Opinion: ಸಿದ್ದರಾಮಯ್ಯ ಸಿಎಂ ಆಗದೇ ಡಿಕೆ ಶಿವಕುಮಾರ್ ಸಿಎಂ ಆದರೆ ಅಥವಾ ಡಿಕೆ ಶಿವಕುಮಾರ್ ಸಿಎಂ ಆಗದೇ ಸಿದ್ದರಾಮಯ್ಯ ಸಿಎಂ ಆದರೆ
Opinion: ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಸ್ಪಷ್ಟತೆ ಇಲ್ಲ. ವರಿಷ್ಠರಿಗೂ ಆಯ್ಕೆ ಸವಾಲಾಗಿ ಉಳಿದಿದೆ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೂ ಕಷ್ಟ, ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಿದರೂ ಕಷ್ಟ. ಈ ಸನ್ನಿವೇಶದಲ್ಲಿ 2018ರ ವಿದ್ಯಮಾನವನ್ನು ಒಮ್ಮೆ ಅವಲೋಕಿಸುವುದು ಒಳಿತು.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸಭಾ ವೇದಿಕೆಯಲ್ಲಿ ಈ ಇಬ್ಬರೂ ನಾಯಕರ ಕೈ ಹಿಡಿದು ಎಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದರು. ಕರ್ನಾಟಕದ ಜನತೆಗೇನೋ ಸಂದೇಶ ರವಾನೆ ಆಯಿತು. ಆದರೆ, ಆಂತರ್ಯದಲ್ಲಿ ಬದಲಾವಣೆ ಆಗಲಿಲ್ಲ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೆ ಮೊದಲೇ ಸಿದ್ದರಾಮೋತ್ಸವ ಆಯೋಜಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದರು. ಅಹಿಂದ ಬೆಂಬಲ ತನಗಿದೆ ಎಂಬುದನ್ನು ಸಾರಿ ಹೇಳಿದರು. ಇದು ತನ್ನ ಕೊನೆಯ ಚುನಾವಣೆ, ಈಗ ಮುಖ್ಯಮಂತ್ರಿಯಾಗಿಯೇ ಚುನಾವಣಾ ರಾಜಕಾರಣ ಮುಗಿಸುತ್ತೇನೆ ಎಂದರು.
ಇದಕ್ಕೆ ಸರಿಸಮ ಎನ್ನುವಂತೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪಕ್ಷ ಸಂಘಟನೆ ಕಡೆಗೆ ಗಮನಹರಿಸಿದರು. ವೈಯಕ್ತಿಕ ಚಿಂತನೆಗಿಂತ ಪಕ್ಷದ ಹಿತ ಮುಖ್ಯ, ಗೆಲ್ಲುವುದು ಮುಖ್ಯ ಎಂಬ ಸಂದೇಶ ಸಾರುತ್ತ ಅಭಿಯಾನ, ಸಮಾವೇಶಗಳನ್ನು ನಡೆಸಿದರು. ಪಕ್ಷ ಸಂಘಟನೆ ಮಾಡಿ ಅಧಿಕಾರ ಗದ್ದುಗೆಗೆ ಏರಿಸಿ, ತಾನು ಮುಖ್ಯಮಂತ್ರಿ ಆಗಲೇಬೇಕು ಎಂಬ ಸಂದೇಶ ರವಾನಿಸಿದರು.
ಒಂದು ಹಂತದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿ ಅವರೇ ಮುಖ್ಯಮಂತ್ರಿ ಆಗಲಿ ಎಂದು ಹೇಳಿದರು. ಅಲ್ಲಿಗೆ ದಲಿತ ಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬಂತು. ಅಲ್ಲಿಗೆ ಮುಖ್ಯಮಂತ್ರಿ ರೇಸ್‌ನ ವಿಚಾರ ತಣ್ಣಗಾಗಿ ಎಲ್ಲರ ಗಮನ ಚುನಾವಣೆ ಕಡೆಗೆ ನೆಟ್ಟಿತು.
ಆದರೆ ಸಮಸ್ಯೆ ಎದುರಾಗಿರುವುದೇ ಮುಖ್ಯಮಂತ್ರಿ ಆಯ್ಕೆ ಎದುರಾದಾಗ. ಶಾಸಕಾಂಗ ಪಕ್ಷದ ಸದಸ್ಯರು ಒಂದು ಸಾಲಿನ ನಿರ್ಣಯ ತೆಗೆದುಕೊಂಡು ಆಯ್ಕೆ ವಿಚಾರ ಎಐಸಿಸಿ ಅಧ್ಯಕ್ಷರ ಹೆಗಲೇರಿಸಿದರು. ಅಲ್ಲಿಗೆ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಸಿದ್ದರಾಮಯ್ಯ ತನ್ನ ಬೆಂಬಲಿಗ ಶಾಸಕರೊಂದಿಗೆ ದೆಹಲಿಗೆ ತೆರಳಿದರು. ಡಿಕೆ ಶಿವಕುಮಾರ್ ಪರ ಒಕ್ಕಲಿಗ ನಾಯಕರು, ಅವರ ಸಹೋದರ ಡಿಕೆ ಸುರೇಶ್, ಮಠಾಧೀಶರು ಒತ್ತಡ ಹೇರಲಾರಂಭಿಸಿದರು.
ಈಗ ಗಮನಿಸಬೇಕಾದ ಅಂಶ ಎಂದರೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ನಡುವೆ ಒಂದು ಕೆಮಿಸ್ಟ್ರಿ ಇದೆ. ಇವರಿಬ್ಬರಿಗೂ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜತೆಗೆ ಉತ್ತಮ ಕೆಮಿಸ್ಟ್ರಿ ಇದೆ. ಅಂಥದ್ದೇ ಕೆಮಿಸ್ಟ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ನಡುವೆ ಇದೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರೂ ತೀರ್ಮಾನ ತೆಗೆದುಕೊಳ್ಳುವಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯ ತಳ್ಳಿಹಾಕುವಂತೆ ಇಲ್ಲ.
ಆಯ್ಕಯಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆ ಅವಲೋಕಿಸುವುದಾದರೆ, ಸಿದ್ದರಾಮಯ್ಯ ಇಂದಿಗೂ ಪಕ್ಷದಲ್ಲಿ ಹೊರಗಿನವರೆಂದೇ ಗುರುತಿಸಲ್ಪಟ್ಟಿರುವಂಥದ್ದು. ಡಿಕೆ ಶಿವಕುಮಾರ್ ಹಾಗಲ್ಲ. ಆರಂಭದಿಂದಲೂ ಇಲ್ಲಿ ತನಕ ಪಕ್ಷದಲ್ಲೇ ಇದ್ದವರು. ಪಕ್ಷ ಸಂಘಟನೆ ಮಾಡಿದವರು. 2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, 2018ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ವಿಫಲರಾಗಿದ್ದರು.
ಆಗ ಟ್ರಬಲ್ ಶೂಟರ್ ಆಗಿ ಡಿಕೆ ಶಿವಕುಮಾರ್ ಕೆಲಸ ಮಾಡಿದ್ದು, 104 ಸ್ಥಾನ ಗೆದ್ದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜತೆಗೆ ಮತ್ತೆ ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಒಂದು ಪಾತ್ರ ನಿರ್ವಹಣೆ ಮಾಡಿದರು. ಸಿದ್ದರಾಮಯ್ಯಗೆ ಸ್ವಹಿತಾಸಕ್ತಿ ಹೆಚ್ಚು. ಹೀಗಾಗಿ ಅವರು ಪಕ್ಷ ಸಂಘಟನೆ ಜತೆಗೆ ತನ್ನನ್ನು ಗುರುತಿಸಿಕೊಳ್ಳಲಿಲ್ಲ ಎಂಬ ಆಪಾದನೆ ಇದೆ.
ಈಗ ಇದಕ್ಕೆ ಪೂರಕವಾಗಿ 2018-19ರ ಅವಧಿಯ ಮೈತ್ರಿ ಸರ್ಕಾರದಲ್ಲಿ ಏನಾಯಿತು ಎಂಬ ವಿವರ ಒಂದೊಂದಾಗಿ ಹೊರಬರತೊಡಗಿದೆ. ಮೈತ್ರಿ ಸರ್ಕಾರ ಪತನವಾಗಲು ಸಿದ್ದರಾಮಯ್ಯ ಪರೋಕ್ಷ ಕಾರಣ ಎಂಬ ವಿಚಾರ ಅಂದೂ ಚರ್ಚೆಯಲ್ಲಿತ್ತು. ಈಗ ಮತ್ತೆ ಚರ್ಚೆಗೆ ಬಂದಿದೆ. ಇದಕ್ಕೆ ಪೂರಕವಾಗಿ ಅಂದು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ಶಾಸಕರು, ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಪತನಕ್ಕೆ ಹೇಗೆ ಕಾರಣರಾದರು ಎಂಬುದನ್ನು ಸೂಚ್ಯವಾಗಿ ಹೇಳತೊಡಗಿದ್ದಾರೆ.
ಎಸ್.ಟಿ.ಸೋಮಶೇಖರ್ ಅವರು ಇಂದು ಟ್ವೀಟ್ ಮಾಡಿದ್ದು, "ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದು" ಎಂದು ಹೇಳಿಕೊಂಡಿದ್ದಾರೆ.
ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿ, "2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು" ಎಂಬ ಅಂಶವನ್ನು ಬಹಿರಂಗ ಮಾಡಿದ್ದಾರೆ.
ಇದರ ಅರ್ಥ ಇಷ್ಟೆ - ತಮಗೆ ಮುಖ್ಯಮಂತ್ರಿ ಪಟ್ಟ ಸಿಗದೇ ಇದ್ದರೆ ಸಿದ್ದರಾಮಯ್ಯ ಮನಸ್ಥಿತಿ ಹೇಗಿರುತ್ತದೆ. ಅವರ ನಡವಳಿಕೆಗಳು ಯಾವ ರೀತಿ ಇರುತ್ತದೆ ಎಂಬುದನ್ನು ಇವರೆಲ್ಲ ಸೂಚ್ಯವಾಗಿ ಹೇಳಿದ್ದಾರೆ. ಈಗಲೂ ಕಾಂಗ್ರೆಸ್ ವರಿಷ್ಠರಿಗೆ ಇದು ಸವಾಲಾಗಿಯೇ ಉಳಿದಿದೆ.
ಇನ್ನು ಡಿಕೆ ಶಿವಕುಮಾರ್ ವಿಚಾರಕ್ಕೆ ಬಂದರೆ, ಪಕ್ಷಕ್ಕೆ ಸಂಕಷ್ಟ ಬಂದಾಗ ಎದೆಯೊಡ್ಡಿ ನಿಂತವರು. ಅನ್ಯರಾಜ್ಯದ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯ ಬಲೆಗೆ ಬೀಳದಂತೆ ತಡೆಯಲು ಕೆಲಸ ಮಾಡಿದವರು. ಅದೇ ಸಮಯದಲ್ಲಿ ಐಟಿ ದಾಳಿ, ಇಡಿ ದಾಳಿ ಎದುರಿಸಿದವರು. ಆದಾಯ ಮೀರಿದ ಆಸ್ತಿ ಕಾರಣಕ್ಕೆ ಸೆರೆವಾಸ ಅನುಭವಿಸಿದವರು. ಸೋನಿಯಾಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಜತೆಗೆ ನೇರ ಸಂಪರ್ಕ ಇದ್ದು, ಅವರ ಮಾತಿಗೆ ಬೆಲೆಕೊಟ್ಟು ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದವರು. ಪಕ್ಷದ ಮಟ್ಟಗೆ ಅವರೊಬ್ಬ ಸಂಪನ್ಮೂಲ ವ್ಯಕ್ತಿ.
ಪಕ್ಷಕ್ಕಾಗಿ, ನೆಹರು-ಗಾಂಧಿ ಕುಟುಂಬಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಗಾದಿ ನೀಡಬೇಕು ಎಂಬುದು ಒಕ್ಕಲಿಗ ಸಮುದಾಯದ ಆಗ್ರಹ. ಮಠಾಧೀಶರ ಬೆಂಬಲವೂ ಇರುವ ಕಾರಣ ಈ ಆಗ್ರಹ ಈಡೇರಿಸಲು ಈ ಸಮುದಾಯ ಯಾವ ಹಂತಕ್ಕೆ ಬೇಕಾದರೂ ಹೋಗಬಹುದಾದ ಅಪಾಯ ಇದೆ ಎಂಬುದು ಕಾಂಗ್ರೆಸ್ ವರಿಷ್ಠರಿಗೆ ಗೊತ್ತೇ ಇದೆ.
ಒಟ್ಟಿನಲ್ಲಿ ಸ್ಪಷ್ಟ ಜನಾದೇಶ ಸಿಕ್ಕರೂ, ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷ ಪೂರ್ತಿ ಆಡಳಿತ ನಡೆಸುವ ಭಾಗ್ಯ ಇದೆಯೋ ಇಲ್ಲವೋ ಎಂಬುದೇ ಸಂದೇಹ. ಪಕ್ಷದೊಳಗಿನ ವಿದ್ಯಮಾನಗಳೇ ಈ ಸಂದೇಹವನ್ನು ಪುಷ್ಟೀಕರಿಸುತ್ತಿರುವುದು ದುರಂತ.