DA Case: ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಕೇಸ್; ಸಿಬಿಐ ಅರ್ಜಿ ವಿಚಾರಣೆ ಜುಲೈ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
DA Case: ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 14ಕ್ಕೆ ಮುಂದೂಡಿದೆ. ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ. ಈ ವಿದ್ಯಮಾನದ ವಿವರ ಹೀಗಿದೆ.
ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಜುಲೈ 14ಕ್ಕೆ ಮುಂದೂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಈ ವಿಚಾರ ಮೇ 23ರಂದು ವಿಚಾರಣೆಗೆ ಬರಲಿದೆ ಎಂದು ಹೇಳಿದ ನಂತರ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ಪೀಠವು ಸಿಬಿಐ ಅರ್ಜಿಯ ವಿಚಾರಣೆಯನ್ನು ಮುಂದೂಡಿತು ಎಂದು ಪಿಟಿಐ ವರದಿ ಮಾಡಿದೆ.
ಡಿಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಫೆ.10ರಂದು ತಡೆ ನೀಡಿತ್ತು. ಈ ತಡೆಯನ್ನು ನಂತರ ಬೇರೆ ಬೇರೆ ದಿನಾಂಕಗಳಲ್ಲಿ ವಿಸ್ತರಿಸಲಾಗಿದೆ.
ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ 2017ರಲ್ಲಿ ದಾಳಿ ನಡೆಸಿತ್ತು. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅವರ ವಿರುದ್ಧ ತನಿಖೆ ಆರಂಭಿಸಿತ್ತು. ಜಾರಿ ನಿರ್ದೇಶನಲಾಯದ ತನಿಖೆಯ ನಂತರ, ಸಿಬಿಐ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೋರಿತು.
ಕೊನೆಗೆ 2019ರ ಸೆಪ್ಟೆಂಬರ್ 25ರಂದು ಅನುಮತಿಗೆ ಮಂಜೂರಾತಿ ಬಂತು. 2020ರ ಅಕ್ಟೋಬರ್ 3ರಂದು ಡಿಕೆ ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಕೇಸ್ ದಾಖಲಿಸಿತು.
ಈ ಪ್ರಕರಣ 2020ರಲ್ಲೇ ನಡೆದಿದ್ದರೂ ಈಗಷ್ಟೆ ಮುಗಿದ ವಿಧಾನಸಭಾ ಚುನಾವಣೆಗೆ ಮುನ್ನ ಸಿಬಿಐ ತನ್ನ ಮೇಲೆ ಪದೇ ಪದೇ ನೋಟಿಸ್ ಜಾರಿ ಮಾಡುವ ಮೂಲಕ ಮಾನಸಿಕ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಶಿವಕುಮಾರ್ ಅವರು ತಮ್ಮ ವಿರುದ್ಧದ ತನಿಖೆ ಮಂಜೂರಾತಿ ಮತ್ತು ವಿಚಾರಣೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇಂದಿನ ಗಮನಾರ್ಹ ವಿದ್ಯಮಾನಗಳು
Opinion: ಸಿದ್ದರಾಮಯ್ಯ ಸಿಎಂ ಆಗದೇ ಡಿಕೆ ಶಿವಕುಮಾರ್ ಸಿಎಂ ಆದರೆ ಅಥವಾ ಡಿಕೆ ಶಿವಕುಮಾರ್ ಸಿಎಂ ಆಗದೇ ಸಿದ್ದರಾಮಯ್ಯ ಸಿಎಂ ಆದರೆ….
ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಸ್ಪಷ್ಟತೆ ಇಲ್ಲ. ವರಿಷ್ಠರಿಗೂ ಆಯ್ಕೆ ಸವಾಲಾಗಿ ಉಳಿದಿದೆ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೂ ಕಷ್ಟ, ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಿದರೂ ಕಷ್ಟ. ಈ ಸನ್ನಿವೇಶದಲ್ಲಿ 2018ರ ವಿದ್ಯಮಾನವನ್ನು ಒಮ್ಮೆ ಅವಲೋಕಿಸುವುದು ಒಳಿತು.
Karnataka CM Race: ಸಿದ್ದರಾಮಯ್ಯ vs ಡಿಕೆ ಶಿವಕುಮಾರ್; ಪ್ರಮುಖ ಸಭೆಗಳಲ್ಲಿ ಏನೇನಾಯಿತು, ವಿವರ ಇಲ್ಲಿದೆ ಗಮನಿಸಿ
ಕರ್ನಾಟಕ ಮುಖ್ಯಮಂತ್ರಿ ಗಾದಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನೇರ ಪೈಪೋಟಿ ನಡೆದಿದೆ. ಆಯ್ಕೆ ಕಗ್ಗಂಟಾಗಿದ್ದು, ಸಭೆ ಮೇಲೆ ಸಭೆ ನಡೆಯುತ್ತಿದೆ. ಈ ನಡುವೆ ಮೇ 18ರಂದು ಮುಖ್ಯಮಂತ್ರಿ ಪ್ರಮಾಣ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ವಿದ್ಯಮಾನಗಳ ವಿವರ ಇಲ್ಲಿದೆ. ಪೂರ್ಣ ಓದಿಗೆ 👉🏻 ಸಿದ್ದರಾಮಯ್ಯ vs ಡಿಕೆ ಶಿವಕುಮಾರ್; ಪ್ರಮುಖ ಸಭೆಗಳಲ್ಲಿ ಏನೇನಾಯಿತು, ವಿವರ ಇಲ್ಲಿದೆ ಗಮನಿಸಿ