logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ; ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಹೆಮ್ಮೆ

ಕನ್ನಡ ರಾಜ್ಯೋತ್ಸವ; ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಹೆಮ್ಮೆ

Umesh Kumar S HT Kannada

Nov 01, 2024 11:36 AM IST

google News

ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ- ಸಹಜ ಸಮೃದ್ಧ ಬಳಗದ ಹೆಮ್ಮೆ (ಕಡತ ಚಿತ್ರ)

  • ಸುವರ್ಣ ಕರ್ನಾಟಕ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶಿವನಾಪುರದ ರಮೇಶ್ ಕರುನಾಡ ಹೆಮ್ಮ. ಅವರು ನಡೆದಾಡುವ ಕೃಷಿ ವಿಶ್ವಕೋಶವಾಗಿದ್ದು, ಸಹಜ ಸಮೃದ್ಧ ಬಳಗದ ಮೂಲಕ ನೂರಾರು ರೈತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಸಹಜ ಸಮೃದ್ಧ ಬಳಗದ ಕೃಷ್ಣಪ್ರಸಾದ್ ಅವರು ನೆನಪಿಸಿಕೊಂಡು ಗೌರವ ಸಲ್ಲಿಸಿದ್ದಾರೆ. ಆ ಬರಹ ಇಲ್ಲಿದೆ.

ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ- ಸಹಜ ಸಮೃದ್ಧ ಬಳಗದ ಹೆಮ್ಮೆ (ಕಡತ ಚಿತ್ರ)
ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ- ಸಹಜ ಸಮೃದ್ಧ ಬಳಗದ ಹೆಮ್ಮೆ (ಕಡತ ಚಿತ್ರ)

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಇಂದು ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಪ್ರಶಸ್ತಿ ಘೋಷಿತರ ಪೈಕಿ ಕೃಷಿ ಕ್ಷೇತ್ರದ ಸಾಧಕ ಶಿವನಾಪುರ ರಮೇಶ್ ಅವರ ಕುರಿತಾದ ಕೆಲವು ಮುಖ್ಯ ಅಂಶಗಳನ್ನು ಸಹಜ ಸಮೃದ್ಧ ಬಳಗದ ಕೃಷ್ಣಪ್ರಸಾದ್ ನೆನಪಿಸಿಕೊಂಡು ಗೌರವ ಸೂಚಿಸಿದ್ದಾರೆ. ಶಿವನಾಪುರದ ರಮೇಶ್ ಅವರು ನೂರಾರು ಕೃಷಿಕರಿಗೆ ಮಾರ್ಗದರ್ಶಕರಾಗಿ ಕೃಷಿಯಲ್ಲೂ ಲಾಭ ಇದೆ, ನೆಮ್ಮದಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಅರ್ಹವಾಗಿಯೇ ಪ್ರಶಸ್ತಿ ಸಿಕ್ಕಿದೆ ಎಂಬುದನ್ನು ಕೃಷ್ಣಪ್ರಸಾದ್ ಅವರು ತಮ್ಮ ಬರಹದಲ್ಲಿ ತಿಳಿಸಿದ್ದಾರೆ. ಅವರ ಬರಹದ ಯಥಾರೂಪ ಇಲ್ಲಿದೆ.

ಶಿವನಾಪುರ ರಮೇಶರಿಗೆ ರಾಜ್ಯೋತ್ಸವ ಪ್ರಶಸ್ತಿ; ಸಹಜ ಸಮೃದ್ಧ ಬಳಗದ ಹೆಮ್ಮೆ

ಸಹಜ ಸಮೃದ್ಧ - ಸಾವಯವ ಕೃಷಿಕರ ಬಳಗ ಆರಂಭಿಸಿದ ದಿನಗಳು. ಪ್ರತಿ ತಿಂಗಳು‌ ಸಾವಯವ ರೈತರೊಬ್ಬರ ತೋಟದಲ್ಲಿ ಸಭೆ ನಡೆಸುತ್ತಿದ್ದೆವು. ಸಭೆಗೆ ದೇವನಹಳ್ಳಿಯ ನಿವೃತ್ತ ಶಿಕ್ಷಕರಿಬ್ಬರು ತಪ್ಪದೆ ಬರುತ್ತಿದ್ದರು. ಒಮ್ಮೆ ಅವರು ತಮ್ಮ ಊರಿನ ರೈತರೊಬ್ಬರನ್ನು ಕರೆತಂದು ' ಇವರು ರಮೇಶ್. ದೇವನಹಳ್ಳಿ ಚಕ್ಕೋತದ ಮೂಲ ಮರ ಇವರ ತೋಟದಲ್ಲಿದೆ. ತೋಟಗಾರಿಕೆಯಲ್ಲಿ ತುಂಬಾ ಸಾಧನೆ ಮಾಡಿದ್ದಾರೆ' ಎಂದು ಪರಿಚಯಿಸಿದರು.

ಮುಂದಿನ ಸಭೆ ಎಲ್ಲಿ ಮಾಡುವುದು ಎಂಬ ಚರ್ಚೆ ಶುರುವಾದಾಗ ' ನಮ್ಮ ತೋಟದಲ್ಲಿ ಮಾಡಿ. ಎಲ್ಲ ವ್ಯವಸ್ಥೆ ಮಾಡುವೆ' ಎಂದು ರಮೇಶ್ ಮುಂದೆ ಬಂದರು. ಮುಂದಿನ ತಿಂಗಳು ಅವರ ತೋಟಕ್ಕೆ ಹೋದ ನಮಗೆ ಅಚ್ಚರಿ‌ ಕಾದಿತ್ತು. ಸುಂದರವಾದ ತೋಟ; ತೊನೆಯುವ ಬಾಳೆ, ದ್ರಾಕ್ಷಿ. ಎಲ್ಲದರಲ್ಲೂ ಅಚ್ಚುಕಟ್ಟು . ಬಂದವರಿಗೆ ಅಪ್ಪಟ ಸಾವಯವ ಊಟ. ವಿಷೇಷವೆಂದರೆ ಅವತ್ತು ಊಟಕ್ಕೆ ಮಣ್ಣಿನ ತಟ್ಟೆ - ಲೋಟ ಕೊಟ್ಟರು. ನನಗೆ ಈಗಲೂ ನೆನಪಿದೆ, ಬಂದಿದ್ದ ಬಹುಪಾಲು ಜನ,ಊಟದ ನಂತರ ತಟ್ಟೆ -ಲೋಟ ತೊಳೆದು ಮನೆಗೆ ಕೊಂಡೊಯ್ದರು.

ತೇಜ ನರ್ಸರಿಯ ಕೃಷಿ ಪಂಡಿತ ಈ ನಡೆದಾಡುವ ಕೃಷಿ ವಿಶ್ವಕೋಶ

ಶಿವನಾಪುರದ ರಮೇಶ್ ' ನಡೆದಾಡುವ ಕೃಷಿ ವಿಶ್ವಕೋಶ'. ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಇವರಲ್ಲಿ ಸರಳ ಪರಿಹಾರವಿದೆ.ನಿರಂತರವಾಗಿ ಆದಾಯ ತರುವ ಕೃಷಿ ಮಾದರಿಗಳ ಮಾಹಿತಿ ಇದೆ. ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ತೋಟಗಳು ಲೆಕ್ಕವಿಲ್ಲದಷ್ಟು. ಕೋವಿಡ್ ಕಾಲಕ್ಕೆ ಕಟ್ಟಿದ ನನ್ನ ತೋಟ ನಾಲ್ಕೇ ವರ್ಷಗಳಲ್ಲಿ ತಲೆ ಎತ್ತಿ ನಿಂತಿರುವುದಕ್ಕೆ ಇವರು ಕೊಟ್ಟ ಮಾರ್ಗದರ್ಶನವೇ ಕಾರಣ.

ಕೃಷಿ ಪಂಡಿತ ರಮೇಶರು ಕಳೆದ ದಶಕದಲ್ಲಿ ಆರಂಭಿಸಿದ ' ತೇಜ ನರ್ಸರಿ' ಅಪರೂಪದ ಸಸ್ಯಗಳ ಖಜಾನೆ. ಇಂಥ ಗಿಡ ಇಲ್ಲಿಲ್ಲ ಎನ್ನುವಂತಿಲ್ಲ.

ಕೃಷಿ ಎಂದರೆ ಸದಾ ಯಂತ್ರದಂತೆ ದುಡಿಯುವುದಲ್ಲ. ಮರದ ನೆರಳಲ್ಲಿ ಮಲಗಿ, ತೇಜಸ್ವಿ ಪುಸ್ತಕ ಓದಲು ಬಿಡುವು ಮಾಡಿಕೊಳ್ಳಬೇಕು. ಸುತ್ತಾಟಕ್ಕೆ ಹೋಗಲು ಪುರುಸೊತ್ತು ಇರಬೇಕು. ತೋಟ ಕಟ್ಟಲು ಹೊರಟ ನಮಗೆಲ್ಲಾ ರಮೇಶ್ ಕಲಿಸಿದ್ದು ಇದೇ ಪಾಠ. ಅವರು ಇಷ್ಟವಾಗುವುದು ಇದೇ ಕಾರಣಕ್ಕೆ.

2001 ರಲ್ಲಿ ಸಹಜ ಸಮೃದ್ಧದ ಕುಟುಂಬದ ಸದಸ್ಯರಾದ ಶಿವನಾಪುರದ ರಮೇಶ್, ಬಳಗದ ಹಿತೈಷಿಯಾಗಿ ನೂರಾರು ರೈತರಿಗೆ ದಾರಿ ತೋರಿದ್ದಾರೆ. ಈ ಸಾಲಿನ ಆರ್ಥಿಕ ವರ್ಷದಿಂದ ಸಹಜ ಸಮೃದ್ಧದ ಅಧ್ಯಕ್ಷರಾಗಿ ಸಹಜ ಸಮೃದ್ಧವನ್ನು ಮುನ್ನಡೆಸುತ್ತಿದ್ದಾರೆ.

ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಶಿವನಾಪುರದ ರಮೇಶರಿಗೆ ಸಂದಿರುವುದು ನಮಗೆಲ್ಲಾ ಸಂಭ್ರಮದ ಸಂಗತಿ. ಅಭಿನಂದನೆಗಳು ರಮೇಶಣ್ಣ. ದೇವನಹಳ್ಳಿ ಹೊರವಲಯದಲ್ಲಿ ನಂದಿರಸ್ತೆ ಆರಂಭಕ್ಕೆ ರಮೇಶರ ತೇಜ ನರ್ಸರಿ ಇದೆ. ತಪ್ಪದೆ ಹೋಗಿಬನ್ನಿ. ರಮೇಶರ ಜೊತೆ ಒಮ್ಮೆ ಮಾತಾಡಿ. ಅವರ ಅನುಭವದ ಬುತ್ತಿ ನಿಮಗೆ ದಕ್ಕುತ್ತದೆ.

ರಮೇಶರ ಕೃಷಿ ಅನುಭವಗಳು ಯೂಟ್ಯೂಬ್ ನಲ್ಲಿ ಲಭ್ಯವಿವೆ. ಕೃಷಿ ಮಾಧ್ಯಮ ಕೇಂದ್ರ ಶಿವನಾಪುರ ರಮೇಶರ ಕುರಿತ ಪುಸ್ತಕ ಪ್ರಕಟಿಸಿದೆ.

ಪುಸ್ತಕ ಕೊಳ್ಳಲು ಲಿಂಕ್ ಇಲ್ಲಿದೆ. https://booksloka.com/.../chalabidada-sadaka-savayava.../

  • ಕೃಷ್ಣಪ್ರಸಾದ್ ಗೋವಿಂದಯ್ಯ, ಸಹಜ ಸಮೃದ್ಧ ಬಳಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ