ಕರ್ನಾಟಕದ ಮೊದಲ ಅನಿಲ ಆಧಾರಿತ ವಿದ್ಯುತ್ ಸ್ಥಾವರ, ಬೆಂಗಳೂರಿನ ಯಲಹಂಕದಲ್ಲಿಉದ್ಘಾಟನೆಗೆ ಸಿದ್ದ
ಅನಿಲ ವಿದ್ಯುತ್ ಉತ್ಪಾದನೆ ಆಧಾರಿತ ಘಟಕ ಬೆಂಗಳೂರಿನ ಯಲಹಂಕದಲ್ಲಿ ಸೆಪ್ಟಂಬರ್ 24ರಂದು ಉದ್ಘಾಟನೆಗೊಳ್ಳಲಿದೆ. ಇದು ಕರ್ನಾಟಕದ ಮೊದಲ ಅನಿಲ ವಿದ್ಯುತ್ ಉತ್ಪಾದನೆ ಘಟಕ.
ಬೆಂಗಳೂರು: ಕರ್ನಾಟಕದ ಮೊದಲ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಬೆಂಗಳೂರಿನ ಯಲಹಂಕದಲ್ಲಿ ಉದ್ಘಾಟನೆಗೆ ಅಣಿಯಾಗಿದೆ. ಸುಮಾರು 370 ಮೆಗಾವ್ಯಾಟ್ ವಿದ್ಯುತ್ ಅನ್ನು ಅನಿಲ ಬಳಸಿ ಉತ್ಪಾದನೆ ಮಾಡುವ ಪ್ರಯೋಗ ಬಹುತೇಕ ಯಶಸ್ವಿಯಾಗಿದ್ದು, ಇನ್ನು ಎರಡು ದಿನದಲ್ಲಿ ಅಧಿಕೃತವಾಗಿ ವಿದ್ಯುತ್ ಉತ್ಪಾದನೆ ಶುರುವಾಗಲಿದೆ. ಯಲಹಂಕ ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್ (CCPP), ಸೆಪ್ಟೆಂಬರ್ 24 ರಂದು ಯಲಹಂಕದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಾವರವನ್ನು ಉದ್ಘಾಟಿಸಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳುತ್ತಾರೆ.
ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಸ್ಥಾಪಿಸಿದ ಈ ಸ್ಥಾವರವು ಗ್ಯಾಸ್ ಟರ್ಬೈನ್ ಜನರೇಟರ್‌ನಿಂದ 236.825 ಮೆಗಾವ್ಯಾಟ್ ಮತ್ತು ಸ್ಟೀಮ್ ಟರ್ಬೈನ್ ಜನರೇಟರ್‌ನಿಂದ 133.225 ಮೆಗಾವ್ಯಾಟ್ ಉತ್ಪಾದಿಸುತ್ತದೆ. ಒಟ್ಟು ಸಾಮರ್ಥ್ಯ 370.05 ಮೆಗಾವ್ಯಾಟ್. ಸಂಯೋಜಿತ ಪೈಲಟ್ ಉತ್ಪಾದನಾ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ. ಉದ್ಘಾಟನೆಯಾದ ನಂತರ ಹಂತ ಹಂತವಾಗಿ ಉತ್ಪಾದನಾ ಪ್ರಮಾಣವನ್ನು ಹಚ್ಚಿಸಲಾಗುತ್ತದೆ.
2016ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರೇ ಯಲಹಂಕ ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್‌ಗೆ ಶಂಕುಸ್ಥಾಪನೆ ಮಾಡಿದ್ದರು. ನಾಲ್ಕು ವರ್ಷದ ಹಿಂದೆಯೇ ಘಟಕ ಆರಂಭವಾಗಬೇಕಾಗಿತ್ತಾದರೂ ಕೋವಿಡ್ ಕಾಲದ ನಿಧಾನ ಪ್ರಕ್ರಿಯೆಯಿಂದ ವಿಳಂಬವಾಯಿತು. ಈಗ ಎಲ್ಲ ಕಾಮಗಾರಿ ಮುಗಿದು ಉದ್ಘಾಟನೆ ಮಾಡಲಾಗುತ್ತಿದೆ. ಅದೂ ಸಿದ್ದರಾಮಯ್ಯ ಅವರೇ ಚಾಲನೆ ನೀಡುವರು.
ಯಲಹಂಕ ಸಂಯೋಜಿತ ಸೈಕಲ್ ಪವರ್ ಪ್ಲಾಂಟ್‌ನ ಕಾರ್ಯಾಚರಣೆಗಳ ಚಟುವಟಿಕೆ ಫೆಬ್ರವರಿ 23 ರಂದು ಜಿಎಐಎಲ್ ಅನಿಲವನ್ನು ಪೂರೈಸುವುದರೊಂದಿಗೆ ಪ್ರಾರಂಭವಾಯಿತು. ಮಾರ್ಚ್ 3 ರಂದು ಗ್ಯಾಸ್ ಟರ್ಬೈನ್ ಅನ್ನು ಪರೀಕ್ಷಿಸಲಾಯಿತು.
ಮಾರ್ಚ್‌ನಲ್ಲಿ ಗ್ರಿಡ್‌ಗೆ ಸಿಂಕ್ರೊನೈಸ್ ಆಗುವ ಮೊದಲು ಸರಿಯಾದ ಕಾರ್ಯವನ್ನು ಖಚಿತಪಡಿಸಿಕೊಳ್ಳಲು 700 ಆರ್‌ಪಿಎಂ ನಲ್ಲಿ ಚಲಿಸಲಿದೆ. ಆರಂಭಿಕ ಲೋಡ್ 20ಮೆಗಾವ್ಯಾಟ್ ಅನ್ನು ಮೇ 30 ರಂದು ಸ್ಟೀಮ್ ಟರ್ಬೈನ್ ಮೂಲಕ ಉತ್ಪಾದಿಸಲಾಯಿತು. ನಂತರ ಗ್ರಿಡ್‌ಗೆ ಸಿಂಕ್ರೊನೈಸ್ ಮಾಡಲಾಯಿತು. ಹಂತ ಹಂತವಾಗಿ ಪ್ರಯೋಗ ಮುಗಿಸಿ ಈಗ ಉತ್ಪಾದನೆ ಶುರುವಾಗಲಿದೆ ಎನ್ನುವುದು ಜಾರ್ಜ್ ವಿವರಣೆ.
ಗ್ಯಾಸ್ ಟರ್ಬೈನ್‌ನ ಸಂಪೂರ್ಣ ಲೋಡ್ ಪರೀಕ್ಷೆಯನ್ನು ಜೂನ್ 6 ರಿಂದ 7 ರವರೆಗೆ ನಡೆಸಲಾಯಿತು. ಅದು 237 ಮೆಗಾವ್ಯಾಟ್ ಅನ್ನು 10 ಗಂಟೆಗಳ ಕಾಲ ನಿರಂತರವಾಗಿ ಉತ್ಪಾದಿಸಿತು. ಜೂನ್ 28 ರ ಹೊತ್ತಿಗೆ, ಸ್ಥಾವರವು ಸಂಯೋಜಿತ ಸೈಕಲ್ ಮೋಡ್‌ನಲ್ಲಿ ಕಾರ್ಯನಿರ್ವಹಿಸಿತು.
ಆನಂತರ 315 ಮೆಗಾವ್ಯಾಟ್ ಅನ್ನು ಉತ್ಪಾದಿಸಿತು. ಅಂತಿಮವಾಗಿ, ಸ್ಥಾವರವು ಆಗಸ್ಟ್ 8 ರಂದು ತನ್ನ ಪೂರ್ಣ ಸಾಮರ್ಥ್ಯದ 370 ಮೆಗಾವ್ಯಾಟ್‌ನಲ್ಲಿ ನಿರಂತರ ಸಂಯೋಜಿತ ಸೈಕಲ್ ಕಾರ್ಯಾಚರಣೆಯನ್ನು ಸಾಧಿಸಿತು, ಇದು 20 ಗಂಟೆಗಳವರೆಗೆ ಇರುತ್ತದೆ. ಆನಂತರ ಇದರ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.
ಕರ್ನಾಟಕದಲ್ಲಿ ಜಲ. ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಘಟಕಗಳು ಇವೆ. ಅನಿಲ ಆಧರಿತ ವಿದ್ಯುತ್ ಉತ್ಪಾದನೆ ಘಟಕ ಇದಾಗಲಿದೆ.
ವಿಭಾಗ