logo
ಕನ್ನಡ ಸುದ್ದಿ  /  ಕರ್ನಾಟಕ  /  Cancer: ಕ್ಯಾನ್ಸರ್‌ ಪೀಡಿತರ ನೆರವಿಗೆ ವಿಭಿನ್ನ ಸೇವೆ, ಕೇಶದಾನ ಮಾಡಿ ಮಾದರಿಯಾದ ಕಾಸರಗೋಡು ಪದ್ಯಾಣ ಸಹೋದರರು

Cancer: ಕ್ಯಾನ್ಸರ್‌ ಪೀಡಿತರ ನೆರವಿಗೆ ವಿಭಿನ್ನ ಸೇವೆ, ಕೇಶದಾನ ಮಾಡಿ ಮಾದರಿಯಾದ ಕಾಸರಗೋಡು ಪದ್ಯಾಣ ಸಹೋದರರು

Umesha Bhatta P H HT Kannada

Aug 29, 2024 11:48 AM IST

google News

ಪದ್ಯಾಣ ಸಹೋದರರ ಮಾದರಿ ಸೇವೆ.

    • ಸೇವೆ ಮಾಡಲು ಹಲವು ಮಾರ್ಗ. ಕಾಸರಗೋಡು( Kasaragod) ಸಮೀಪದ ಪದ್ಯಾಣದ ಈ ಸಹೋದರರು ತಮ್ಮ ಕೂದಲನ್ನು ನೀಡುವ ಮೂಲಕ ಕ್ಯಾನ್ಸರ್‌ ಪೀಡಿತರಿಗೆ( Cancer Treatment) ನೆರವಾಗಿದ್ದಾರೆ.
    • ವರದಿ: ಹರೀಶ ಮಾಂಬಾಡಿ, ಮಂಗಳೂರು
ಪದ್ಯಾಣ ಸಹೋದರರ ಮಾದರಿ ಸೇವೆ.
ಪದ್ಯಾಣ ಸಹೋದರರ ಮಾದರಿ ಸೇವೆ.

ಕಾಸರಗೋಡು: ಇಂದಿನ ಆಧುನಿಕ ಯುಗದಲ್ಲಿ ಯುವಕರು ತರತರದ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರೊಂದಿಗೆ ತಲೆಕೂದಲನ್ನು, ಗಡ್ಡವನ್ನು ಬೆಳೆಸಿಕೊಳ್ಳುವುದೂ ಒಂದು ಫ್ಯಾಶನ್ ಆಗಿದೆ. ಇಂತಹ ಕಾಲಘಟ್ಟದಲ್ಲಿ ಒಂದೇ ಮನೆಯ ಪ್ರತಿಭಾನ್ವಿತ ಇಬ್ಬರು ಯುವಕರು ತಮ್ಮ ಕೂದಲನ್ನು ಬೆಳೆಸಿ ಅದನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನಮಾಡಿ ಮಾದರಿಯಾಗಿದ್ದಾರೆ. ಅಣ್ಣ ತಮ್ಮಂದಿರ ಮಕ್ಕಳಾದ ವಿಧೇಯ ಪದ್ಯಾಣ ಹಾಗೂ ಅಕ್ಷಯ ಗಣಪತಿ ಪದ್ಯಾಣ ಸಹೋದರರು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದು, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ (ಎನ್‌ಎಸ್‌ಎಸ್) ತೊಡಗಿಸಿಕೊಂಡು ಅದರ ಸೇವಾಯೋಜನೆಯ ಪ್ರೇರಣೆಯಿಂದ ಕಳೆದ ಎರಡು ವರ್ಷಗಳಿಂದ ತಮ್ಮ ಕೂದಲನ್ನು ಬೆಳೆಸಿಕೊಂಡಿದ್ದರು. ಮಂಗಳೂರಿನ ಯುವಶಕ್ತಿ ಪಥ ತಂಡದ ಮೂಲಕ ಇವರು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನವನ್ನು ಮಾಡಿದ್ದಾರೆ.

ಕಾಸರಗೋಡು ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಇವರು ಈ ಒಂದು ಕಾರ್ಯದ ಮೂಲಕ ಸಮಾಜಕ್ಕೆ ತಮ್ಮ ಸಹಾಯವನ್ನು ಮಾಡಿ ಸಾಮಾಜಿಕ ಕಳಕಳಿಯನ್ನು ಮೆರೆದು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಈ ಯವಕರು ಅನೇಕ ಬಾರಿ ರಕ್ತದಾನವನ್ನೂ ಮಾಡಿದ್ದಾರೆ.

ವಿಧೇಯ ಪದ್ಯಾಣ

ನೀರ್ಚಾಲು ಸಮೀಪದ ಬೇಳದಲ್ಲಿ ವಾಸಿಸುತ್ತಿರುವ ನಿವೃತ್ತ ಅಧ್ಯಾಪಕ ಚಂದ್ರಶೇಖರ ಭಟ್ ಪದ್ಯಾಣ ಹಾಗೂ ಪೆರಡಾಲ ನವಜೀವನ ಶಾಲಾ ಅಧ್ಯಾಪಿಕೆ ಸುಶೀಲ ಪದ್ಯಾಣ ಇವರ ಇಬ್ಬರು ಮಕ್ಕಳಲ್ಲಿ ವಿಧೇಯ ಹಿರಿಯ ಪುತ್ರ.

ಪ್ರತಿಭಾನ್ವಿತನಾದ ಈತ ಸಂಗೀತ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡ ಪ್ರತಿಭಾನ್ವಿತ. ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪದವೀಧರನಾಗಿ ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ.

ಅಕ್ಷಯ ಗಣಪತಿ ಪದ್ಯಾಣ

ಉಪ್ಪಳ ಬಾಯಾರು ಸುದೆಂಬಳ ಅಕ್ಷಯ ನಿವಾಸದಲ್ಲಿ ವಾಸಿಸುತ್ತಿರುವ ಕೃಷಿಕರಾದ ಸೂರ್ಯನಾರಾಯಣ ಭಟ್ ಪದ್ಯಾಣ ಹಾಗೂ ಅಧ್ಯಾಪನ ವೃತ್ತಿಯನ್ನು ಮಾಡುತ್ತಿರುವ ಪಾವನ ಇವರ ಪುತ್ರ ಅಕ್ಷಯ ಗಣಪತಿ.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಅಂತಿಮ ಪದವಿಯ ವಿದ್ಯಾರ್ಥಿ. ಛಾಯಾಗ್ರಹಣದಲ್ಲೂ ಈತನಿಗೆ ವಿಶೇಷ ಆಸಕ್ತಿಯಿದೆ.

ಮಕ್ಕಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವಾಮನೋಭಾವವನ್ನು ರೂಢಿಸಿಕೊಂಡಿರುವುದಲ್ಲದೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದಾರೆ ಎನ್ನಲು ಹೆಮ್ಮೆಯೆನಿಸುತ್ತದೆ. ಇವರ ಈ ಕಾರ್ಯವು ಯುವಸಮುದಾಯಕ್ಕೆ ಉತ್ತಮ ಸಂದೇಶವಾಗಬೇಕು ಎನ್ನುತ್ತಾರೆ ನಿವೃತ್ತ ಅಧ್ಯಾಪಕ ಚಂದ್ರಶೇಖರ ಭಟ್ ಪದ್ಯಾಣ.

ವರದಿ: ಹರೀಶ ಮಾಂಬಾಡಿ, ಮಂಗಳೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ