ಝಾನ್ಸಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಬದುಕಿ ಬಾಳಬೇಕಿದ್ದ 10 ನವಜಾತ ಶಿಶುಗಳ ಸಾವು, 37 ಮಕ್ಕಳ ರಕ್ಷಣೆ
Jhansi Hospital Fire: ಝಾನ್ಸಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ಗೆ ಬೆಂಕಿ ತಗುಲಿ 10 ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜಿನ ನವಜಾತ ತೀವ್ರ ನಿಗಾ ಘಟಕದಲ್ಲಿ (NICU) ಶುಕ್ರವಾರ (ನವೆಂಬರ್ 15) ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ನವಜಾತ ಶಿಶುಗಳು ಮೃತಪಟ್ಟಿವೆ. ಬೆಂಕಿಯಲ್ಲಿ ಗಾಯಗೊಂಡ 17 ಮಕ್ಕಳು ಪ್ರಸ್ತುತ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗ ಮತ್ತು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರ್ಡ್‌ಗೆ ದಾಖಲಾಗಿದ್ದ 47 ಶಿಶುಗಳ ಪೈಕಿ 37 ಶಿಶುಗಳನ್ನು ರಕ್ಷಿಸಲಾಗಿದೆ. 7 ಮಕ್ಕಳ ಶವಗಳನ್ನು ಗುರುತಿಸಲಾಗಿದ್ದು, ಮೂರು ಮಕ್ಕಳನ್ನು ಗುರುತಿಸಲಾಗಿಲ್ಲ.
ಬೆಂಕಿಗೆ ಕಾರಣ: ವೈದ್ಯಕೀಯ ಕಾಲೇಜಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಇಡೀ ವಾರ್ಡ್ ದಟ್ಟ ಹೊಗೆಯಿಂದ ತುಂಬಿತ್ತು. ರಾತ್ರಿ 10.45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಬೆಂಕಿಯ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇಂದು (ನವೆಂಬರ್ 16) ಬೆಳಿಗ್ಗೆ ಝಾನ್ಸಿಗೆ ಆಗಮಿಸಿದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, 18 ಹಾಸಿಗೆಗಳ ಸಾಮರ್ಥ್ಯದ ವಾರ್ಡ್ನಲ್ಲಿ ಒಟ್ಟು 47 ಶಿಶುಗಳನ್ನು ಇಡಲಾಗಿತ್ತು. ಶಿಶುಗಳ ಗುರುತು ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ರಾತ್ರಿ 10:45 ರ ಸುಮಾರಿಗೆ ಎನ್ಐಸಿಯುನಿಂದ ಹೊಗೆ ಬರುತ್ತಿರುವುದು ಕಂಡು ಬಂತು. ರಕ್ಷಿಸಲು ಪ್ರಯತ್ನಿಸುವುದಕ್ಕೂ ಮೊದಲು, ಜ್ವಾಲೆಗಳು ವಾರ್ಡ್ ಅನ್ನು ಆವರಿಸಿದವು. ಶಿಶುಗಳನ್ನು ಸ್ಥಳಾಂತರಿಸುವ ಪ್ರಯತ್ನಗಳ ಹೊರತಾಗಿಯೂ, ದಟ್ಟ ಹೊಗೆ ಮತ್ತು ಬಾಗಿಲು ಮುಚ್ಚಿದ ಜ್ವಾಲೆಗಳು ಅವರನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದವರು ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ತಲುಪಿ ಇತರ ಶಿಶುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕಣ್ಣೀರು ಹಾಕಿದ ತಾಯಿ
ಗಾಯಗೊಂಡ ಇನ್ನೂ 17 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಝಾನ್ಸಿ ಸುಧಾ ಸಿಂಗ್ ತಿಳಿಸಿದ್ದಾರೆ. ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಜೊತೆಗೆ ಎಲ್ಲಾ ವೈದ್ಯರು ಲಭ್ಯವಿದ್ದು, ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹತ್ತಿರದ ಮಹೋಬಾ ಜಿಲ್ಲೆಯ ದಂಪತಿ, ತಮ್ಮ ನವಜಾತ ಶಿಶುವಿನ ಸಾವಿನಿಂದ ದುಃಖಿತರಾಗಿದ್ದಾರೆ. ನವೆಂಬರ್ 13ರಂದು ಬೆಳಿಗ್ಗೆ 8 ಗಂಟೆಗೆ ಮಗು ಜನಿಸಿದೆ. ನನ್ನ ಮಗು ಬೆಂಕಿಯಲ್ಲಿ ಕೊಲ್ಲಲ್ಪಟ್ಟಿದೆ ಎಂದು ಕಣ್ಣೀರು ಹಾಕಿದರು.
ವಿಡಿಯೋ ವೈರಲ್: ಝಾನ್ಸಿ ವೈದ್ಯಕೀಯ ಕಾಲೇಜಿನ ಅಗ್ನಿ ಅವಘಡ ದೃಶ್ಯಗಳು ಭಯಾನಕವಾಗಿವೆ. ಈ ವಿಡಿಯೋಗಳು ವೈರಲ್ ಆಗಿವೆ. ಸಿಬ್ಬಂದಿಯು ರಕ್ಷಿಸುತ್ತಿರುವುದು ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಎನ್ಐಸಿಯುನಲ್ಲಿ ರಕ್ಷಣಾ ಕಾರ್ಯಾಚರಣೆ ರಾತ್ರಿ ಒಂದು ಗಂಟೆಯ ತನಕ ನಡೆಯಿತು. ಸರ್ಕಾರಿ ವೈದ್ಯಕೀಯ ಕಾಲೇಜು 1968 ರಲ್ಲಿ ಪ್ರಾರಂಭವಾಯಿತು. ಉತ್ತರ ಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನ್ಪುರ ವಲಯ) ಅಲೋಕ್ ಸಿಂಗ್ ಈ ಹಿಂದೆ ತಿಳಿಸಿದ್ದರು.