logo
ಕನ್ನಡ ಸುದ್ದಿ  /  ಕರ್ನಾಟಕ  /  ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆ ಬಂದ ಮೇಲೆ ಯಾಕೆ ಸ್ವಾಮಿ ಸಾವಿರಾರು ರೂಪಾಯಿ ಡೆಪಾಸಿಟ್ ಕಟ್ಟಿಸಿಕೊಳ್ತೀರಾ?- ಓದುಗರ ಓಲೆ

ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆ ಬಂದ ಮೇಲೆ ಯಾಕೆ ಸ್ವಾಮಿ ಸಾವಿರಾರು ರೂಪಾಯಿ ಡೆಪಾಸಿಟ್ ಕಟ್ಟಿಸಿಕೊಳ್ತೀರಾ?- ಓದುಗರ ಓಲೆ

Praveen Chandra B HT Kannada

Sep 25, 2024 06:55 PM IST

google News

ಕರ್ನಾಟಕ ಗೃಹಜ್ಯೋತಿ ಯೋಜನೆ

    • ಕರ್ನಾಟಕ ಸರಕಾರವು ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್‌ ನೀಡುತ್ತಿದೆ. ಆದರೆ, ಈ ಸಮಯದಲ್ಲಿ ಹೊಸದಾಗಿ ಮನೆ ಕಟ್ಟುವವರಿಂದ ತಾತ್ಕಾಲಿಕ ಕರೆಂಟ್ ಮೀಟರ್‌ಗಾಗಿ ಹತ್ತಾರು ಸಾವಿರ ರೂಪಾಯಿಯನ್ನು ಠೇವಣಿ  ಪಡೆದುಕೊಳ್ಳುವುದು ಮುಂದುವರೆದಿದೆ. ಈ ಠೇವಣಿ ವಾಪಸ್‌ ಪಡೆಯುವ ಬಗೆ ಹೇಗೆ ಎಂದು ಎಚ್‌ಟಿ ಕನ್ನಡದ ಓದುಗ ಶ್ರೀನಿವಾಸ ಮಠ ಪ್ರಶ್ನಿಸಿದ್ದಾರೆ.
ಕರ್ನಾಟಕ ಗೃಹಜ್ಯೋತಿ ಯೋಜನೆ
ಕರ್ನಾಟಕ ಗೃಹಜ್ಯೋತಿ ಯೋಜನೆ

ಗೃಹಜ್ಯೋತಿ ಎಂಬ ಯೋಜನೆಯನ್ನು ನೆನಪಿಸಿಕೊಳ್ಳುವುದಕ್ಕೆ ಈಗ ಕಾರಣವೊಂದಿದೆ. ಮನೆಗಳಿಗೆ ಇನ್ನೂರು ಯೂನಿಟ್ ವಿದ್ಯುತ್ ಬಳಕೆ ಉಚಿತ ಎಂಬುದು ಕಾಂಗ್ರೆಸ್ ಮಾಡಿದ ಘೋಷಣೆ ಆಗಿತ್ತು. ಆ ನಂತರ ಅದೇ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು. ಆ ನಂತರ ಗೃಹಜ್ಯೋತಿ ಯೋಜನೆಯು “ಇನ್ನೂರು ಯೂನಿಟ್ ತನಕ” ಉಚಿತ ಅಂತ ಆಯಿತು. ಮನೆ ಕಟ್ಟಿ ಒಂದು ವರ್ಷದೊಳಗೆ ಆದಲ್ಲಿ ನಲವತ್ತೆಂಟೋ ಅಥವಾ ಐವತ್ತೆಂಟೋ ಯೂನಿಟ್ ವಿದ್ಯುತ್ ಪುಕ್ಕಟೆ ಅಂತೊಂದು ನಿಯಮ ಮಾಡಿದರು. ಈ ಎಲ್ಲದರ ಮಧ್ಯೆ ಮೂಲಭೂತವಾದ ಪ್ರಶ್ನೆಯೊಂದು ಹಾಗೇ ಉಳಿದಿದೆ. ಹೊಸದಾಗಿ ಮನೆ ಕಟ್ಟುವವರು ತಾತ್ಕಾಲಿಕವಾಗಿ ಕರೆಂಟ್ ಮೀಟರ್ ಪಡೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಹತ್ತಾರು ಸಾವಿರ ರೂಪಾಯಿಯನ್ನು ಠೇವಣಿ ಅಂತ ಪಡೆದುಕೊಳ್ಳಲಾಗುತ್ತದೆ. ಆ ನಂತರ ತಿಂಗಳಿಗೆ ಇಷ್ಟು ಅಂತ ಪ್ರೀಪೇಯ್ಡ್ ಆಧಾರದಲ್ಲಿ ಮೊತ್ತವನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.

ಇಷ್ಟಾದ ಮೇಲೆ, ಮುಂಚೆ ಹೇಗಿತ್ತು ಅಂತಂದರೆ, ಠೇವಣಿ ಅಂತ ಕಟ್ಟಿಸಿಕೊಂಡಂಥ ಮೊತ್ತವನ್ನು ಮನೆಯು ಕಟ್ಟಿ ಮುಗಿಸಿ, ಸಾಮಾನ್ಯ ಸೇವೆಯನ್ನು ಆಯಾ ವಿದ್ಯುತ್ ಕಂಪನಿಯಿಂದ ಪಡೆದುಕೊಂಡ ಮೇಲೆ, ಪ್ರತಿ ತಿಂಗಳ ವಿದ್ಯುತ್ ಬಿಲ್ ಗೆ ಹೊಂದಾಣಿಕೆ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಏನಿದೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಹತ್ತಾರು ಸಾವಿರ ರೂಪಾಯಿ ಠೇವಣಿ ಕಟ್ಟಿಸಿಕೊಂಡ ಮೊತ್ತವನ್ನು ತಿಂಗಳಾತಿಂಗಳು ಬರುವ ಬಿಲ್ ನಲ್ಲಿ ಮುರಿ ಹಾಕಿಕೊಂಡು ಬರಬೇಕು ಅಂದರೆ ಅದೆಷ್ಟು ತಿಂಗಳೋ ಅಥವಾ ವರ್ಷವೋ ಅಥವಾ ಕಾಂಗ್ರೆಸ್ ನಿಂದ ಗೃಹಜ್ಯೋತಿ ಯೋಜನೆಯು ಶಾಶ್ವತ ಭಾಗ್ಯವಾಗಿ ಕನ್ನಡಿಗರಿಗೆ ಉಳಿದುಹೋದರೆ ಠೇವಣಿ ಮೊತ್ತವು ಮಾಲೀಕರಿಗೆ ವಾಪಸ್ ಬರುವುದು ಹೇಗೆ?

ಈ ಕಾರಣದಿಂದ ವಿದ್ಯುತ್ ಠೇವಣಿ ವಿಚಾರವಾಗಿ ಸರ್ಕಾರದಿಂದ ಹೊಸ ನಿಯಮ ತರುವುದು ಉತ್ತಮವೆನಿಸುತ್ತದೆ. ಒಂದೋ ಠೇವಣಿ ಇಡಿಸಿಕೊಳ್ಳುವ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡಬೇಕು. ಇಲ್ಲದಿದ್ದಲ್ಲಿ ಆ ಠೇವಣಿಯನ್ನು ತೆಗೆದುಕೊಳ್ಳುವುದನ್ನಾದರೂ ನಿಲ್ಲಿಸಬೇಕು. ಇದೇ ರೀತಿ ಹೆಚ್ಚುವರಿ ಠೇವಣಿ ವಸೂಲಿ ಮಾಡಿ, ಅದಕ್ಕೆ ಬಡ್ಡಿಯನ್ನು ನೀಡುವ ಕ್ರಮ ಇದೆ. ಹೀಗೆ ಬಡ್ಡಿ ಮೊತ್ತ ಬಂದಾಗ ವಿದ್ಯುತ್ ಬಿಲ್ ಮೊತ್ತ ಮೈನಸ್ ತೋರಿಸುತ್ತದೆ. ಬಿಲ್ ಮೊತ್ತವು ತಿಂಗಳುಗಟ್ಟಲೆ ಮೈನಸ್ ಮೊತ್ತವನ್ನೇ ತೋರಿಸುತ್ತಿರುತ್ತದೆ. ಈ ವರದಿಯಲ್ಲಿ ಪ್ರಸ್ತಾವ ಮಾಡುತ್ತಿರುವುದು ಗೃಹಬಳಕೆ ವಿದ್ಯುತ್ ಬಗ್ಗೆ ಮಾತ್ರ. ಹತ್ತಾರು ಸಾವಿರ ರೂಪಾಯಿ ಠೇವಣಿ ಕಟ್ಟಿಸಿಕೊಳ್ಳುವುದು, ಅದರಲ್ಲೂ ಮನೆಯನ್ನು ಕಟ್ಟುವುದಕ್ಕೆ ಶುರು ಮಾಡುವ ಹೊಸದರಲ್ಲಿಯೇ ಕಟ್ಟಿಸಿಕೊಳ್ಳುವುದು ಮಾಲೀಕರ ಪಾಲಿಗೆ ಹೊರೆಯಾಗುತ್ತದೆ.

ಇನ್ನು ವಿದ್ಯುತ್ ಕಂಪನಿಗಳ ಜತೆಗಿನ ಬಹುತೇಕ ವ್ಯವಹಾರಗಳಿಗೆ ನೋಂದಾಯಿತ ಕಾಂಟ್ರ್ಯಾಕ್ಟರ್ ಗಳ ಮೂಲಕವೇ ಹೋಗಬೇಕು. ಪ್ರತಿ ಬಾರಿಯೂ ಅವರಿಗೆ ಒಂದಿಷ್ಟು ಸೇವಾ ಶುಲ್ಕ ಅಥವಾ ಹೆಚ್ಚುವರಿ ಮೊತ್ತ ಪಾವತಿಸಲೇಬೇಕು. ಅದೆಂಥ ರಾಕೆಟ್ ಸೈನ್ಸ್ ಇದೆಯೋ ಇದರಲ್ಲಿ ಗೊತ್ತಿಲ್ಲ. ಜನ ಸಾಮಾನ್ಯರ ಪಾಲಿಗೆ ಬೆಸ್ಕಾಂ ಜತೆಗೆ ಕಾಂಟ್ರಾಕ್ಟರ್ ಗಳನ್ನು “ಸಾಕಬೇಕಾದ” ಅನಿವಾರ್ಯ ಕರ್ಮ ಬಂದೊದಗಿದೆ. ವಿದ್ಯುತ್ ಕಂಪನಿಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಕೂತಂಥ ಅಧಿಕಾರಿಗಳ ಪಾಲಿಗೆ “ಮಾತುಕತೆ” ಸಲೀಸಾಗುವುದಕ್ಕಾಗಿಯೇ ಇಂಥದ್ದೊಂದು ನಿಯಮ ಮಾಡಿಲಾಗಿದೆಯಾ ಎಂಬ ಪ್ರಶ್ನೆ ಬರುತ್ತದೆ. ಹೊಸದಾಗಿ ಮನೆ ಕಟ್ಟಿ ಮುಗಿಸಿಯಾದ ಮೇಲೆ ಸಾಮಾನ್ಯ ಸೇವೆಯನ್ನು ಪಡೆದುಕೊಳ್ಳಬೇಕು ಅಂತಾದಲ್ಲಿ ಅರ್ಜಿ ಹಾಕಿಕೊಳ್ಳುವುದಕ್ಕೆ ಬೆಸ್ಕಾಂನಿಂದ ನೋಂದಾಯಿತರಾದ ಕಾಂಟ್ರಾಕ್ಟರ್ ಸಹಿ, ಸೀಲು ಹಾಕಿಸಿಕೊಳ್ಳಬೇಕು. ಅವರ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಕಟ್ಟುವ ಶುಲ್ಕ ಹಾಗೂ ಕಾಂಟ್ರಾಕ್ಟರ್ ಈ ಸೇವೆಗಾಗಿ ಪಡೆದುಕೊಳ್ಳುವ ಮೊತ್ತಕ್ಕೂ ಅಜಗಜಾಂತರ ಇರುತ್ತದೆ. ಈ ವಿಚಾರವಾಗಿ ಕಾಂಟ್ರಾಕ್ಟರ್ ಮಹಾಶಯ, “ಆಫೀಸಿನ ಖರ್ಚಿರುತ್ತದೆ, ಸಾಹೇಬರುಗಳಿಗೂ ಕೊಡಬೇಕು,” ಎಂಬುದು ತೀರಾ ಸಾಮಾನ್ಯ ಸಂಗತಿ.

ಇದು ಈ ವರದಿಯ ಮುಖ್ಯ ವಿಷಯದ ಆಚೆಗಾಯಿತು. ಆದರೆ ವಿದ್ಯುತ್ ಠೇವಣಿ ಮೊತ್ತದ ವಿಚಾರಕ್ಕೇ ಮತ್ತೆ ಬರೋಣ. ಇನ್ನೂರು ಯೂನಿಟ್ ತನಕ ಪುಕ್ಕಟೆ ವಿದ್ಯುತ್ ಎಂಬ ಯೋಜನೆ ತಂದ ನಂತರ ಠೇವಣಿ ಮೊತ್ತ ಹಾಗೂ ಠೇವಣಿಯ ಮೇಲಿನ ಬಡ್ಡಿ ಇವೆರಡರ ಬಗ್ಗೆ ಆಲೋಚನೆ ಮಾಡಲೇಬೇಕಲ್ಲವಾ? ವಿದ್ಯುತ್ ನಿಗಮ ಮತ್ತು ರಾಜ್ಯ ಸರ್ಕಾರದ ಮಧ್ಯೆ ಮಾತುಕತೆ ನಡೆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ಪರಿಹಾರ ಸಿಗಬಹುದು. ಲಕ್ಷಾಂತರ ಜನರು, ಅದರಲ್ಲೂ ಗೃಹಬಳಕೆ ವಿದ್ಯುತ್ ಗೆ ಸಂಬಂಧಿಸಿದಂತೆ ಠೇವಣಿ ಇಡುತ್ತಾರೆ. ನಮ್ಮ ರಾಜ್ಯದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಇತ್ತ ಗಮನ ಹರಿಸಬೇಕು.

ಗಮನಿಸಿ: ಇದು ಎಚ್‌ಟಿ ಕನ್ನಡದ ಓದುಗರಾದ ಶ್ರೀನಿವಾಸ ಮಠ ಬರೆದ ಬರಹ. ಸಾರ್ವಜನಿಕ ಸಮಸ್ಯೆಗಳು, ಕುಂದುಕೊರತೆಗಳ ಕುರಿತು ನೀವೂ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆಬರೆಯಬಹುದು. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ