Karnataka Rains: ಭಾರೀ ಮಳೆಯಿಂದ ಭೂಕುಸಿತ, ಪ್ರವಾಹ; ಚಾಮರಾಜನಗರ, ಚಿಕ್ಕಮಗಳೂರು ಸಹಿತ ಹಲವೆಡೆ ಪ್ರವಾಸಿ ತಾಣ ಬಂದ್
Jul 31, 2024 02:28 PM IST
ಚಾಮರಾಜನಗರದ ಜಿಲ್ಲೆಯ ಭರಚುಕ್ಕಿ ಜಲಪಾತ ಸ್ಥಳಕ್ಕೆ ನಿಷೇಧ ಹೇರಲಾಗಿದೆ.
- monsoon tourism ಭಾರೀ ಮಳೆ ಕಾರಣದಿಂದಾಗಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಹಲವು ಕಡೆ ಪ್ರವಾಸಿ ತಾಣಗಳಿಗೆ ಮೂರು ದಿನ ನಿಷೇಧ ಹೇರಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ( Karnataka Rains) ಭೂಕುಸಿತ, ಪ್ರವಾಹದ ಸನ್ನಿವೇಶ ಉಂಟಾಗಿದೆ. ಈ ಕಾರಣದಿಂದಾಗಿ ಮೂರು ದಿನಗಳವರೆಗೆ ಹಲವು ಕಡೆಗಳಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಚಾಮರಾಜನಗರ( Chamarajanagar), ಚಿಕ್ಕಮಗಳೂರು( Chikkamagaluru), ಕೊಡಗು( kodagu), ಉತ್ತರಕನ್ನಡ( Uttarakannada) ಮೈಸೂರು ಸಹಿತ ಹಲವು ಕಡೆಗಳಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ( Tourist destinations banned) ತೆರಳದಂತೆ ಆಯಾ ಜಿಲ್ಲಾಡಳಿತಗಳು ನಿರ್ಬಂಧ ಹೇರಿವೆ. ಅದರಲ್ಲೂ ನದಿ ಪಾತ್ರ, ಜಲಪಾತಗಳ ಪ್ರದೇಶಗಳು, ಸೇತುವೆಗಳ ಪ್ರದೇಶಗಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ. ಪ್ರವಾಹದ ಸನ್ನಿವೇಶ ಇರುವುದರಿಂದ ಪ್ರವಾಸಿಗರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್, ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಎಂಬತ್ತು ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಎರಡೂ ನದಿಗಳ ನೀರು ಸೇರಿ ಚಾಮರಾಜನಗರ ಜಿಲ್ಲೆಯ ಹಲವೆಡೆ ಪ್ರವಾಹದ ಸನ್ನಿವೇಶ ಇದೆ. ಅದರಲ್ಲೂ ಭರಚುಕ್ಕಿ ಜಲಪಾತ, ಶಿವನಸಮುದ್ರ, ಹೊಗೆನೆಕಲ್ ಜಲಪಾತ, ಕೊಳ್ಳೇಗಾಲ-ಬೆಂಗಳೂರು ರಸ್ತೆಯಲ್ಲಿರುವ ವೆಲ್ಲೆಸ್ಲಿ ಸೇತುವೆ ಬಳಿಯೂ ಭಾರೀ ನೀರು ಹರಿಯುತ್ತಿದೆ. ಈ ಭಾಗಗಳಿಗೆ ಜನ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಕಂಡು ಬಂದಿದೆ. ಅದರಲ್ಲೂ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು, ಸೆಲ್ಪಿಗೆ ಮುಂದಾಗುವುದು, ರೀಲ್ಸ್‌ಗೋಸ್ಕರ ಕೆಳಕ್ಕೆ ಇಳಿಯುವುದೂ ಕಂಡು ಬಂದಿದೆ. ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದೆ. ಈ ಭಾಗದಲ್ಲಿ ಈಗಾಗಲೇ ಪೊಲೀಸ್ ಗಸ್ತನ್ನು ಕೂಡ ಹಾಕಲಾಗಿದೆ.ಆದರೂ ಪ್ರವಾಸಿಗರು ಅನಾಹುತಕ್ಕೆ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ನಾಲ್ಕು ತಾಣಗಳಿಗೆ ಆಗಸ್ಟ್ 1 ರವರೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಾದ ವೆಸ್ಲಿ ಸೇತುವೆ, ಶಿವನಸಮುದ್ರ, ಭರಚುಕ್ಕಿ ಮತ್ತು ಹೊಗೇನಿಕಲ್ ಫಾಲ್ಸ್ ಜಲಪಾತ ಪ್ರದೇಶಗಳಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ, ಮೂರು ದಿನ ಪ್ರವಾಸಿಗರು ಆಗಮಿಸಬಾರದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಅವರು ಅದೇಶದಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ ಇರುವುದರಿಂದ ಈಗಾಗಲೇ ತರೀಕೆರೆ ತಾಲ್ಲೂಕಿನ ಕಲ್ಲತ್ತಗಿರಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಮುಳ್ಳಯ್ಯನಗಿರಿ ಸಹಿತ ಪ್ರಮುಖ ಬೆಟ್ಟಗಳಿಗೆ ತೆರಳದಂತೆ ನಿಷೇಧವನ್ನೂ ಜಾರಿಗೊಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಕಣಿವೆಯಲ್ಲೂ ಮಳೆಯಾಗುತ್ತಿದೆ. ಇದರಿಂದ ಬೆಟ್ಟಗಳು, ಜಲಪಾತಗಳ ಬಳಿ ನಿಷೇಧ ಹೇರಲಾಗಿದೆ. ಶೃಂಗೇರಿ, ಹೊರನಾಡು, ಹರಿಹರಪುರ ಸಹಿತ ಹಲವೆಡೆ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜು ಆದೇಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇದರಿಂದ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯ ಹಲವು ಜಲಪಾತಗಳ ವೀಕ್ಷಣೆಗೆ ಆಗಮಿಸುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಅನಾಹುತಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಲಾಗಿದೆ.
ಕೊಡಗು ಜಿಲ್ಲೆಯಲ್ಲೂ ಕಾವೇರಿ ನದಿ ಉಕ್ಕಿ ಹರಿದು ಹಲವೆಡೆ ಪ್ರವಾಹದ ಸ್ಥಿತಿಯಿದೆ. ಭಾಗಮಂಡಲ, ತಲಕಾವೇರಿಗೆ ಪ್ರವಾಸಿಗರ ಭೇಟಿಗೆ ಅವಕಾಶವಿಲ್ಲ. ಅಲ್ಲದೇ ಹಲವು ಕಡೆಯೂ ಪೊಲೀಸ್ ಗಸ್ತನ್ನು ಹಾಕಲಾಗಿದ್ದು, ಪ್ರವಾಸಿಗರನ್ನು ನಿಯಂತ್ರಿಸಲಾಗುತ್ತಿದೆ.
ಮೈಸೂರು ಜಿಲ್ಲೆಯ ನಂಜನಗೂಡು, ತಲಕಾಡು. ತಿ.ನರಸೀಪುರ, ಹಾಸನ ಜಿಲ್ಲೆಯ ಹೇಮಾವತಿ ತೀರದ ಪ್ರದೇಶಗಳು, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಸಹಿತ ಹಲವು ಕಡೆಗಳಲ್ಲಿ ಪ್ರವಾಹದ ವಾತಾವರಣವಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.