logo
ಕನ್ನಡ ಸುದ್ದಿ  /  ಕರ್ನಾಟಕ  /  ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು

ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ 5 ಮುಖ್ಯ ಬೇಡಿಕೆಗಳಿವು

Umesh Kumar S HT Kannada

Dec 19, 2024 09:45 PM IST

google News

ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಕರೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)

  • KSRTC Strike: ಕರ್ನಾಕಟದಲ್ಲಿ ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ. ಕೆಎಸ್‌ಆರ್‌ಟಿಸಿ ಮುಷ್ಕರ ನಡೆಯಲಿದೆ. ಸರಳವಾಗಿ ಹೇಳಬೇಕು ಎಂದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಅವರ 5 ಮುಖ್ಯ ಬೇಡಿಕೆಗಳ ವಿವರ ಇಲ್ಲಿದೆ.

ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಕರೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)
ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಕರೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)

KSRTC Strike: ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ನಿಗಮಗಳ (ಆರ್‌ಟಿಸಿ) ನೌಕರರು ಡಿಸೆಂಬರ್ 31 ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋ‍ಷಿಸಿದ್ದಾರೆ. ವೇತನ ಹೆಚ್ಚಳ ಮತ್ತು ಬಾಕಿ ಪಾವತಿ ಸೇರಿ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಈ ಮುಷ್ಕರ ನಡೆಸುವುದಾಗಿ ನೌಕರರು ಹೇಳಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುರುವಾದ ಕಾರಣ ಆರು ನೌಕರರ ಸಂಘಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಕೈಗಾರಿಕಾ ವಿವಾದ ಕಾಯ್ದೆ ಪ್ರಕಾರ ಮುಷ್ಕರದ ನೋಟಿಸ್ ಅನ್ನು ಡಿಸೆಂಬರ್ 9 ರಂದೇ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್‌ ಕೊಟ್ಟಿದ್ದು, ಅದರಲ್ಲಿ 13 ಬೇಡಿಕೆಗಳ ಪಟ್ಟಿ ಇದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಹಲವು ಬಾರಿ ನೆನಪಿಸಿದರೂ ಅವುಗಳನ್ನು ಈಡೇರಿಸವುಲ್ಲಿ ಸರ್ಕಾರ ವಿಫಲವಾದ ಕಾರಣ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಸಮಿತಿ ಸ್ಪಷ್ಟಪಡಿಸಿದೆ.

ಡಿ 31 ರಿಂದ ಸರ್ಕಾರಿ ಬಸ್‌ ಸೇವೆ ಇರಲ್ಲ, ಅನಿರ್ದಿಷ್ಟಾವಧಿ ಮುಷ್ಕರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಹೇಳಿಕೊಂಡಿರುವ ಪ್ರಕಾರ, ರಸ್ತೆ ಸಾರಿಗೆ ಸಂಸ್ಥೆ ನೌಕರರು ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಆಗಸ್ಟ್ 13, 27, 28 ರಂದು ಸಮಾವೇಶ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದರು. ಇದಾಗಿ, ಸೆಪ್ಟೆಂಬರ್ 12 ರಂದು ಪ್ರತಿಭಟನೆ ನಡೆಸಿದ್ದರು. ನಂತರ ಸೆಪ್ಟೆಂಬರ್ 26 ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅವರಿಗೆ ಔಪಚಾರಿಕವಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿ ಈಡೇರಿಸುವಂತೆ ಆಗ್ರಹಿಸಿದ್ದರು. ಇದಾದ ನಂತರದಲ್ಲಿ ಅಕ್ಟೋಬರ್ 9 ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆಗೆ ಸಭೆ ನಡೆಸಿದಾಗ ಅಲ್ಲಿ ಹಿರಿಯ ಅಧಿಕಾರಿಗಳು ಬಸ್ ಪ್ರಯಾಣ ದರ ಹೆಚ್ಚಿಸದ ಹೊರತು ವೇತನ ಹೆಚ್ಚಳ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂದರ್ಭದಲ್ಲಿ ನೌಕರರ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರಾದರೂ, ಪ್ರಗತಿ ಕಾಣಲಿಲ್ಲ. ಹೀಗಾಗಿ, ಡಿಸೆಂವರ್‌ನಲ್ಲಿ ಮುಷ್ಕರವನ್ನು ಪ್ರಾರಂಭಿಸುವುದಾಗಿ ನವೆಂಬರ್ 22 ರಂದು ಘೋಷಿಸಲಾಗಿತ್ತು ಎಂದು ಸಮಿತಿ ಹೇಳಿಕೊಂಡಿದೆ.

ಸಮಾನ ವೇತನಕ್ಕೆ ಆಗ್ರಹಿಸುವುದಾದರೆ, ಈ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಲೀಗ್‌ ಬೆಂಬಲ ನೀಡಲಿದೆ ಎಂದು ಅದರ ಅಧ್ಯಕ್ಷ ಬಿಎಸ್ ಸುರೇಶ್ ಮೈಸೂರಿನಲ್ಲಿ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸಾರಿಗೆ ನೌಕರರ 5 ಮುಖ್ಯ ಬೇಡಿಕೆಗಳು; ಸರ್ಕಾರ ಬಾಕಿ ಉಳಿಸಿಕೊಂಡ ಮೊತ್ತ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಪ್ರಸ್ತಾಪಿಸಿರುವ 13 ಬೇಡಿಕೆಗಳ ಪೈಕಿ 5 ಮುಖ್ಯ ಬೇಡಿಕೆಗಳಿವೆ.

1) 31 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸುವ ಉದ್ಯೋಗಿಗಳಿಗೆ 2025 ಜನವರಿ 1 ರಿಂದ ಮೂಲ ವೇತನದಲ್ಲಿ ಶೇ 25 ರಷ್ಟು ಹೆಚ್ಚಳವಾಗಬೇಕು. ಇದು 2027ರ ಡಿಸೆಂಬರ್ 31ರ ತನಕ ಜಾರಿಯಲ್ಲಿರಬೇಕು.

2) 2020ರ ಜನವರಿ 1 ರಿಂದ 2023ರ ಫೆಬ್ರವರಿ 28 ರ ವರೆಗೆ (38 ತಿಂಗಳು) ಶೇ 15 ರಷ್ಟು ವೇತನ ಹೆಚ್ಚಳದ ಪ್ರಕಾರ ಬಾಕಿ ಪಾವತಿ ಮಾಡಬೇಕು

3) ಹೊರರೋಗಿಗಳ ಆರೈಕೆಗೆ ಮಾಸಿಕ 2000 ರೂ., ಉಚಿತ ಔಷಧೋಪಚಾರ, ಕ್ಯಾಂಟೀನ್ ಸೌಲಭ್ಯ, ಶಿಫ್ಟ್ ವ್ಯವಸ್ಥೆ, ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ಸೌಲಭ್ಯ ಇತ್ಯಾದಿ ಒದಗಿಸಬೇಕು

4) ಶಕ್ತಿ ಯೋಜನೆಯ 1,764 ಕೋಟಿ ರೂ. ಹೊರತುಪಡಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಬಾಕಿ ಉಳಿಸಿಕೊಂಡ 4,562 ಕೋಟಿ ರೂಪಾಯಿ ಮತ್ತು ಹಳೆಯ ಬಾಕಿ ಮೊತ್ತವನ್ನು ಮುಂದಿನ ತಿಂಗಳ ಮೊದಲ ವಾರದೊಳಗೆ ಪಾವತಿ ಮಾಡಬೇಕು.

5) ಇಂಧನ ಮತ್ತು ಇತರೆ ಪೂರೈಕೆಗಳ ಬಾಕಿ ಮೊತ್ತ 998 ಕೋಟಿ ರೂಪಾಯಿಯನ್ನೂ ಪಾವತಿಸಬೇಕು.

ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ 7,319.81 ಕೋಟಿ ರೂಪಾಯಿ. ಇದರಲ್ಲಿ ಶಕ್ತಿ ಯೋಜನೆಯ ಬಾಕಿ 1764 ಕೋಟಿ ರೂಪಾಯಿ ಮತ್ತು ಹಳೆಯ ಬಾಕಿ ಪೈಕಿ ದೊಡ್ಡ ಮೊತ್ತ 4,562 ಕೋಟಿ ರೂಪಾಯಿ ಸೇರಿಕೊಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ. ಇದಲ್ಲದೆ, ಇಂಧನ ಮತ್ತು ಇತರೆ ಪೂರೈಕೆಗಳ ಬಾಕಿ ಮೊತ್ತ 998 ಕೋಟಿ ರೂಪಾಯಿ ಕೂಡ ಇದರಲ್ಲಿದೆ. ಸಾರಿಗೆ ಸಂಸ್ಥೆಗಳ ಬಾಧ್ಯತೆಯಾಗಿ (ಸಾಲ) 5,492.24 ಕೋಟಿ ರೂಪಾಯಿ ಇದೆ. ಇದರಲ್ಲಿ ಪಿಂಚಣಿ ನಿಧಿಗೆ 2,595.29 ಕೋಟಿ ರೂಪಾಯಿ, 877.29 ಕೋಟಿ ರೂಪಾಯಿ ಸಾಲ, 399.29 ಕೋಟಿ ರೂಪಾಯಿ ನಿವೃತ್ತಿ ಸವಲತ್ತು, 306.78 ಕೋಟಿ ರೂಪಾಯಿ ಡಿಎ ಮತ್ತು ಲೀವ್ ಎನ್‌ಕ್ಯಾಶ್‌ಮೆಂಟ್‌ ಸವಲತ್ತು, ಇಂಧನ ಪಾವತಿಗೆ 659.25 ಕೋಟಿ ರೂಪಾಯಿ, ವಿವಿಧ ಸಾಮಗ್ರಿ ಪೂರೈಕೆದಾರರಿಗೆ 146.78 ಕೋಟಿ ರೂಪಾಯಿ, ಅಪಘಾತ ಪರಿಹಾರ 153.54 ಕೋಟಿ ರೂಪಾಯಿ, ಇತರೆ ಖರ್ಚು 353.57 ಕೋಟಿ ರೂಪಾಯಿ ಒಳಗೊಂಡಿದೆ ಎಂದು ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ