ನಿತ್ಯವೂ ಫಾಸ್ಟ್‌ಫುಡ್ ಬೇಕೆನಿಸುತ್ತಾ, 20 ವರ್ಷ ಹಿಂದೆ ನಿತ್ಯ 3 ಹೊತ್ತು 30 ದಿನ ಮೆಕ್ ಮೀಲ್ ಸೇವಿಸಿದ ಈ ಯುವಕನಿಗೇನಾಯಿತು ನೋಡಿ
Fast Food Addiction: ನಿತ್ಯವೂ ಫಾಸ್ಟ್‌ಫುಡ್ ಬೇಕೆನಿಸುತ್ತಾ, ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಫಾಸ್ಟ್‌ಫುಡ್ ಅಡಿಕ್ಷನ್‌ಗೆ ಒಳಗಾದರೆ ಏನಾಗುತ್ತೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ 20 ವರ್ಷದ ಹಿಂದೆ ಸ್ವತಃ ಪ್ರಯೋಗ ಮಾಡಿದ್ದ ಒಬ್ಬ ಯುವಕ. ನಿತ್ಯ 3 ಹೊತ್ತು, 30 ದಿನ ಮೆಕ್ ಮೀಲ್ ಸೇವಿಸಿದ ಈ ಯುವಕನಿಗೆ ಏನಾಯಿತು ನೋಡಿ.
ನವದೆಹಲಿ/ಬೆಂಗಳೂರು: ಪ್ರಪಂಚದಾದ್ಯಂತ ಫಾಸ್ಟ್ ಫುಡ್ ತಿನ್ನುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ಹಾನಿಕರ ಎಂದು ಪ್ರತಿಪಾದಿಸಲಾಗುತ್ತಿದೆ. ಆದಾಗ್ಯೂ, ಜನರು ವಿಶೇಷವಾಗಿ ಮಕ್ಕಳು ಮತ್ತು ಯುವಜನರು ಫಾಸ್ಟ್‌ಫುಡ್ ವ್ಯಾಮೋಹಕ್ಕೆ ಒಳಗಾಗಿ ಅದನ್ನೇ ತಿನ್ನುತ್ತಿದ್ದಾರೆ. ಒಂದು ತಿಂಗಳ ಕಾಲ ಮೂರು ಹೊತ್ತು ಕೂಡ ಫಾಸ್ಟ್‌ಫುಡ್, ಸಾಫ್ಟ್ ಡ್ರಿಂಕ್ ಸೇವಿಸಿದರೆ ಏನಾಗಬಹುದು, ಎಂದಾದರೂ ಈ ಕುರಿತು ಆಲೋಚಿಸಿದ್ದೀರಾ?
ಹೀಗೆ ಆಲೋಚನೆ ಮಾಡಿದ ಅಮೆರಿಕದ ಚಲನಚಿತ್ರ ನಿರ್ಮಾಪಕ ಮೋರ್ಗನ್ ಸ್ಪರ್ಲಾಕ್ ತನ್ನನ್ನೇ ಪ್ರಯೋಗಕ್ಕೆ ಒಡ್ಡಿ ಅದನ್ನೇ ಸಾಕ್ಷ್ಯಚಿತ್ರ ಮಾಡಿದರು. 2004ರಲ್ಲಿ ಈ ಅಪಾಯಕಾರಿ ಪ್ರಯೋಗ ಮಾಡಿದ್ದರು. ಈ ವಿಚಾರ ಪದೇಪದೆ ಚರ್ಚೆಗೆ ಒಳಗಾಗುತ್ತಿರುವ ಕಾರಣ ಇಲ್ಲಿ ಮತ್ತೆ ಪ್ರಸ್ತುತಿ ಮಾಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಅವರು ಕ್ಯಾನ್ಸರ್‌ಗೆ ಒಳಗಾಗಿ ಮೃತಪಟ್ಟರು. ಅವರ ವಯಸ್ಸು 53 ಆಗಿತ್ತಷ್ಟೆ. 20 ವರ್ಷ ಹಿಂದಿನ ಪ್ರಯೋಗ ಅವರ ಆರೋಗ್ಯ ಕೆಡಿಸಿತ್ತು ಎಂದು ದ ಡೇಲಿಮೇಲ್ ವರದಿ ಮಾಡಿದೆ.
ಸೂಪರ್ ಸೈಜ್ ಮಿ ಸಾಕ್ಷ್ಯಚಿತ್ರಕ್ಕಾಗಿ 30 ದಿನ 3 ಹೊತ್ತು ಮೆಕ್‌ಮೀಲ್ ಸೇವನೆ
ಫಾಸ್ಟ್‌ಫುಡ್‌ನ ಅಡ್ಡ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮೋರ್ಗನ್ ಸ್ಪರ್ಲಾಕ್ ತನ್ನೇ ವಿಚಿತ್ರ ಪ್ರಯೋಗಕ್ಕೆ ಒಡ್ಡಿಕೊಂಡರು. 30 ದಿನಗಳ ಕಾಲ 3 ಹೊತ್ತು ಮೆಕ್ ಮೀಲ್ ಸೇವಿಸಿದರು. ನಿತ್ಯವೂ ಅದರ ಡಾಕ್ಯುಮೆಂಟರಿ ಮಾಡುತ್ತ ಹೋದರು. ತನ್ನ ಶಾರೀರಿಕ, ಮಾನಸಿಕ ಬದಲಾವಣೆಗಳನ್ನು ದಾಖಲಿಸುವುದಕ್ಕೆ ವಿಡಿಯೋ ಮಾಡಿಕೊಂಡರು. ಈ ಅಪಾಯಕಾರಿ ಪ್ರಯೋಗ ಫಲಿತಾಂಶ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಇದನ್ನೆಲ್ಲ ಸೇರಿಸಿ ಅವರು ಸೂಪರ್ ಸೈಜ್ ಮಿ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದರು.
ಪ್ರಯೋಗದ ನಿಯಮಗಳಿಗೆ ಅನುಗುಣವಾಗಿ ಮೆಕ್‌ಡೊನಾಲ್ಡ್ ಮೆನುವಿನಲ್ಲಿರುವ ಒಂದೊಂದು ಮೀಲ್ ಅನ್ನು ಸೇವಿಸುತ್ತ ಹೋಗಿದ್ದರು. ಕೇವಲ 5 ದಿನಗಳಲ್ಲಿ ಅವರ ತೂಕ 9.5 ಪೌಂಡ್ ಹೆಚ್ಚಳವಾಗಿತ್ತು. 21 ದಿನಗಳ ಬಳಿಕ ಅವರ ತೂಕ 24.5 ಪೌಂಡ್ ಹೆಚ್ಚಾಗಿತ್ತು. ಶರೀರದ ಕೊಬ್ಬು (ಕೊಲೆಸ್ಟ್ರಾಲ್) ಶೇಕಡ 11 ರಿಂದ ಶೇಕಡ 18ಕ್ಕೆ ಅಂದರೆ ಕೊಲೆಸ್ಟ್ರಾಲ್ ಮಟ್ಟವು 168 ಇದ್ದದ್ದು 230ಕ್ಕೆ ಏರಿತು. ಬೊಜ್ಜಿನ ಸಮಸ್ಯೆ ಕೂಡ ಕಾಡಿತು.
ಫಾಸ್ಟ್‌ಫುಡ್ ಸೇವನೆಗೆ 65,000 ಡಾಲರ್, ಅನಾರೋಗ್ಯದ ಚಿಕಿತ್ಸೆಗೆ ಇನ್ನಷ್ಟು ಖರ್ಚು
ಎನ್‌ಡಿಟಿವಿ ವರದಿಯ ಪ್ರಕಾರ, ಒಂದು ತಿಂಗಳ ಅವಧಿಯಲ್ಲಿ ಮೋರ್ಗನ್ ಸ್ಪರ್ಲಾಕ್ ಅವರು 65 ಸಾವಿರ ಡಾಲರ್ ಅನ್ನು ಮೆಕ್‌ಡೊನಾಲ್ಡ್ ಮೀಲ್ಸ್‌ಗಾಗಿ ಖರ್ಚು ಮಾಡಿದರು. ಈ ಅವಧಿಯಲ್ಲಿ, ಅವರು ತಮ್ಮ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು. ತಲೆನೋವು, ಖಿನ್ನತೆ, ಮೂಡ್ ಸ್ವಿಂಗ್ಸ್ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು.
ಒಂದು ಹಂತದಲ್ಲಿ, ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಕೂಡ ಅವರ ಯಕೃತ್ತಿನ ಬಗ್ಗೆ ಚಿಂತಿತರಾಗಿದ್ದರು. ಏಕೆಂದರೆ ಅದು ಕೊಬ್ಬಾಗಿ ಬದಲಾಗುತ್ತಿತ್ತು. ಒಮ್ಮೊಮ್ಮೆ ಮೆಕ್‌ಡೊನಾಲ್ಡ್‌ನ ಆಹಾರದ ಚಟಕ್ಕೆ ಬಿದ್ದು ಅದು ಸಿಗದಿದ್ದಾಗ ಆಲಸ್ಯ ಕಾಡತೊಡಗಿತು. ಸ್ಪರ್ಲಾಕ್ ಸೂಪರ್ ಸೈಜ್ ಮಿ ಸಾಕ್ಷ್ಯಚಿತ್ರವು ಪ್ರೇಕ್ಷಕರ ಹೆಚ್ಚು ಗಮನ ಸೆಳೆದಿದ್ದು, 22 ಮಿಲಿಯನ್ ಡಾಲರ್ ಗಳಿಸಿದೆ. ಇದು ಆಸ್ಕರ್‌ಗೆ ಕೂಡ ನಾಮನಿರ್ದೇಶನಗೊಂಡಿತ್ತು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)