ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳಿವು

ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳಿವು

­Maharashtra Assembly Election 2024 outcomes: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಮುಂದಿನ ವರ್ಷ ದೆಹಲಿ ಮತ್ತು ಕೇರಳದ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆ, ಗೆಲುವಿನ ಫಾರ್ಮುಲಾಗಳು ಕೆಲಸ ಮಾಡಿದ್ವಾ, ಬದಲಾವಣೆ ಏನು ಬೇಕು ಇತ್ಯಾದಿ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶ ಹೀಗಿವೆ.

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

Maharashtra Assembly Election 2024 outcomes: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಹಲವು ಅಂಶಗಳು ಈ ಸಲದ ಚುನಾವಣೆಯಲ್ಲಿ ಗಮನಸೆಳೆದಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರ ರಚನೆ ಯಾರದ್ದು, ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಎಲ್ಲ ಕುತೂಹಲದ ಪ್ರಶ್ನೆಯೂ ಸಹಜ. ರಾಜಕೀಯವಾಗಿ ನೋಡುವುದಾದರೆ ಗಮನಿಸಬೇಕಾ ಅಂಶಗಳು ಕೂಡ ಕೆಲವು ಇವೆ. ಅವೆಲ್ಲವೂ ರಾಜಕೀಯವಾಗಿ ಪಾಠವೂ ಹೌದು. ಇದರಲ್ಲಿ ದೀರ್ಘಕಾಲದ ಪರಿಣಾಮ ಬೀರುವ ಅಂಶಗಳೂ ಇವೆ. ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳ ಅನುಸರಿಸುವ ತಂತ್ರಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅನುಸರಿಸಿದ ಚುನಾವಣಾ ತಂತ್ರಗಾರಿಕೆ ತೆಲಂಗಾಣದಲ್ಲಿ ಕೆಲಸ ಮಾಡಿತು. ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಲ್ಲ. ಅಲ್ಲಿ ಬಿಜೆಪಿಯ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿತು. ಹಾಗೆಯೇ ವಿಶೇಷವಾಗಿ ಮಹಾರಾಷ್ಟ್ರ ಫಲಿತಾಂಶ ಮುಂದಿನ ವರ್ಷ ನಡೆಯಲಿರುವ ದೆಹಲಿ ಮತ್ತು ಕೇರಳ ವಿಧಾನ ಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಈ ಫಲಿತಾಂಶದಿಂದ ಸಿಗುವ ಕಲಿಕೆಯ ಅಂಶ ಪಾಠವಾಗಲಿದೆ. ಅಂತಹ ಅಂಶಗಳನ್ನೊಮ್ಮೆ ಗಮನಿಸೋಣ.

ಮಹಾರಾಷ್ಟ್ರ ಚುನಾವಣಾ ಫಲಿತಾಂಶ, ರಾಜಕೀಯವಾಗಿ ಸಿಕ್ಕ ಕಲಿಕೆಯ ಅಂಶ

ಮತದಾರರನ್ನು ಓಲೈಸುವುದಕ್ಕಾಗಿ ಮಾಡುವ ತಂತ್ರಗಾರಿಕೆಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಅಂಶ ಮುಖ್ಯವಾಗಿ ಪ್ರತಿ ಚುನಾವಣಾ ಫಲಿತಾಂಶದ ನಂತರ ಸಿಗುವ ಪಾಠಗಳ ಪೈಕಿ ಪ್ರಮುಖವಾದುದು. ಮತದಾರರು ಗಮನಿಸುವ ಅಂಶಗಳು ಯಾವುವು ಎಂಬುದು ಅರ್ಥ ಮಾಡಿಕೊಳ್ಳಬಹುದು.

1) ಜನಕಲ್ಯಾಣ ಯೋಜನೆಗಳು: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಲಡ್ಕಿ ಬಹಿನ್ ಯೋಜನಾ ಯೋಜನೆ ಕೆಲಸ ಮಾಡಿತು. ಇದು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡ ಪ್ರಮುಖ ಉಪಕ್ರಮ. ಇದರ ಪರಿಣಾಮ ಮಹಾರಾಷ್ಟ್ರದಲ್ಲಿ ಮಹಿಳಾ ಮತದಾನ ಪ್ರಮಾಣ ಹೆಚ್ಚಾಯಿತು. ಈ ಬಾರಿ 2019ಕ್ಕೆ ಹೋಲಿಸಿದರೆ ಶೇಕಡ 4.5 ರಷ್ಟು ಮತದಾನ ಹೆಚ್ಚಾಗಿದೆ. 2019ರಲ್ಲಿ 59.2 ಶೇಕಡ ಇದ್ದ ಮತದಾನ ಪ್ರಮಾಣ 2024ರಲ್ಲಿ ಶೇಕಡ 65.1 ಆಗಿದೆ.

2) ಮಹಿಳೆಯರು ಮತ್ತು ಅವರಿಗೆ ಸಂಬಂಧಿಸಿದ ಉಪಕ್ರಮಗಳು: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಸರ್ಕಾರ ಜಾರಿಗೊಳಿಸಿದ ಮಹಿಳೆಯ ಸಬಲೀಕರಣ ಮತ್ತು ಅವರಿಗೆ ಸಂಬಂಧಿಸಿದ ಇತರೆ ಉಪಕ್ರಮಗಳು ಪರಿಣಾಮ ಬೀರಿವೆ. ಹಿಂದಿನಂತೆ ಮಹಿಳೆಯರು ಮತ್ತು ಅವರನ್ನು ಗುರಿಯಾಗಿಸಿಕೊಂಡ ಕಲ್ಯಾಣ ಕ್ರಮಗಳು ಜಾತಿ ಮತ್ತು ಸಾಂಪ್ರದಾಯಿಕ ವರ್ಗಗಳ ಬೆಂಬಲವನ್ನು ಮತಬ್ಯಾಂಕ್ ಆಗಿ ಪರಿವರ್ತಿಸುವಲ್ಲಿ ಇವು ನೆರವಾಗುತ್ತವೆ ಎಂಬುದು ಸಾಬೀತಾಗಿದೆ.

3) ಸಂವಿಧಾನ ಅಪಾಯದಲ್ಲಿದೆ ಎಂಬ ನಿರೂಪಣೆ: ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ 2023ರಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷ ಸಂವಿಧಾನ ಅಪಾಯದಲ್ಲಿದೆ ಎಂಬ ಪ್ರಚಾರ ಆರಂಭಿಸಿತ್ತು. ಜಾತಿಗಣತಿ ವಿಚಾರವೂ ಪ್ರಸ್ತಾಪವಾಗಿತ್ತು. ಅದು ಹೆಚ್ಚು ಪರಿಣಾಮ ಬೀರಲಿಲ್ಲವಾದರೂ 2024ರ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿತು. ಮಹಾರಾಷ್ಟ್ರ ಚುನಾವಣೆಯಲ್ಲಿ ಕೆಲಸಮಾಡಲಿಲ್ಲ. ಅಲ್ಲಿಗೆ ಈ ನಿರೂಪಣೆಗೆ ಮತದಾರರು ಬೆಲೆ ಕೊಡುತ್ತಿಲ್ಲ ಎಂದಾಯಿತು.

4) ಜಾತಿ ಲೆಕ್ಕಾಚಾರ, ಹಿಂದುಳಿದವರ ಮತ ಸೆಳೆಯುವ ಪ್ರಯತ್ನವೂ ವಿಫಲ: ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಬ್ಲಾಕ್ ಪಕ್ಷಗಳು ಜಾತಿ ಲೆಕ್ಕಾಚಾರ ಮತ್ತು ಹಿಂದುಳಿದವರ ಮತ ಸೆಳೆಯುವ ಪ್ರಯತ್ನ ನಡೆಸಿದವು. ಇದಕ್ಕೆ ಪ್ರತಿಯಾಗಿ ಬಿಜೆಪಿ ಬಹಳ ಎಚ್ಚರಿಕೆಯಿಂದ ಸೋಷಿಯಲ್ ಎಂಜಿನಿಯರಿಂಗ್ ತಂತ್ರವನ್ನು ಬಳಸಿತು. 1990ರಿಂದ ಬಿಜೆಪಿ ಇದನ್ನು ಅನುಸರಿಸುತ್ತಿದ್ದು, ಒಬಿಸಿ ಸಮುದಾಯದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿದೆ. ಮಹಾರಾಷ್ಟ್ರದಲ್ಲಿ ಕೂಡ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ, ಮುಂಚೂಣಿ ನಾಯಕನಾಗಿ ಕಾಣಿಸಿಕೊಂಡಿದ್ದರೂ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕೆಲಸ ಮಾಡಿರುವುದು ಒಬಿಸಿ ಸಮುದಾಯದ ಪ್ರಭಾವಿ ನಾಯಕ ಚಂದ್ರಶೇಖರ ಬವಾಂಕುಲೆ. ಮಹಾರಾಷ್ಟ್ರದ ಹಿಂದುಳಿದವರ ಮತ ಬ್ಯಾಂಕ್ ಅನ್ನು ಭದ್ರಪಡಿಸಲು ಇದು ನೆರವಾಗಿದೆ.

5) ಒಡೆದರೆ ಸರ್ವನಾಶ, ಒಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ: ಬಟೇಂಗೆ ತೊ ಕಟೇಂಗೆ, ಏಕ್ ಹೇ ತೋ ಸೇಫ್ ಹೈ ಎಂಬ ಘೋಷಣೆ ಮಹಾರಾಷ್ಟ್ರದಲ್ಲಿ ಹೆಚ್ಚು ಪರಿಣಾಮ ಬೀರಿದೆ. ಉತ್ತರ ಪ್ರದೇಶದಲ್ಲಿ ಬಳಕೆಯಾದ ಈ ಘೋ‍ಷಣೆ ಮಹಾರಾಷ್ಟ್ರದಲ್ಲಿ ಕೂಡ ಹಿಂದು ಮತ ಧ್ರುವೀಕರಣಕ್ಕೆ ಕಾರಣವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ತನ್ನ ಸಿದ್ಧಾಂತ ಬಿಟ್ಟು ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿದ್ದು ಕೂಡ ಹಿಂದು ಮತ ಧ್ರುವೀಕರಣಕ್ಕೆ ನೆರವಾಯಿತು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಗಮನಿಸಿದಾಗ ಈ ಐದು ಅಂಶಗಳು ಗಮನಸೆಳೆದರೂ, ಕೇರಳ ಮತ್ತು ದೆಹಲಿಯ ರಾಜಕೀಯ ಚಿತ್ರಣಗಳು ಭಿನ್ನವಾಗಿದ್ದು, ಅಲ್ಲಿಗೆ ಸ್ಥಳೀಯವಾಗಿ ರಾಜಕೀಯ ತಂತ್ರಗಾರಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷದ ನೇತಾರರು ಗಮನಹರಿಸಿದ್ದು, ರಾಜಕೀಯ ಆಸಕ್ತರ ಕುತೂಹಲ ಕೆರಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.