜಿ ವಿಚಾರಣೆ ಜುಲೈ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
ತರಾತುರಿಯಲ್ಲಿ ಸಿಎಂ ಆಯ್ಕೆ ಅಸಾಧ್ಯ; ಇನ್ನೂ ಬೇಕು ಕನಿಷ್ಠ 48 ಗಂಟೆ ಎಂದ ಕಾಂಗ್ರೆಸ್ ವರಿಷ್ಠರು
ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ತರಾತುರಿಯ ನಿರ್ಣಯವನ್ನು ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವುದಿಲ್ಲ. ಎಲ್ಲರೊಡನೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಣಯ ಪ್ರಕಟಿಸಲಿದ್ದಾರೆ. ಹೀಗಾಗಿ ಸಿಎಂ ಯಾರು ಎಂಬುದನ್ನು ಘೋಷಣೆ ಮಾಡುವಾಗ ಇನ್ನೂ 48 ಗಂಟೆ ಆಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸಿಎಂ ನಾನಾಗದೇ ಹೋದರೆ ನೀವೇ ಸಿಎಂ ಆಗಿ; ಖರ್ಗೆ ಅವರಿಗೆ ಡಿಕೆ ಶಿವಕುಮಾರ್ ಆಗ್ರಹ
ನನಗೆ ಸಿಎಂ ಆಗಲು ಅವಕಾಶ ನೀಡದಿದ್ದರೆ ನೀವೇ ಸಿಎಂ ಆಗಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಗ್ರಹಿಸಿದ್ದೇನೆ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಸೋತಿದ್ದೆವು. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಈ ಸಲ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ ಎಂದು ಡಿಕೆ ಶಿವಕುಮಾರ್ ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡುತ್ತ ಹೇಳಿದರು.
ಇದನ್ನೂ ಓದಿ| Opinion: ಸಿದ್ದರಾಮಯ್ಯ ಸಿಎಂ ಆಗದೇ ಡಿಕೆ ಶಿವಕುಮಾರ್ ಸಿಎಂ ಆದರೆ ಅಥವಾ ಡಿಕೆ ಶಿವಕುಮಾರ್ ಸಿಎಂ ಆಗದೇ ಸಿದ್ದರಾಮಯ್ಯ ಸಿಎಂ ಆದರೆ….
ಪ್ರಮಾಣ ವಚನ ತಯಾರಿ ನಿಧಾನ
ಮುಖ್ಯಮಂತ್ರಿ ಯಾರು ಎಂಬುದು ನಿರ್ಧಾರವಾಗದ ಕಾರಣ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ನಡೆಸಲಾಗುತ್ತಿದ್ದ ತಯಾರಿಯ ವೇಗ ಕಡಿಮೆ ಆಗಿದೆ. ಪೂರ್ವ ನಿಗದಿಯಂತಾಗಿದ್ದರೆ ನಾಳೆ ಅಪರಾಹ್ನ ಮುಖ್ಯಮಂತ್ರಿಯವರ ಪ್ರಮಾಣ ವಚನ ನಡೆಯಬೇಕಾಗಿತ್ತು. ಆದರೆ ಈಗ ಇದು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.
ಡಿಕೆ ಸುರೇಶ್ ದೆಹಲಿ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಭೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕಮಾರ್ ದೆಹಲಿಯಲ್ಲಿರುವ ತಮ್ಮ ಸಹೋದರ ಸಂಸದ ಡಿಕೆ ಸುರೇಶ್ ಅವರ ನಿವಾಸದಲ್ಲಿ ಪಕ್ಷದ ನಾಯಕರು ಮತ್ತು ಬೆಂಬಲಿಗರೊಂದಿಗೆ ಸಂಜೆ ಸಭೆ ನಡೆಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದಿದ್ದ ನಾಯಕರಿಗೆ ನೋಟಿಸ್‌ಗೆ ಸೂಚನೆ
ಕಾಂಗ್ರೆಸ್ ವರಿಷ್ಠರು ಘೋಷಿಸುವ ಮೊದಲೇ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಘೋಷಿಸಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಅಶೋಕ್ ಪಟ್ಟಣ್ಗೆ ಶೋಕಾಸ್ ನೋಟಿಸ್ ನೀಡುವಂತೆ ಎಐಸಿಸಿಯ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸೂಚಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಯಾರು? ಬಗೆಹರಿಯದ ಕಗ್ಗಂಟು
ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಣಯಿಸುವುದು ಕಾಂಗ್ರೆಸ್ ವರಿಷ್ಠರಿಗೆ ಇನ್ನೂ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಕಾರಣ ಇದು ಬಗೆಹರಿಯದ ಕಗ್ಗಂಟಾಗಿ ಉಳಿದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಗಿಪಟ್ಟು ಸಡಿಲಿಲ್ಲ. ಗುರುವಾರ ನಡೆಯಬೇಕಿದ್ದ ಪ್ರಮಾಣವಚನ ಮುಂದೂಡಲ್ಪಟ್ಟಿದೆ. ಹೆಚ್ಚಿನ ವಿವರಕ್ಕೆ ಈ ವರದಿ ಓದಿ - Karnataka Next CM: ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಪಟ್ಟು; ಕಳೆಗುಂದಿತು ಸಿದ್ದರಾಮಯ್ಯ ಬಳಗದ ಉತ್ಸಾಹ
ಇನ್ನು 48-72 ಗಂಟೆಗಳಲ್ಲಿ ಹೊಸ ಸಚಿವ ಸಂಪುಟ ರಚನೆ: ಸುರ್ಜೆವಾಲ
ಸದ್ಯ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಯುತ್ತಿದೆ. ಕಾಂಗ್ರೆಸ್ ನಿರ್ಧಾರ ಕೈಗೊಂಡಾಗ ನಾವು ನಿಮಗೆ ತಿಳಿಸುತ್ತೇವೆ. ಇನ್ನು 48-72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಪಟಾಕಿ ಹೊಡೆದು ಸಿದ್ದರಾಮಯ್ಯ ಬೆಂಬಲಿಗರ ಸಂಭ್ರಮ
ಸಿದ್ದರಾಮಯ್ಯ ಸಿಎಂ ಎಂಬುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಈಗಾಗಲೇ ಸಿದ್ದು ಬೆಂಬಲಿಗರು ಅವರ ಬೆಂಗಳೂರು ನಿವಾಸದ ಮುಂದೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ.
ಖರ್ಗೆ ನಿವಾಸಕ್ಕೆ ಬಂದ ಡಿಕೆಶಿ
ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಬಳಿಕ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸಕ್ಕೆ ಆಗಮಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ ಮಾಡಿ ಹೊರಟ ಡಿಕೆಶಿ
ದೆಹಲಿಯ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್ ಅಲ್ಲಿಂದ ಹೊರಟಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ
ನೂತನ ಕರ್ನಾಟಕ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿರುವ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರ ಸಂಭ್ರಮ
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಫೈನಲ್ ಆಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದ್ದು, ಸಿದ್ದು ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿದೆ. ಅಧಿಕೃತ ಘೋಷಣೆ ಬಾಕಿ ಇದೆ.
ಸಿದ್ದರಾಮಯ್ಯ ಪೋಸ್ಟರ್ಗೆ ಹಾಲಿನಭಿಷೇಕ
ಸಿದ್ದರಾಮಯ್ಯ ಬೆಂಗಳೂರು ನಿವಾಸದ ಮುಂದೆ ಆಗಮಿಸಿರುವ ಅವರ ಬೆಂಬಲಿಗರು ಅವರ ಪೋಸ್ಟರ್ಗೆ ಹಾಲಿನಭಿಷೇಕ ಮಾಡಿದ್ದಾರೆ.
ಇದು ಪಕ್ಷದ ಆಂತರಿಕ ಪರಿಸ್ಥಿತಿ ತೋರಿಸುತ್ತದೆ: ಬೊಮ್ಮಾಯಿ
ಬಹುಮತ ಪಡೆದರೂ ಕಾಂಗ್ರೆಸ್ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಇದು ಪಕ್ಷದ ಆಂತರಿಕ ಪರಿಸ್ಥಿತಿಯನ್ನು ತೋರಿಸುತ್ತದೆ. ರಾಜಕೀಯಕ್ಕಿಂತ ಜನರ ಆಶೋತ್ತರಗಳು ಮುಖ್ಯ. ಕಾಂಗ್ರೆಸ್ ಆದಷ್ಟು ಬೇಗ ಸಿಎಂ ಆಯ್ಕೆ ಮಾಡಬೇಕು ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿದ್ದು ಬಳಿಕ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ ಡಿಕೆಶಿ
ಸಿದ್ದರಾಮಯ್ಯ ಬಂದು ಹೋದ ಬಳಿಕ ಇದೀಗ ಡಿಕೆ ಶಿವಕುಮಾರ್ ಅವರು ದೆಹಲಿಯ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ? ಅಧಿಕೃತ ಘೋಷಣೆ ಬಾಕಿ
ಸಿದ್ದರಾಮಯ್ಯ ಅವರನ್ನೇ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಡಿಕೆ ಶಿವಕುಮಾರ್ ಅವರನ್ನು ಡಿಸಿಎಂ ಆಗಿ ಘೋಷಿಸಲಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಹೊರಟ ಸಿದ್ದರಾಮಯ್ಯ
ದೆಹಲಿಯ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅಲ್ಲಿಂದ ತಾವು ತಂಗಿದ್ದ ಹೋಟೆಲ್ಗೆ ತೆರಳಿದ್ದಾರೆ.
ನಾನು ಲಾಬಿ ಮಾಡಲ್ಲ: ಪರಮೇಶ್ವರ್
ಕಾಂಗ್ರೆಸ್‌ಗೆ ಮತ ಹಾಕುವ ದಲಿತರು ಪ್ರಾತಿನಿಧ್ಯ ಕೇಳುವುದು ಸಹಜ. ಪಕ್ಷದ ಹೈಕಮಾಂಡ್‌ನಲ್ಲಿರುವ ಎಲ್ಲರಿಗೂ ನಾನು ಗೊತ್ತು. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕಾದ ಪರಿಸ್ಥಿತಿ ಬಂದರೆ ಅವರೇ ಮಾಡ್ತಾರೆ. ನಾನು ಲಾಬಿ ಮಾಡುವುದಿಲ್ಲ: ಎಂದು ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಸಂಜೆಯೊಳಗೆ ಸಿಎಂ ಸ್ಥಾನದ ನಿರ್ಧಾರ: ಈಶ್ವರ್ ಖಂಡ್ರೆ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇನೆ. ಹೈಕಮಾಂಡ್ ನಿರ್ಧರಿಸುತ್ತದೆ, ನಾವು 100% ಒಗ್ಗಟ್ಟಾಗಿದ್ದೇವೆ; ಇಂದು ಸಂಜೆಯೊಳಗೆ ಸಿಎಂ ಸ್ಥಾನದ ನಿರ್ಧಾರ ಆಗಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ?: ಸುಧಾಕರ್ ಟ್ವೀಟ್ ಹೀಗಿದೆ
Dr K Sudhakar tweets: “2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.”
“2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು”.
"ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?" ಎಂದು ಮಾಜಿ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬಳಿ ಬಿಗಿ ಭದ್ರತೆ
ಇಂದು ಮುಖ್ಯಮಂತ್ರಿ ಯಾರೆಂದು ಘೋಷಿಸುವ ಹಿನ್ನೆಲೆ ಸಿದ್ದರಾಮಯ್ಯ ಬೆಂಬಲಿಗರು ಅವರ ಮನೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸುವ ಸಾಧ್ಯತೆಯಿದ್ದು, ಮುಂಜಾಗೃತ ಕ್ರಮವಾಗಿ ಸಿದ್ದರಾಮಯ್ಯ ನಿವಾಸದ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸಿದ್ದರಾಮಯ್ಯ ಆಗಮನ
ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಡಿಸಿಎಂ ಸ್ಥಾನ ನೀಡಲು ಆಗ್ರಹ
ಕಲ್ಯಾಣ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಲಿ ಎಂದು ರಾಯಚೂರಿನಲ್ಲಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಈಶ್ವರ್ ಖಂಡ್ರೆ ಮತ್ತು ಇತರ ಶಾಸಕರ ಆಗಮನ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಇತರ ಶಾಸಕರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಕೆಸಿ ವೇಣುಗೋಪಾಲ್ ಆಗಮನ
ದೆಹಲಿಯಲ್ಲಿರುವ ಯುಪಿಎ ಅಧ್ಯಕ್ಷೆ ಮತ್ತು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಆಗಮಿಸಿದರು.
ಸೋನಿಯಾ ಗಾಂಧಿ ನಿವಾಸಕ್ಕೆ ಕಾಂಗ್ರೆಸ್ ನಾಯಕರ ದೌಡು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕರು ದೆಹಲಿಯ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಅಧಿಕಾರ ಹಂಚಿಕೆಯ ಸೂತ್ರ
ಕಾಂಗ್ರೆಸ್ ಹೈಕಮಾಂಡ್ನ 50-50 ಅಧಿಕಾರ ಹಂಚಿಕೆಯ ಸೂತ್ರವನ್ನು ಮುಂದಿಟ್ಟಿದ್ದು, ಡಿಕೆಶಿ ಮತ್ತು ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.
ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲಿ ಸಭೆ ಆರಂಭ
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಕ್ಷೇತ್ರಗಳಲ್ಲಿ ಗೆದ್ದು ಬೀಗಿದರೂ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್‌ಗೆ ಕಗ್ಗಂಟಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಬಾರಿ ಸಿಎಂ ಆಗಲಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ ಕೆಲವು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ನಿಂತಿದ್ದಾರೆ. ಇದೀಗ ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಮುಖ್ಯಮಂತ್ರಿ ಯಾರೆಂದು ಘೋಷಣೆ ಮಾಡುವ ಸಾಧ್ಯತೆಯಿದೆ.