logo
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಿಯಾಂಕ ಗಾಂಧಿಗೆ ಪ್ರೀತಿಯ ಪತ್ರ: ಕರ್ನಾಟಕ ಗಡಿ ಕ್ಷೇತ್ರದ ಸಮಸ್ಯೆ ಮರೆಯಬೇಡಿ, ಗಾಳಿ ಚೆನ್ನಾಗಿದೆ ವಯನಾಡಿನಲ್ಲಿ ಮನೆ ಮಾಡಿ ಉಳಿದುಕೊಳ್ಳಿ

ಪ್ರಿಯಾಂಕ ಗಾಂಧಿಗೆ ಪ್ರೀತಿಯ ಪತ್ರ: ಕರ್ನಾಟಕ ಗಡಿ ಕ್ಷೇತ್ರದ ಸಮಸ್ಯೆ ಮರೆಯಬೇಡಿ, ಗಾಳಿ ಚೆನ್ನಾಗಿದೆ ವಯನಾಡಿನಲ್ಲಿ ಮನೆ ಮಾಡಿ ಉಳಿದುಕೊಳ್ಳಿ

Umesha Bhatta P H HT Kannada

Nov 24, 2024 02:07 PM IST

google News

ಕೇರಳ ಕರ್ನಾಟಕದ ಗಡಿ ಭಾಗದ ಬೇಡಿಕೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನೂತನ ಸಂಸದೆ ಪ್ರಿಯಾಂಕಗಾಂಧಿಗೆ ಪತ್ರಕರ್ತ ಹನೀಫ್‌ ಪತ್ರ ಬರೆದಿದ್ದಾರೆ.

    • Letter To Wayanad MP Priyanaka Gandhi: ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಕೇರಳದ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಿರಿಯ ಪತ್ರಕರ್ತ ಬಿ.ಎಂ. ಹನೀಫ್‌ ಪತ್ರ ಬರೆದಿದ್ದಾರೆ. ಅದರಲ್ಲಿ ಏನಿದೆ. ಇಲ್ಲಿದೆ ಮಾಹಿತಿ
ಕೇರಳ ಕರ್ನಾಟಕದ ಗಡಿ ಭಾಗದ ಬೇಡಿಕೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನೂತನ ಸಂಸದೆ ಪ್ರಿಯಾಂಕಗಾಂಧಿಗೆ ಪತ್ರಕರ್ತ ಹನೀಫ್‌ ಪತ್ರ ಬರೆದಿದ್ದಾರೆ.
ಕೇರಳ ಕರ್ನಾಟಕದ ಗಡಿ ಭಾಗದ ಬೇಡಿಕೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನೂತನ ಸಂಸದೆ ಪ್ರಿಯಾಂಕಗಾಂಧಿಗೆ ಪತ್ರಕರ್ತ ಹನೀಫ್‌ ಪತ್ರ ಬರೆದಿದ್ದಾರೆ.

ಗೌರವಾನ್ವಿತ ಪ್ರಿಯಾಂಕಾ ಗಾಂಧಿಯವರೆ,

ವಯನಾಡಿನಿಂದ ಲೋಕಸಭೆಗೆ ಪ್ರವೇಶ ಪಡೆದಿದ್ದೀರಿ. ಅದೂ ಭರ್ಜರಿ ಅಂತರದ ಜಯದೊಂದಿಗೆ. Congrats.

ಕೆಲವೇ ತಿಂಗಳ ಹಿಂದೆ ನಿಮ್ಮ ಸೋದರ ರಾಹುಲ್ ಗಾಂಧಿಯನ್ನು ಇದೇ ವಯನಾಡು ಕ್ಷೇತ್ರದ ಜನ ಲೋಕಸಭೆಗೆ ಆಯ್ಕೆ ಮಾಡಿದ್ದರು. ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಅವರು ವಯನಾಡಿಗೆ ರಾಜೀನಾಮೆ ನೀಡಿದ್ದರಿಂದ ಈಗ ನೀವು ಸ್ಪರ್ಧಿಸಿ ಗೆದ್ದಿದ್ದೀರಿ.

ನಿಮ್ಮ ಸೋದರ ರಾಹುಲ್ ರನ್ನು ವಯನಾಡಿನ ಮತದಾರರು 3.64 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದರೆ, ನಿಮ್ಮನ್ನು ಅದಕ್ಕಿಂತಲೂ ಹೆಚ್ಚು- 4.10 ಲಕ್ಷ ಮತಗಳ - ಅಂತರದಿಂದ ಗೆಲ್ಲಿಸಿದ್ದಾರೆ! ನಿಜಕ್ಕೂ ಅದ್ಭುತ ಜಯವಿದು.

ರಾಹುಲ್ ಮೊದಲ ಬಾರಿ ಅಂದರೆ 2019 ರಲ್ಲಿ ಇದೇ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ನಾನು ಪ್ರಜಾವಾಣಿಯ ವರದಿಗಾರನಾಗಿ ಕ್ಷೇತ್ರವಿಡೀ ತಿರುಗಾಡಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದೆ.

ಆಗ ನಾನು ಅಲ್ಲಿನ ಬಹಳಷ್ಟು ಮತದಾರರಿಗೆ ಕೇಳಿದ ಒಂದು ಪ್ರಶ್ನೆ- ರಾಹುಲ್ ಗೆ ಏಕೆ ಮತ ನೀಡಬೇಕು... ಎನ್ನುವುದು.

ಬಹುತೇಕ ಎಲ್ಲ ಜನರೂ ನೀಡಿದ ಉತ್ತರದಲ್ಲಿ ಒಂದು ಬೇಡಿಕೆ ಇತ್ತು- " ವಯನಾಡಿಗೆ ರೈಲು ಸಂಪರ್ಕ ಇಲ್ಲ. ನಮ್ಮ ಕ್ಷೇತ್ರಕ್ಕೆ ರೈಲು ಸಂಪರ್ಕ ಬೇಕೆಂದು ಎಷ್ಟೋ ವರ್ಷಗಳಿಂದ ನಾವು ಬೇಡುತ್ತಿದ್ದೇವೆ. ರಾಹುಲ್ ಗಾಂಧಿ ಆಯ್ಕೆಯಾದರೆ ನಮ್ಮ ಕ್ಷೇತ್ರಕ್ಕೆ ರೈಲು ಸಂಪರ್ಕ ಆಗಲಿದೆ ಎನ್ನುವ ಭರವಸೆ ನಮಗಿದೆ.." ಎಂದಿದ್ದರು ಎಲ್ಲರೂ.

ನಿಮ್ಮ ಸೋದರ ಜನರ ಈ ಬೇಡಿಕೆಯನ್ನು ಈಡೇರಿಸಲಿಲ್ಲ. ಇರಲಿ ಬಿಡಿ... ಅವರಿಗೆ ಪುರುಸೊತ್ತಾಗಲಿಲ್ಲ ಎಂದು ಭಾವಿಸೋಣ.

ಈಗ ನೀವು ವಯನಾಡಿನ ಜನರ ರೈಲು ಸಂಪರ್ಕದ ಬೇಡಿಕೆಯನ್ನು ಈಡೇರಿಸಬಹುದು ಎಂದು ಭಾವಿಸಿದ್ದೇನೆ.

ಈ ಬೇಡಿಕೆ ಕೇವಲ ವಯನಾಡಿನವರದ್ದು ಮಾತ್ರ ಎಂದು ಭಾವಿಸಬೇಡಿ. ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಮೈಸೂರಿನ ಜನರಿಗೂ ವಯನಾಡಿನ ರೈಲು ಸಂಪರ್ಕದ ಅಗತ್ಯವಿದೆ.

ಈಗ ಮೈಸೂರಿನ ಜನರು ಬೆಂಗಳೂರಿನ ಮೂಲಕ ವಯನಾಡು (ಕಲ್ಪೆಟ್ಟಾ) ತಲುಪಬೇಕಿದ್ದರೆ 715 ಕಿ.ಮೀ ಆಗುತ್ತದೆ. (ಅದೂ ಕಲ್ಲಿಕೋಟೆಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಬಸ್ಸು ಹಿಡಿಯಬೇಕು.) ಮೈಸೂರಿನ ಜನ ಮಂಗಳೂರು- ಕಲ್ಲಿಕೋಟೆ ಮೂಲಕ ಹೋದರೂ 507 ಕಿ.ಮೀ ಆಗುತ್ತದೆ.

ವಯನಾಡಿನ ಎಂಟೂ ದಿಕ್ಕಲ್ಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಹಾಗಾಗಿ ಕಳೆದ 40 ವರ್ಷಗಳಿಂದ ರೈಲಿನ ಕನಸು ಕನಸಾಗಿಯೇ ಉಳಿದಿದೆ.

ಕಳೆದ ಕೆಲವು ವರ್ಷಗಳಲ್ಲಿ ಈ ಅರಣ್ಯ ಪ್ರದೇಶ ನಾಶವಾಗದಂತೆ ಹೊಸ ರೈಲು ಮಾರ್ಗ ರಚಿಸುವ ಪ್ರಸ್ತಾಪವೊಂದು ಚರ್ಚೆಯಲ್ಲಿದೆ. ಕೊಯಿಲಾಂಡಿ- ಪೆರಂಬ, ಮುಳ್ಳಂಕುನ್ನು, ತರುವಾನ, *ಕಲ್ಪೆಟ್ಟ*, ಮೀನಂಗಡಿ, ಪುಲ್ಪಲ್ಲಿ, *ಕೃಷ್ಣರಾಜಪುರ*, *ಎಚ್.ಡಿ.ಕೋಟೆ*, ಹಂಪಾಪುರ, ಕಡಕೋಳದ ರೈಲು ಮಾರ್ಗ ಯೋಜನೆಯದು.

ಇದು ಕಾರ್ಯರೂಪಕ್ಕೆ ಬಂದರೆ ಅರಣ್ಯನಾಶ ಆಗುವುದಿಲ್ಲ. ಜೊತೆಗೆ ಮೈಸೂರಿನವರು ಕಲ್ಲಿಕೋಟೆಗೆ ತಲುಪುವ ದೂರ 230 ಕಿಮೀ ನಷ್ಟು ಕಡಿತವಾಗುತ್ತದೆ.

ಈ ಪ್ರಸ್ತಾಪಿತ ಯೋಜನೆ ಈಗ ಯಾವ ಹಂತದಲ್ಲಿ ಇದೆಯೋ ನನಗೆ ಗೊತ್ತಿಲ್ಲ. ಆದರೆ ಪ್ರಿಯಾಂಕ ಅವರೇ, ನೀವು ಮನಸ್ಸು ಮಾಡಿದರೆ ಈ ರೈಲು ಮಾರ್ಗ ಶೀಘ್ರ ನನಸಾಗಲಿದೆ. ನಿಮ್ಮ ಐದು ವರ್ಷಗಳ ಅವಧಿಯಲ್ಲಿ ಈ ಒಂದು ಕೆಲಸ ಆದರೆ ಮೈಸೂರು, ಬೆಂಗಳೂರು, ವಯನಾಡಿನ ಜನರು ನಿಮಗೆ ತುಂಬಾ ಕೃತಜ್ಞರಾಗಿರುತ್ತಾರೆ.\

ನೀವೀಗ ಕಾಂಗ್ರೆಸ್ಸಿನ ಭವಿಷ್ಯ ಅನ್ನುವುದು ನನಗೆ ಗೊತ್ತಿದೆ. ದೆಹಲಿ, ಉತ್ತರ ಪ್ರದೇಶದಲ್ಲಿ ನಿಮಗೆ ಕೈತುಂಬಾ ಕೆಲಸಗಳಿವೆ ಎನ್ನುವುದೂ ಗೊತ್ತಿದೆ. ಪಕ್ಷಕ್ಕಾಗಿ ದೇಶದ ಎಲ್ಲ ಭಾಗಗಳಲ್ಲೂ ನೀವು ಓಡಾಡುವ ಅಗತ್ಯವಿದೆ ಎನ್ನುವುದೂ ತಿಳಿದಿದೆ.

ಆದರೆ ನೆನಪಿಡಿ- ವಯನಾಡಿನ ರೈಲು ಬೇಡಿಕೆ ಬಹಳ ಮುಖ್ಯವಾದದ್ದು. ಕೇರಳದಲ್ಲೇ ಅತ್ಯಂತ ಹಿಂದುಳಿದ ಪ್ರದೇಶವದು. ಅವರ ರೈಲು ಸಂಪರ್ಕದ ಕನಸನ್ನು ಕಡೆಗಣಿಸಬೇಡಿ.

ಕರ್ನಾಟಕ, ಕೇರಳ ಎರಡೂ ರಾಜ್ಯಗಳಲ್ಲಿ ನಿಮಗೆ ಬೇಕಾದ ಸರಕಾರವೇ ಇದೆ. ತಕ್ಷಣ ಗಮನ ಹರಿಸಿ. ರಾಹುಲ್ ಮಾಡಿದಂತೆ ಈ ವಿಷಯದಲ್ಲಿ ಮಾತಿನ ರೈಲು ಬಿಡಬೇಡಿ. ನಿಜವಾದ ರೈಲು ಬರಲಿ.

ಮತ್ತೊಮ್ಮೆ congrats. ದೆಹಲಿಯ ಗಾಳಿ ವಿಷಮಯವಾಗಿದೆ. ವಯನಾಡಿನಲ್ಲಿ 100% ಆಮ್ಲಜನಕ ಸಿಗುತ್ತದೆ. ಸಾಧ್ಯವಾದರೆ ವರ್ಷದಲ್ಲಿ ಆರು ತಿಂಗಳು ವಯನಾಡಿನಲ್ಲೇ ಮನೆ ಮಾಡಿ ಉಳಿದುಕೊಳ್ಳಿ.

-ಬಿ.ಎಂ.ಹನೀಫ್, ಹಿರಿಯ ಪತ್ರಕರ್ತ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ