ಕನ್ನಡ ಸುದ್ದಿ  /  ಕರ್ನಾಟಕ  /  Karnataka Next Cm: ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್‌ ಪಟ್ಟು; ಕಳೆಗುಂದಿತು ಸಿದ್ದರಾಮಯ್ಯ ಬಳಗದ ಉತ್ಸಾಹ

Karnataka Next CM: ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್‌ ಪಟ್ಟು; ಕಳೆಗುಂದಿತು ಸಿದ್ದರಾಮಯ್ಯ ಬಳಗದ ಉತ್ಸಾಹ

Karnataka CM decision: ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು? ಇದು ಕಾಂಗ್ರೆಸ್‌ ವರಿಷ್ಠರ ಎದುರಿಸುತ್ತಿರುವ ಯಕ್ಷಪ್ರಶ್ನೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವೆ ತೀವ್ರ ಪೈಪೋಟಿ ಕಾರಣ ಇದು ಬಗೆಹರಿಯದ ಕಗ್ಗಂಟಾಗಿ ಉಳಿದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಬಿಗಿಪಟ್ಟು ಸಡಿಲಿಲ್ಲ. ಗುರುವಾರ ನಡೆಯಬೇಕಿದ್ದ ಪ್ರಮಾಣವಚನ ಮುಂದೂಡಲ್ಪಟ್ಟಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಪೈಪೋಟಿ ತೀವ್ರಗೊಂಡಿದೆ. ಕಾಂಗ್ರೆಸ್‌ ಪಕ್ಷಕ್ಕೆ ಜನಾದೇಶ ಸಿಕ್ಕು ನಾಲ್ಕು ದಿನವಾದರೂ ಮುಖ್ಯಮಂತ್ರಿ ಆಯ್ಕೆ ಸಾಧ್ಯವಾಗಿಲ್ಲ. (ಸಾಂದರ್ಭಿಕ ಮತ್ತು ಅರ್ಥಗರ್ಭಿತ ಚಿತ್ರ)
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಪೈಪೋಟಿ ತೀವ್ರಗೊಂಡಿದೆ. ಕಾಂಗ್ರೆಸ್‌ ಪಕ್ಷಕ್ಕೆ ಜನಾದೇಶ ಸಿಕ್ಕು ನಾಲ್ಕು ದಿನವಾದರೂ ಮುಖ್ಯಮಂತ್ರಿ ಆಯ್ಕೆ ಸಾಧ್ಯವಾಗಿಲ್ಲ. (ಸಾಂದರ್ಭಿಕ ಮತ್ತು ಅರ್ಥಗರ್ಭಿತ ಚಿತ್ರ) (PTI Photo/Shailendra Bhojak)

ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್‌ ಪಾಲಿಗೆ ಇನ್ನೂ ಕಗ್ಗಂಟಾಗಿಯೆ ಉಳಿದಿದೆ. ಪೂರ್ಣ ಅವಧಿಗೆ ತಾನೇ ಮುಖ್ಯಮಂತ್ರಿ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ. ಇದರ ಪರಿಣಾಮ ಗಂಭೀರವಾಗಿದ್ದು, ನಾಳೆಯ ನಡೆಯಬೇಕಾಗಿದ್ದ ಪ್ರಮಾಣವಚನ ಸಮಾರಂಭ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.

ಮುಖ್ಯಮಂತ್ರಿ ಆಯ್ಕೆಗಾಗಿ ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರನ್ನು ಎಐಸಿಸಿ ವರಿಷ್ಠರು ಆಹ್ವಾನಿಸಿದ ನಂತರದ ವಿದ್ಯಮಾನಕ್ಕೆ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

ನಾನು ಒಂಟಿಯಾಗಿಯೇ ದೆಹಲಿಗೆ ಹೋಗುತ್ತಿದ್ದೇನೆ. ಗುಂಪುಕಟ್ಟಿಕೊಂಡು ಹೋಗುತ್ತಿಲ್ಲ. ನನ್ನ ನಿಲುವೇನೋ ಅದನ್ನು ಪ್ರಸ್ತುತಪಡಿಸುತ್ತೇನೆ ನೋಡೋಣ ಎಂದು ಹೇಳುತ್ತ ದೆಹಲಿಗೆ ತೆರಳಿದವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.‌ ಬೆನ್ನು ಬೆನ್ನಿಗೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರೆ ಹಿರಿಯ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿ, ಸಂಪರ್ಕ ಮಾಡಿ ಮಾತುಕತೆ ನಡೆಸಿದರು. ಈ ಸರಣಿ ವಿದ್ಯಮಾನಗಳ ಬಳಿಕ ಒಂದು ತಾರ್ಕಿಕ ಅಂತ್ಯ ನೀಡುವುದು ವರಿಷ್ಠರಿಗೆ ಸಾಧ್ಯವಾಗದೇ ಹೋಗಿದೆ.

ಸಿದ್ದರಾಮಯ್ಯ ಅವರ ಅತ್ಯುತ್ಸಾಹಕ್ಕೆ ಬ್ರೇಕ್‌

ಈ ನಡುವೆ, ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್‌ ಅವರಿಗಿಂತ ದಿನ ಮೊದಲೇ ದೆಹಲಿಗೆ ತೆರಳಿದ್ದು, ಇಂದು ಅಪರಾಹ್ನದ ತನಕವೂ ಅತ್ಯುತ್ಸಾಹದಲ್ಲಿದ್ದರು. ತಾನೇ ಮುಂದಿನ ಮುಖ್ಯಮಂತ್ರಿ ಎಂಬ ಭಾವದಲ್ಲಿ ಬೀಗಿದ್ದರು. ಇಂದು ವಾಪಸ್‌ ಬರುವುದಕ್ಕೆ ವಿಮಾನ ಬುಕ್‌ ಮಾಡಿದ್ದರು. ಆದರೆ, ಅವರು ವಾಪಸ್‌ ಬರುವುದು ಸಾಧ್ಯವಾಗಿಲ್ಲ. ಕಾರಣ ಡಿಕೆ ಶಿವಕುಮಾರ್‌ ಬಿಗಿಪಟ್ಟು.

ಸಿದ್ದರಾಮಯ್ಯ ಅವರ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂಬ ವಿಶ್ವಾಸದಲ್ಲಿ ಅನೇಕರು ಬಾಜಿ ಕಟ್ಟಿ, ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ಎಲ್ಲ ಸಂಭ್ರಮದ ಮೇಲೆ ಇಂದು (ಮೇ17ರ) ಸಂಜೆ ವೇಳೆಗೆ ಕರಿಛಾಯೆ ಆವರಿಸಿದೆ. ಅವರೆಲ್ಲರ ಸಂಭ್ರಮ, ಅತ್ಯುತ್ಸಾಹದ ಮೇಲೆ ತಣ್ಣೀರೆರಚಿದ ಅನುಭವ. ಹೀಗಾಗಿ ಆ ಸಂಭ್ರಮಾಚರಣೆಯ ತೀವ್ರತೆ ಕಡಿಮೆ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಡಿಕೆ ಶಿವಕುಮಾರ್‌ ಬಿಗಿಪಟ್ಟು

ಒಂಟಿಯಾಗಿಯೇ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಆಗಲೇ ಬೇಕೆಂಬ ದೃಢ ಸಂಕಲ್ಪ ಹೊಂದಿದ್ದಾರೆ. ಅವರು ಇದಕ್ಕಾಗಿ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿದ್ದು, ಪಕ್ಷದ ವರಿಷ್ಠರ ಜತೆಗೆ ಸರಣಿ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ಪೂರ್ಣ ಅವಧಿಗೆ ಮುಖ್ಯಮಂತ್ರಿ ಗಾದಿ ತನಗೇ ಬೇಕು ಎಂದು ಹೇಳುತ್ತಿದ್ದ ಡಿಕೆ ಶಿವಕುಮಾರ್‌ ಕೊನೆಗೆ ಅವಧಿ ಹಂಚಿಕೆಗೆ ಸಮ್ಮತಿ ಸೂಚಿಸಿದರು ಎಂದು ಪಕ್ಷದ ಮೂಲಗಳು ಹೇಳಿದ್ದಾಗಿ ಮಾಧ್ಯಮ ವರದಿ ಮಾಡಿದ್ದವು.

ಈ ನಡುವೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.

ಕೆಲಸ ಮಾಡದ ಸಂಧಾನ ಸೂತ್ರ; ಮುಂದೂಡಲ್ಪಟ್ಟ ಪ್ರಮಾಣ ವಚನ

ಎಲ್ಲವೂ ಸರಿಯಾಗಿದ್ದರೆ ಇಂದು ಮುಖ್ಯಮಂತ್ರಿ ಯಾರು ಎಂಬುದು ಇಷ್ಟು ಹೊತ್ತಿಗಾಗಲೇ ಘೋಷಣೆ ಆಗಬೇಕಾಗಿತ್ತು. ನಾಳೆ ಪ್ರಮಾಣ ವಚನ ನಡೆಯಬೇಕಾಗಿತ್ತು. ಆದರೆ, ಆ ಸೂತ್ರ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಅದಕ್ಕೆ ಪೂರಕ ವಿದ್ಯಮಾನಗಳು ಹೀಗಿವೆ ಗಮನಿಸಿ.

  • ಸಿದ್ದರಾಮಯ್ಯ ಅವರು ಬುಕ್‌ ಮಾಡಿದ ವಿಮಾನದಲ್ಲಿ ಹಿಂತಿರುಗಿಲ್ಲ.
  • ಸಿದ್ದರಾಮಯ್ಯ ನಿವಾಸ ಮತ್ತು ಹುಟ್ಟೂರಿನಲ್ಲಿ ನಡೆಯುತ್ತಿದ್ದ ಸಂಭ್ರಮಾಚರಣೆಗಳ ತೀವ್ರತೆ ಕಡಿಮೆ ಆಗಿದೆ.
  • ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭರದಿಂದ ಸಾಗಿದ ಸಿದ್ಧತೆಯ ವೇಗವೂ ತಗ್ಗಿದೆ.
  • ಪ್ರಮಾಣ ವಚನ ಸ್ವೀಕಾರ ಸಮಾರಂಭ ತಾತ್ಕಾಲಿಕ ಮುಂದೂಡಲ್ಪಟ್ಟ ವಿಚಾರ ಪೊಲೀಸ್‌ ವಲಯದಲ್ಲಿ ದಾಖಲಾಗಿದ್ದು, ಭದ್ರತೆಯ ವಿಚಾರವೂ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.

ದಿನದ ವಿದ್ಯಮಾನವನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿ ಯಾರಿಗೆ ಎಂಬುದನ್ನು 4 ದಿನವಾದರೂ ತೀರ್ಮಾನಿಸುವುದು ಕಾಂಗ್ರೆಸ್‌ ವರಿಷ್ಠರಿಗೆ ಸಾಧ್ಯವಾಗಿಲ್ಲ. ಸುರ್ಜೆವಾಲ ಅವರ ಹೇಳಿಕೆಯೂ ಇದನ್ನೆ ಪುಷ್ಟೀಕರಿಸುತ್ತದೆ.

IPL_Entry_Point