ಕರ್ನಾಟಕದ ಆದಾಯ ತರುವ ಇಲಾಖೆಗಳಲ್ಲಿ ಪ್ರಗತಿ ಕಾಣದೇ ಇದ್ದರೆ ಹಿರಿಯ ಅಧಿಕಾರಿಗಳ ಎತ್ತಂಗಡಿ: ಸಿಎಂ ಖಡಕ್ ಎಚ್ಚರಿಕೆ
Oct 29, 2024 08:05 PM IST
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ತೆರಿಗೆ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
- ಬೆಂಗಳೂರಿನ ಅಬಕಾರಿ, ವಾಣಿಜ್ಯ ತೆರಿಗೆ ಇಲಾಖೆ ಸಹಿತ ವಿವಿಧ ಆದಾಯ ತರುವ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಿಎಂ ಸಿದ್ದರಾಮಯ್ಯ ಮಂಗಳವಾರ ಮಾಡಿದರು.
ಬೆಂಗಳೂರು: ಕರ್ನಾಟಕದಲ್ಲಿ ಆದಾಯ ತರುವ ಇಲಾಖೆಗಳ ಮುಖ್ಯಸ್ಥರು ಮುಂದಿನ ಐದು ತಿಂಗಳ ಕಾಲ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಆದಾಯ ಕಡಿಮೆಯಾಗುವುದು, ಇಲಾಖೆಯಲ್ಲಿ ಪ್ರಗತಿ ಕಾಣದೇ ಇದ್ದರೆ ಸಹಿಸಿಕೊಳ್ಳುವುದಿಲ್ಲ. ಇಂತಹ ಇಲಾಖೆಗಳ ಪ್ರಗತಿಯನ್ನು ನಾನೇ ಮಾಡುವೆ. ಪ್ರತಿ ತಿಂಗಳ ಕೊನೆಗೆ ನಾನೇ ಒನ್ ಟು ಒನ್ ಪ್ರಗತಿ ಪರಿಶೀಲನೆ ನಡೆಸ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ನಿಮ್ಮನ್ನು ಬದಲಾಯಿಸ್ತೀನಿ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇ ಬಾರದು ಇದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ವೇಳೆ ಈ ಸೂಚನೆ ನೀಡಿದರು.
2024-25 ನೇ ಸಾಲಿನಲ್ಲಿ ಒಟ್ಟು ಗುರಿ ರೂ. 1,10,000 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಅಕ್ಟೋಬರ್ ಅಂತ್ಯದವರೆಗೆ ಒಟ್ಟು ರೂ. 58,773 ಕೋಟಿ ಸಂಗ್ರಹಿಸಲಾಗಿದ್ದು, ಇದರಲ್ಲಿ ಜಿಎಸ್‌ಟಿ ರೂ. 44,783 ಕೋಟಿ, ಕೆಎಸ್‌ಟಿ ರೂ. 13,193 ಕೋಟಿ, ವೃತ್ತಿ ತೆರಿಗೆ ರೂ. 797 ಕೋಟಿ ಸೇರಿದೆ ಎಂದರು.
ಅಕ್ಟೋಬರ್ ಕೊನೆಯವರೆಗೆ ಶೇ.53.5 ಗುರಿ ಸಾಧನೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ.5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿತ್ತದೆ.ಮುಂದಿನ ಐದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ರೂ.10200 ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಇರಿಸಿ ಮಾರ್ಚ್ ಒಳಗಾಗಿ ಗುರಿಯನ್ನು ಸಾಧಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ. ರಾಜ್ಯದ ಅಭಿವೃದ್ಧಿಗೆ ತೆರಿಗೆ ಸಂಗ್ರಹದಲ್ಲಿ ಗುರಿಯನ್ನು ಸಾಧಿಸಬೇಕಿದೆ ಎಂದರು.
ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆಗಾರ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇ ಬಾರದು. ಕರ ಸಮಾಧಾನ ಯೋಜನೆ ಅಡಿ ರೂ. 2ಸಾವಿರ ಕೋಟಿ ಹೆಚ್ಚುವರಿ ಸಂಗ್ರಹಣೆಯ ನಿರೀಕ್ಷೆಯಿದೆ ಎಂದರು.
ಅಬಕಾರಿ ಇಲಾಖೆ ತೆರಿಗೆ ಸಂಗ್ರಹ
2024-25 ನೇ ಸಾಲಿನಲ್ಲಿ ಒಟ್ಟು ಗುರಿ ರೂ. 38525 ಕೋಟಿ ಅಬಕಾರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಅಕ್ಟೋಬರ್ 28ರವರೆಗೆ ರೂ. 20237 ಕೋಟಿ ಸಂಗ್ರಹವಾಗಿದೆ. ಇದುವರೆಗೆ ಶೇ.52.53 ಗುರಿ ಸಾಧನೆ ಮಾಡಲಾಗಿದ್ದು, ಮಾರ್ಚ್ ಒಳಗಾಗಿ ನಿಗದಿತ ಗುರಿಯನ್ನು ಸಾಧಿಸಲು ಕ್ರಮ ಕೈಗೊಳ್ಳಬೇಕು. ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ 1301.15ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ.
ಗೋವಾದಿಂದ ಅಕ್ರಮ ಮದ್ಯ ಸಾಗಾಟವನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಮುಂದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿ
]ಮುಂದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿ ಸಾಧಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು 2024-25ರ ಸಾಲಿನಲ್ಲಿ ರೂ. 26000 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಿದ್ದು, ಅಕ್ಟೋಬರ್ ತಿಂಗಳ ಅಂತ್ಯದವರೆಗೆ ರೂ. 13,724 ಕೋಟಿ ಸಂಗ್ರಹ ಆಗಿದೆ. ಮುoದಿನ ಮಾರ್ಚ್ ವರೆಗೆ ಪ್ರತಿ ತಿಂಗಳು ರೂ. 2400 ಕೋಟಿ ರಾಜಸ್ವ ಸಂಗ್ರಹ ಗುರಿಯನ್ನು ಸಾಧಿಸಬೇಕು. ನೋoದಣಿಯೇತರ ದಾಸ್ತಾವೇಜುಗಳಿಗೆ ಸರಿಯಾದ ಮುದ್ರಾoಕ ಶುಲ್ಕವನ್ನು ಪಾವತಿಸಿಕೊoಡು ಹೆಚ್ಚಿನ ರಾಜಸ್ವ ಸoಗ್ರಹಿಸಬೇಕು ಎನ್ನುವ ಸೂಚನೆ ನೀಡಿದರು.
ಸಾರಿಗೆ ಇಲಾಖೆ ರಾಜಸ್ವ ಪರಿಶೀಲನೆ
2024-25ನೇ ಸಾಲಿನಲ್ಲಿ ಸಾರಿಗೆ ಇಲಾಖೆ ವಾರ್ಷಿಕ ರಾಜಸ್ವ ಸoಗ್ರಹ ಗುರಿ ರೂ. 13000 ಕೋಟಿ ಆಗಿದ್ದು, ಸೆಪ್ಟೆಂಬರ್ ವರೆಗೆ ರೂ. 5569 ಕೋಟಿ ಸಂಗ್ರಹ ಮಾಡಲಾಗಿದೆ. ಹಿಂದಿನ ಸಾಲಿಗಿಂತ ಈ ಅವಧಿಯಲ್ಲಿ ರೂ. 308.98 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹ ಆಗಿದೆ.ಮಾಸಿಕ ಗುರಿ ನಿಗದಿಪಡಿಸಿಕೊoಡು ಮಾರ್ಚ್ ಅoತ್ಯದ ಒಳಗಾಗಿ ನಿಗದಿತ ಗುರಿ ಸಾಧಿಸಬೇಕು ಎಂದು ಸೂಚಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್ ಅತೀಕ್, ಅಬಕಾರಿ ಆಯುಕ್ತ ಜೆ.ರವಿಶಂಕರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಎ.ಶಿಖಾ, ಮುದ್ರಾಂಕ ಇಲಾಖೆ ಐಜಿ ಕೆ.ಎ.ದಯಾನಂದ, ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೇಶ್, ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಭಾಗ