ಅಟ್ರಾಸಿಟಿ ಕೇಸ್‌ಗಳ ತ್ವರಿತ ನಿರ್ವಹಣೆಗೆ ವಿಶೇಷ ಪೊಲೀಸ್ ಠಾಣೆ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗೆ ತೀರ್ಮಾನಿಸಿದ ಕರ್ನಾಟಕ ಸರ್ಕಾರ
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲು ಜಾರಿಗೊಳಿಸುವುದಕ್ಕೆ ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಇದೇ ರೀತಿ ಅಟ್ರಾಸಿಟಿ ಕೇಸ್‌ಗಳ ತ್ವರಿತ ನಿರ್ವಹಣೆಗೆ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸಲು ತೀರ್ಮಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ 30 ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಒದಗಿಸುವ ಕುರಿತ ಮತ್ತು ಅಟ್ರಾಸಿಟಿ ಕೇಸ್‌ಗಳ ತ್ವರಿತ ನಿರ್ವಹಣೆಗಾಗಿ ಕರ್ನಾಟಕದಲ್ಲಿ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಸೋಮವಾರ (ಅಕ್ಟೋಬರ್ 28) ಅಂಗೀಕರಿಸಿದೆ. ಇದಲ್ಲದೆ ಕೃಷಿ ಅಭಿವೃದ್ಧಿ ಸಂಸ್ಥೆ ಸ್ಥಾಪನೆ ಸೇರಿ 30 ವಿಷಯಗಳ ಕುರಿತು ನಿರ್ಣಯವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ ಎಂದು ಕರ್ನಾಟಕ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. ಸಂಪುಟ ಸಭೆಯಲ್ಲಿ ಮೂವತ್ತಕ್ಕೂ ವಿಷಯಗಳ ಕುರಿತು ಚರ್ಚಿಸಲಾಗಿದ್ದು, ಹಲವು ನಿರ್ಧಾರಗಳನ್ನು ಕೈಗೊಂಡಿದ್ದೇವೆ.ಕೃಷಿ ಅಭಿವೃದ್ಧಿ ಸಂಸ್ಥೆ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.
ಪರಿಶೀಷ್ಟ ಜಾತಿಗಳ ಒಳಮೀಸಲು ಜಾರಿಗೆ ತೀರ್ಮಾನ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡಲು ಏಕಸದಸ್ಯ ಆಯೋಗ ರಚನೆಗೆ ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸರ್ಕಾರವು ಆಯೋಗವೊಂದನ್ನು ರಚನೆ ಮಾಡಲಿದ್ದು, ಈ ಆಯೋಗವು ಮೂರು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯ ಬಳಿಕ ಟ್ವೀಟ್ ಮಾಡಿದ್ದಾರೆ.
'ಒಳಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಚರ್ಚೆಗಳು ಮತ್ತು ಚಿಂತನೆಗಳು ಕೂಡ ನಡೆಯುತ್ತಿದ್ದು, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು. ಇದೇ ಕಾರಣಕ್ಕೆ ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಒಳ ಮೀಸಲಾತಿ ಕಲ್ಪಿಸಲು ಸಂಪುಟ ಸಭೆ ನಿರ್ಣಯ ತೆಗೆದುಕೊಂಡಿದೆ. ಸರ್ಕಾರ ನೇಮಕ ಮಾಡುವ ಆಯೋಗವು ತನ್ನ ವರದಿಯನ್ನು ಸಲ್ಲಿಸುವವರೆಗೆ ಎಲ್ಲ ನೇಮಕಾತಿಗಳನ್ನು ಕನಿಷ್ಠ 3 ತಿಂಗಳ ಕಾಲ ಮುಂದೂಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
'2022ರಲ್ಲಿ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ತಿರಸ್ಕರಿಸಿತ್ತು. ಮಾಜಿ ಕಾನೂನು ಸಚಿವ ಮಾಧುಸ್ವಾಮಿ ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಈಗ ದಲಿತ ಸಮುದಾಯಕ್ಕೆ ಒಳಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ನಮ್ಮ ಪಕ್ಷದ ಸಮಾವೇಶದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದೆವು. ಚಿತ್ರದುರ್ಗದಲ್ಲಿ, ಮತ್ತು ಆಯೋಗವು ಸಂಗ್ರಹಿಸಿದ ಪ್ರಾಯೋಗಿಕ ಮಾಹಿತಿಯ ಆಧಾರದ ಮೇಲೆ ನಾವು ಅನುಷ್ಠಾನಕ್ಕೆ ಮುಂದುವರಿಯುತ್ತೇವೆ ಮತ್ತು ಆಯೋಗದ ಸಂಶೋಧನೆಗಳನ್ನು ಪರಿಶೀಲಿಸಿದ ನಂತರ ನಾವು ಮುಂದುವರಿಯುತ್ತೇವೆ" ಎಂದು ಸಚಿವ ಮಹದೇವಪ್ಪ ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದ್ಧಾರೆ.
ಅಟ್ರಾಸಿಟಿ ಕೇಸ್‌ಗಳ ನಿರ್ವಹಣೆಗೆ 33 ವಿಶೇಷ ಪೊಲೀಸ್ ಠಾಣೆಗಳು
ಜಾತಿ ದೌರ್ಜನ್ಯ ಪ್ರಕರಣಗಳ ಅಥವಾ ಅಟ್ರಾಸಿಟಿಗೆ ಸಂಬಂಧಿಸಿ ತುರ್ತು ಪ್ರಕರಣಗಳನ್ನು ನಿಭಾಯಿಸಲು 33 ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆ ಮತ್ತು 450 ಸಿಬ್ಬಂದಿಗಳ ನೇಮಕಾತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕರ್ನಾಟಕದ ಲೋಕೋಪಯೋಗಿ ಅಭಿವೃದ್ಧಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
‘‘ಪರಿಶಿಷ್ಟ ಜಾತಿ ಜನರ ಮೇಲಿನ ದೌರ್ಜನ್ಯ ತಡೆಗೆ ಒತ್ತು ನೀಡುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಈ ಪೊಲೀಸ್ ಠಾಣೆಗಳ ಸ್ಥಾಪನೆಯಾಗಲಿದೆ. ಪೊಲೀಸ್ ಠಾಣೆಗೆ ಅಟ್ರಾಸಿಟಿ ಕೇಸ್‌ಗಳು ಬಂದರೆ ಅವುಗಳನ್ನು ಅವರು ಈ ವಿಶೇಷ ಪೊಲೀಸ್ ಠಾಣೆಗೆ ವರ್ಗಾಯಿಸಲಿದ್ದಾರೆ. ಇಲ್ಲಿ ಎಫ್‌ಐಆರ್ ಮತ್ತು ಇತರೆ ಪ್ರಕ್ರಿಯೆಗಳು ಮುಂದುವರಿಯುತ್ತವೆ. ತ್ವರಿತವಾಗಿ ಅಟ್ರಾಸಿಟಿ ಕೇಸ್‌ಗಳ ವಿಲೇವಾರಿ ಮಾಡುವುದು ಇದರ ಉದ್ದೇಶ ಎಂದು ಸಚಿವ ಮಹದೇವಪ್ಪ ವಿವರಿಸಿದರು.
ಈ 33 ಪೊಲೀಸ್ ಠಾಣೆಗಳು ಸಮಾಜ ಕಲ್ಯಾಣ ಇಲಾಖೆಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಘಟಕಗಳಾಗಿ ಕೆಲಸ ಮಾಡಲಿವೆ. ಇದಕ್ಕಾಗಿ 450 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಮಹದೇವಪ್ಪ ಅವರು ವಿವರಿಸಿದರು.