ಪೂರ್ಣಗೊಳ್ಳದ ಕಾಮಗಾರಿ, ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನಷ್ಟು ವಿಳಂಬ; 2025 ರಲ್ಲಿ ಲೋಕಾರ್ಪಣೆ ಸಾಧ್ಯತೆ
Nov 18, 2024 03:15 PM IST
ನಿರ್ಮಾಣ ಹಂತದಲ್ಲಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ
ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಈ ಬಾರಿಯೂ ತಡವಾಗುತ್ತಿದೆ. 2024 ಅಂತ್ಯದ ವೇಳೆಗೆ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಚಿವ ನಿತಿನ್ ಗಡ್ಕರಿ ಈ ಹಿಂದೆ ಘೋಷಿಸಿದ್ದರು. ಆದರೆ ತಮಿಳುನಾಡು ಭಾಗದ ಕಾಮಕಾರಿ ಇನ್ನೂ ಪೂರ್ಣಗೊಳ್ಳದ ಕಾರಣ ವಿಳಂಬವಾಗುತ್ತಿದೆ.
ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನಷ್ಟು ವಿಳಂಬವಾಗಲಿದೆ. ತಮಿಳುನಾಡು ವಿಭಾಗ ಪ್ರಮುಖ ಕಾಮಗಾರಿ ಇನ್ನೂ ಪೂರ್ಣವಾಗದೆ ಉಳಿದಿರುವುದು ಇದಕ್ಕೆ ಕಾರಣವಾಗಿದೆ. 2024 ಅಂತ್ಯದ ವೇಳೆಗೆ ಬಹು ನಿರೀಕ್ಷಿತ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಘೋಷಿಸಿದ್ದರು, ಆದರೆ ತಮಿಳುನಾಡು ಭಾಗದ ಕಾಮಗಾರಿ ಇನ್ನೂ ಬಹಳಷ್ಟು ಬಾಕಿ ಇರುವುದರಿಂದ ಈ ಬಾರಿಯೂ ಉದ್ಘಾಟನೆಯನ್ನು ಮುಂದೂಡಲಾಗಿದೆ.
2025 ಮಧ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ
ಈ ಕಾಮಗಾರಿ ಭಾಗವಾಗಿ, ಸುಮಾರು 72 ಕಿಮೀನಷ್ಟು ಕರ್ನಾಟಕ ವಿಭಾಗ ಸಿದ್ಧವಾಗಿದ್ದರೂ, 106 ಕಿಮೀ ತಮಿಳುನಾಡು ವಿಭಾಗ ಇನ್ನೂ ಪೂರ್ಣಗೊಂಡಿಲ್ಲ. ಇದು ಚೆನ್ನೈ ಬಳಿಯ ಇರುಂಗಟ್ಟುಕೊಟ್ಟೈನಿಂದ ತಮಿಳುನಾಡು-ಆಂಧ್ರಪ್ರದೇಶದ ಗಡಿಯ ಸಮೀಪವಿರುವ ಗುಡಿಪಾಲವರೆಗೆ ವಿಸ್ತರಿಸುತ್ತದೆ. 2025 ರ ಮಧ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ. ಎಕ್ಸ್‌ಪ್ರೆಸ್ ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾಮಕಾರಿ ಆರಂಭವಾಗಿದೆ. ನಿಯಂತ್ರಿತ, ನಾಲ್ಕು ಲೇನ್ ಹೆದ್ದಾರಿ ಮೂಲಕ ಗಂಟೆಗೆ 120 ಕಿಮೀ ವೇಗದಲ್ಲಿ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದುವರೆಗೂ ಚೆನ್ನೈ-ಬೆಂಗಳೂರು ಎರಡೂ ನಗರಗಳ ನಡುವೆ ಸಂಚರಿಸಲು 6 ರಿಂದ 7 ಗಂಟೆ ಸಮಯ ಬೇಕಾಗಿತ್ತು. ಆದರೆ ಈ ಎಕ್ಸ್‌ಪ್ರೆಸ್‌ವೇನಿಂದ ಕೇವಲ 2 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.
ಬಂದರು ಸಂಪರ್ಕ ಸುಗಮಗೊಳಿಸುವ ಎಕ್ಸ್‌ಪ್ರೆಸ್ ವೇ
ಈ ಎಕ್ಸ್‌ಪ್ರೆಸ್ ವೇ, ತಮಿಳುನಾಡಿನಲ್ಲಿ, ಇರುಂಗಟ್ಟುಕೊಟ್ಟೈ-ವಾಲಾಜಪೇಟ್ ಸ್ಟ್ರೆಚ್ ಸರಕು ಸಾಗಣೆಯನ್ನು ಕಡಿಮೆ ಸಮಯದಲ್ಲಿ ಸಾಗಣಿ ಮಾಡಲು, ವಿಶೇಷವಾಗಿ ಚೆನ್ನೈ ಬಂದರಿಗೆ ಸರಕುಗಳನ್ನು ಹೊತ್ತೊಯ್ಯುವ ಟ್ರಕ್‌ಗಳು ಚಲಿಸಲು ಇದು ಅನುಕೂಲವಾಗಿದೆ. ಇರುಂಗಟ್ಟುಕೊಟ್ಟೈನಲ್ಲಿ 129 ಕೋಟಿ ರೂ. ವೆಚ್ಚದಲ್ಲಿ ಟ್ರಂಪೆಟ್ ಇಂಟರ್‌ಚೇಂಜ್ ಎಕ್ಸ್‌ಪ್ರೆಸ್‌ವೇ ಅನ್ನು NH-4 ನೊಂದಿಗೆ ಸಂಪರ್ಕಿಸುವ ಕಾಮಗಾರಿ ಕೂಡಾ ನಿರ್ಮಾಣ ಹಂತದಲ್ಲಿದ್ದು ಇದು ಚೆನ್ನೈ ಪೆರಿಫೆರಲ್ ರಿಂಗ್ ರೋಡ್ (CPRR) ಪೂರ್ಣಗೊಂಡ ನಂತರ ಬಂದರು ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.
17,930 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕಾಮಗಾರಿ
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಾದ್ಯಂತ 268 ಕಿ.ಮೀ ವ್ಯಾಪಿಸಿರುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅನ್ನು ಅಂದಾಜು 17,930 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಾರ್ಚ್‌ನಲ್ಲಿ ಪೂರ್ಣಗೊಳ್ಳಲು ಉದ್ದೇಶಿಸಲಾಗಿದ್ದ ಯೋಜನೆಯು ಭೂಸ್ವಾಧೀನ, ಪರಿಸರ ಸಂರಕ್ಷಣೆ ಹಾಗೂ ಇನ್ನಿತರ ಕಾರಣಗಳಿಂದ ತಡವಾಗುತ್ತಾ ಬಂದಿದೆ. ಈ ಎಕ್ಸ್‌ಪ್ರೆಸ್‌ವೇಯನ್ನು NE7 ಎಂದು ಕರೆಯಲಾಗುತ್ತದೆ. ಈ ಯೋಜನೆ ಪೂರ್ಣಗೊಂಡಾಗ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಹಾಗೂ ಚೆನ್ನೈ ಬಳಿಯ ಶ್ರೀಪೆರಂಬದೂರ್ ರಸ್ತೆಯನ್ನು ಸಂಪರ್ಕಿಸುತ್ತದೆ. ಇದು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವುದಲ್ಲದೆ, ಸಾರಿಗೆ ಜಾಲವನ್ನು ಬಲಪಡಿಸುತ್ತದೆ. 2025 ರ ಮಧ್ಯಭಾಗದಲ್ಲಿ ಈ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.